varthabharthi


ನಿಮ್ಮ ಅಂಕಣ

ಇವರ ಸೇವೆಗೆ ಕಳಂಕ ಹಚ್ಚುವುದು ಸರಿಯೇ?

ವಾರ್ತಾ ಭಾರತಿ : 9 Jul, 2020
ಟಿ. ಐ. ಬೆಂಗ್ರೆ

‘‘ದಂಗೆಯಲ್ಲಿ ಮರಣಹೊಂದಿದ ಬಲಿಪಶುಗಳ ಶವಗಳನ್ನು ಹೊರತರಲು ಸುರಕ್ಷಿತ ದಾರಿ ನೀಡುವುದು ಹಾಗೂ ಅವರ ಸಂಬಂಧಿಕರು ಮತ್ತು ಬಂಧುಗಳಿಗೆ ಈ ಕುರಿತು ಸರಿಯಾದ ಮಾಹಿತಿ ನೀಡುವ ಮುಖಾಂತರ ಅತ್ಯಂತ ಗೌರವಯುತವಾದ ರೀತಿಯಲ್ಲಿ ಅವರ ದೇಹಗಳ ಅಂತ್ಯಕ್ರಿಯೆ ನಡೆಯುವಂತೆ ನೋಡಿಕೊಳ್ಳುವುದು’’.

-ದಿಲ್ಲಿ ಹೈಕೋರ್ಟ್ 
(26/2/2020 ರ ಆದೇಶ)

ಸಾಮಾಜಿಕ ಕಾರ್ಯಕರ್ತರೋರ್ವರು 25/2/2020 ರಂದು ದಿಲ್ಲಿಯಲ್ಲಿ ನಡೆದ ಅಮಾನವೀಯ ಘಟನೆಗಳಲ್ಲಿ ಮರಣ ಹೊಂದಿದವರ ಮೃತ ಶರೀರ ಮತ್ತು ಭಯಾನಕವಾಗಿ ಗಾಯಗೊಂಡ ವ್ಯಕ್ತಿಗಳನ್ನು ಸ್ಥಳೀಯ ಅಲ್-ಹಿಂದ್ ಆಸ್ಪತ್ರೆಯಿಂದ ದೂರದಲ್ಲಿದ್ದ ಸರಕಾರಿ ಆಸ್ಪತ್ರೆಗೆ ಸುರಕ್ಷಿತವಾಗಿ ಸಾಗಿಸಲು ದಿಲ್ಲಿ ಪೊಲೀಸರು ಅವಕಾಶವನ್ನು ಕಲ್ಪಿಸಿಕೊಡಬೇಕೆಂದು, ದಿಲ್ಲಿ ಹೈ ಕೋರ್ಟ್‌ನಲ್ಲಿ ಪ್ರಸ್ತಾಪಿಸಿದ್ದರು. ಎಂದರೆ ಒಂದು ಕಡೆ ಅಲ್-ಹಿಂದ್ ಆಸ್ಪತ್ರೆಯ ಆಸುಪಾಸಿನಲ್ಲಿ ನಡೆಯುತ್ತಿದ್ದ ಅಮಾಯಕರ ಮಾರಣಹೋಮ, ಇನ್ನೊಂದು ಕಡೆ ಮಾರಣಾಂತಿಕವಾಗಿ ಹಲ್ಲೆಗೊಳಗಾದ ಬಹಳಷ್ಟು ಬಡಪಾಯಿ ಜನರು (ಮುಸ್ಲಿಮರು) ತಮ್ಮ ಜೀವ ಉಳಿಸಲು ಅಲ್-ಹಿಂದ್ ಆಸ್ಪತ್ರೆಯನ್ನು (ಕನಿಷ್ಠ ಸೌಲಭ್ಯಗಳಿರುವ) ಆಶ್ರಯಿಸಿದ್ದರು. ಆ ಜನರನ್ನು ಸುರಕ್ಷಿತವಾಗಿ ಆ್ಯಂಬುಲೆನ್ಸ್ ಮುಖಾಂತರ ಹತ್ತಿರದ ಸರಕಾರಿ ಆಸ್ಪತ್ರೆಗೆ ಸಾಗಿಸಲು ಅಥವಾ ಆಸ್ಪತ್ರೆಯಿಂದ ಕೊಂಡೊಯ್ಯುವ ಆ್ಯಂಬುಲೆನ್ಸ್ ಗಳಿಗೆ ರಕ್ಷಣೆಯನ್ನು ಒದಗಿಸಲು ಕೋರ್ಟ್‌ಗೆ ಮೊರೆ ಹೋಗಬೇಕಾಯಿತು ಎನ್ನುವುದು ವಿಶೇಷ.
ಇನ್ನು ದಿಲ್ಲಿಯ ಗಲಭೆಪೀಡಿತ ಪ್ರದೇಶವಾದ ಮುಸ್ತಫಾಬಾದ್‌ನಲ್ಲಿರುವ ಅಲ್-ಹಿಂದ್ ಆಸ್ಪತ್ರೆ ಇರುವ ಸ್ಥಳ ಬಹಳ ಕಿರಿದಾದ ರಸ್ತೆಗಳಿರುವ ಹಾಗೂ ಅದನ್ನು ದೂರದಿಂದ ನೋಡಿದರೆ ಅಲ್ಲಿನ ಶುಚಿತ್ವದ ಕುರಿತು ದಿಲ್ಲಿ ಮುನ್ಸಿಪಾಲಿಟಿ ಅತೀ ಕಡಿಮೆ ಮುತುವರ್ಜಿವಹಿಸಿದಂತಹ ಪ್ರದೇಶ ಎಂದು ಸ್ಪಷ್ಟವಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿಯೂ ಆ ಆಸ್ಪತ್ರೆಯ ಮಾಲಕರಾಗಿರುವ ಡಾ. ಎಂ. ಎ. ಅನ್ವರ್ ಎನ್ನುವ ವೈದ್ಯರು ಸುಮಾರು 600ಕ್ಕಿಂತಲೂ ಹೆಚ್ಚು ಗಲಭೆ ಪೀಡಿತರಿಗೆ ಉಚಿತ ಚಿಕಿತ್ಸೆ ನೀಡಿದ್ದಾರೆ.

ಇನ್ನು ಈ ರೀತಿ ನಾನು ವಿಷಯ ಹೇಳುತ್ತಾ ಹೋದರೆ, ಇದನ್ನು ಓದಿ ಕೆಲವರು ನಾನೇಕೆ ಕೆಲವು ತಿಂಗಳ ಹಿಂದಿನ ಹೈ ಕೋರ್ಟ್ ಆದೇಶವನ್ನು ಸ್ಮರಿಸುತ್ತಿರುವುದು?. ಇದು ಎಲ್ಲರಿಗೂ ಗೊತ್ತಿರುವ ವಿಚಾರವಲ್ಲವೇ? ಅಲ್ಲದೆ, ಮುಸ್ತಫಾಬಾದ್ ನಲ್ಲಿರುವ ಅಲ್-ಹಿಂದ್ ಆಸ್ಪತ್ರೆಯ ಬಗ್ಗೆ ಈಗ ಏಕೆ ಪ್ರಸ್ತಾಪ, ಅಲ್ಲಿ ಈಗಲೂ ಕೋವಿಡ್-19 ರೋಗಿಗಳ ಚಿಕಿತ್ಸೆ ನಡೆಯುತ್ತಿದೆಯಲ್ಲವೇ? ಎಂದು ಕೇಳಬಹುದು.
    
  ನಾನು ಈ ವಿಷಯವನ್ನು ಇಲ್ಲಿ ಚರ್ಚಿಸಲು ಎರಡು ಕಾರಣಗಳಿವೆ. ಮೊದಲನೆಯದಾಗಿ, ಹೈಕೋರ್ಟ್, ಆ ತೀರಾ ಕಠಿಣ ಪರಿಸ್ಥಿತಿಯಲ್ಲಿ ಅಲ್-ಹಿಂದ್ ಆಸ್ಪತ್ರೆಯ ಮಾಲಕರ ಸೇವೆಯನ್ನು ಗುರುತಿಸಿದೆ. (ಆದರೆ ಅಲ್ಲಿ ಸರಿಯಾದ ಸಲಕರಣೆಗಳಿಲ್ಲದಿರುವುದರಿಂದಾಗಿ ಮಾರಣಾಂತಿಕವಾಗಿ ಹಲ್ಲೆಗೊಳಗಾದವರನ್ನು ಹತ್ತಿರದ ಸರಕಾರಿ ಆಸ್ಪತ್ರೆಗೆ ವರ್ಗಾಯಿಸುವ ಪರಿಸ್ಥಿತಿ ನಿರ್ಮಾಣವಾಯಿತು) ಎರಡನೆಯದಾಗಿ ಅತ್ಯಂತ ವಿಚಿತ್ರವಾದ ವಿಚಾರವೇನೆಂದರೆ, ದಿಲ್ಲಿ ಪೊಲೀಸರು 24/2/2020 ರಂದು ಹತ್ಯೆಯಾದ ದಿಲ್ಬರ್ ನೇಗಿಯವರ ಹತ್ಯೆಯ ಕುರಿತ ಆರೋಪಪಟ್ಟಿಯಲ್ಲಿ, ಅವರು ಹತ್ಯೆಯ ಆರೋಪಿಯೆಂದಲ್ಲದಿದ್ದರೂ ಅವರ ಹೆಸರನ್ನು ಸೇರಿಸಲಾಗಿದೆ. ಇನ್ನ್ನು ಅವರು ಸಿಎಎ ವಿರುದ್ಧದ ಪ್ರತಿಭಟನೆಯನ್ನು ಆಯೋಜಿಸಿದ್ದರು ಎಂದು ಅದರಲ್ಲಿ ವಿವರಿಸಲಾಗಿದೆ.

ಈ ಕುರಿತು ಪತ್ರಕರ್ತರೊಂದಿಗೆ ಮಾತನಾಡಿದ ಡಾ. ಅನ್ವರ್ ತಾನು ಯಾವ ಪ್ರತಿಭಟನೆಯನ್ನೂ ಆಯೋಜಿಸಲಿಲ್ಲ, ಬದಲಾಗಿ ಪ್ರತಿಭಟನಾಕಾರರು ವಾಹನಗಳಿಗೆ ದಾರಿ ಮಾಡಿಕೊಡಬೇಕೆಂದು ಅವರಲ್ಲಿ ಬೇಡಿಕೆ ಇಟ್ಟಿದ್ದೆ ಎಂದರು. ಒಟ್ಟಿನಲ್ಲಿ ಅವರ ಮಾನವೀಯ ಸೇವೆಯನ್ನು ಗುರುತಿಸುವ ಬದಲು, ಈ ರೀತಿ ಅವರ ಹೆಸರನ್ನು ಆರೋಪಪಟ್ಟಿಯಲ್ಲಿ ಸೇರಿಸಿ ಅವರ ಹೆಸರಿಗೆ ಕಳಂಕ ತರುವಂತಾಗಿದೆ. ದಿಲ್ಲಿ ದಂಗೆಯ ಹೆಸರಲ್ಲಿ ಸಿಎಎ ವಿರೋಧಿ ಪ್ರತಿಭಟನಾಕಾರರ ನಿರಂತರ ಬಂಧನ ಇನ್ನೂ ನಡೆಯುತ್ತಿದೆ. ನಾರ್ತ್ ಈಸ್ಟ್ ದಿಲ್ಲಿಯಲ್ಲಿ ನಡೆದ ದಂಗೆಯ ಆರೋಪಿಗಳೆಂದು ದಕ್ಷಿಣ ದಿಲ್ಲಿಯ ಎಂದರೆ ಸುಮಾರು 24 ಕಿಲೋಮೀಟರ್ ದೂರ ಸಿಎಎ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದ ವಿದ್ಯಾರ್ಥಿಗಳನ್ನು ಬಂಧಿಸಲಾಗುತ್ತಿದೆ ಎನ್ನುವುದು ವಿಚಿತ್ರ. ಇನ್ನು ದ್ವಿತೀಯ ವರ್ಷದ ಬಿ.ಎ. ವಿದ್ಯಾರ್ಥಿ ಆಸಿಫ್ ತನ್ಹಾರ ವಿಚಾರಣೆ ನಡೆಯುತ್ತಿದ್ದಾಗ ನ್ಯಾಯಾಲಯವು, ‘‘ಪೊಲೀಸ್ ತನಿಖೆಯು ಒಂದೇ ದಿಕ್ಕಿನಲ್ಲಿದ್ದಂತಿದೆ’’ ಎಂದು ಹೇಳಿದ್ದನ್ನು ನೆನಪಿಸಬಹುದು. ‘‘ಇನ್ನು ಮುಂದೆ ಈ ರೀತಿ ದಂಗೆಗಳನ್ನು ತಡೆಯಬೇಕೆಂದಿದ್ದರೆ, ಅದರ ಹಿಂದಿರುವ ನೈಜ ಆರೋಪಿಗಳ ಬಂಧನವಾಗಬೇಕು.ಸರಕಾರ ಜಾರಿಗೆ ತರಲು ಬಯಸಿದ ಸಿಎಎ ಕಾನೂನನ್ನು ವಿರೋಧಿಸಿ ಪ್ರತಿಭಟನೆ ಮಾಡಿದ್ದಾರೆನ್ನುವ ಕಾರಣಕ್ಕೆ ಮಾತ್ರ ವಿದ್ಯಾರ್ಥಿಗಳ ಬಂಧನ ನಡೆಯಬಾರದು.’’ ಎಂದಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)