varthabharthi


ಕ್ರೀಡೆ

ಇಂಗ್ಲೆಂಡ್ ನಾಯಕ ಬೆನ್ ಸ್ಟೋಕ್ಸ್ ಜರ್ಸಿಯಲ್ಲಿ ಡಾ. ವಿಕಾಸ್ ಕುಮಾರ್ !

ವಾರ್ತಾ ಭಾರತಿ : 11 Jul, 2020

ಲಂಡನ್: ಮೂರು ವರ್ಷಗಳ ಹಿಂದೆ ದಿಲ್ಲಿಯ ಫಿರೋಝ್ ಶಾ ಕೋಟ್ಲಾ ಕ್ರೀಡಾಂಗಣದಲ್ಲಿ ನಡೆದ ಭಾರತ-ಶ್ರೀಲಂಕಾ ಟೆಸ್ಟ್ ಪಂದ್ಯದ ವೇಳೆ  ಡಾ. ವಿಕಾಸ್ ಕುಮಾರ್ ಅವರನ್ನು `ಡಾಕ್ಟರ್ ಆನ್ ಡ್ಯೂಟಿ' ಆಗಿ ನೇಮಕಗೊಳಿಸಲಾಗಿತ್ತು. ಉನ್ನತ ಮಟ್ಟದ ಕ್ರಿಕೆಟ್ ಆಡಬೇಕೆಂದು ಅವರು ಶಾಲಾ ದಿನಗಳಲ್ಲಿ ಕಂಡ ಕನಸು ಈಡೇರದೇ ಇದ್ದರೂ ಉನ್ನತ ಮಟ್ಟದ ಕ್ರಿಕೆಟ್ ಪಂದ್ಯದ ವೇಳೆ ವೈದ್ಯರಾಗುವ ಭಾಗ್ಯ ಅವರಿಗೆ ದೊರಕಿತ್ತು.

ಬುಧವಾರ ಈ 35 ವರ್ಷದ ವೈದ್ಯ ಹಾಗೂ ಕೋವಿಡ್ ವಾರಿಯರ್ ಹೆಸರು ಇಂಗ್ಲೆಂಡ್ ತಂಡದ ಕ್ರಿಕೆಟ್ ಕಪ್ತಾನ ಬೆನ್ ಸ್ಟೋಕ್ಸ್ ಅವರ ಟಿ-ಶರ್ಟ್‍ನಲ್ಲಿ ಮೂಡಿ ಬಂದಿತ್ತು.

ಕೊರೊನಾ ಸಮಸ್ಯೆಯ ಹಿನ್ನೆಲೆಯಲ್ಲಿ ಸ್ಥಗಿತಗೊಂಡಿದ್ದ ಅಂತಾರಾಷ್ಟ್ರೀಯ ಕ್ರಿಕೆಟ್ 117 ದಿನಗಳ ನಂತರ ಸೌತಾಂಪ್ಟನ್ ಕ್ರೀಡಾಂಗಣದಲ್ಲಿ ಮರು ಆರಂಭಗೊಂಡಾಗ ಇಂಗ್ಲೆಂಡ್ ಟೆಸ್ಟ್ ತಂಡದ ಆಟಗಾರರು ಕೊರೊನಾ ವಾರಿಯರ್ಸ್‍ಗೆ ಗೌರವ ಸೂಚಕವಾಗಿ ತಮ್ಮ ಟಿ-ಶರ್ಟ್‍ಗಳಲ್ಲಿ ವೈದ್ಯರ ಹೆಸರನ್ನು ಹಾಕಿಸಿದ್ದರು. ಡುರ್ಹಾಮ್‍ನ ಡಾರ್ಲಿಂಗ್ಟನ್ ಇಲ್ಲಿರುವ ಎನ್‍ಎಚ್‍ಎಸ್  ಟ್ರಸ್ಟ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ  ಸೇವೆ ಸಲ್ಲಿಸುವ ಡಾ. ವಿಕಾಸ್ ಕುಮಾರ್ ರಿಗೆ ತಮ್ಮ ಹೆಸರು ಇಂಗ್ಲೆಂಡ್ ಕಪ್ತಾನನ ಟಿ-ಶರ್ಟ್ ನಲ್ಲಿ ಮೂಡಿರುವುದರಿಂದ ಸಂತಸಗೊಂಡಿದ್ದಾರೆ.

`ನನಗೆ ದೊರೆತ ಈ ಮನ್ನಣೆ ಇಡೀ ವೈದ್ಯಕೀಯ ಸಮುದಾಯಕ್ಕೆ ದೊರೆತ ಮನ್ನಣೆಯಾಗಿದೆ' ಎಂದು ದಿಲ್ಲಿ ವಿವಿಯ ಹಳೆ ವಿದ್ಯಾರ್ಥಿಯಾಗಿರುವ ಹಾಗೂ ಮೌಲಾನ ಆಝಾದ್ ಮೆಡಿಕಲ್ ಕಾಲೇಜ್‍ ನಲ್ಲಿ ಅನೆಸ್ತೇಶಿಯಾದಲ್ಲಿ ಸ್ನಾತ್ತಕೋತ್ತರ ಡಿಪ್ಲೋಮಾ ಪಡೆದಿರುವ ವಿಕಾಸ್ ಹೇಳುತ್ತಾರೆ.

ತಮ್ಮ ಪತ್ನಿ ಹಾಗೂ ಎರಡು ವರ್ಷದ ಪುತ್ರನೊಂದಿಗೆ ಕಳೆದ ವರ್ಷ ಇಂಗ್ಲೆಂಡ್‍ ಗೆ ತೆರಳಿದ್ದ ವಿಕಾಸ್ ಕುಮಾರ್ ಅವರು ಏಷ್ಯನ್ ಮೂಲದ ಆಟಗಾರರು ರಚಿಸಿದ ಗಲ್ಲಿ ಬಾಯ್ಸ್ ಅಮೆಚೂರ್ ಕ್ಲಬ್  ಹಾಗೂ  ಹತ್ತಿರದ ನ್ಯೂಕಾಸಲ್‍ ನಲ್ಲಿರುವ ಕೌಗೇಟ್ ಕ್ರಿಕೆಟ್ ಕ್ಲಬ್‍ ಗಾಗಿ ಕ್ರಿಕೆಟ್ ಆಡುತ್ತಾರೆ.

ಡಾ ವಿಕಾಸ್ ಹೊರತಾಗಿ ಮೂವರು  ಭಾರತೀಯ ಮೂಲದ ಆರೋಗ್ಯ ಕಾರ್ಯಕರ್ತರಾದ ಡಾ ಜಮಸ್ಪ್ ಕೈಖುಸ್ರೂರ್.  ಹರಿಕೃಷ್ಣ ಶಾ ಹಾಗೂ ಫಿಸಿಯೋಥೆರಪಿಸ್ಟ್ ಕೃಷಣ್ ಅಘಡಾ ಅವರಿಗೆ  ಕೂಡ ಕ್ರಿಕೆಟ್ ಆಟಗಾರರು ಅವರ ಸೇವೆಗೆ ಗೌರವ ಸಲ್ಲಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)