ಪುತ್ತೂರು: ಎಸ್ಐ, ಕಾನ್ಸ್ ಟೇಬಲ್ ಸಹಿತ ಐವರಿಗೆ ಕೊರೋನ ಸೋಂಕು ದೃಢ
ಪುತ್ತೂರು, ಜು.13: ನಗರ ಮಹಿಳಾ ಪೊಲೀಸ್ ಠಾಣಾ ಎಸ್.ಐ ಮತ್ತು ಅವರ 22 ವರ್ಷ ಪ್ರಾಯದ ಪುತ್ರಿ ಹಾಗೂ 45 ವರ್ಷ ಪ್ರಾಯದ ಮಹಿಳಾ ಪೊಲೀಸ್ ಸಿಬ್ಬಂದಿ ಸೇರಿದಂತೆ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲಿ ಸೋಮವಾರ 5 ಕೊರೋನ ಪಾಸಿಟಿವ್ ಪ್ರಕರಣ ದಾಖಲಾಗಿದೆ.
ಕಳೆದ ಮೂರು ದಿನಗಳ ಹಿಂದೆ ಪುತ್ತೂರು ನಗರ ಪೊಲೀಸ್ ಠಾಣೆಯ ಕಾನ್ಸ್ ಟೇಬಲ್ ಒಬ್ಬರಿಗೆ ಕೊರೋನ ದೃಢಪಟ್ಟ ಹಿನ್ನಲೆಯಲ್ಲಿ ಮಹಿಳಾ ಪೊಲೀಸ್ ಠಾಣೆಯ ಎಸ್ಐ, ಪೊಲೀಸ್ ಸಿಬ್ಬಂದಿ ಹೋಂ ಕ್ವಾರಂಟೈನ್ನಲ್ಲಿದ್ದರು. ಇದೀಗ ಎಸ್ಐ, ಪೊಲೀಸ್ ಸಿಬ್ಬಂದಿ ಸಹಿತ ಎಸ್ಐ ಅವರ ಪುತ್ರಿಗೂ ಕೊರೋನ ಪಾಸಿಟಿವ್ ಬಂದಿದೆ.
ನಗರಸಭಾ ವ್ಯಾಪ್ತಿಯ ಕೆಮ್ಮಿಂಜೆ ಗ್ರಾಮದ 55 ವರ್ಷ ಪ್ರಾಯದ ವ್ಯಕ್ತಿ ಹಾಗೂ ಕಡಬ ತಾಲೂಕಿನ ಕೋಡಿಂಬಾಳ ನಿವಾಸಿ 34 ವರ್ಷ ಪ್ರಾಯದ ಯುವಕನಲ್ಲಿ ಕೊರೋನ ದೃಢಪಟ್ಟಿದೆ. ಐವರು ಕೊರೋನ ಪೀಡಿತರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಮತ್ತು ಕಡಬ ತಾಲೂಕಿನಲ್ಲಿ ಈ ತನಕ 53 ಪ್ರಕರಣಗಳು ವರದಿಯಾಗಿದೆ.
Next Story