varthabharthi


ಕರಾವಳಿ

ಉಡುಪಿ ಜಿಲ್ಲೆಯಲ್ಲಿ ಶನಿವಾರ 90 ಮಂದಿಗೆ ಕೊರೋನ ಪಾಸಿಟಿವ್

ವಾರ್ತಾ ಭಾರತಿ : 11 Jul, 2020

ಸಾಂದರ್ಭಿಕ ಚಿತ್ರ

ಉಡುಪಿ, ಜು.11: ಕೊರೋನ ಸೋಂಕಿತರ ಪತ್ತೆಗಾಗಿ ಜಿಲ್ಲೆಯಾದ್ಯಂತ ಪರೀಕ್ಷೆಯ ಪ್ರಮಾಣವನ್ನು ಹೆಚ್ಚಿಸಿರುವಂತೆ ಜಿಲ್ಲೆಯಲ್ಲಿ ಸೋಂಕಿಗೆ ಪಾಸಿಟಿವ್ ಆಗಿರುವವರ ಸಂಖ್ಯೆಯೂ ಹಠಾತ್ತನೆ ಹೆಚ್ಚತೊಡಗಿದೆ. ನಿನ್ನೆಯವರೆಗೆ ನಿಯಂತ್ರಣದಲ್ಲಿದ್ದ ಸೋಂಕಿತರ ಸಂಖ್ಯೆ ಶನಿವಾರ ಒಮ್ಮಿಂದೊಮ್ಮೆಗೆ 90ಕ್ಕೇರಿದೆ. ಅಲ್ಲದೇ 573 ಮಂದಿಯ ಗಂಟಲುದ್ರವ ಮಾದರಿ ನೆಗೆಟಿವ್ ಫಲಿತಾಂಶವನ್ನು ನೀಡಿದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ ತಿಳಿಸಿದ್ದಾರೆ.

ಸೋಂಕಿತರಲ್ಲಿ ಉಡುಪಿ ತಾಲೂಕಿನ 66 ಮಂದಿ, ಕುಂದಾಪುರ ತಾಲೂಕಿನ 20 ಮಂದಿ ಹಾಗೂ ಕಾರ್ಕಳ ತಾಲೂಕಿನ ನಾಲ್ವರು ಸೇರಿದ್ದಾರೆ. 57 ಮಂದಿ ಪುರುಷರು, 25ಮಂದಿ ಮಹಿಳೆಯರು ಹಾಗೂ ಮೂವರು ಬಾಲಕರು, ಐವರು ಬಾಲಕಿಯರು ಸೇರಿದಂತೆ ಒಟ್ಟು ಎಂಟು ಮಂದಿ ಪಾಸಿಟಿವ್ ಬಂದವರಲ್ಲಿ ಸೇರಿದ್ದಾರೆ ಎಂದು ಡಿಎಚ್‌ಓ ತಿಳಿಸಿದರು. ಶನಿವಾರ ಬಂದ 90 ಪಾಸಿಟಿವ್ ಪ್ರಕರಣಗಳೊಂದಿಗೆ ಜಿಲ್ಲೆಯಲ್ಲಿ ಇದುವರೆಗೆ ಸೋಂಕು ಪತ್ತೆಯಾದವರ ಸಂಖ್ಯೆ 1567ಕ್ಕೇರಿದೆ.

21 ಮಂದಿ ಗುಣಮುಖ: ಜಿಲ್ಲೆಯಲ್ಲಿ ಸೋಂಕಿಗೆ ಚಿಕಿತ್ಸೆ ಪಡೆದು ಗುಣಮುಖರಾದ 21 ಮಂದಿ ಇಂದು ವಿವಿಧ ಆಸ್ಪತ್ರೆಗಳಿಂದ ಬಿಡುಗಡೆ ಗೊಂಡಿದ್ದಾರೆ. ಇವರಲ್ಲಿ ಉಡುಪಿ ಡಾ.ಟಿಎಂಎ ಪೈ ಆಸ್ಪತ್ರೆಯಿಂದ ಎಂಟು ಮಂದಿ, ಕಾರ್ಕಳದಿಂದ 11 ಮಂದಿ ಹಾಗೂ ಕುಂದಾಪುರದಿಂದ ಇಬ್ಬರು ಸೇರಿದ್ದಾರೆ. ಇದರಿಂದ ಜಿಲ್ಲೆಯಲ್ಲಿ ಈವರೆಗೆ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಗೊಂಡವರ ಸಂಖ್ಯೆ 1245ಕ್ಕೇರಿದೆ. ಈಗಾಗಲೇ ಪಾಸಿಟಿವ್ ಬಂದ 319 ಮಂದಿ ಜಿಲ್ಲೆಯಲ್ಲಿ ಇನ್ನೂ ಕೊರೋನ ಸೋಂಕಿಗೆ ಚಿಕಿತ್ಸೆ ಪಡೆಯುತಿದ್ದಾರೆ.

269 ಸ್ಯಾಂಪಲ್ ಸಂಗ್ರಹ: ಸೋಂಕಿನ ಪರೀಕ್ಷೆಗಾಗಿ ಶನಿವಾರ 269 ಮಂದಿಯ ಗಂಟಲು ದ್ರವದ ಸ್ಯಾಂಪಲ್‌ಗಳನ್ನು ಪಡೆಯಲಾಗಿದೆ. ಇದರಲ್ಲಿ ಕೋವಿಡ್ ಸಂಪರ್ಕಿತರು 117 ಮಂದಿ ಇದ್ದರೆ, ಉಸಿರಾಟ ತೊಂದರೆಯ ಒಬ್ಬರು, ಶೀತಜ್ವರದಿಂದ ಬಳಲುವ 31 ಮಂದಿ ಹಾಗೂ ದೇಶ-ವಿದೇಶಗಳ ವಿವಿಧ ಕೋವಿಡ್ ಹಾಟ್‌ಸ್ಪಾಟ್‌ಗಳಿಂದ ಬಂದ 120 ಮಂದಿಯ ಸ್ಯಾಂಪಲ್ ಗಳು ಸೇರಿವೆ ಎಂದು ಡಾ.ಸೂಡ ತಿಳಿಸಿದರು.

ಇಂದು ಪಡೆದ ಸ್ಯಾಂಪಲ್‌ಗಳೊಂದಿಗೆ ಜಿಲ್ಲೆಯಲ್ಲಿ ಈವರೆಗೆ ಸಂಗ್ರಹಿಸಿದ ಮಾದರಿಗಳ ಒಟ್ಟು ಸಂಖ್ಯೆ 21,678ಕ್ಕೇರಿದೆ. ಇವುಗಳಲ್ಲಿ ಈವರೆಗೆ 18,081 ನೆಗೆಟಿವ್, 1567 ಪಾಸಿಟಿವ್ ಬಂದಿವೆ. ಮೂವರು ಮೃತಪಟ್ಟಿದ್ದಾರೆ. ಇನ್ನು ಒಟ್ಟು 2030 ಸ್ಯಾಂಪಲ್‌ಗಳ ಪರೀಕ್ಷಾ ವರದಿ ಬರಬೇಕಿದೆ. ಇಂದು 22 ಮಂದಿಯನ್ನು ಐಸೋಲೇಷನ್ ವಾರ್ಡ್‌ಗೆ ದಾಖಲಿಸಲಾಗಿದೆ. ಇವರಲ್ಲಿ ನಾಲ್ವರು ಕೋವಿಡ್ ಶಂಕಿತರು, 7 ಮಂದಿ ಉಸಿರಾಟ ತೊಂದರೆಯವರು ಹಾಗೂ 11 ಮಂದಿ ಶೀತಜ್ವರದಿಂದ ಬಳಲುವವರು ಸೇರಿದ್ದಾರೆ ಎಂದರು.

ಜಿಲ್ಲೆಯ ಆಸ್ಪತ್ರೆಗಳ ಐಸೋಲೇಷನ್ ವಾರ್ಡ್‌ಗಳಿಂದ ಇಂದು 26 ಮಂದಿ ಬಿಡುಗಡೆಗೊಂಡಿದ್ದು, 137 ಮಂದಿ ಇನ್ನೂ ವೈದ್ಯರ ನಿಗಾದಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ. ಇಂದು ಕೊರೋನ ಸೋಂಕಿನ ಗುಣಲಕ್ಷಣದ 24 ಮಂದಿ ಸೇರಿದಂತೆ ಒಟ್ಟು 6160 ಮಂದಿಯನ್ನು ಕೊರೋನ ತಪಾಸಣೆಗಾಗಿ ನೊಂದಾಯಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಈಗ 1285 ಮಂದಿ ಹೋಮ್ ಕ್ವಾರಂಟೈನ್ ನಲ್ಲಿದ್ದಾರೆ ಎಂದು ಡಾ.ಸೂಡ ಹೇಳಿದರು.

ಶನಿವಾರ ಪಾಸಿಟಿವ್ ಬಂದ 90 ಮಂದಿಯಲ್ಲಿ ಮಹಾರಾಷ್ಟ್ರದಿಂದ ಬಂದ 8 ಮಂದಿ, ಮಂಗಳೂರಿನಿಂದ ಬಂದ ಒಬ್ಬರು, ಬೆಂಗಳೂರಿನಿಂದ ಬಂದ ಐವರು, ರಾಯಚೂರಿನಿಂದ ಬಂದ ಒಬ್ಬರು ಸೇರಿದ್ದು, ಉಳಿದವರೆಲ್ಲರೂ ಈಗಾಗಲೇ ಜಿಲ್ಲೆಯಲ್ಲಿ ಪಾಸಿಟಿವ್ ಬಂದವರ ಪ್ರಾಥಮಿಕ ಸಂಪರ್ಕಿತರಾಗಿದ್ದಾರೆ ಎಂದು ಡಾ.ಸೂಡ ತಿಳಿಸಿದರು

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)