varthabharthi


ಕರ್ನಾಟಕ

ಕಲಬುರಗಿ ಜಿಲ್ಲೆಯಲ್ಲಿ ಜು.14ರಿಂದ 20ರವರೆಗೆ ಲಾಕ್​ಡೌನ್ ಘೋಷಣೆ

ವಾರ್ತಾ ಭಾರತಿ : 13 Jul, 2020

ಜಿಲ್ಲಾಧಿಕಾರಿ ಬಿ. ಶರತ್

ಕಲಬುರಗಿ, ಜು.13: ಕೊರೋನ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ನಗರ, ಜಿಲ್ಲೆಯ ವ್ಯಾಪ್ತಿಗೆ ಒಳಪಡುವ ಎಲ್ಲ ತಾಲೂಕುಗಳಲ್ಲಿ ಜು.14 ರಿಂದ ಜುಲೈ 20ರವರೆಗೆ ನಿಯಮಬದ್ಧ ಲಾಕ್​ಡೌನ್ ಘೋಷಿಸಿ ಜಿಲ್ಲಾಧಿಕಾರಿ ಬಿ. ಶರತ್ ಆದೇಶ ಹೊರಡಿಸಿದ್ದಾರೆ.

ಜು.14ರಿಂದ 20ರವರೆಗೆ ಲಾಕ್ ಡೌನ್ ಘೋಷಿಸಲಾಗಿದ್ದು, ಅಗತ್ಯ ವಸ್ತುಗಳಾದ ದಿನಸಿ, ತರಕಾರಿ ಹಾಗೂ ಇನ್ನಿತರ ಮೆಡಿಕಲ್ ಅವಶ್ಯಕ ವಸ್ತುಗಳನ್ನು ಹೊರತುಪಡಿಸಿ ಉಳಿದ ಯಾವುದೇ ರೀತಿಯ ಅಂಗಡಿ ಮುಂಗಟ್ಟುಗಳನ್ನು ತೆರೆಯುವಂತಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಎಂ.ಎಸ್.ಐ.ಎಲ್. ಪರವಾನಗಿ‌ ಹೊಂದಿದ ಅಂಗಡಿಗಳಲ್ಲಿ ಮದ್ಯ ಮಾರಾಟವಿರುತ್ತದೆ. ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ಪೆಟ್ರೋಲ್ ಬಂಕ್ ಗಳು ತೆರೆದಿರಲಿವೆ. ಪಾನ್ ಶಾಪ್ ಗಳು ತೆರೆಯುವಂತಿಲ್ಲ. ಎಲ್ಲ ತರಹದ ಸರಕು ಸಾಗಾಣಿಕೆಗೆ ಪರವಾನಗಿ ರಹಿತವಾಗಿ ಸಂಚಾರಕ್ಕೆ ಅನುಮತಿಸಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸುವ ನೌಕರರು ಗುರುತಿನ ಚೀಟಿ ಹೊಂದಿ ಕಾರ್ಯ ನಿರ್ವಹಿಸುವುದು, ಸಾರ್ವಜನಿಕ ಸೇವೆಗಳಲ್ಲಿ ತೊಡಗಿಸಿ ವೈದ್ಯಕೀಯ ಸಿಬ್ಬಂದಿಗಳಿಗೆ ಸಂಚರಿಸಲು ಯಾವುದೇ ಅನುಮತಿಯ ಅವಶ್ಯಕತೆ ಇರುವುದಿಲ್ಲ. ಕೇಂದ್ರ ಹಾಗೂ ರಾಜ್ಯ ಸರ್ಕಾರ ನಿಗದಿಪಡಿಸಿರುವ ಪರೀಕ್ಷೆಗಳಲ್ಲಿ ತೊಡಗಿರುವ ನೌಕರರು ಹಾಗೂ ವಿದ್ಯಾರ್ಥಿಗಳು ಅಗತ್ಯ ದಾಖಲೆಗಳನ್ನು ಹೊಂದಿರತಕ್ಕದ್ದು, ಹೋಟೆಲ್ ಗಳಲ್ಲಿ ಕೇವಲ ಡೆಲಿವರಿಗೆ ಮಾತ್ರ ಅವಕಾಶವಿರಲಿದೆ.

ಕಲಬುರಗಿ ನಗರದಿಂದ ತಾಲೂಕು ಪ್ರದೇಶಗಳಿಗೆ ಸಂಚರಿಸಲು ನಗರದ ಹೊರವಲದಲ್ಲಿ ಬಸ್ ವ್ಯವಸ್ಥೆ ಇರಲಿದ್ದು, ಮೂರು ಟ್ರಿಪ್ ಗಳಲ್ಲಿ ಸಂಚರಿಸಲಿವೆ. ಜಿಲ್ಲೆಯ ನಗರ ಪ್ರದೇಶದಲ್ಲಿನ ಆಟೋ ರಿಕ್ಷಾ, ಕಾರು, ದ್ವಿಚಕ್ರ ವಾಹನಗಳ ಓಡಾಟ ನಿಷೇಧಿಸಿದೆ. ಇದು ತುರ್ತು ಪರಿಸ್ಥಿತಿಗೆ ಅನ್ಬಯಿಸುವುದಿಲ್ಲ. ಸಾರ್ವಜನಿಕರ ಎಲ್ಲ ತರಹದ ವೈಯಕ್ತಿಕ ಹಾಗೂ ಧಾರ್ಮಿಕ ಕಾರ್ಯಗಳಾದ ಮದುವೆ, ಉರೂಸ್, ಜಾತ್ರೆಗಳನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)