varthabharthi


ಸಂಪಾದಕೀಯ

ಅರಾಜಸ್ಥಾನ!

ವಾರ್ತಾ ಭಾರತಿ : 14 Jul, 2020

ಕೊರೋನ ಕುರಿತಂತೆ ನಮ್ಮ ನಾಯಕರು ಎಷ್ಟರ ಮಟ್ಟಿಗೆ ಆತಂಕಗೊಂಡಿದ್ದಾರೆ? ಅವರು ಕೊರೋನ ವಿರುದ್ಧ ಗಂಭೀರ ಕಾರ್ಯಾಚರಣೆಗೆ ಇಳಿದಿದ್ದಾರೆಯೇ? ಅಥವಾ ಕೊರೋನ ಸಂದರ್ಭವನ್ನು ಬಳಸಿಕೊಂಡು ‘ಲಾಕ್‌ಡೌನ್’ ಮರೆಯಲ್ಲಿ ತಮ್ಮ ರಾಜಕೀಯ ಅಜೆಂಡಾಗಳನ್ನು ಜಾರಿಗೊಳಿಸಲು ಹೊರಟಿದ್ದಾರೆಯೇ? ಕೊರೋನ ವಿರುದ್ಧದ ಹೋರಾಟ ಒಂದು ಅಣಕು ಕಾರ್ಯಾಚರಣೆಯೇ? ರಾಜಸ್ಥಾನದಲ್ಲಿ ನಡೆಯುತ್ತಿರುವ ‘ಅಸಹ್ಯ ಸಮಯ ಸಾಧಕ’ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದಾಗ, ಕೊರೋನ ಮತ್ತು ಲಾಕ್‌ಡೌನ್‌ನಿಂದ ತತ್ತರಿಸಿರುವುದು ಜನಸಾಮಾನ್ಯರು ಮಾತ್ರ. ಈ ದೇಶದ ರಾಜಕಾರಣಿಗಳ ಕೂದಲೂ ಇದರಿಂದ ಜಗ್ಗಿಲ್ಲ ಎನ್ನುವುದು ಸ್ಪಷ್ಟವಾಗುತ್ತಿದೆ. ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಕೈ ಜೋಡಿಸಿ ಜನರ ಸಂಕಟಗಳಿಗೆ ಜೊತೆಯಾಗಬೇಕಾದ ಸಮಯದಲ್ಲಿ, ಯಾವ ಲಜ್ಜೆಯೂ ಇಲ್ಲದೆ ಅಧಿಕಾರದ ಗದ್ದುಗೆಗಾಗಿ ಜಗ್ಗಾಟ ನಡೆಸುತ್ತಿರುವ ನಾಯಕರು, ತಮ್ಮನ್ನು ಜನರು ಗಮನಿಸುತ್ತಿದ್ದಾರೆ ಎನ್ನುವುದನ್ನೇ ಮರೆತು ಬಿಟ್ಟಂತಿದೆ ಅಥವಾ ಜನರನ್ನು ಅವರೆಂದೋ ತಮ್ಮ ರಾಜಕೀಯ ಲೆಕ್ಕದಿಂದ ಕೈ ಬಿಟ್ಟಿದ್ದಾರೆ ಎನ್ನುವುದನ್ನು ಇದು ತೋರಿಸುತ್ತದೆ. ತನ್ನ ಸರಕಾರವನ್ನು ಉರುಳಿಸುವುದಕ್ಕಾಗಿ ‘ಬಿಜೆಪಿ ಶಾಸಕರಿಗೆ ತಲಾ 15 ಕೋಟಿ ರೂಪಾಯಿ ಆಮಿಷ ಒಡ್ಡಿದೆ’ ಎಂದು ಗೆಹ್ಲೋಟ್ ಆರೋಪಿಸಿದ ಬೆನ್ನಿಗೇ ರಾಜಸ್ಥಾನದಲ್ಲಿ ರೆಸಾರ್ಟ್ ರಾಜಕೀಯ ಚುರುಕುಗೊಂಡಿದೆ. ಕೊರೋನ ದೇಶಾದ್ಯಂತ ತೀವ್ರ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲೇ, ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲದ ಮೂಲಕ ಬಿಜೆಪಿ ಅಲ್ಲಿನ ಸರಕಾರವನ್ನು ಉರುಳಿಸಿತು. ದೇಶಾದ್ಯಂತ ಪ್ರಧಾನಿ ಹೇರಿದ್ದ ಲಾಕ್‌ಡೌನ್, ಮಧ್ಯಪ್ರದೇಶದಲ್ಲಿ ಒಂದು ಅಣಕವಾಯಿತು. ನೂತನ ಸರಕಾರದ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ‘ಸುರಕ್ಷಿತ ಅಂತರ’ ತಮಾಷೆಗೊಳಗಾಯಿತು. ಇಂದಿಗೂ ಮಧ್ಯಪ್ರದೇಶದಲ್ಲಿ ಕೊರೋನ ಎದುರಿಸಲು ಸರಕಾರ ಪೂರ್ಣ ಪ್ರಮಾಣದಲ್ಲಿ ಸಜ್ಜಾಗಿಲ್ಲ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರಕಾರ ಆಪರೇಷನ್ ಕಮಲಕ್ಕೆ ಬಲಿಯಾದ ಮೂರೇ ತಿಂಗಳಲ್ಲಿ, ರಾಜಸ್ಥಾನದಲ್ಲೂ ರಾಜಕೀಯ ಅತಂತ್ರತೆ ಸೃಷ್ಟಿಯಾಗಿದೆ. ಸರಕಾರವನ್ನು ಉರುಳಿಸಲು ಬಿಜೆಪಿ ಯತ್ನಿಸುತ್ತಿದೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ. ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಒಡೆಯಲು ಜ್ಯೋತಿರಾಧಿತ್ಯ ಸಿಂಧಿಯಾ ಕಾರಣವಾಗಿದ್ದರೆ, ರಾಜಸ್ಥಾನದ ಬೆಳವಣಿಗೆಗಳ ಹಿಂದೆ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಕಾಣಿಸಿಕೊಂಡಿದ್ದಾರೆ. ಇಬ್ಬರೂ ಕಾಂಗ್ರೆಸ್‌ನ ಭವಿಷ್ಯವನ್ನು ಹಿಡಿದಿಡಬಲ್ಲ ಶಕ್ತಿಯಿದ್ದ ಯುವನಾಯಕರು ಎನ್ನುವುದು ಗಮನಾರ್ಹ.

ಮಧ್ಯಪ್ರದೇಶದ ರಾಜಕೀಯ ಬೆಳವಣಿಗೆಯಿಂದ ಜ್ಯೋತಿರಾಧಿತ್ಯ ಸಿಂಧಿಯಾ ಅವರ ರಾಜಕೀಯ ಬದುಕಿನ ಮೇಲೆ ಎಷ್ಟರ ಮಟ್ಟಿಗೆ ಪರಿಣಾಮ ಬೀರುತ್ತದೆ ಎನ್ನುವುದನ್ನು ಕಾಲವೇ ಹೇಳಬೇಕು. ಯಾಕೆಂದರೆ, ಕಾಂಗ್ರೆಸ್‌ನಲ್ಲಿ ರೂಪಿಸಿಕೊಂಡ ಜಾತ್ಯತೀತ ರಾಜಕೀಯ ವರ್ಚಸ್ಸು ಬಿಜೆಪಿಯಲ್ಲಿ ಎಳ್ಳಷ್ಟೂ ಬಳಕೆಗೆ ಬರಲಾರದು. ಇದೇ ಸಂದರ್ಭದಲ್ಲಿ ಬಿಜೆಪಿಯೊಳಗಿರುವ ಘಟಾನುಘಟಿಗಳು ಮಧ್ಯಪ್ರದೇಶದಲ್ಲಿ ಸಿಂಧಿಯಾ ಅವರಿಗಾಗಿ ಸರಿದು ನಿಲ್ಲುತ್ತಾರೆ ಎನ್ನುವುದನ್ನೂ ನಂಬುವಂತಿಲ್ಲ. ಇತ್ತೀಚೆಗೆ ನಡೆದ ಸಂಪುಟ ವಿಸ್ತರಣೆಯಲ್ಲಿ ಸಿಂಧಿಯಾ ಜೊತೆಗಿದ್ದ ಶಾಸಕರು ಒಂದಿಷ್ಟು ಆದ್ಯತೆಯನ್ನು ಪಡೆದುಕೊಂಡಿದ್ದಾರೆ. ಈ ಮೂಲಕ, ಸರಕಾರದಲ್ಲಿ ತನ್ನ ಹಿಡಿತವನ್ನು ಹೆಚ್ಚಿಸಿಕೊಂಡಿದ್ದಾರೆ ಎನ್ನುವ ಅಭಿಪ್ರಾಯವಿದೆ. ಸಿಂಧಿಯಾ ಅವರು ಕಾಂಗ್ರೆಸ್‌ನಿಂದ ಬಿಜೆಪಿಗೆ ಪಕ್ಷಾಂತರಗೊಂಡದ್ದು ತಕ್ಷಣದ ಲಾಭಕ್ಕಾಗಿ. ಈ ದೇಶದ ಬಗ್ಗೆಯಾಗಲಿ, ಮಧ್ಯಪ್ರದೇಶದ ಜನರ ಭವಿಷ್ಯದ ಕುರಿತಾಗಲಿ ಯಾವುದೇ ದೂರಗಾಮಿ ಯೋಜನೆಗಳು ಈ ಪಕ್ಷಾಂತರದ ಹಿಂದಿಲ್ಲ. ಇದೀಗ ರಾಜಸ್ಥಾನದಲ್ಲಿ ಸಚಿನ್ ಪೈಲಟ್ ವಿಷಯದಲ್ಲೂ ಇದು ಪುನರಾವರ್ತನೆಯಾಗುತ್ತಿದೆ. ಸದ್ಯಕ್ಕಿದು ಕಾಂಗ್ರೆಸ್‌ನೊಳಗಿನ ಆಂತರಿಕ ಭಿನ್ನಮತವಾಗಿ ಗುರುತಿಲ್ಪಟ್ಟಿದೆ. ಆದರೆ ಬಿಜೆಪಿಯೂ ಪೈಲಟ್ ಬೆನ್ನಿಗೆ ನಿಂತಿರುವುದರಿಂದ ಬರೇ ಆಂತರಿಕ ವಿಷಯವಾಗಿ ಉಳಿಯದೆ, ಸರಕಾರದ ಅಳಿವು ಉಳಿವಿನ ಪ್ರಶ್ನೆಯಾಗಿ ಬೆಳೆದಿದೆ. ಪರಿಸ್ಥಿತಿ ಕೈ ಮೀರುತ್ತಿದ್ದಂತೆಯೇ ಗೆಹ್ಲೋಟ್ ಬಿಜೆಪಿಯ ಕಡೆಗೆ ಕೈ ತೋರಿಸಿ ‘ಸರಕಾರ ಬೀಳಿಸುತ್ತಿದ್ದಾರೆ’ ಎಂದು ಮಕ್ಕಳಂತೆ ಚೀರಾಡತೊಡಗಿದ್ದಾರೆ.

ಮಧ್ಯಪ್ರದೇಶದಲ್ಲಿ, ಈಗ ರಾಜಸ್ಥಾನದಲ್ಲಿ ನಡೆಯುತ್ತಿರುವುದಿರಲಿ ಬಿಜೆಪಿಯ ಹಣಕ್ಕೆ ಬಲಿಯಾಗಿರುವವರು ಕಾಂಗ್ರೆಸ್‌ನ ಯಾವುದೋ ಗತಿಗೇಡಿ ಪುಡಿ ಶಾಸಕರಲ್ಲ. ಜ್ಯೋತಿರಾಧಿತ್ಯ ಸಿಂಧಿಯಾ, ಸಚಿನ್ ಪೈಲಟ್‌ನಂತಹ ನಾಯಕರು ಕಾಂಗ್ರೆಸ್‌ನಿಂದ ಸಿಡಿಯುತ್ತಿದ್ದಾರೆ ಎಂದರೆ ಅದಕ್ಕೆ ಬಿಜೆಪಿಯನ್ನು ಹೊಣೆ ಮಾಡುವುದರಲ್ಲಿ ಅರ್ಥವೇ ಇಲ್ಲ. ಕಾಂಗ್ರೆಸ್‌ನ ಭವಿಷ್ಯದ ಮುಖ್ಯಮಂತ್ರಿ, ಪ್ರಧಾನಮಂತ್ರಿಯಾಗಬೇಕಾದ ನಾಯಕರೇ ಪಕ್ಷ ಒಡೆಯುವುದರ ಮುಂಚೂಣಿಯಲ್ಲಿ ನಿಲ್ಲುತ್ತಾರೆ ಎಂದರೆ ಸಮಸ್ಯೆ ಕಾಂಗ್ರೆಸ್‌ನೊಳಗಿದೆಯೇ ಹೊರತು, ಬಿಜೆಪಿಯಲ್ಲಲ್ಲ. ಸಂದರ್ಭವನ್ನು ಬಿಜೆಪಿ ತನಗೆ ಪೂರಕವಾಗಿ ಬಳಸಿಕೊಳ್ಳುತ್ತಿದೆ ಎಂದಷ್ಟೇ ಹೇಳಬೇಕು. ರಾಜಸ್ಥಾನದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆ ಬಿಜೆಪಿಯ 15 ಕೋಟಿ ರೂಪಾಯಿ ಆಮಿಷದಿಂದ ಸೃಷ್ಟಿಯಾಗಿರುವುದಲ್ಲ. ಕಾಂಗ್ರೆಸ್ ಪಕ್ಷ, ತನ್ನ ಅಳಿದುಳಿದ ಲಜ್ಜೆ, ಮಾನ, ಮರ್ಯಾದೆಗಳನ್ನು ಕಳೆದುಕೊಂಡಿರುವುದರ ಪರಿಣಾಮವಿದು. ಕಾಂಗ್ರೆಸ್‌ನೊಳಗೆ ಬಂಡೆದ್ದಿರುವ ಸಚಿನ್ ಪೈಲಟ್ ಆ ಪಕ್ಷಕ್ಕೆ ಪರ್ಯಾಯವಾಗಿ ಆರಿಸಿಕೊಂಡಿರುವುದು ಬಿಜೆಪಿಯನ್ನು. ಕಾಂಗ್ರೆಸ್‌ಗಿಂತಲೂ ಭ್ರಷ್ಟ ಪಕ್ಷವಾಗಿರುವ, ಜೊತೆಗೆ ಕೋಮುವಾದಿಯಾಗಿರುವ ಬಿಜೆಪಿಯ ಸಖ್ಯದ ಕುರಿತಂತೆ ಯಾವ ಕೀಳರಿಮೆಯೂ ಸಚಿನ್ ಪೈಲಟ್ ಬಳಿ ಇಲ್ಲ ಎಂದಾದರೆ, ಅವರು ಕಾಂಗ್ರೆಸ್‌ನ್ನು ತೊರೆಯುವುದೇ ಉತ್ತಮ.

‘ಕಾಂಗ್ರೆಸ್ ತನ್ನನ್ನು ಸರಿಯಾಗಿ ನಡೆಸಿಕೊಂಡಿಲ್ಲ’ ಎಂದು ಹೇಳುವ ಪೈಲಟ್‌ಗೆ ಬಿಜೆಪಿಯಲ್ಲಿ ತನ್ನನ್ನು ಸರಿಯಾಗಿ ನಡೆಸಿಕೊಳ್ಳಲಿದ್ದಾರೆ ಎನ್ನುವ ಭರವಸೆ ಇದೆಯೇ? ತನ್ನ ತಂದೆಯ ಹೆಸರನ್ನು ಬಳಸಿ, ಅತಿ ಸಣ್ಣ ವಯಸ್ಸಿನಲ್ಲಿ ಮುಖ್ಯಮಂತ್ರಿವರೆಗಿನ ದೊಡ್ಡ ಹುದ್ದೆಗಳನ್ನು ನಿರ್ವಹಿಸಿರುವ ಪೈಲಟ್, ಏಕಾಏಕಿ ಬಿಜೆಪಿಯೇ ತನ್ನ ಘನತೆಗೆ ತಕ್ಕ ಪಕ್ಷ ಎಂದು ಭಾವಿಸಿದ್ದಾರೆ ಎಂದರೆ ಅವರ ಆಲೋಚನೆ, ಚಿಂತನೆಯಲ್ಲೇ ದೋಷವಿದೆ. ಬಹುಶಃ ಪೈಲಟ್‌ಗೆ ಸೂಕ್ತ ಸ್ಥಾನಮಾನ ದೊರಕಿದ್ದರೆ ರಾಜಸ್ಥಾನದ ಕಾಂಗ್ರೆಸ್ ಸರಕಾರ ನೆಮ್ಮದಿಯಾಗಿರುತ್ತಿತ್ತು ಎಂದೂ ತಿಳಿಯುವಂತಿಲ್ಲ. ಯಾಕೆಂದರೆ, ಕಾಂಗ್ರೆಸ್‌ನಲ್ಲಿ ಸರ್ವವನ್ನು ಅನುಭವಿಸಿ, ತನ್ನ ವೃದ್ಧಾಪ್ಯದಲ್ಲಿ ‘ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂದು ಬಿಜೆಪಿಗೆ ಹಾರಿದ ಎಸ್. ಎಂ. ಕೃಷ್ಣ ನಮ್ಮ ಮುಂದೆ ಉದಾಹರಣೆಯಾಗಿ ಬದುಕಿದ್ದಾರೆ.

ಒಂದು ವೇಳೆ ಪೈಲಟ್ ಮುಖ್ಯಮಂತ್ರಿಯಾಗಿದ್ದಿದ್ದರೆ, ಇಷ್ಟು ಹೊತ್ತಿಗೆ ಗೆಹ್ಲೋಟ್ ಬಿಜೆಪಿಯ ಅಡುಗೆ ಮನೆ ಸೇರಿ ಬಿಡುತ್ತಿದ್ದರು. ಮತದಾರರೇ ‘ಸರಕಾರ ನಡೆಸಿ’ ಎಂದು ಕಾಂಗ್ರೆಸ್‌ನ್ನು ಆಯ್ಕೆ ಮಾಡಿದರೂ, ಕಾಂಗ್ರೆಸ್ ಶಾಸಕರು ತಮ್ಮನ್ನು ತಾವು ಮಾರಿಕೊಂಡು ಬಿಜೆಪಿಯನ್ನು ಅಧಿಕಾರಕ್ಕೇರಿಸುತ್ತಾರೆ ಎಂದ ಮೇಲೆ, ಜನರು ಕಾಂಗ್ರೆಸ್‌ಗೆ ಮತ ನೀಡುವ ಬದಲು ನೇರವಾಗಿ ಬಿಜೆಪಿಗೇ ಮತ ನೀಡುವುದು ಉತ್ತಮವಲ್ಲವೇ? ಅಥವಾ ಕಾಂಗ್ರೆಸ್‌ಗೆ ಪರ್ಯಾಯವಾಗಿ ಪಕ್ಷವೊಂದನ್ನು ಹುಡುಕುವುದು ಮತದಾರರಿಗೆ ಅನಿವಾರ್ಯ. ಚರ್ಚೆ ಈ ದಿಸೆಯಲ್ಲಿ ನಡೆಯಬೇಕಾಗಿದೆ. ಇಡೀ ದೇಶ ಆರ್ಥಿಕವಾಗಿ ತತ್ತರಿಸಿ ಕೂತಿರುವಾಗ, ಬಿಜೆಪಿ ಈಗಲೂ ಕೋಟಿ ಕೋಟಿ ಚೆಲ್ಲಿ ಶಾಸಕರನ್ನು ಕೊಳ್ಳುವ ಶಕ್ತಿಯನ್ನು ಉಳಿಸಿಕೊಂಡಿದೆಯೆಂದರೆ ಬಿಜೆಪಿ ಈ ದೇಶವನ್ನು ಕಳೆದ ಆರು ವರ್ಷಗಳಲ್ಲಿ ಅದು ಹೇಗೆ ಲೂಟಿ ಹೊಡೆದಿರಬಹುದು ಎನ್ನುವುದನ್ನು ಹೇಳುತ್ತದೆ. ಕೊರೋನ ಮತ್ತು ಲಾಕ್‌ಡೌನ್‌ನಿಂದಾಗಿ ಬೀದಿ ಪಾಲಾಗಿರುವ ಜನಸಾಮಾನ್ಯರ ಕುರಿತು ಎಳ್ಳಷ್ಟು ಕಾಳಜಿಯನ್ನೂ ವ್ಯಕ್ತಪಡಿಸದೆ ರಾಜ್ಯ ಸರಕಾರವೊಂದನ್ನು ಹಣದ ಮೂಲಕ ಉರುಳಿಸಿ ಅಧಿಕಾರ ಹಿಡಿಯುವ ಬಗ್ಗೆ ಕಾರ್ಯಯೋಜನೆ ಹಾಕಿ ಕೂತಿರುವ ಕೇಂದ್ರ ಸರಕಾರ ಈ ದೇಶವನ್ನು ಕೊರೋನದಿಂದ ಕಾಪಾಡುತ್ತದೆ ಎಂದು ನಂಬುವುದು ನಮ್ಮ ಮೂರ್ಖತನವಷ್ಟೇ. ನಮ್ಮ ನಾಯಕರ ಸಮಯ ಸಾಧಕ ರಾಜಕೀಯವೆ ಇಂದು ಕೊರೋನಾವನ್ನು ನಮ್ಮ ಪಾಲಿಗೆ ಅತ್ಯಂತ ಅಪಾಯಕಾರಿ ರೋಗವನ್ನಾಗಿಸಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)