varthabharthi


ಬೆಂಗಳೂರು

ಮೃತರ ಧರ್ಮದ ವಿಧಿವಿಧಾನದಂತೆ ಅಂತಿಮ ಸಂಸ್ಕಾರ

ಕೊರೋನ ಸೋಂಕಿತರ ಅಂತ್ಯಕ್ರಿಯೆಯಲ್ಲಿ ತೊಡಗಿಸಿಕೊಂಡ ಶಾಸಕ ಝಮೀರ್ ಅಹ್ಮದ್ ತಂಡ

ವಾರ್ತಾ ಭಾರತಿ : 8 Jul, 2020
ಅಮ್ಜದ್ ಖಾನ್ ಎಂ.

ಬೆಂಗಳೂರು, ಜು.8: ಕೊರೋನ ಸೋಂಕಿನಿಂದ ಯಾರಾದರೂ ಮೃತಪಟ್ಟರೆ ಅವರ ಕುಟುಂಬ ಸದಸ್ಯರೆ ಅಂತಿಮ ದರ್ಶನ ಪಡೆಯಲು ಸಾಧ್ಯವಿಲ್ಲದ ಹಾಗೂ ಕೆಲವು ಕಡೆ ಸಂಬಂಧಿಕರು ಮೃತದೇಹವನ್ನು ಪಡೆಯಲು ನಿರಾಕರಿಸುವಂತಹ ಘಟನೆಗಳು ನಮ್ಮ ಮುಂದಿವೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕೊರೋನ ಸೋಂಕಿನಿಂದ ಮೃತಪಟ್ಟವರಿಗೆ ಅವರ ಧರ್ಮದ ಸಂಪ್ರದಾಯದ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ, ಅಂತ್ಯಕ್ರಿಯೆ ನಡೆಸುವ ಕಾಯಕದಲ್ಲಿ ಚಾಮರಾಜಪೇಟೆ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ನೇತೃತ್ವದ 20 ಮಂದಿ ಸ್ವಯಂ ಸೇವಕರ ತಂಡ ತೊಡಗಿಸಿಕೊಂಡಿದೆ.

ಹಿಂದೂ, ಮುಸ್ಲಿಮ್, ಕ್ರೈಸ್ತರು ಸೇರಿದಂತೆ ಯಾರೇ ಈ ಮಹಾಮಾರಿ ಕೊರೋನ ಸೋಂಕಿನಿಂದ ಮೃತಪಟ್ಟರೂ, ಅವರ ಅಂತ್ಯಕ್ರಿಯೆಗೆ ಯಾರೊಬ್ಬರೂ ಮುಂದೆ ಬರದಿದ್ದರೆ, ಝಮೀರ್ ಅಹ್ಮದ್ ಖಾನ್ ಅವರ ಈ ಸ್ವಯಂ ಸೇವಕರ ತಂಡವು ಸರಕಾರ ವಿಧಿಸಿರುವ ನಿಯಮಾವಳಿಗಳ ಪ್ರಕಾರ ಪಿಪಿಇ ಕಿಟ್‍ಗಳನ್ನು ಧರಿಸಿ, ಅಗತ್ಯ ಸುರಕ್ಷಾ ವಿಧಾನಗಳೊಂದಿಗೆ ಮೃತರ ಅಂತ್ಯ ಸಂಸ್ಕಾರವನ್ನು ನೆರವೇರಿಸುವ ಮೂಲಕ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಪಡೆದುಕೊಂಡಿದೆ.

ಚಾಮರಾಜಪೇಟೆ ಕ್ಷೇತ್ರದ ಮಹಿಳೆಯೊಬ್ಬರು ಕೊರೋನ ಸೋಂಕಿನಿಂದ ಮೃತಪಟ್ಟು, ನಗರದ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಯಲ್ಲಿ ಅವರ ಮೃತದೇಹವನ್ನು ಇರಿಸಲಾಗಿತ್ತು. ಆದರೆ, ಕುಟುಂಬ ಸದಸ್ಯರು ಸೇರಿದಂತೆ ಯಾರೊಬ್ಬರೂ ಮೃತದೇಹವನ್ನು ಪಡೆಯಲು ಮುಂದಾಗದ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಕಟ್ಟಬೇಕಾದ ಚಿಕಿತ್ಸಾ ವೆಚ್ಚವನ್ನು ಭರಿಸಿ, ಮೃತದೇಹವನ್ನು ಅವರ ಸಂಪ್ರದಾಯದಂತೆ ಸ್ವತಃ ಝಮೀರ್ ಅಹ್ಮದ್ ಖಾನ್ ಮುಂದೆ ನಿಂತು ಅಂತ್ಯ ಸಂಸ್ಕಾರ ನೆರವೇರಿಸಿದ್ದರು.

ಅಂದಿನಿಂದ ಬೆಂಗಳೂರಿನ ಯಾವುದೇ ಭಾಗದಲ್ಲಾಗಲಿ ಇಂತಹ ಪರಿಸ್ಥಿತಿ ಎದುರಾದರೆ, ಝಮೀರ್ ಅಹ್ಮದ್ ಖಾನ್ ಅವರ ತಂಡ ಕಾರ್ಯೋನ್ಮುಖವಾಗಿ ಸೇವೆ ಸಲ್ಲಿಸುತ್ತಿದೆ. ಮೃತದೇಹವನ್ನು ಅವರವರ ಧಾರ್ಮಿಕ ಸಂಪ್ರದಾಯದಂತೆ ಅಂತ್ಯ ಸಂಸ್ಕಾರ ನೆರವೇರಿಸುವ ಮೂಲಕ ಮಾನವ ಧರ್ಮದ ಶ್ರೇಷ್ಠೆಯನ್ನು ಪ್ರದರ್ಶಿಸಿದ್ದಾರೆ.

40 ಸಾವಿರ ಕುಟುಂಬಗಳಿಗೆ ರೇಷನ್ ವಿತರಣೆ: ಶತಮಾನದಲ್ಲಿ ಒಮ್ಮೆ ಮಾನವ ಕುಲ ಇಂತಹ ಸಂಕಷ್ಟವನ್ನು ಎದುರಿಸುತ್ತದೆ ಎಂದು ಹೇಳಲಾಗುತ್ತದೆ. ಅದರಂತೆ, ನಾವಿರುವ ಸಂದರ್ಭದಲ್ಲಿ ಈ ಕೊರೋನ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದೆ. ಮಾನವ ಕುಲಕ್ಕೆ ನಮ್ಮಿಂದ ಆಗಬಹುದಾದ ಸಮಯವನ್ನು ಮಾಡಬೇಕು. ಕಾಲ ಮಿಂಚಿ ಹೋದ ಮೇಲೆ ನಾವು ಯಾರಿಗಾದರೂ ನೆರವು ನೀಡಲು ಬಯಸಿದರೂ ಅದು ಸಾಧ್ಯವಾಗುವುದಿಲ್ಲ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.

‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಕೊರೋನ ಸೋಂಕಿನಿಂದ ಯಾರೊಬ್ಬರೂ ಮೃತಪಡಬಾರದು ಎಂಬುದು ನನ್ನ ಪ್ರಾರ್ಥನೆ. ಒಬ್ಬ ವ್ಯಕ್ತಿ ಮೃತಪಟ್ಟಾಗ ಆತನ ಕುಟುಂಬ ಸದಸ್ಯರು, ಆತನ ಅಂತಿಮ ದರ್ಶನ ಮಾಡಲು ಸಾಧ್ಯವಿಲ್ಲದಂತಹ ದುಸ್ಥಿತಿ ನನ್ನ ಶತ್ರುವಿಗೂ ಬರವುದು ಬೇಡ ಎಂದರು.

ಲಾಕ್‍ಡೌನ್ ಸಂದರ್ಭದಲ್ಲಿ ಕೆಲಸ ಕಾರ್ಯವಿಲ್ಲದೆ ಬಡವರು, ದಿನಗೂಲಿ ನೌಕರರು ಮನೆಯಲ್ಲಿ ಕೂರಬೇಕಾಯಿತು. ಆದುದರಿಂದ, ನನ್ನ ಮತ ಕ್ಷೇತ್ರದ ವ್ಯಾಪ್ತಿಯಲ್ಲಿ ಬಿಬಿಎಂಪಿ ನೀಡಿದ ಕಿಟ್‍ಗಳು ಸೇರಿದಂತೆ 40 ಸಾವಿರ ಕುಟುಂಬಗಳಿಗೆ ರೇಷನ್ ಕಿಟ್‍ಗಳನ್ನು ವಿತರಿಸಿದೆ ಎಂದು ಅವರು ಹೇಳಿದರು.

ಕೋವಿಡ್ ಸೋಂಕಿನಿಂದ ಸೀಲ್ ಡೌನ್ ಆದ ಪ್ರದೇಶಗಳಲ್ಲಿ ಸ್ವಂತ ಹಣದಲ್ಲಿ 14 ಸಾವಿರ ಜನರಿಗೆ ಊಟ, ನೀರಿನ ವ್ಯವಸ್ಥೆ ಮಾಡಿಸಿದ್ದೆ. ಸುಮಾರು ಒಂದೂವರೆ ತಿಂಗಳು ಮೂರು ಸಾವಿರ ಕುಟುಂಬಗಳಿಗೆ 5 ಕೆಜಿ ತರಕಾರಿ ಪ್ಯಾಕೇಟ್‍ಗಳನ್ನು ಅವರ ಮನೆಗಳಿಗೆ ತಲುಪಿಸಿದೆ ಎಂದು ಅವರು ಹೇಳಿದರು.

ರಮಝಾನ್ ಉಪವಾಸ ಸಂದರ್ಭದಲ್ಲಿ ಪ್ರತಿನಿತ್ಯ ಐದು ಸಾವಿರ ಮಂದಿಗೆ ಇಫ್ತಾರ್ ಮಾಡಲು ಹಣ್ಣು ಹಂಪಲುಗಳು ವಿತರಿಸಿದ್ದೇನೆ. ಕ್ವಾರಂಟೈನ್‍ನಲ್ಲಿರುವವರಿಗೆ ಸಹರಿ ಹಾಗೂ ಇಫ್ತಾರ್ ವ್ಯವಸ್ಥೆ ಮಾಡಿಸಿದ್ದೆ. ಹಣ, ಐಶ್ವರ್ಯ ಎಲ್ಲವನ್ನು ಸಕಾಲದಲ್ಲಿ, ಬಡವರಿಗಾಗಿ ಬಳಸಿದರೆ ಮಾತ್ರ ಸಾರ್ಥಕ ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.

ನನ್ನ ಆಪ್ತ ಸಹಾಯಕರಾದ ಅಯ್ಯೂಬ್, ಫಾರೂಕ್, ಬಾಲ, ಮೂರ್ತಿ, ಅಮೀರ್ ಸೇರಿದಂತೆ 20 ಮಂದಿಯ ತಂಡ ರಚಿಸಿದ್ದೇನೆ. ಹಿಂದೂ, ಮುಸ್ಲಿಮ್, ಕ್ರೈಸ್ತರು ಸೇರಿದಂತೆ ಅವರವರ ಸಂಪ್ರದಾಯದಂತೆ ಮೃತರ ಅಂತ್ಯಕ್ರಿಯೆ ಮಾಡಲಾಗುತ್ತಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಲಾಕ್‍ಡೌನ್ ಘೋಷಣೆಯಾದ ಬಳಿಕ ಮಾ.28 ರಿಂದ ಈವರೆಗೆ 120ಕ್ಕೂ ಹೆಚ್ಚು ಮಂದಿಯ ಅಂತ್ಯಕ್ರಿಯೆ ಮಾಡಲಾಗಿದೆ. ಆ ಭಗವಂತ ನನ್ನಿಂದ ಈ ಸೇವೆ ಪಡೆದುಕೊಳ್ಳುತ್ತಿರುವುದು ನನ್ನ ಅದೃಷ್ಟ. ಇದೇ ರೀತಿ ಹೆಚ್ಚಿನ ಪ್ರಮಾಣದಲ್ಲಿ ನನಗೆ ಜನರ ಸೇವೆ ಮಾಡಲು ಅವಕಾಶ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.

ಬಿ.ಝೆಡ್.ಝಮೀರ್ ಅಹ್ಮದ್ ಖಾನ್, ಕಾಂಗ್ರೆಸ್ ಶಾಸಕ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)