varthabharthi


ಕರ್ನಾಟಕ

ಚಾಮರಾಜನಗರ: ಕೊರೋನದಿಂದ ಮೃತಪಟ್ಟ ವ್ಯಕ್ತಿಯ ಶವ ಸಂಸ್ಕಾರ ನಡೆಸಿದ ಪಿಎಫ್‌ಐ ಕಾರ್ಯಕರ್ತರು

ವಾರ್ತಾ ಭಾರತಿ : 12 Jul, 2020

ಚಾಮರಾಜನಗರ, ಜು.12: ಕೊರೋನ ಸೋಂಕಿನಿಂದ ಮೃತಪಟ್ಟ ಕೊಳ್ಳೇಗಾಲ ತಾಲೂಕು ಕೊಂಗರಹಳ್ಳಿ ವ್ಯಕ್ತಿಯ ಅಂತ್ಯಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕಾರ್ಯಕರ್ತರು ಶನಿವಾರ ತಡರಾತ್ರಿ ನೆರವೇರಿಸಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟವರ ಅಂತ್ಯಕ್ರಿಯೆ ನೆರವೇರಿಸಲು ಮೃತನ ಬಂಧುಗಳೇ ಹಿಂಜರಿಯುತ್ತಿರುವ ಸನ್ನಿವೇಶ ಹಲವೆಡೆ ಇದೆ. ಹೀಗಿರುವಾಗ, ಚಾಮರಾಜನಗರದಲ್ಲಿ ಪಿಎಫ್‌ಐ ಕಾರ್ಯಕರ್ತರು ಸ್ವಯಂಪ್ರೇರಿತರಾಗಿ ಮುಂದೆ ಬಂದು ಕೊರೋನ ಸೋಂಕಿತನ ಮೃತ ಶರೀರದ ಅಂತ್ಯಕ್ರಿಯೆ ನಡೆಸಿದ್ದಾರೆ.

ಕೊರೋನ ಸೋಂಕಿನಿಂದ ಮೃತಪಟ್ಟವರ ಶವದ ಅಂತ್ಯಕ್ರಿಯೆಯನ್ನು ಕೆಲವೆಡೆ ಗೌರವಯುತವಾಗಿ ನಡೆಸದ ಬಗ್ಗೆ ವರದಿಯಾಗಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೊರೋನ ಸೊಂಕಿನಿಂದ ಯಾರಾದರೂ ಮೃತಪಟ್ಟರೆ ಅವರ ಅಂತ್ಯಕ್ರಿಯೆಯನ್ನು ನಡೆಸುವುದಾಗಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಕಾರ್ಯಕರ್ತರು ಜಿಲ್ಲಾಡಳಿತ ಹಾಗೂ ಆರೋಗ್ಯ ಇಲಾಖೆಗೆ ಮನವಿ ಮಾಡಿದ್ದರು. ಅದರಂತೆ ಶನಿವಾರ ಕೊಳ್ಳೇಗಾಲ ಉಪ ವಿಭಾಗ ಆಸ್ಪತ್ರೆಯಲ್ಲಿ, ಅಂತ್ಯಕ್ರಿಯೆ ನಡೆಸಬೇಕಾದ ಮಾರ್ಗಸೂಚಿಯ ಪ್ರಕಾರ ಅವರಿಗೆ ತರಬೇತಿ ಸಹ ನೀಡಲಾಗಿತ್ತು.

ಶನಿವಾರ ಕೊಂಗರಹಳ್ಳಿಯ 58 ವರ್ಷದ ವ್ಯಕ್ತಿ ಕೊರೋನ ಸೊಂಕಿನಿಂದ ಮೃತರಾದ ಹಿನ್ನೆಲೆಯಲ್ಲಿ, ಅವರ ಅಂತ್ಯಕ್ರಿಯೆಯನ್ನು ಮೃತರ ಸ್ವಗ್ರಾಮದಲ್ಲಿ ನಡೆಸಲು ಗ್ರಾಮದ ಮುಖಂಡರು ಒಪ್ಪಲಿಲ್ಲ. ಸರ್ಕಾರದಿಂದಲೇ ಅಂತ್ಯಕ್ರಿಯೆ ನಡೆಸಲಾಗುವುದು, ಸ್ಥಳಾವಕಾಶ ನೀಡುವಂತೆ ತಹಶೀಲ್ದಾರ್ ಕೋರಿದರೂ, ಕೊಂಗರಹಳ್ಳಿ ಗ್ರಾಮದಲ್ಲಿ ಒಪ್ಪಲಿಲ್ಲ ಎನ್ನಲಾಗಿದೆ.

ಚಾಮರಾಜನಗರದ ವೈದ್ಯಕೀಯ ಕಾಲೇಜು ಪ್ರದೇಶದ 2 ಎಕರೆ ಭೂಮಿಯನ್ನು ಕೋವಿಡ್‌ನಿಂದ ಮೃತಪಟ್ಟವರ ಶವ ಸಂಸ್ಕಾರಕ್ಕೆಂದೇ ಜಿಲ್ಲಾಡಳಿತ ಮೀಸಲಿಟ್ಟಿದೆ. ಹೀಗಾಗಿ ಅಲ್ಲಿಯೇ ಶನಿವಾರ ತಡರಾತ್ರಿ 11.30ರಲ್ಲಿ ಪಿಎಫ್‌ಐನ 6-7 ಮಂದಿ ಕಾರ್ಯಕರ್ತರು ಅಂತ್ಯಕ್ರಿಯೆ ನಡೆಸಿದರು. ಅಂತ್ಯ ಸಂಸ್ಕಾರ ವೇಳೆ ಪಿಪಿಇ ಕಿಟ್ ಧರಿಸಿ, ಸ್ಥಳಕ್ಕೆ ರಾಸಾಯನಿಕ ಸಿಂಪಡಿಸಿ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ್ ಚಿದಾನಂದ ಗುರುಸ್ವಾಮಿ, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್ ಹಾಗೂ ಈ ಕಾರ್ಯಕ್ಕೆ ನಿಯೋಜಿತಗೊಂಡಿರುವ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)