ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಕೊರೋನ: ಮತ್ತೆ ಹಲವು ಪೊಲೀಸ್ ಠಾಣೆಗಳು ಸೀಲ್ಡೌನ್
ಬೆಂಗಳೂರು, ಜು.10: ದಿನೇ ದಿನೇ ರಾಜಧಾನಿ ಬೆಂಗಳೂರಿನಲ್ಲಿ ಕೋವಿಡ್-19 ಪ್ರಕರಣಗಳು ಹೆಚ್ಚುತ್ತಿದ್ದು, ಕೊರೋನ ಸೈನಿಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದ ಪೊಲೀಸರಲ್ಲಿ ಮತ್ತೆ ಕೊರೋನ ಸೋಂಕು ಉಲ್ಬಣವಾಗುತ್ತಿದೆ.
ಇಲ್ಲಿನ ವಿಧಾನಸೌಧ ಠಾಣೆಯ ಓರ್ವ ಸಿಬ್ಬಂದಿಗೆ ಕೊರೋನ ಸೋಂಕು ದೃಢಪಟ್ಟಿರುವ ಹಿನ್ನೆಲೆ ಸೀಲ್ಡೌನ್ ಮಾಡಲಾಗಿದೆ. ವಿಧಾನಸೌಧ ಸೇರಿದಂತೆ ಹಲವೆಡೆ ಭದ್ರತೆಗೆ ಕಾನ್ಸ್ ಟೇಬಲ್ ನಿರ್ವಹಣೆ ಮಾಡಿದ್ದು, ಈ ವೇಳೆ ಸೋಂಕು ತಗಲಿರುವ ಅನುಮಾನ ಇದೆ. ಸದ್ಯ ಠಾಣೆಯಲ್ಲಿ ಸೋಂಕಿತನ ಸಂಪರ್ಕದಲ್ಲಿರುವವರನ್ನ ಕ್ವಾರಂಟೈನ್ ಮಾಡಲಾಗಿದೆ.
ಅದೇ ರೀತಿ, ಯಶವಂತಪುರ ಠಾಣೆಯ ಕಾನ್ಸ್ ಟೇಬಲ್ ಓರ್ವರಿಗೆ ಕೋವಿಡ್-19 ಪಾಸಿಟಿವ್ ಬಂದಿದ್ದು, ಇವರು ಕೋರ್ಟ್ ಪಿಸಿಯಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ಸದ್ಯ ನ್ಯಾಯಾಲಯಕ್ಕೆ ರಜೆ ಇರುವ ಕಾರಣ ಯಶವಂತಪುರ ಠಾಣಾ ಸುತ್ತ ಓಡಾಡಿದ್ದರು. ಇವರ ಪತ್ನಿ ಕೂಡ ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದವರನ್ನ ಕ್ವಾರಂಟೈನ್ ಮಾಡಲಾಗಿದೆ.
ಇದರ ಜೊತೆಗೆ ರಾಜಗೋಪಾಲ ನಗರ ಠಾಣೆಯ ಒಬ್ಬ ಸಿಬ್ಬಂದಿ, ಮಲ್ಲೇಶ್ವರಂ ಠಾಣೆಯ ಇಬ್ಬರು ಸಿಬ್ಬಂದಿ, ನಂದಿನಿ ಲೇಔಟ್ ಠಾಣೆಯ ಒಬ್ಬ ಸಿಬ್ಬಂದಿಗೆ ಸೋಂಕು ದೃಢವಾಗಿದ್ದು, ಒಟ್ಟು ಇಲ್ಲಿಯವರೆಗೆ 454 ಸಿಬ್ಬಂದಿಯಲ್ಲಿ ಸೋಂಕು ಪತ್ತೆಯಾಗಿದೆ. 21 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ.