varthabharthi


ನಿಮ್ಮ ಅಂಕಣ

ಸುಸಜ್ಜಿತ ಆಸ್ಪತ್ರೆಗಳನ್ನು ನಿರ್ಮಿಸುವುದಕ್ಕೆ ಇನ್ನಾದರೂ ಒತ್ತು ಕೊಡಿ

ವಾರ್ತಾ ಭಾರತಿ : 9 Jul, 2020
ಗಿರಿಜಾಶಂಕರ್ ಜಿ. ಎಸ್. ಇಡೇಹಳ್ಳಿ

ಪ್ರಸ್ತುತ ಕೊರೋನ ಕಾಯಿಲೆಗೆ ಇಡೀ ದೇಶವೇ ಹೈರಾಣಾಗಿ ಹೋಗುತ್ತಿದೆ. ಸದ್ಯದ ಪರಿಸ್ಥಿತಿಯಲ್ಲಿ ಕೊರೋನ ಕಾಯಿಲೆಗೆ ಸೂಕ್ತ ಚಿಕಿತ್ಸೆ ಇಲ್ಲದಿರುವುದು ಇನ್ನೂ ಆತಂಕಕ್ಕೆ ಎಡೆಮಾಡಿಕೊಟ್ಟಿದೆ. ನಮ್ಮಲ್ಲಿ ರೋಗಿಗೆ ಮೊದಲು ಬೇಕಿರುವುದು ಉತ್ತಮ ಚಿಕಿತ್ಸೆ ಕೊಡುವ ಆಸ್ಪತ್ರೆಗಳು. ಆದರೆ ನಮ್ಮ ದೇಶದಲ್ಲಿ ರೋಗಿಗೆ ತಕ್ಷಣವೇ ಸ್ಪಂದಿಸಿ ಚಿಕಿತ್ಸೆ ಕೊಡುವ ಸುಸಜ್ಜಿತ ಆಸ್ಪತ್ರೆಗಳ ಕೊರತೆ ತುಂಬಾ ಇದೆ. ಕೆಲವು ಆಸ್ಪತ್ರೆಗಳು ಬೆರಳೆಣಿಕೆಯಷ್ಟು ಇದ್ದರೂ ಅವು ಉಳ್ಳವರ ಪಾಲಾಗಿವೆ. ಸದ್ಯದ ಮಟ್ಟಿಗೆ ಇರುವ ವ್ಯವಸ್ಥೆಯಲ್ಲಿಯೇ ವೈದ್ಯರು ಕೊರೋನ ಕಾಯಿಲೆಗೆ ಸಂಬಂಧಿಸಿದಂತೆ ಉತ್ತಮವಾಗಿ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ತಮ್ಮ ಜೀವವನ್ನೇ ಪಣಕ್ಕಿಟ್ಟು ಹೋರಾಡುವಂತಹ ಪರಿಸ್ಥಿತಿಯಲ್ಲಿ ವೈದ್ಯರಿದ್ದಾರೆ. ನಮ್ಮಲ್ಲಿ ಅತ್ಯುತ್ತಮ ವೈದ್ಯರಿದ್ದರೂ ಸಹ ಸರಿಯಾದ ಸೌಲಭ್ಯಗಳು ಇಲ್ಲದೇ ಇರುವುದು ಬೇಸರದ ಸಂಗತಿ. ಹೀಗಾಗಿ ನಮ್ಮ ಸರಕಾರಗಳು ಆರೋಗ್ಯ ಕ್ಷೇತ್ರದ ಬಗ್ಗೆ ಅಷ್ಟೊಂದು ಕಾಳಜಿಯನ್ನು ವಹಿಸದೇ ಇರುವುದು ದುರ್ದೈವ.

ಒಂದು ದೇಶದಲ್ಲಿ ಸಾಮಾನ್ಯ ನಾಗರಿಕರಿಗೆ ಬಹಳ ಮುಖ್ಯವಾಗಿ ಬೇಕಿರುವುದು ಮೂಲಭೂತ ಸೌಲಭ್ಯಗಳು. ಅಂದರೆ ಆಹಾರ, ನೀರು, ರಸ್ತೆ, ವಿದ್ಯುತ್, ಸಾರಿಗೆ, ಶಿಕ್ಷಣ ಹಾಗೂ ವೈದ್ಯಕೀಯ ಸೌಲಭ್ಯಗಳು. ಇವುಗಳಲ್ಲಿ ತುರ್ತು ಪರಿಸ್ಥಿತಿಯಲ್ಲಿ ಬಹಳ ಮುಖ್ಯವಾಗಿ ಬೇಕಿರುವುದು ವೈದ್ಯಕೀಯ ಸೌಲಭ್ಯಗಳು. ಅಂದರೆ ಎಲ್ಲಾ ಸೌಲಭ್ಯಗಳನ್ನು ಒಳಗೊಂಡ ಸುಸಜ್ಜಿತ ಆಸ್ಪತ್ರೆಗಳು. ಆಸ್ಪತ್ರೆ ಅಂದರೆ ಬರೀ ಕಟ್ಟಡಗಳಲ್ಲ. ನಮ್ಮಲ್ಲಿ ಹಲವಾರು ಸರಕಾರಿ ಆಸ್ಪತ್ರೆಗಳು ಭವ್ಯವಾದ ಕಟ್ಟಡಗಳನ್ನೇನೋ ಹೊಂದಿವೆ. ಆದರೆ ವ್ಯವಸ್ಥಿತವಾದ ಸೌಕರ್ಯಗಳು ಮಾತ್ರ ಸಿಗುತ್ತಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ವೈದ್ಯರ ಕೊರತೆ ಎದ್ದು ಕಾಣುತ್ತದೆ. ಕೆಲವು ಆಸ್ಪತ್ರೆಗಳಲ್ಲಿ ಅತ್ಯುತ್ತಮ ವೈದ್ಯರಿದ್ದರೂ ಸಹ ವಿಶೇಷ ವಾರ್ಡುಗಳು, ವೆಂಟಿಲೇಟರ್‌ಗಳು, ಟೆಸ್ಟ್‌ಲ್ಯಾಬ್‌ಗಳು, ಬೆಡ್‌ಗಳ ವ್ಯವಸ್ಥೆ, ದಾದಿಯರ ಕೊರತೆ ಇದೆ. 135 ಕೋಟಿ ಜನಸಂಖ್ಯೆ ಹೊಂದಿರುವ ನಮ್ಮ ದೇಶಕ್ಕೆ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಸಾವಿರಾರು ಆಸ್ಪತ್ರೆಗಳು ಬೇಕು. ಆದರೆ ನಮ್ಮ ದೇಶದಲ್ಲಿ ಯಾವುದಕ್ಕೆ ಹೆಚ್ಚು ಮಹತ್ವ ಕೊಡಬೇಕೋ ಅದಕ್ಕೆ ಕೊಡದೆ ಇರುವುದೇ ನೋವಿನ ಸಂಗತಿ.

ಸರಕಾರಗಳ ವತಿಯಿಂದ ಹಲವು ರಾಜ್ಯಗಳಲ್ಲಿ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ಪ್ರತಿಮೆಗಳನ್ನು ನಿರ್ಮಿಸುವುದನ್ನು ನೋಡುತ್ತಿದ್ದೇವೆ. ಇನ್ನೂ ಕೆಲವು ಕಡೆ ಅನಗತ್ಯ ಕಟ್ಟಡಗಳು, ಸಮುದಾಯ ಭವನಗಳು... ಹೀಗೆ ಹಲವಾರು ಸೌಧಗಳು ತಲೆ ಎತ್ತುವುದನ್ನು ಕಾಣಬಹುದು. ಇಂತಹ ಕಟ್ಟಡಗಳು ಕೆಲವೇ ವರ್ಷಗಳಲ್ಲಿ ಹಾಳು ಕೊಂಪೆಗಳಾಗಿ ದುಶ್ಚಟಗಳ ಕೇಂದ್ರಗಳಾಗುತ್ತವೆ. ಸಾಧಕರ ವ್ಯಕ್ತಿತ್ವವನ್ನು ಗುರುತಿಸಿ ಪ್ರತಿಮೆಗಳನ್ನು ನಿರ್ಮಿಸುವುದು ಸರಿಯಿದ್ದರೂ, ಅವುಗಳ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂಪಾಯಿಗಳನ್ನು ವ್ಯಯಿಸುವುದು ಎಷ್ಟರ ಮಟ್ಟಿಗೆ ಸರಿ? ಒಂದೊಂದು ರಾಜ್ಯದಲ್ಲೂ ಇಂತಹ ಹತ್ತಾರು ಪ್ರತಿಮೆಗಳನ್ನು ನಾವು ನೋಡಬಹುದು. ಈ ರೀತಿ ಪ್ರತಿಮೆಗಳ ಬದಲಾಗಿ ಅದೇ ಸಾಧಕರ, ಸ್ವಾತಂತ್ರ್ಯ ಹೋರಾಟಗಾರರ, ಸಾಧುಸಂತರ, ಮಹಾನ್ ವ್ಯಕ್ತಿಗಳ ಹೆಸರಿನಲ್ಲಿ ಅದೇ ಸಾವಿರಾರು ಕೋಟಿ ರೂಪಾಯಿಗಳ ವೆಚ್ಚದಲ್ಲಿ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡ ಆಸ್ಪತ್ರೆಗಳನ್ನು ನಿರ್ಮಿಸುವುದು ಜನಸಾಮಾನ್ಯರ ಹಿತದೃಷ್ಟಿಯಿಂದ ಅತ್ಯುತ್ತಮ ಕಾರ್ಯ. ಆಗ ನಿಜವಾಗಿಯೂ ಅಂತಹ ಸಾಧಕರಿಗೆ ನಾವು ಗೌರವವನ್ನು ಕೊಟ್ಟಂತಾಗುತ್ತದೆ. ಯಾರೋ ಮಹನೀಯರ ಹೆಸರಿನಲ್ಲಿ ಯಾವುದಾದರೂ ಒಂದು ಒಳ್ಳೆಯ ಕೆಲಸವನ್ನು ಮಾಡುತ್ತೇವೆಂದರೆ ಅದು ಜನಸಾಮಾನ್ಯರಿಗೆ ಅನುಕೂಲವಾಗುವಂತೆ ಇರಬೇಕು. ಆಗ ಆ ಕಾರ್ಯ ನಿಜಕ್ಕೂ ಸಾರ್ಥಕವಾಗಲು ಸಾಧ್ಯ.

ಸದ್ಯದ ಕೊರೋನದಂತಹ ಕಾಯಿಲೆಗಳು ಇನ್ನೂ ಹೆಚ್ಚು ಉಲ್ಬಣಗೊಂಡರೆ ಅದಕ್ಕೆ ಸೂಕ್ತ ಚಿಕಿತ್ಸೆ ಕೊಡಲು ಆಸ್ಪತ್ರೆಗಳೇ ಇಲ್ಲದಂತಹ ಕಷ್ಟದ ಸಂದರ್ಭವನ್ನು ಎದುರಿಸುವುದು ಬಹಳ ದೂರವಿಲ್ಲವೇನೋ! ಇನ್ನು ಮುಂದಾದರೂ ಕನಿಷ್ಠ ಹೋಬಳಿಗೆ ಒಂದಾದರೂ ಅತ್ಯುತ್ತಮ ಮೂಲ ಸೌಲಭ್ಯಗಳನ್ನು ಒಳಗೊಂಡ ಆಸ್ಪತ್ರೆಗಳಿದ್ದರೆ ಮಾತ್ರ ಇಂತಹ ಕಾಯಿಲೆಗಳಿಗೆ ಸೂಕ್ತ ಚಿಕಿತ್ಸೆ ಕೊಡಲು ಸಾಧ್ಯ. ಪ್ರಸ್ತುತ ಸಮಯದಲ್ಲಿ ನಮ್ಮ ಜಿಲ್ಲಾ ಕೇಂದ್ರದಲ್ಲೇ ಐದಾರು ಸಾವಿರ ಜನರಿಗೆ ಒಂದೇ ಬಾರಿ ಚಿಕಿತ್ಸೆ ಕೊಡುವಂತಹ ಕೊಠಡಿಗಳ ವ್ಯವಸ್ಥೆ ಇಲ್ಲ. ಬೆಡ್‌ಗಳ ವ್ಯವಸ್ಥೆ ಇದ್ದರೆ ವೈದ್ಯರಿಲ್ಲ.

ವೈದ್ಯರಿದ್ದರೆ ಆಧುನಿಕ ಟೆಸ್ಟ್‌ಲ್ಯಾಬ್‌ಗಳು ಇಲ್ಲ. ಇವೆರಡೂ ಇದ್ದರೆ ಅಗತ್ಯಕ್ಕೆ ತಕ್ಕಂತೆ ಐಸಿಯು ವಾರ್ಡ್‌ಗಳೇ ಇಲ್ಲ. ನಮ್ಮಲ್ಲಿ ಆಸ್ಪತ್ರೆಗಳಿಗೆ ಹೋಗುವ ರೋಗಿಗಳು ಚಿಕಿತ್ಸೆ ಪಡೆದು ಗುಣಮುಖರಾಗುವುದಕ್ಕಿಂತ ವೈದ್ಯರು ಬರೆದುಕೊಟ್ಟ ಟೆಸ್ಟ್‌ಗಳನ್ನು ಮಾಡಿಸಲು ಖಾಸಗಿ ಟೆಸ್ಟ್‌ಲ್ಯಾಬ್‌ಗಳಿಗೆ ಓಡಾಡಿಯೇ ಇನ್ನಷ್ಟು ಬಳಲುವಂತಹ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಇನ್ನು ಮುಂದಾದರೂ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚು ಒತ್ತು ಕೊಡದಿದ್ದರೆ ಇಂತಹ ಭಯಾನಕ ಕಾಯಿಲೆಗಳಿಗೆ ರೋಗಿಗಳು ಒಳಗಾಗಿ ಬೀದಿಗಳಲ್ಲೇ ನರಳುವಂತಹ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಸರಕಾರದಿಂದ ಜಾರಿಗೆ ತರುವ ಕೆಲವು ತಾತ್ಕಾಲಿಕ ಯೋಜನೆಗಳನ್ನು ಕೈಬಿಟ್ಟು ದೀರ್ಘಕಾಲ ಜನಸಾಮಾನ್ಯರಿಗೆ ಒಳಿತಾಗುವಂತಹ ಯೋಜನೆಗಳನ್ನು ಜಾರಿಗೆ ತರುವುದು ನಿಜಕ್ಕೂ ಜನ ಮೆಚ್ಚುವ ಕೆಲಸವಾದೀತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)