varthabharthi


ಕರಾವಳಿ

ದ.ಕ. ಜಿಲ್ಲೆಯಲ್ಲಿ ತಾತ್ಕಾಲಿಕ ಕೋವಿಡ್ ಆಸ್ಪತ್ರೆ ರಚನೆಯಾಗಲಿ: ರಮಾನಾಥ ರೈ

ವಾರ್ತಾ ಭಾರತಿ : 10 Jul, 2020

ಮಂಗಳೂರು, ಜು.9: ದ.ಕ. ಜಿಲ್ಲೆಯಲ್ಲಿ ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೊರೋನ ಸೋಂಕಿತರ ಚಿಕಿತ್ಸೆಗಾಗಿ ಜಿಲ್ಲೆಯಲ್ಲಿ ಕನಿಷ್ಠ 1500 ಹಾಸಿಗೆಗಳ ತಾತ್ಕಾಲಿಕ ಕೋವಿಡ್ ಆಸ್ಪತ್ರೆಯನ್ನು ರಚಿಸಬೇಕು ಎಂದು ಮಾಜಿ ಸಚಿವ ರಮಾನಾಥ ರೈ ಸರಕಾರವನ್ನು ಒತ್ತಾಯಿಸಿದ್ದಾರೆ.

ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವೆನ್‌ಲಾಕ್ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯಾಗಿ ಮೀಸಲಿಟ್ಟಿರುವ ಕಾರಣ ಕೊರೋನ ಹೊರತುಪಡಿಸಿದ ಚಿಕಿತ್ಸೆಗಾಗಿ ರೋಗಿಗಳು ಪರದಾಟ ನಡೆಸಿ ಪ್ರಾಣ ಕಳೆದುಕೊಂಡಿರುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಬೆಂಗಳೂರಿನಂತೆ ಮಂಗಳೂರಿನಲ್ಲಿಯೂ ಕೋವಿಡ್ ಚಿಕಿತ್ಸೆಗೆ ಪ್ರತ್ಯೇಕ ತಾತ್ಕಾಲಿಕ ಕೋವಿಡ್ ಆಸ್ಪತ್ರೆಗೆ ಸ್ಥಳ ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದರು.

ಕೊರೋನ ಸೋಂಕು ನಿಯಂತ್ರಿಸುವಲ್ಲಿ ರಾಜ್ಯ ಸರಕಾರ ಹಾಗೂ ದ.ಕ. ಜಿಲ್ಲಾಡಳಿತ ವಿಫಲವಾಗಿದೆ ಎಂದು ಆರೋಪಿಸಿದ ಅವರು, ಕೋವಿಡ್ ನಿಯಂತ್ರಿಸಲು ಸರಕಾರಕ್ಕೆ ಪ್ರಾರಂಭದ ದಿನದಲ್ಲಿದ್ದ ಹುಮ್ಮಸ್ಸು ಈಗ ಕಾಣುತ್ತಿಲ್ಲ. ರಾಜ್ಯ ಸರಕಾರ, ಜಿಲ್ಲಾಡಳಿತ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ ಎಂದು ಆಕ್ಷೇಪಿಸಿದರು.

ರ‍್ಯಾಂಡಮ್ ತಪಾಸಣೆಯಾಗಲಿ
ಜಿಲ್ಲೆಯಲ್ಲಿ ಸಮೂಹ ತಪಾಸಣೆ (ರ‍್ಯಾಂಡಮ್)ನಡೆಸುವ ಮೂಲಕ ಕೊರೊನಾ ನಿಯಂತ್ರಣ ಮಾಡಬೇಕಾಗಿದೆ. ಲಾಕ್‌ಡೌನ್ ಸಂದರ್ಭ ಮತ್ತು ಅನ್‌ಲಾಕ್ ಬಳಿಕ ಜನರಿಗೆ ದಿನಬಳಕೆ ವಸ್ತು ಸಮರ್ಪಕವಾಗಿ ವಿತರಿಸದ ಕಾರಣ ಕೋವಿಡ್ ಹೆಚ್ಚಾಗುತ್ತಿದೆ. ಕೊರೊನಾದಿಂದ ಇಡೀ ಕೇರಳ ರಾಜ್ಯದಲ್ಲಿ 27 ಮಂದಿ ಸತ್ತರೆ, ನಮ್ಮಲ್ಲಿ ಕೇವಲ ದಕ್ಷಿಣ ಕನ್ನಡ ಜಿಲ್ಲೆಯಲ್ಲೇ 30 ಮಂದಿ ಸತ್ತಿದ್ದಾರೆ. ಕೇರಳ ಮಾದರಿಯಲ್ಲೇ ಜನರಿಗೆ ದಿನಬಳಕೆ ವಸ್ತುಗಳನ್ನು ಸರಕಾರ ನೀಡಬೇಕು. ಇಂಧನ ದರ ಹೆಚ್ಚಳದಿಂದ ದಿನಬಳಕೆ ವಸ್ತುಗಳ ದರವೂ ಏರಿಕೆಯಾಗಿದೆ ಎಂದು ಅವರು ಹೇಳಿದರು.

ಪ್ರತಿ ತಾಲೂಕಿಗೆ 10ರಂತೆ ಆ್ಯಂಬುಲೆನ್ಸ್ ಮೀಸಲಿಡಿ
ರೋಗಿಗಳನ್ನು ಆಸ್ಪತ್ರೆಗೆ ಸಾಗಿಸಲು ಅನುಕೂಲವಾಗುವಂತೆ ಪ್ರತಿ ತಾಲೂಕಿನಲ್ಲಿ ತಲಾ 10ರಂತೆ ಆ್ಯಂಬುಲೆನ್ಸ್‌ಗಳನ್ನು ಮೀಸಲಿಡಬೇಕು ಎಂದು ಹೇಳಿದ ಅವರು, ರಾಜ್ಯದಲ್ಲಿ ಕೊರೋನ ನಿಯಂತ್ರಣಕ್ಕೆ ಸಂಬಂಧಿಸಿ ಕಾಂಗ್ರೆಸ್ ಸಂಪೂರ್ಣ ಸಹಕಾರವನ್ನು ನೀಡಿದೆ. ಆದರೆ ಸರಕಾರ ಕಾರ್ಯವನ್ನು ಸಮರ್ಪಕವಾಗಿ ಮಾಡದಿದ್ದಾಗ ವಿಪಕ್ಷವಾಗಿ ಪ್ರಶ್ನಿಸುವ ಕೆಲಸವನ್ನು ಮಾಡುತ್ತಿದೆ ಎಂದು ಅವರು ಹೇಳಿದರು.

ಗೋಷ್ಠಿಯಲ್ಲಿ ಮಾಜಿ ಮೇಯರ್‌ಗಳಾದ ಶಶಿಧರ್ ಹೆಗ್ಡೆ, ಕವಿತಾ ಸನಿಲ್, ಮನಪಾ ಪ್ರತಿಪಕ್ಷ ನಾಯಕ ಅಬ್ದುಲ್ ರವೂಫ್, ಕಾರ್ಪೊರೇಟರ್ ನವೀನ್ ಡಿಸೋಜ, ನೀರಜ್‌ಪಾಲ್, ಸಂತೋಷ್ ಶೆಟ್ಟಿ, ಕಚೇರಿ ಕಾರ್ಯದರ್ಶಿ ನಝೀರ್ ಬಜಾಲ್ ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)