varthabharthi


ಬೆಂಗಳೂರು

ಕೆಪಿಸಿಸಿ ಅಧ್ಯಕ್ಷ, ಕಾರ್ಯಾಧ್ಯಕ್ಷರಿಂದ ಮುಸ್ಲಿಮ್ ಧರ್ಮಗುರುಗಳ ಭೇಟಿ

ಸಮಾಜದ ಎಲ್ಲಾ ವರ್ಗಗಳ ಹಿತ ಕಾಪಾಡಲು ಕಾಂಗ್ರೆಸ್ ಬದ್ಧ: ಡಿ.ಕೆ.ಶಿವಕುಮಾರ್

ವಾರ್ತಾ ಭಾರತಿ : 8 Jul, 2020

ಬೆಂಗಳೂರು, ಜು.7: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಕಾರ್ಯಾಧ್ಯಕ್ಷ ಸಲೀಮ್ ಅಹ್ಮದ್, ಬುಧವಾರ ಬೆಂಗಳೂರಿನ ನಾಗವಾರದಲ್ಲಿರುವ ದಾರೂಲ್ ಉಲೂಮ್ ಸಬೀಲುರ್ರಶಾದ್(ಅರೇಬಿಕ್ ಕಾಲೇಜು)ನಲ್ಲಿ ಕರ್ನಾಟಕದ ಅಮೀರೆ ಶರೀಅತ್ ಮೌಲಾನ ಸಗೀರ್ ಅಹ್ಮದ್ ಖಾನ್ ರಶಾದಿಯನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು.

ಬೆಂಗಳೂರು ಸೇರಿದಂತೆ ರಾಜ್ಯ, ದೇಶ ಹಾಗೂ ಇಡೀ ವಿಶ್ವವನ್ನು ಕಾಡುತ್ತಿರುವ ಕೊರೋನ ಮಹಾಮಾರಿಯಿಂದ ಮಾನವ ಕುಲಕ್ಕೆ ಮುಕ್ತಿ ನೀಡುವಂತೆ ಧರ್ಮಗುರುಗಳು ಇದೇ ಸಂದರ್ಭದಲ್ಲಿ ಪ್ರಾರ್ಥಿಸಿದರು.

ಧರ್ಮಗುರುಗಳ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಅರೇಬಿಕ್ ವಿದ್ಯಾ ಸಂಸ್ಥೆ ಧರ್ಮ ಹಾಗೂ ಶಾಂತಿಯನ್ನು ಕಾಪಾಡಲು ಇರುವ ಪವಿತ್ರ ಸಂಸ್ಥೆ. ಈ ಧರ್ಮ ಪೀಠದ ಪ್ರಮುಖರನ್ನು ಭೇಟಿ ಮಾಡಿ ಆಶೀರ್ವಾದ ಪಡೆಯಲು ಇಲ್ಲಿಗೆ ಬಂದಿದ್ದೇನೆ ಎಂದರು.

ನಾನು ಎಲ್ಲ ಧರ್ಮಗಳನ್ನು ನಂಬಿ ಗೌರವಿಸುತ್ತಾ ಬಂದಿದ್ದೇನೆ. ಜಾತ್ಯತೀತ ತತ್ವಕ್ಕೆ ಒತ್ತುಕೊಟ್ಟಿದ್ದೇನೆ. ಎಲ್ಲ ಧರ್ಮಗುರುಗಳ, ಗುರು ಹಿರಿಯರ ಆಶೀರ್ವಾದ ಪಡೆದಿರುವುದು ಮನಸ್ಸಿಗೆ ಬಹಳ ಸಂತೋಷವಾಗಿದೆ ಎಂದು ಶಿವಕುಮಾರ್ ಹೇಳಿದರು.

ಪ್ರಾರ್ಥನೆ ವೇಳೆ ಇಡೀ ಮಾನವ ಕುಲದ ರಕ್ಷಣೆಗೆ ಪ್ರಾರ್ಥಿಸಲಾಗಿದೆ. ಇದು ಧರ್ಮದ ವಿಚಾರವಲ್ಲ. ಮಾನವಕುಲದ ಒಳಿತಿನ ವಿಚಾರ. ಎಲ್ಲ ಧರ್ಮದ ಉತ್ತಮ ವಿಚಾರ, ಭಾವನೆಗಳ ಜತೆ ನಾವು ನಿಲ್ಲುತ್ತೇವೆ ಎಂದು ಅವರು ತಿಳಿಸಿದರು.

ಕೊರೋನ ಸೋಂಕು ಹರಡುವಿಕೆ ಸಂಬಂಧ ರಾಜಕೀಯ ಉದ್ದೇಶದಿಂದ ಒಂದು ಕೋಮಿನ ವಿರುದ್ಧ ಆರೋಪ ಮಾಡಲಾಯಿತು. ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಎಲ್ಲರ ಹಿತ ಕಾಯಲು ಬದ್ಧವಾಗಿದೆ ಎಂದು ಶಿವಕುಮಾರ್ ಹೇಳಿದರು. ಸಮಾಜದ ಎಲ್ಲಾ ವರ್ಗದವರನ್ನು ಒಂದೇ ರೀತಿ ಕಾಣಬೇಕು. ಯಾರೋ ಒಂದಿಬ್ಬರು ಮಾಡುವ ತಪ್ಪಿಗೆ ಇಡೀ ಸಮುದಾಯವನ್ನು ದೂಷಿಸಬಾರದು. ತಪ್ಪು ಮಾಡಿದವರ ವಿರುದ್ಧ ಕಾನೂನು ತನ್ನದೇ ಆದ ಕ್ರಮ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಆಲ್ ಇಂಡಿಯಾ ಮಿಲ್ಲಿ ಕೌನ್ಸಿಲ್‍ನ ಪ್ರಮುಖ ಪ್ರತಿನಿಧಿ ಮೌಲಾನ ಸೈಯ್ಯದ್ ಮುಸ್ತಫಾ ರಿಫಾಯಿ, ಸೈಯ್ಯದ್ ಶಾಹೀದ್ ಅಹ್ಮದ್, ಅಬ್ದುಲ್ ಅಝೀಝ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)