varthabharthi


ಸಂಪಾದಕೀಯ

ದೇಶಕ್ಕೆ ಮಾದರಿಯಾದ ಕೊಳೆಗೇರಿ ಧಾರಾವಿ

ವಾರ್ತಾ ಭಾರತಿ : 13 Jul, 2020

ವಿಶ್ವದಲ್ಲಿ ಎರಡನೆಯ ಹಾಗೂ ಏಶ್ಯದಲ್ಲಿ ಮೊದಲನೇ ಕೊಳಗೇರಿಯನ್ನು ಹೊಂದಿದೆ ಎನ್ನುವ ಕಾರಣಕ್ಕಾಗಿ ಗುರುತಿಸಿಕೊಳ್ಳುತ್ತಿದ್ದ ಧಾರಾವಿ ಇಂದು ವಿಶ್ವ ಆರೋಗ್ಯ ಸಂಸ್ಥೆಯಿಂದ ಮೆಚ್ಚುಗೆಯನ್ನು ತನ್ನದಾಗಿಸಿಕೊಂಡು ದೇಶಕ್ಕೆ ಮಾದರಿಯಾಗಿದೆ. ರೋಗ, ಬಡತನ, ಹಸಿವು ಇತ್ಯಾದಿಗಳಿಗಾಗಿಯೇ ಗುರುತಿಸಲ್ಪಟ್ಟಿರುವ, ಮುಂಬೈ ಶಹರದ ಅಭಿವೃದ್ಧಿಯ ವಿಕಲಾಂಗ ಕೂಸು ಎಂದೇ ಬಣ್ಣಿಸಲ್ಪಟ್ಟಿರುವ ಧಾರಾವಿ, ಕೊರೋನ ಕಾರಣಕ್ಕಾಗಿ ಗಮನ ಸೆಳೆದಿದೆ. ಕೊಳೆಗೇರಿ ಪ್ರದೇಶ ಧಾರಾವಿಯಲ್ಲಿ ಕೊರೋನ ವೈರಸ್ ಸೋಂಕನ್ನು ನಿಯಂತ್ರಿಸಲು ಕೈಗೊಂಡ ಕ್ರಮಗಳು ಸಕಾರಾತ್ಮಕ ಫಲಿತಾಂಶಗಳನ್ನು ತೋರಿಸಿವೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಶ್ಲಾಘಿಸಿದೆ.

ಸಮುದಾಯವನ್ನು ಒಳಗೊಂಡ ಕೊರೋನ ವೈರಸ್ ನಿಯಂತ್ರಣ ಕಾರ್ಯಾಚರಣೆ ಹಾಗೂ ತ್ವರಿತ ರೋಗತಪಾಸಣೆ ಸೋಂಕು ಹರಡುವಿಕೆಯ ಸರಪಣಿಯನ್ನು ಕಡಿದು ಹಾಕುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎನ್ನುವುದಕ್ಕೆ ಧಾರಾವಿ ಸಾಕ್ಷಿಯಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ. ವಿಯೆಟ್ನಾಮ್, ಕಾಂಬೋಡಿಯಾ, ಥಾಯ್ಲೆಂಡ್, ನ್ಯೂಝಿಲ್ಯಾಂಡ್, ಇಟಲಿ, ಸ್ಪೇನ್, ದಕ್ಷಿಣ ಕೊರಿಯ ಹಾಗೂ ಧಾರಾವಿಯಲ್ಲಿ ಕೊರೋನ ವಿರುದ್ಧ ನಡೆದ ಕಾರ್ಯಾಚರಣೆ ಸಮುದಾಯ ಕೇಂದ್ರಿತವಾಗಿತ್ತು. ಮತ್ತು ಅದು ಹಂತಹಂತವಾಗಿ ಯಶಸ್ವಿಯಾಯಿತು. ಬಹುಶಃ ಧಾರಾವಿಯಲ್ಲಿ ಕೊರೋನ ವಿರುದ್ಧದ ಕಾರ್ಯಾಚರಣೆಯೇನಾದರೂ ವಿಫಲವಾಗಿದ್ದರೆ, ಇಂದು ಮುಂಬಯಿಯ ಅಧೋಗತಿಯನ್ನು ಸರಕಾರ ಧಾರಾವಿಯ ಕೊಳೆಗೇರಿ ಜನರ ತಲೆಗೆ ಕಟ್ಟಿ ಬಿಡುತ್ತಿತ್ತು.

ಕೊರೋನ ಸೋಂಕು ಮುಂಬೈಯಲ್ಲಿ ಕಾಣಿಸಿಕೊಂಡಾಗ ಯಾರೂ ಹೆಚ್ಚು ತಲೆಕೆಡಿಸಿಕೊಂಡಿರಲಿಲ್ಲ. ಯಾವಾಗ ಧಾರಾವಿಯಲ್ಲಿ ಸೋಂಕಿತರು ಕಾಣಿಸಿಕೊಂಡರೋ ಆಗ ಮುಂಬೈ ಬೆಚ್ಚಿ ಬಿದ್ದಿತ್ತು. ಧಾರಾವಿಯನ್ನು ‘ಸ್ಫೋಟಿಸಲು ಸಿದ್ಧವಾಗಿ ನಿಂತ ಟೈಂಬಾಂಬ್’ ಎಂದು ಆಂಗ್ಲ ಪತ್ರಿಕೆಯೊಂದು ಬಣ್ಣಿಸಿತ್ತು. ಇಡೀ ಮುಂಬೈ ನಗರವನ್ನು ಲಾಕ್‌ಡೌನ್ ಮಾಡುವ ಮೂಲಕ ಕೊರೋನಾ ಹರಡದಂತೆ ತಡೆಯಬಹುದು, ಆದರೆ ಧಾರಾವಿಯಲ್ಲಿ ಲಾಕ್‌ಡೌನ್ ಕೂಡ ಯಾವುದೇ ಪರಿಣಾಮ ಬೀರಲಾರದು ಎನ್ನುವುದು ಮಾಧ್ಯಮಗಳ ಲೆಕ್ಕಾಚಾರವಾಗಿತ್ತು. ಧಾರಾವಿಯಲ್ಲಿ ಸೋಂಕು ಹರಡುವುದೆಂದರೆ, ಅದು ಸಮುದಾಯ ಹಂತವನ್ನು ತಲುಪಿತು ಎಂದೇ ಅರ್ಥ. ಧಾರಾವಿಯೊಳಗೆ ಬದುಕುತ್ತಿರುವ ಕಾರ್ಮಿಕರು, ವಿದೇಶಿ ಪ್ರವಾಸಿಗರೊಂದಿಗೆ ಯಾವ ಸಂಬಂಧವನ್ನೂ ಹೊಂದಿಲ್ಲ. ಧಾರಾವಿಯಲ್ಲಿ ಬದುಕುತ್ತಿರುವ ಜನರಿಂದ ಕ್ವಾರಂಟೈನ್‌ನ್ನು ನಿರೀಕ್ಷಿಸುವುದಂತೂ ದೂರದ ಮಾತು. ಅದು ನೇರವಾಗಿ ತಳಸ್ತರವನ್ನು ವ್ಯಾಪಿಸಿ ಬಿಡಬಹುದು. ಸುಮಾರು 600 ಎಕರೆ ವಿಸ್ತಾರವನ್ನು ಹೊಂದಿರುವ ಧಾರಾವಿ ಕೊಳೆಗೇರಿಯಲ್ಲಿ ಸುಮಾರು 15 ಲಕ್ಷ ಮಂದಿ ಬದುಕುತ್ತಿದ್ದಾರೆ. ಇಲ್ಲಿ 5ರಿಂದ 8 ಮಂದಿ ಕೇವಲ 100 ಚದರ ಅಡಿ ಕೋಣೆಯನ್ನು ಹಂಚಿಕೊಳ್ಳುತ್ತಾರೆ. ಸದಾ ಅಂಟಿಕೊಂಡೇ ಬದುಕುವ ಜನರಿಂದ ಸೋಂಕನ್ನು ತಡೆಯುವ ಬಗೆಯಾದರೂ ಹೇಗೆ? ಈ ಕಾರಣದಿಂದಲೇ ಧಾರಾವಿಯನ್ನು ಸಿಡಿಯಲಿರುವ ಟೈಂಬಾಬ್‌ಗೆ ಹೋಲಿಸಲಾಗಿತ್ತು. ಆದರೆ ಇಂದು ಉಳಿದ ನಗರ ಪ್ರದೇಶಗಳಿಗೆ ಹೋಲಿಸಿದರೆ, ಧಾರಾವಿಯಲ್ಲಿ ಕೊರೋನ ಭಾಗಶಃ ನಿಯಂತ್ರಣದಲ್ಲಿದೆ.

ಧಾರಾವಿಯ ಕುರಿತಂತೆ ಮುಂಬಯಿ ಯಾತಕ್ಕಾಗಿ ಹೆದರಿತ್ತೋ ಆ ಭಯ ಇಂದು ಯಾರಲ್ಲೂ ಇಲ್ಲ. ಇದಕ್ಕೆ ಮುಖ್ಯ ಕಾರಣ, ಕೇವಲ ನಗರಪಾಲಿಕೆಯಷ್ಟೇ ಅಲ್ಲ. ಧಾರಾವಿಯ ಅಪಾಯವನ್ನು ಮನಗಂಡು, ಸರಕಾರೇತರ ಸಂಸ್ಥೆಗಳು ಅಂದರೆ ಎನ್‌ಜಿಒಗಳು ಸರಕಾರದ ಜೊತೆಗೆ ಕಾರ್ಯಾಚರಣೆಗಿಳಿದದ್ದು. ಮುಂಬೈಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಗರಪಾಲಿಕೆಯೂ ಧಾರಾವಿಯನ್ನ್ನು ಗಂಭೀರವಾಗಿ ಸ್ವೀಕರಿಸಿತು. ಕೊರೋನ ಸಂಬಂಧಿಸಿ ವಿಶ್ವಸಂಸ್ಥೆಯು ಧಾರಾವಿಯಂತಹ ಹಿಂದುಳಿದ ಪ್ರದೇಶಗಳಿಗಾಗಿ ಯೋಜನೆಗಳನ್ನು ರೂಪಿಸಿದೆೆ. ವಿಶ್ವದ ಹಲವು ಕುಖ್ಯಾತ ಪ್ರದೇಶಗಳನ್ನು ಗುರಿ ಮಾಡಿ ಪ್ರಯೋಗಗಳನ್ನು ಮಾಡಿವೆ. ಅದರ ಭಾಗವಾಗಿ ವಿವಿಧ ಎನ್‌ಜಿಒ ಸಂಘಟನೆಗಳು ಕೊರೋನ ವಿರುದ್ಧ ಕೈ ಜೋಡಿಸಿವೆ. ಸಾಧಾರಣವಾಗಿ ಇತರೆಲ್ಲ ನಗರಗಳಲ್ಲಿ ಮೇಲ್ಪದರದಲ್ಲಿರುವ ಜನರನ್ನು ಗುರಿ ಮಾಡಿ ಕೊರೋನಾ ಕಾರ್ಯಾಚರಣೆ ನಡೆಯುತ್ತಿತ್ತು. ಕೊರೋನ ಸೋಂಕಿತರು ತಾವಾಗಿಯೇ ದುಬಾರಿ ಹಣ ಪಾವತಿ ಮಾಡಿ ಪರೀಕ್ಷೆಗೊಳಗಾಗಿ, ಬಳಿಕ ಸೋಂಕಿತರೆಂದು ಗೊತ್ತಾದಲ್ಲಿ ಮತ್ತೆ ದುಬಾರಿ ಕ್ವಾರಂಟೈನ್‌ಗೆ ಒಳಗಾಗಬೇಕಾದ ಸ್ಥಿತಿ ನಗರಗಳಲ್ಲಿ ಈಗಲೂ ಇವೆ. ಆದರೆ ಧಾರಾವಿಯಂತಹ ಕೊಳೆಗೇರಿಗಳಲ್ಲಿ ದೂರದೃಷ್ಟಿಯನ್ನಿಟ್ಟುಕೊಂಡು ನೇರವಾಗಿ ಸಮುದಾಯ ಕೇಂದ್ರಿತವಾದ ್ಧ ಕಾರ್ಯಾಚರಣೆ ನಡೆಯಿತು. ಕೊಳಗೇರಿ ಶುದ್ಧೀಕರಣ, ಸರಕಾರವೇ ಮುಂಚೂಣಿಯಲ್ಲಿ ನಿಂತು ಕೊರೋನ ಸೋಂಕಿತರ ಪರೀಕ್ಷೆ, ಜನರಿಗೆ ಆಹಾರ ಸೇರಿದಂತೆ ಇನ್ನಿತರ ವೈದ್ಯಕೀಯ ನೆರವುಗಳು ವ್ಯಾಪಕವಾಗಿ ಹರಿದು ಬಂದ ಕಾರಣದಿಂದ ಧಾರಾವಿಯಲ್ಲಿ ಕೊರೋನಾ ಜನರ ನಡುವೆ ಹರಡುವುದು ನಿಧಾನವಾಯಿತು.

ಆದರೆ ಇದೇ ಸಮುದಾಯ ಕಾರ್ಯಾಚರಣೆ ಧಾರಾವಿಯನ್ನು ಹೊರತು ಪಡಿಸಿ ಮುಂಬೈಯ ಇತರ ನಗರ ಪ್ರದೇಶಗಳಲ್ಲಿ ನಡೆಯಲೇ ಇಲ್ಲ. ಧಾರಾವಿಯನ್ನು ಒಂದು ಪ್ರಯೋಗ ಶಿಶುವಾಗಿ ಸ್ವೀಕರಿಸಿದ ಕಾರಣದಿಂದಾಗಿ ಅದಕ್ಕೆ ಕೊರೋನ ವಿರುದ್ಧ ಗೆಲ್ಲಲು ಸಾಧ್ಯವಾಗಿದೆ. ಆದರೆ, ಇತರೆಡೆಗಳಲ್ಲಿ ಕೊರೋನ ಒಂದು ಲಾಭದಾಯಕ ದಂಧೆಯಾಗಿ ಪರಿವರ್ತನೆಗೊಂಡಿದೆ. ಆದುದರಿಂದಲೇ, ಅಲ್ಲಿ ದಿನದಿಂದ ದಿನಕ್ಕೆ ಸೋಂಕು ವ್ಯಾಪಕವಾಗತೊಡಗಿದೆ. ಕೊರೋನ ಎನ್ನುವ ಮಾಲೆಪಟಾಕಿಯ ಬತ್ತಿ ಮೊದಲು ಹೊತ್ತಿಕೊಂಡದ್ದು ಕೇರಳದಲ್ಲಿ. ಇದನ್ನು ಜನಾಂಗೀಯ ನಿಂದನೆಗೆ, ದ್ವೇಷಕ್ಕೆ ಬಳಸಿಕೊಳ್ಳಲು ಇತರ ರಾಜಕೀಯಶಕ್ತಿಗಳು ಪ್ರಯತ್ನಿಸಿದಾಗ, ತನ್ನ ಮುಂದಿರುವ ಜವಾಬ್ದಾರಿಯನ್ನು ಕೇರಳ ಅತ್ಯಂತ ಗಂಭೀರವಾಗಿ ಮತ್ತು ಪ್ರಾಮಾಣಿಕವಾಗಿ ನಿರ್ವಹಿಸಿತು. ಕರ್ನಾಟಕವೂ ಸೇರಿದಂತೆ ವಿವಿಧ ರಾಜ್ಯಗಳ ನಾಯಕರು ಕೇರಳವನ್ನು ವ್ಯಂಗ್ಯವಾಡಿ ತಿರುಗಾಡುತ್ತಿರುವಾಗ, ಇತ್ತ ಕೇರಳದ ನಾಯಕರು ಕೊರೋನ ವಿರುದ್ಧ ಸರ್ವಸನ್ನದ್ಧರಾಗಿ ಹೋರಾಡತೊಡಗಿದರು. ಈ ಕಾರ್ಯಾಚರಣೆಯಲ್ಲಿ ಕೇರಳ ಸರಕಾರ ತಳಸ್ತರದ ಶ್ರೀಸಾಮಾನ್ಯರನ್ನು ಹೊರಗಿಡಲಿಲ್ಲ.

ಕೇವಲ ಶ್ರೀಮಂತವರ್ಗವನ್ನಷ್ಟೇ ಗುರಿಯಾಗಿಸಿಕೊಳ್ಳದೆ, ಜನಸಾಮಾನ್ಯರಿಗೂ ಚಿಕಿತ್ಸೆಗೆ ಬೇಕಾದ ನೆರವನ್ನು ಸರಕಾರ ನೇರವಾಗಿ ವಹಿಸಿಕೊಂಡಿತು. ಪರಿಣಾಮವಾಗಿ ಕೇರಳ ಅತಿ ಬೇಗ ಚೇತರಿಸಿಕೊಂಡದ್ದು ಮಾತ್ರವಲ್ಲ, ಕೊರೋನ ಎದುರಿಸುವಲ್ಲಿ ವಿಶ್ವಕ್ಕೆ ಮಾದರಿ ರಾಜ್ಯವಾಗಿ ಗುರುತಿಸಿತು. ಕೇರಳವನ್ನು ವ್ಯಂಗ್ಯವಾಡಿದ್ದ ಕರ್ನಾಟಕ ಇಂದು ಅವಮಾನದಿಂದ ತಲೆತಗ್ಗಿಸುವ ಸ್ಥಿತಿಯಲ್ಲಿ ನಿಂತಿದೆ. ಕೊರೋನವನ್ನು ಜಾತಿ, ಧರ್ಮ ಇತ್ಯಾದಿಗಳ ಮರೆಯಲ್ಲಿ ಮುಚ್ಚಿ ಹಾಕಬಹುದು ಎಂದು ಪ್ರಯತ್ನಿಸಿದ ರಾಜ್ಯಗಳೆಲ್ಲ ಕೊರೋನ ಎದುರಿಸಲು ಸಂಪೂರ್ಣ ವಿಫಲವಾಗಿವೆ. ಕೊರೋನವನ್ನು ಒಂದು ವೈರಸ್ ಆಗಿಯಷ್ಟೇ ನೋಡಿ, ತನ್ನ ನೆಲದ ತಳಸ್ತರದ ಜನರ ಬದುಕಿನ ಕುರಿತಂತೆಯೂ ಕಾಳಜಿಯನ್ನು ಹೊಂದಿ, ಜೋಪಾನ ಮಾಡಿದ ರಾಜ್ಯಗಳಷ್ಟೇ ಕೊರೋನ ವಿರುದ್ಧದ ಹೋರಾಟದಲ್ಲಿ ಗೆದ್ದಿವೆೆ. ಇಂದಿಗೂ ಕೊರೋನಾವನ್ನು ಲಾಕ್‌ಡೌನ್‌ನಿಂದ ಎದುರಿಸಬಹುದು ಎಂದು ನಂಬಿ ‘ಲಾಕ್‌ಡೌನ್ ಲಾಕ್‌ಡೌನ್’ ಎಂದು ಅರಚಾಡುತ್ತಿರುವ ನಾಯಕರು ಕೇರಳ ಮತ್ತು ಧಾರಾವಿಗಳಿಂದ ಪಾಠ ಕಲಿಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)