varthabharthi


ಸಿನಿಮಾ

​ಹಿರಿಯ ಹಾಸ್ಯನಟ ಜಗದೀಪ್ ನಿಧನಕ್ಕೆ ಸೆಲೆಬ್ರಿಟಿಗಳ ಕಂಬನಿ

ವಾರ್ತಾ ಭಾರತಿ : 9 Jul, 2020

ಹೊಸದಿಲ್ಲಿ, ಜು.9: ಶೋಲೆ, ಪುರಾನಾ ಮಂದಿರ್ ಮತ್ತು ಅಂದಾಜ್ ಅಪ್ನಾ ಅಪ್ನಾ ಮತ್ತಿತರ ಚಿತ್ರಗಳಲ್ಲಿನ ಅಮೋಘ ನಟನೆಗಾಗಿ ಜನಮಾನಸದಲ್ಲಿ ಉಳಿದಿರುವ ಹಿಂದಿ ಚಿತ್ರರಂಗದ ಹಿರಿಯ ಹಾಸ್ಯನಟ ಜಗದೀಪ್ ಬುಧವಾರ ಮುಂಬೈನಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರಿಗೆ 81 ವರ್ಷ ವಯಸ್ಸಾಗಿತ್ತು.
ಬಾಂದ್ರಾದಲ್ಲಿರುವ ತಮ್ಮ ನಿವಾಸದಲ್ಲಿ ರಾತ್ರಿ 8:30ರ ವೇಳೆಗೆ ನಿಧನರಾದರು. ವಯೋಸಂಬಂಧಿ ಕಾಯಿಲೆಗಳಿಂದ ಅವರು ಅಸ್ವಸ್ಥರಾಗಿದ್ದರು ಎಂದು ಅವರ ಆಪ್ತಸ್ನೇಹಿತ, ಚಿತ್ರ ನಿರ್ಮಾಪಕ ಮುಹಮ್ಮದ್ ಅಲಿ ಹೇಳಿದ್ದಾರೆ.

ಜಗದೀಪ್ ಅವರಿಗೆ ಪತ್ನಿ, ಪುತ್ರಿಯರು ಹಾಗೂ ಪುತ್ರರು ಇದ್ದಾರೆ. ಇವರಲ್ಲಿ ನಟ ಜಾವೇದ್ ಜಾಫ್ರಿ ಮತ್ತು ಟಿವಿ ನಟ ನವೀದ್ ಜಾಫ್ರಿ ಸೇರಿದ್ದಾರೆ. ಬಾಲಿವುಡ್‌ನ ದಂತಕಥೆ ಎನಿಸಿದ್ದ ಸೈಯದ್ ಇಸ್ತಿಯಾಕ್ ಅಹ್ಮದ್ ಜಾಫ್ರಿ, ಬೆಳ್ಳಿಪರದೆಯಲ್ಲಿ ಜಗದೀಪ್ ಎಂದೇ ಪ್ರಖ್ಯಾತರು. 1975ರಲ್ಲಿ ಅಮಿತಾಬ್ ಬಚ್ಚನ್ ಮತ್ತು ಧರ್ಮೇಂದ್ರ ಅವರ ಶೋಲೆ ಚಿತ್ರದ ಸೂರ್ಮಾ ಬೋಪಾಲಿ, ಪುರಾನಾ ಮಂದಿರ್ (1984) ಚಿತ್ರದ ಮಚ್ಚರ್ ಹಾಗೂ ಅಂದಾರ್ ಅಪ್ನಾ ಅಪ್ನಾ (1994) ಚಿತ್ರದ ಬಂಕೇಲಾಲ್ ಭೋಪಾಲಿ (ಸಲ್ಮಾನ್ ‌ಖಾನ್ ಅವರ ತಂದೆ) ಪಾತ್ರಗಳು ಇವರಿಗೆ ಅಪಾರ ಜನಪ್ರಿಯತೆ ತಂದುಕೊಟ್ಟಿದ್ದವು. 1988ರಲ್ಲಿ ಅವರು ಸೂರ್ಮಾ ಭೋಪಾಲಿ ಚಿತ್ರವನ್ನು ನಿರ್ದೇಶಿಸಿದ್ದರು.

ಜಗದೀಪ್ ನಿಧನಕ್ಕೆ ನಟ ಅಜಯ್ ದೇವಗನ್, ಅನಿಲ್ ಕಪೂರ್ ಸೇರಿದಂತೆ ಹಲವು ಮಂದಿ ಸೆಲೆಬ್ರಿಟಿಗಳು ಕಂಬನಿ ಮಿಡಿದಿದ್ದಾರೆ. ಜಗದೀಪ್ ಸಾಬ್ ಅವರು ದೇಶದ ಸರ್ವಶ್ರೇಷ್ಠ ನಟ..ನಾನು ಅವರ ದೊಡ್ಡ ಅಭಿಮಾನಿ. ಅವರೊಂದಿಗೆ ಏಕ್ ಬಾರ್ ಕಹೋ ಮತ್ತಿತರ ಚಿತ್ರಗಳಲ್ಲಿ ನಟಿಸುವ ಅದೃಷ್ಟ ನನ್ನದಾಗಿತ್ತು ಎಂದು ಅನಿಲ್ ಕಪೂರ್ ಟ್ವೀಟ್ ಮಾಡಿದ್ದಾರೆ.

ಜಗದೀಪ್ ಸಾಬ್ ಅವರ ನಿಧನದ ಆಘಾತಕಾರಿ ಸುದ್ದಿ ಕೇಳಿದೆ. ಪರದೆಯಲ್ಲಿ ಅವರ ಚಿತ್ರಗಳನ್ನು ಆಸ್ವಾದಿಸಿದ್ದೇನೆ. ಪ್ರೇಕ್ಷಕರಿಗೆ ಮುದ ನೀಡಿದ ವ್ಯಕ್ತಿತ್ವ ಅವರದ್ದು. ಜಗದೀಪ್ ಆತ್ಮಕ್ಕೆ ಶಾಂತಿ ಲಭಿಸಲಿ ಎಂದು ಪಾರ್ಥಿಸುತ್ತೇನೆ ಎಂದು ಅಜಯ್ ದೇವಗನ್ ಟ್ವೀಟಿಸಿದ್ದಾರೆ.

ಬಾಲನಟನಾಗಿ 1951ರಲ್ಲಿ ಅಫ್ಸಾನಾ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು, ಬಾಲ್ಯದಲ್ಲೇ ಗಮನ ಸೆಳೆದಿದ್ದರು. ಬಿಂದಿಯಾ, ಭಾಭಿ ಮತ್ತು ಬರ್ಖಾದಂಥ ಚಿತ್ರಗಳಲ್ಲಿ ನಾಯಕನಟನಾಗಿಯೂ ಮಿಂಚಿದ್ದರು. 1968ರಲ್ಲಿ ಬ್ರಹ್ಮಚಾರಿ ಚಿತ್ರದ ಪಾತ್ರ ಅವರನ್ನು ಹಾಸ್ಯನಟನಾಗಿ ಪರಿಚಯಿಸಿತು. 2012ರ ಗಾಲಿ ಗಾಲಿ ಚೋರ್ ಹೆ ಚಿತ್ರ ಅವರ ಕೊನೆಯ ಚಿತ್ರ. ಅವರು ಇದರಲ್ಲಿ ಪೊಲೀಸ್ ಪೇದೆಯ ಪಾತ್ರ ನಿರ್ವಹಿಸಿದ್ದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)