varthabharthi


ನಿಮ್ಮ ಅಂಕಣ

ಬಿಕ್ಕಟ್ಟಿನ ಕಾಲದಲ್ಲಿ ಬೇಕು ಸಂಪೂರ್ಣ ಪಾರದರ್ಶಕತೆ

ವಾರ್ತಾ ಭಾರತಿ : 9 Jul, 2020
ಅಂಜಲಿ ಭಾರದ್ವಾಜ್

2005ರ ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರಿಗೆ ಸರಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಮತ್ತು ಅವರನ್ನು ಉತ್ತರದಾಯಿಗಳನ್ನಾಗಿ ಮಾಡುವ ಅಧಿಕಾರ ನೀಡುತ್ತದೆ. ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಈ ಕಾಯ್ದೆಯ ಅನುಷ್ಠಾನ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಮಹತ್ವ ಪಡೆದಿದೆ. ಸರಕಾರಗಳು ಘೋಷಿಸಿರುವ ಪರಿಹಾರ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿ ಜನರಿಗೆ ವ್ಯಾಪಕವಾಗಿ ತಿಳಿಯುವುದು ಅತ್ಯಂತ ಅವಶ್ಯಕ.


ಪಿಎಂ ಕೇರ್ಸ್‌ ನಿಧಿಗೆ ಸಂಬಂಧಿಸಿ ಸಲ್ಲಿಸಲಾಗಿರುವ ಮಾಹಿತಿ ಹಕ್ಕು ಅರ್ಜಿಗಳು ಉತ್ತರ ಸಿಗದೆ ಬಿದ್ದುಕೊಂಡಿವೆ. ಈ ನಿಧಿಗೆ ಸಂಬಂಧಿಸಿ ಸಂಗ್ರಹವಾದ ಮೊತ್ತ, ದಾನಿಗಳ ಹೆಸರುಗಳು, ನಿಧಿಯ ಮೊತ್ತದಿಂದ ಇದುವರೆಗೆ ಮಾಡಲಾಗಿರುವ ಖರ್ಚು ಅಥವಾ ಫಲಾನುಭವಿಗಳ ವಿವರಗಳ ಕುರಿತು ಯಾವುದೇ ಮಾಹಿತಿ ಇಲ್ಲ. ವರದಿಗಳ ಪ್ರಕಾರ ವಿದೇಶಿ ಮೂಲಗಳಿಂದಲೂ ಸೇರಿದಂತೆ ಈ ನಿಧಿಗೆ ಒಂದು ಮಿಲಿಯ ಡಾಲರ್‌ಗಿಂತಲೂ ಹೆಚ್ಚು ದೇಣಿಗೆಗಳು ಬಂದಿವೆ.

ರಾಷ್ಟ್ರವನ್ನು ಹಿಂದೆಂದೂ ಕಾಡಿರದ ಬಿಕ್ಕಟ್ಟು (ಕೊರೋನ ಸಾಂಕ್ರಾಮಿಕ) ಕಾಡುತ್ತಿರುವಾಗ ಜನರ ಮಾಹಿತಿ ಹಕ್ಕಿನ ಉಲ್ಲಂಘನೆ ಆತಂಕಕಾರಿ ವಿಷಯ. ಲಾಕ್‌ಡೌನ್ ಅವಧಿಯಲ್ಲಿ ದಿಢೀರನೆ ತಮ್ಮ ಆದಾಯಗಳಿಗೆ ಅವಕಾಶಗಳನ್ನು ಕಳೆದುಕೊಂಡ ಮಿಲಿಯಗಟ್ಟಲೆ ಜನರ ಜೀವನಾಡಿ, ಸಾರ್ವಜನಿಕರ ಹಣದಿಂದ ಸಾಧ್ಯವಾಗುವ ಪರಿಹಾರ ಹಾಗೂ ಕಲ್ಯಾಣ ಕಾರ್ಯಕ್ರಮಗಳು. ಸಾರ್ವಜನಿಕರ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಸಂಕಷ್ಟಕ್ಕೊಳಗಾದ ಬಡವರಿಗೆ, ಸಂತ್ರಸ್ತರಿಗೆ ಸರಕಾರಿ ಯೋಜನೆಗಳ ಲಾಭ ದೊರಕುತ್ತದೆಂಬ ಭರವಸೆ ಇರಬೇಕಾದರೆ ಅವರಿಗೆ ಸಂಬಂಧಿಸಿದ ಮಾಹಿತಿ ಪಡೆಯುವ ಅವಕಾಶವಿರಬೇಕು.

ವ್ಯಂಗ್ಯವೆಂದರೆ ಈ ಮಾಹಿತಿ ದೊರಕುವುದಕ್ಕೆ ಬದಲಾಗಿ, ಸರಕಾರದ ನಡೆಗಳ ಬಗ್ಗೆ, ಬಿಕ್ಕಟ್ಟಿನ ವೇಳೆ ಸರಕಾರದ ಕ್ರಮಗಳ ಬಗ್ಗೆ ಸಾರ್ವಜನಿಕ ಪರಿಶೀಲನೆ ಕಣ್ಗಾವಲು ಅನಪೇಕ್ಷಣೀಯ ಮತ್ತು ನಾಗರಿಕರು ಸರಕಾರ ಹೇಳುವುದನ್ನು ಯಾವುದೇ ಪ್ರಶ್ನೆ ಕೇಳದೆ ಸುಮ್ಮನೆ ಒಪ್ಪಿಕೊಳ್ಳಬೇಕು ಎನ್ನುವ ಒಂದು ಕಥಾನಕ ಮುನ್ನೆಲೆಗೆ ಬರುವಂತೆ ಕಾಣಿಸುತ್ತಿದೆ.

2005ರ ಮಾಹಿತಿ ಹಕ್ಕು ಕಾಯ್ದೆಯು ನಾಗರಿಕರಿಗೆ ಸರಕಾರಿ ಅಧಿಕಾರಿಗಳಿಂದ ಮಾಹಿತಿ ಪಡೆಯುವ ಮತ್ತು ಅವರನ್ನು ಉತ್ತರದಾಯಿಗಳನ್ನಾಗಿ ಮಾಡುವ ಅಧಿಕಾರ ನೀಡುತ್ತದೆ. ಕೋವಿಡ್-19 ಬಿಕ್ಕಟ್ಟಿನ ಸಮಯದಲ್ಲಿ ಈ ಕಾಯ್ದೆಯ ಅನುಷ್ಠಾನ ಹಿಂದೆಂದಿಗಿಂತಲೂ ಈಗ ಹೆಚ್ಚಿನ ಮಹತ್ವ ಪಡೆದಿದೆ. ಸರಕಾರಗಳು ಘೋಷಿಸಿರುವ ಪರಿಹಾರ ಕ್ರಮಗಳಿಗೆ ಸಂಬಂಧಿಸಿದ ಮಾಹಿತಿ ಜನರಿಗೆ ವ್ಯಾಪಕವಾಗಿ ತಿಳಿಯುವುದು ಅತ್ಯಂತ ಅವಶ್ಯಕ. ಉದಾಹರಣೆಗೆ ಅಗತ್ಯವುಳ್ಳವರಿಗೆ ಆಹಾರ ಭದ್ರತೆ ಒದಗಿಸಲು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಸಬ್ಸಿಡಿ ದರದಲ್ಲಿ ಆಹಾರ ಪೂರೈಕೆ ಕಾರ್ಯಕ್ರಮಗಳನ್ನು ಕೈಗೆತ್ತಿಕೊಂಡಿವೆ. ಆಹಾರ ಸಾಮಗ್ರಿಗಳು ಹಾಗೂ ಅವಶ್ಯಕ ವಸ್ತುಗಳು ಪರಿಣಾಮಕಾರಿಯಾಗಿ ಪೂರೈಕೆಯಾಗಬೇಕಾದರೆ ಇವುಗಳ ಪ್ರಮಾಣ ಮತ್ತು ಬೆಲೆ, ಫಲಾನುಭವಿಗಳ ವಿವರಗಳು ಮತ್ತು ಲಭ್ಯವಿರುವ ದಾಸ್ತಾನು ಸಹಿತ ಪಡಿತರ ಅಂಗಡಿಗಳ ಯಾದಿಗೆ ಸಂಬಂಧಿಸಿದ ಮಾಹಿತಿ ಸಾರ್ವಜನಿಕ ಜಾಲತಾಣಗಳಲ್ಲಿ ಲಭ್ಯವಾಗಲೇಬೇಕು.

ದೋಷಪೂರಿತ ಕೊರೋನ ಪರೀಕ್ಷೆಯ ಕಿಟ್‌ಗಳು ಹಾಗೂ ಖೋಟಾ ವೆಂಟಿಲೇಟರ್‌ಗಳಿಗೆ ಸಂಬಂಧಿಸಿ ಎದ್ದ ವಿವಾದಗಳಂತಹ ವಿವಾದಗಳನ್ನು ಮಾಹಿತಿಯ ಇನ್ನಷ್ಟು ಪಾರದರ್ಶಕತೆಯಿಂದ ತಡೆಯಬಹುದು. ಹಲವು ರಾಜ್ಯಗಳು ಚೀನಾದಿಂದ ಆಮದು ಮಾಡಲ್ಪಟ್ಟ ಕೋವಿಡ್-19 ಪರೀಕ್ಷಾ ಕಿಟ್‌ಗಳ ಬಗ್ಗೆ ದೂರು ನೀಡಿದ ಬಳಿಕ ಭಾರತೀಯ ವೈದ್ಯಕೀಯ ಸಂಶೋಧನಾ ಸಂಸ್ಥೆ ಅವುಗಳ ಬಳಕೆಯನ್ನು ತಡೆಹಿಡಿಯಿತು. ಆಗ ಚೀನಾದಿಂದ ಆ ಕಿಟ್‌ಗಳನ್ನು ಆಮದು ಮಾಡಿಕೊಳ್ಳಲು ಸರಕಾರ ತೆಗೆದುಕೊಂಡ ನಿರ್ಧಾರದ ಬಗ್ಗೆ ಗಂಭೀರ ಪ್ರಶ್ನೆಗಳು ಉದ್ಭವಿಸಿದವು. ಸೋಂಕು ಪೀಡಿತ ರೋಗಿಗಳು ತುರ್ತುನಿಗಾ ಘಟಕದ ಚಿಕಿತ್ಸೆಗಾಗಿ ಹೋದಾಗ ಅವರನ್ನು ಒಂದು ಆಸ್ಪತ್ರೆಯಿಂದ ಇನ್ನೊಂದು ಆಸ್ಪತ್ರೆಗೆ ಶಿಫ್ಟ್ ಮಾಡಿ ಅಲೆದಾಡಿಸಿದ ಹಲವಾರು ಪ್ರಕರಣಗಳು ವರದಿಯಾಗಿವೆ. ಆಸ್ಪತ್ರೆಗಳು ಮತ್ತು ಆರೋಗ್ಯ ಕೇಂದ್ರಗಳು ತಮ್ಮಲ್ಲಿ ಲಭ್ಯವಿರುವ ಹಾಸಿಗೆಗಳು ಹಾಗೂ ಇತರ ಸೌಕರ್ಯಗಳ ಕುರಿತು ಸಾರ್ವಜನಿಕವಾಗಿ ನಿಜವಾದ ಮಾಹಿತಿ ಲಭಿಸುವಂತೆ ಮಾಡಿದ್ದರೆ ಇಂತಹ ಅಲೆದಾಟ, ಪರದಾಟಗಳನ್ನು ತಪ್ಪಿಸಬಹುದಾಗಿತ್ತು.

ಸದ್ಯದ ಪರಿಸ್ಥಿತಿಯಲ್ಲಿ ಮಾಹಿತಿ ಆಯೋಗಗಳ ಪಾತ್ರ ಅತಿ ಮುಖ್ಯ. ಸಾಂಕ್ರಾಮಿಕ ರೋಗದ ಭೀತಿಯ ಕಾಲದಲ್ಲಿ ಮಾಹಿತಿಗಾಗಿ ನಾಗರಿಕರು ಸಲ್ಲಿಸುವ ವಿನಂತಿಯನ್ನು ಪರಿಶೀಲಿಸಿ ಸೂಕ್ತ ಮಾಹಿತಿ ನೀಡುವಲ್ಲಿ ವಿಳಂಬವಾಗುವುದು ಅನಿವಾರ್ಯವಿರಬಹುದು. ಆದರೆ ಆರ್‌ಟಿಐ ಕಾಯ್ದೆಯಂತೆ ಅಧಿಕಾರಿಗಳು ತಮ್ಮ ಕರ್ತವ್ಯವನ್ನು ನಿರ್ವಹಿಸದಿರಲು ಕೊರೋನ ಬಿಕ್ಕಟ್ಟು ಒಂದು ನೆಪವಾಗದಂತೆ ನೋಡಿಕೊಳ್ಳಬೇಕಾಗಿದೆ.

ಗೌಪ್ಯ ಕಾಪಾಡುವ ಹಾಗೂ ಬೇಕಾಬಿಟ್ಟಿ ಕ್ರಮ ತೆಗೆದುಕೊಳ್ಳುವ ಒಂದು ಕಾಲವಿದು. ಇಂತಹ ಸಮಯದಲ್ಲಿ ಸರಕಾರ ಜನರ ಜೀವನ ಹಾಗೂ ಹೊಟ್ಟೆ ಪಾಡಿನ ಮೇಲೆ ಭಾರೀ ಪರಿಣಾಮಗಳನ್ನು ಬೀರುವ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಇಂತಹ ನಿರ್ಧಾರಗಳಲ್ಲಿ ಜನರು ಅರ್ಥಪೂರ್ಣವಾಗಿ ಭಾಗವಹಿಸುವಂತೆ ಆಗಬೇಕು. ಇಂತಹ ಭಾಗವಹಿಸುವಿಕೆ ಅವರಿಗೆ ಸಾಧ್ಯವಾಗಬೇಕಾದರೆ ಮಾಹಿತಿಗೆ ಸಂಬಂಧಿಸಿ ಮುಕ್ತ ವಾತಾವರಣದ ಒಂದು ಸಂಸ್ಕೃತಿಯ ನಿರ್ಮಾಣ ಬಹಳ ಮುಖ್ಯ. ಸಾಂಕ್ರಾಮಿಕದ ವಿರುದ್ಧದ ಸಮರದಲ್ಲಿ ತಮ್ಮ ಹಣ ಎಲ್ಲಿ ಮತ್ತು ಹೇಗೆ ಖರ್ಚಾಗುತ್ತಿದೆ ಎಂಬ ಮಾಹಿತಿ ಜನರಿಗೆ ಸಿಗಲೇಬೇಕು.

ಕೃಪೆ: ದಿ ಹಿಂದು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)