varthabharthi


ಬೆಂಗಳೂರು

ಏನಿರುತ್ತೆ ? ಏನಿರಲ್ಲ ?: ಇಲ್ಲಿದೆ ಸಂಪೂರ್ಣ ವಿವರ

ಜು.14ರಿಂದ ಬೆಂಗಳೂರಿನಲ್ಲಿ ಲಾಕ್​ಡೌನ್: ಮಾರ್ಗಸೂಚಿ ಪ್ರಕಟಿಸಿದ ರಾಜ್ಯ ಸರಕಾರ

ವಾರ್ತಾ ಭಾರತಿ : 13 Jul, 2020

ಬೆಂಗಳೂರು, ಜು.13: ಕೋವಿಡ್-19 ವೈರಾಣು ಹರಡುತ್ತಿರುವುದನ್ನು ತಡೆಗಟ್ಟಡುವ ನಿಟ್ಟಿನಲ್ಲಿ ರಾಜ್ಯ ಸರಕಾರವು ಜು.14ರ ರಾತ್ರಿ 8 ಗಂಟೆಯಿಂದ ಜು.22ರ ಬೆಳಗ್ಗೆ 5 ಗಂಟೆಯವರೆಗೆ ಬೆಂಗಳೂರು ಪ್ರದೇಶ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆ ಒಳಗೊಂಡೊಂತೆ)ಕ್ಕೆ ಅನ್ವಯಿಸುವಂತೆ ಸೋಮವಾರ ಮಾರ್ಗಸೂಚಿಗಳನ್ನು ಪ್ರಕಟಿಸಿದೆ.

ರಾಜ್ಯ ಸರಕಾರದ ಕಚೇರಿಗಳು ಮತ್ತು ಅವುಗಳ ಸ್ವಾಯತ್ತ ಸಂಸ್ಥೆಗಳು, ನಿಗಮ ಮುಂತಾದವುಗಳು ಮುಚ್ಚಿರುತ್ತವೆ. ಈಗಾಗಲೆ ವೇಳಾಪಟ್ಟಿ ನಿಗದಿಯಾಗಿರುವ ವಿಮಾನ ಹಾಗೂ ರೈಲುಗಳು ಲಾಕ್‍ಡೌನ್ ಅವಧಿಯಲ್ಲಿನ ಸಂಚಾರವನ್ನು ಮುಂದುವರಿಸಲಿವೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್ ತಿಳಿಸಿದ್ದಾರೆ.

ವಿಮಾನ ಮತ್ತು ರೈಲು ಟಿಕೆಟ್‍ಗಳನ್ನು ವಿಮಾನ ಮತ್ತು ರೈಲುಗಳಲ್ಲಿ ಓಡಾಡುವ ಪ್ರಯಾಣಿಕರ ಪಾಸುಗಳೆಂದು ಪರಿಗಣಿಸಲಾಗುವುದು. ಅಲ್ಲದೆ, ಟ್ಯಾಕ್ಸಿ ಮತ್ತು ಆಟೋ ರಿಕ್ಷಾಗಳ ಮೂಲಕ ನಿಲ್ದಾಣಕ್ಕೆ ಪ್ರಯಾಣಿಸಲು ಅನುಮತಿ ನೀಡಲಾಗಿದೆ. ಆದರೆ, ಯಾವುದೇ ಹೊಸ ವಿಮಾನ ಮತ್ತು ರೈಲು ಸಂಚಾರಕ್ಕೆ ಅವಕಾಶವಿಲ್ಲ.

ಮೆಟ್ರೋ ರೈಲು ಸೇವೆಗಳು, ತುರ್ತು ಪರಿಸ್ಥಿತಿಗಾಗಿ ಬಾಡಿಗೆ ತೆಗೆದುಕೊಂಡವುನ್ನು ಹೊರತುಪಡಿಸಿ, ಟ್ಯಾಕ್ಸಿಗಳು(ಆಟೊ ರಿಕ್ಷಾಗಳು ಸೇರಿದಂತೆ) ಮತ್ತು ಕ್ಯಾಬ್ ಚಾಲನಾ ಸಂಸ್ಥೆಗಳ ಕಾರ್ಯಚಟುವಟಿಕೆಗಳಿಗೆ ಅವಕಾಶವಿಲ್ಲ.

ಶಾಲೆಗಳು, ಕಾಲೇಜುಗಳು, ಶಿಕ್ಷಣ, ತರಬೇತಿ, ಕೋಚಿಂಗ್ ಮುಂತಾದ ಸಂಸ್ಥೆಗಳು ಮುಚ್ಚಿರುತ್ತವೆ. ಆನ್‍ಲೈನ್, ದೂರಶಿಕ್ಷಣ ಕಲಿಕೆಗೆ ಅವಕಾಶವನ್ನು ಮುಂದುವರಿಸಿ, ಅವುಗಳನ್ನು ಪ್ರೋತ್ಸಾಹಿಸಬೇಕು. ಆದರೆ, ಈಗಾಗಲೆ ವೇಳಾಪಟ್ಟಿ ನಿಗದಿಯಾದ ಪರೀಕ್ಷೆಗಳಿಗೆ ಕೋವಿಡ್-19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳಿಗೆ ಒಳಪಟ್ಟು ಅವಕಾಶ ನೀಡಲಾಗುವುದು.

ಆರೋಗ್ಯ, ಪೊಲೀಸ್, ಸರಕಾರಿ ಸೇವಾ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಪ್ರವಾಸಿಗರು ಸೇರಿದಂತೆ ಉದ್ದೇಶಿಸಿದ ಮತ್ತು ಕ್ವಾರಂಟೈನ್ ಸೌಲಭ್ಯಗಳಿಗೆ ಉದ್ದೇಶಿಸಿ ಉಳಿದಂತೆ ಹೊಟೇಲ್‍ಗಳು, ರೆಸ್ಟೋರೆಂಟ್‍ಗಳು ಮತ್ತು ಇತರೆ ಆತಿಥ್ಯ ಸೇವೆಗಳನ್ನು ನಿರ್ಬಂಧಿಸಲಾಗಿದೆ. ಹೊಟೇಲ್ ಮತ್ತು ರೆಸ್ಟೋರೆಂಟ್‍ಗಳನ್ನು ಆಹಾರ ತಯಾರಿಕೆಗೆ, ಸರಬರಾಜು ಉದ್ದೇಶಕ್ಕಾಗಿ ಮಾತ್ರ ತೆರೆಯಲು ಅನುಮತಿ ನೀಡಲಾಗಿದೆ.

ಎಲ್ಲ ಸಿನಿಮಾ ಮಂದಿರಗಳು, ಶಾಪಿಂಗ್ ಮಾಲ್‍ಗಳು, ಜಿಮ್ನಾಷಿಯಮ್‍ಗಳು, ಕ್ರೀಡಾ ಸಂಕೀರ್ಣಗಳು, ಸ್ಟೇಡಿಯಂಗಳು, ಈಜುಕೊಳಗಳು, ಮನರಂಜನಾ ಉದ್ಯಾನವನಗಳು, ರಂಗ ಮಂದಿರಗಳು, ಬಾರ್ ಗಳು ಹಾಗೂ ಆಡಿಟೋರಿಯಂಗಳು, ಸಭಾ ಭವನಗಳು ಮತ್ತು ಅದೇ ಬಗೆಯ ಇತರ ಸ್ಥಳಗಳು ಮುಚ್ಚಿರುತ್ತವೆ.

ಎಲ್ಲ ಸಾಮಾಜಿಕ, ರಾಜಕೀಯ, ಕ್ರೀಡಾ, ಮನರಂಜನಾ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭಗಳು, ಇತರೆ ಸಭೆಗಳು ಹಾಗೂ ಬೃಹತ್ ಜನಸ್ತೋಮಗಳು ಸೇರುವುದು, ಎಲ್ಲ ಧಾರ್ಮಿಕ ಸ್ಥಳಗಳು, ಪೂಜಾ ಸ್ಥಳಗಳನ್ನು ಸಾರ್ವಜನಿಕರಿಗೆ ಮುಚ್ಚಬೇಕು. ಧಾರ್ಮಿಕ ಸಭೆಗಳಿಗೆ ಕಟ್ಟುನಿಟ್ಟಿನ ನಿಷೇಧ ಹೇರಲಾಗಿದೆ.

ಜನರ ಚಲನೆ: ಕೆಎಸ್ಸಾರ್ಟಿಸಿ, ಬಿಎಂಟಿಸಿ, ಖಾಸಗಿ ಬಸ್‍ಗಳು ಮತ್ತು ಖಾಸಗಿ ವಾಹನಗಳ ಮೂಲಕ ವ್ಯಕ್ತಿಗಳ ಚಲನೆಯನ್ನು ಮಾರ್ಗಸೂಚಿಯಲ್ಲಿ ಅನುಮತಿಸಿರುವುದನ್ನು ಹೊರತುಪಡಿಸಿ ನಿಷೇಧಿಸಿದೆ. ತುರ್ತು ಸಂದರ್ಭಗಳಲ್ಲಿ ಅಥವಾ ಈ ಮಾರ್ಗಸೂಚಿಗಳಲ್ಲಿ ಅನುಮತಿಸಿದ ಸಂದರ್ಭಗಳಲ್ಲಿ ಮಾತ್ರ ರಾಜ್ಯದೊಳಗೆ ಮತ್ತು ರಾಜ್ಯದ ಹೊರಗೆ ಪ್ರಯಾಣಿಕ ವಾಹನಗಳು ಚಲಿಸುವುದು. ಈ ಚಲನೆಗೆ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಹ ಪರವಾನಗಿ ಪಡೆದಿರಬೇಕು.

ತುರ್ತು ಸಂದರ್ಭಗಳಲ್ಲಿ ಮಾತ್ರ ಅಥವಾ ಈ ಮಾರ್ಗಸೂಚಿಯಲ್ಲಿ ಅನುಮತಿಸಿದ ಚಟುವಟಿಕೆಗಳಿಗೆ ಬೆಂಗಳೂರು ಪ್ರದೇಶದೊಳಗೆ ಪ್ರಯಾಣಿಕ ವಾಹನಗಳು ಮತ್ತು ಬಸ್‍ಗಳ ಪ್ರಯಾಣಕ್ಕೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು ಪ್ರದೇಶದಿಂದ ನಿರ್ಗಮನ ಮತ್ತು ಆಗಮನಕ್ಕೆ ತುರ್ತು ಸಂದರ್ಭಗಳಲ್ಲಿ ಅರ್ಹ ಪರವಾನಗಿ ಪಡೆದ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಹೊರಡಿಸಿದ ಚಾಲ್ತಿಯಲ್ಲಿರುವ ಮಾದರಿ ವಿಧಾನಗಳು, ಮಾರ್ಗಸೂಚಿಗಳನ್ನು ಪಾಲಿಸುವ ಷರತ್ತಿನೊಂದಿಗೆ ಅವಕಾಶ ಕಲ್ಪಿಸಲಾಗಿದೆ.

ಮಾರ್ಗಸೂಚಿಗಳಲ್ಲಿ ಅನುಮತಿಸಿದ ಕಾರ್ಯ ಚಟುವಟಿಕೆಗಳಿಗಾಗಿ ಕೆಲಸದ ಸ್ಥಳಕ್ಕೆ ಹೋಗಿ ಬರಲು ಅವರ ಕಚೇರಿ, ಸಂಸ್ಥೆಯಿಂದ ನೀಡಿದ ಅರ್ಹ ಗುರುತಿನ ಚೀಟಿಯೊಂದಿಗೆ ಸಿಬ್ಬಂದಿ ಪ್ರಯಾಣಿಸಬಹುದು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರವನ್ನೇ ಪ್ರಯಾಣದ ಪರವಾನಗಿಯಾಗಿ ಬಳಸಿಕೊಳ್ಳಬಹುದು. ಮತ್ತು ಅವರಿಗೆ ಲಭ್ಯವಿರುವ ಟ್ಯಾಕ್ಸಿ, ಆಟೊ ರಿಕ್ಷಾ ಒಳಗೊಂಡಂತೆ ಸಾರಿಗೆ ವಿಧಾನವನ್ನು ಬಳಸಿಕೊಳ್ಳಬಹುದು.

ಸ್ಥಳೀಯ ಮಳಿಗೆಗಳು, ಬೃಹತ್ ಇಟ್ಟಿಗೆ ಮತ್ತು ಗಾರೆ ಅಂಗಡಿಗಳು ಅಥವಾ ಇ-ಕಾಮರ್ಸ್ ಕಂಪೆನಿಗಳ ಮುಖಾಂತರ, ಅತ್ಯವಶ್ಯಕ ವಸ್ತುಗಳ ಉತ್ಪಾದನೆ, ಸಗಟು ಮತ್ತು ಚಿಲ್ಲರೆ ಮಾರಾಟ ಯಾವುದೆ ಆಗಿರಲಿ, ಆ ವಸ್ತುಗಳ ಪೂರೈಕೆ ಸರಣಿಯ ಎಲ್ಲ ಸೌಲಭ್ಯಗಳನ್ನು ಕೋವಿಡ್-19 ನಿರ್ವಹಣೆಗಾಗಿ ಇರುವ ರಾಷ್ಟ್ರೀಯ ನಿರ್ದೇಶನಗಳನ್ನು ಪಾಲಿಸುವ ಮೂಲಕ ಸರಬರಾಜು ಮಾಡಲು ಅವಕಾಶವಿದೆ.

ಎಲ್ಲ ಆಹಾರ ಸಂಸ್ಕರಣೆ ಮತ್ತು ಸಂಬಂಧಿತ ಕೈಗಾರಿಕೆಗಳು, ಬ್ಯಾಂಕುಗಳು, ವಿಮಾ ಕಚೇರಿಗಳು ಮತ್ತು ಎಟಿಎಂ. ಪತ್ರಿಕಾ ಮತ್ತು ವಿದ್ಯುನ್ಮಾನ ಮಾಧ್ಯಮ, ದೂರ ಸಂಪರ್ಕ, ಅಂತರ್ಜಾಲ ಸೇವೆಗಳು, ಪ್ರಸರಣ ಮತ್ತು ಕೇಬಲ್ ಸೇವೆಗಳು, ಮಾಹಿತಿ ತಂತ್ರಜ್ಞಾನ ಸೇವೆಗಳು ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳು ಹಾಗೂ ಅತ್ಯವಶ್ಯಕ ಸೇವಾ ನೀಡಿಕೆ ಮತ್ತು ನಿರ್ವಹಣಾ ಸೇವೆಗಳು ಕನಿಷ್ಟ ಸಿಬ್ಬಂದಿಯೊಂದಿಗೆ ನಿರ್ವಹಿಸುವುದು.

ಇ-ಕಾಮರ್ಸ್ ಮುಖಾಂತರ ಆಹಾರ, ಔಷಧಿಗಳು, ಔಷಧ ವಸ್ತುಗಳು, ವೈದ್ಯಕೀಯ ಸಲಕರಣೆಗಳಂತ ಅಗತ್ಯ ವಸ್ತುಗಳ ಸರಬರಾಜು, ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಣಾ ಘಟಕಗಳು ಮತ್ತು ಸೇವೆಗಳು, ಭಾರತೀಯ ಭದ್ರತೆಗಳು, ವಿನಿಮಯ ಮಂಡಳಿಯ ಬಂಡವಾಳ ಹಾಗೂ ಋಣ ಮಾರುಕಟ್ಟೆ ಸೇವೆಗಳು, ಶೀತಲೀಕರಣ ಘಟಕಗಳು ಹಾಗೂ ಉಗ್ರಾಣ ಸೇವೆಗಳು, ಖಾಸಗಿ ಭದ್ರತಾ ಸೇವೆಗಳಿಗೆ ಅವಕಾಶ ಕಲ್ಪಿಸಲಾಗಿದೆ.

ಬೆಂಗಳೂರು ಪ್ರದೇಶದ ವ್ಯಾಪ್ತಿಯೊಳಗೆ ಹೊರಗಿನಿಂದ ಕಾರ್ಮಿಕರನ್ನು ಕರೆತರದೆ ಸ್ಥಳೀಯವಾಗಿಯೆ ಇರುವ ಕಾರ್ಮಿಕರನ್ನು ಬಳಸಿಕೊಂಡು ನಿರ್ಮಾಣ ಯೋಜನೆಗಳ ಕಾಮಗಾರಿಗಳನ್ನು ಮುಂದುವರಿಸಬಹುದು. ಕಂಟೈನ್ಮೆಂಟ್ ವಲಯಗಳಲ್ಲಿ ಅತ್ಯಗತ್ಯ ಚಟುವಟಿಕೆಗಳಿಗೆ ಮಾತ್ರ ಅವಕಾಶ ನೀಡಬೇಕು.

ವಿಪತ್ತು ನಿರ್ವಹಣಾ ಕಾಯ್ದೆ 2005ರಡಿಯಲ್ಲಿ ಹೊರಡಿಸಲಾದ ಈ ಮಾರ್ಗಸೂಚಿಗಳನ್ನು ಬಿಬಿಎಂಪಿ ಆಯುಕ್ತರು, ಬೆಂಗಳೂರು ನಗರ ಪೊಲೀಸ್ ಆಯುಕ್ತರು, ಬೆಂಗಳೂರು ನಗರ ಹಾಗೂ ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್ ವರಿಷ್ಠಾಧಿಕಾರಿಗಳು ಯಾವುದೆ ರೀತಿಯಲ್ಲಿ ದುರ್ಬಲಗೊಳಿಸಬಾರದು ಎಂದು ವಿಜಯಭಾಸ್ಕರ್ ಸೂಚನೆ ನೀಡಿದ್ದಾರೆ.

ವಾಣಿಜ್ಯ ಮತ್ತು ಖಾಸಗಿ ಸಂಸ್ಥೆಗಳು ಮುಚ್ಚಲು ಸೂಚಿಸಲಾಗಿದೆ. ಅದಾಗ್ಯೂ, ಕಂಟೈನ್ಮೆಂಟ್ ವಲಯದ ಹೊರಗೆ ಬೆಳಗ್ಗೆ 5 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆಗೆ ಪಡಿತರ ಅಂಗಡಿಗಳು(ಪಿಡಿಎಸ್), ದಿನಸಿ ಅಂಗಡಿಗಳು ಸೇರಿದಂತೆ ಆಹಾರ, ದವಸ ಧಾನ್ಯಗಳು, ಹಣ್ಣುಗಳು ಹಾಗೂ ತರಕಾರಿ, ಹೈನು ಮತ್ತು ಕ್ಷೀರ ಕೇಂದ್ರಗಳು, ಮಾಂಸ ಮತ್ತು ಮೀನು, ಪ್ರಾಣಿಯ ಆಹಾರ ಅಂಗಡಿಗಳು ತೆರೆಯಲು ವಿನಾಯಿತಿ ನೀಡಲಾಗಿದೆ.

ಕಂಟೈನ್ಮೆಂಟ್ ವಲಯದ ಹೊರಗೆ ವಿನಾಯಿತಿ

ಆರೋಗ್ಯ, ವೈದ್ಯಕೀಯ ಶಿಕ್ಷಣ, ಪೊಲೀಸ್, ಗೃಹ ರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ವಿಪತ್ತು ನಿರ್ವಹಣೆ, ಬಿಬಿಎಂಪಿ ಹಾಗೂ ಕಾರಾಗೃಹಗಳು. ವಿದ್ಯುತ್, ನೀರು, ನೈರ್ಮಲ್ಯ ಇತ್ಯಾದಿ ಅಗತ್ಯ ಸೇವೆಗಳನ್ನು ನಿರ್ವಹಿಸುವಂತಹ ಕಚೇರಿಗಳಿಗೆ ಬೆಂಗಳೂರು ಪ್ರದೇಶದ ಕಂಟೈನ್ಮೆಂಟ್ ವಲಯದ ಹೊರಗೆ ಲಾಕ್‍ಡೌನ್‍ನಿಂದ ವಿನಾಯಿತಿ ನೀಡಲಾಗಿದೆ.

ಬಿಬಿಎಂಪಿ ಹಾಗೂ ಅಧೀನ ಕಚೇರಿಗಳು, ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಅಧೀನ ಕಚೇರಿಗಳು. ವಿಧಾನಸೌಧ, ವಿಕಾಸಸೌಧ ಹಾಗೂ ಬಹುಮಹಡಿ ಕಟ್ಟಡಗಳಲ್ಲಿರುವ ಕಚೇರಿಗಳು ಶೇ.50 ಸಿಬ್ಬಂದಿಯೊಂದಿಗೆ ಕಾರ್ಯ ನಿರ್ವಹಿಸಬೇಕು. ನ್ಯಾಯಾಲಯಗಳು ಹಾಗೂ ನ್ಯಾಯಾಂಗ ಕೆಲಸಗಳಿಗೆ ಸಂಬಂಧಿಸಿದ ಕಚೇರಿಗಳು ಹೈಕೋರ್ಟ್ ಹೊರಡಿಸಿರುವ ಮಾರ್ಗಸೂಚಿಗಳನ್ವಯ ಕಾರ್ಯ ನಿರ್ವಹಿಸಬೇಕು.

ಕೇಂದ್ರ ಸರಕಾರದ ಕಚೇರಿಗಳು, ಅದರ ಸ್ವಾಯತ್ತ, ಅಧೀನ ಕಚೇರಿಗಳು ಹಾಗೂ ಸಾರ್ವಜನಿಕ ಸಂಸ್ಥೆಗಳು ಮುಚ್ಚಿರಲಿವೆ. ಕಂಟೈನ್ಮೆಂಟ್ ವಲಯದ ಹೊರಗೆ ರಕ್ಷಣೆ, ರಕ್ಷಣೆ ಪಿಎಸ್‍ಯುಗಳು, ಕೇಂದ್ರ ಸಶಸ್ತ್ರ, ಪೊಲೀಸ್ ಪಡೆ ಹಾಗೂ ಸಂಪರ್ಕ, ಅಗತ್ಯ ಸೇವೆಗಳನ್ನು ನಿರ್ವಹಿಸುವಂತಹ ಕಚೇರಿಗಳಿಗೆ ವಿನಾಯಿತಿದೆ.

ರಾಷ್ಟ್ರೀಯ ಮಾಹಿತಿ ಕೇಂದ್ರಗಳು, ವಿಮಾನ ನಿಲ್ದಾಣಗಳಲ್ಲಿ, ಭೂ ಗಡಿಗಳಲ್ಲಿ ಕಾರ್ಯ ನಿರ್ವಹಿಸುವ ಕಸ್ಟಮ್‍ಗಳು, ಜಿಎಸ್‍ಟಿಎನ್, ಎಂಸಿಎ-21 ರಿಜಿಸ್ಟ್ರಿ, ಕನಿಷ್ಟ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬೇಕು. ಬ್ಯಾಂಕ್‍ಗಳು, ರಿಸರ್ವ್ ಬ್ಯಾಂಕ್ ಮತ್ತು ಆರ್‍ಬಿಐ ನಿಯಂತ್ರಿತ ಹಣಕಾಸು ಮಾರುಕಟ್ಟೆ, ಎನ್‍ಪಿಸಿಐ ಮತ್ತು ಸಿಸಿಐಎಲ್ ನಂತಹ ಘಟಕಗಳು, ಪಾವತಿ ವ್ಯವಸ್ಥೆಯ ಪ್ರವರ್ತಕರು ಮತ್ತು ಸ್ವತಂತ್ರ ಪ್ರಾಥಮಿಕ ವ್ಯಾಪಾರಿಗಳು, ಡೀಲರುಗಳು, ವಿತರಕರು ಕನಿಷ್ಠ ಸಂಖ್ಯೆಯ ಸಿಬ್ಬಂದಿಯೊಂದಿಗೆ ಕಾರ್ಯನಿರ್ವಹಿಸಬಹುದು.

ಕಂಟೈನ್ಮೆಂಟ್ ವಲಯದ ಹೊರಗೆ ಇರುವ ಎಲ್ಲ ಆಸ್ಪತ್ರೆಗಳು, ನರ್ಸಿಂಗ್ ಹೋಮ್‍ಗಳು, ಕ್ಲಿನಿಕ್‍ಗಳು, ಲ್ಯಾಬ್‍ಗಳು, ಸಂಗ್ರಹಣಾ ಕೇಂದ್ರಗಳು, ಮೆಡಿಸನ್ ಸೌಲಭ್ಯಗಳು, ಡಿಸ್ಪೆನ್ಸರಿಗಳು, ಫಾರ್ಮಸಿಗಳು, ಕೆಮಿಸ್ಟ್ ಜನ ಔಷಧಿ ಕೇಂದ್ರಗಳು, ಗೃಹ ಆರೈಕೆದಾರರು ಮತ್ತು ವೈದ್ಯಕೀಯ ಉಪಕರಣಗಳ ಅಂಗಡಿಗಳು ಸೇರಿದಂತೆ ಎಲ್ಲ ಔಷಧ ಅಂಗಡಿಗಳು ತೆರೆಯಲು ಅವಕಾಶ ಕಲ್ಪಿಸಲಾಗಿದೆ.

ಎಲ್ಲ ಫಾರ್ಮಸಿಟಿಕಲ್ ಹಾಗೂ ರಿಸರ್ಚ್ ಲ್ಯಾಬ್‍ಗಳು, ಔಷಧಿಗಳು, ಔಷಧೀಯ ವೈದ್ಯಕೀಯ ಸಾಧನಗಳು, ಮೆಡಿಕಲ್ ಆಕ್ಸಿಜನ್ ಅವುಗಳ ಪ್ಯಾಕಿಂಗ್ ಸಾಮಗ್ರಿ, ಕಚ್ಚಾ ಸಾಮಗ್ರಿ ಹಾಗೂ ಮಧ್ಯವರ್ತಿಗಳ ಎಲ್ಲ ತಯಾರಿಕಾ ಘಟಕಗಳು, ವೈದ್ಯಕೀಯ, ಆರೋಗ್ಯ ಮೂಲ ಸೌರ್ಕಯಕ್ಕೆ ಸಂಬಂಧಿಸಿದ ಎಲ್ಲ ನಿರ್ಮಾಣಗಳು, ಎಲ್ಲ ವೈದ್ಯಕೀಯ, ಅರೆ ವೈದ್ಯಕೀಯ ಶೂಶ್ರೂಷಕರು, ವಿಜ್ಞಾನಿಗಳು, ಲ್ಯಾಬ್ ಟೆಕ್ನಿಷಿಯನ್ಸ್ ಗಳು, ಮಿಡ್-ವೈವ್ಸ್ ಹಾಗೂ ಇತರೆ ಆಸ್ಪತ್ರೆ ಪೂರಕ ಸೇವೆಗಳು (ಅಂತರ್ ರಾಜ್ಯ ಹಾಗೂ ರಾಜ್ಯದೊಳಗೆ ಮತ್ತು ಅಂತರ್ ಜಿಲ್ಲೆ ಹಾಗೂ ಜಿಲ್ಲೆಯೊಳಗೆ)ಲಭ್ಯವಿರಲಿವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)