varthabharthi


ರಾಷ್ಟ್ರೀಯ

ಭೀಮಾ ಕೋರೆಗಾಂವ್ ಪ್ರಕರಣ: ಜೈಲಿನಲ್ಲಿದ್ದ ವರವರ ರಾವ್ ಆಸ್ಪತ್ರೆಗೆ ದಾಖಲು

ವಾರ್ತಾ ಭಾರತಿ : 14 Jul, 2020

ಮುಂಬೈ: ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದಲ್ಲಿ ಬಂಧಿತರಾಗಿರುವ ಹಿರಿಯ ಕವಿ ವರವರ ರಾವ್ ಅವರಿಗೆ ತಲೆಸುತ್ತುವಿಕೆ ಸಮಸ್ಯೆಯ ಹಿನ್ನೆಲೆಯಲ್ಲಿ ಜೆಜೆ ಆಸ್ಪತ್ರೆಯ ನರರೋಗ ವಿಭಾಗಕ್ಕೆ ದಾಖಲಿಸಲಾಗಿದೆ.

ಅಲ್ಲಿ ಅವರನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗುತ್ತಿದೆ. ಎಂಬತ್ತೊಂದು ವರ್ಷದ ವರವರ ರಾವ್ ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ  ಸಂಜಯ್ ಸುರಸೆ ಹೇಳಿದ್ದಾರೆ.

ವರವರ ರಾವ್ ಅವರನ್ನು ತಲೋಜಾ ಸೆಂಟ್ರಲ್ ಜೈಲ್‍ನಿಂದ ಆಸ್ಪತ್ರೆಗೆ ದಾಖಲಿಸಿರುವ ಕುರಿತಂತೆ ಕುಟುಂಬಕ್ಕೆ ಅಲ್ಲಿನ ಅಧಿಕಾರಿಗಳು ಮಾಹಿತಿ ನೀಡಿಲ್ಲ. ನಾವು ಜುಲೈ 13ರಂದು ಬೆಳಿಗ್ಗೆ ಕರೆ ಮಾಡಿದಾಗ ಜೈಲಿನ ಅಧೀಕ್ಷಕರು ಕರೆ ಸ್ವೀಕರಿಸಿ ರಾವ್ ಅವರು ಚೆನ್ನಾಗಿದ್ದಾರೆಂದು ಹೇಳಿದ್ದರು ಎಂದು ವರವರ ರಾವ್ ಅವರ ಪುತ್ರಿ ಪಾವನಾ ಹೇಳಿದ್ದಾರೆ.

ಜುಲೈ 11ರಂದು ವರವರ ರಾವ್ ತಮ್ಮ ಕುಟುಂಬದ ಜತೆ ಮಾತನಾಡಿದ ಸಂದರ್ಭ ಸ್ವಲ್ಪ ಅಸ್ಪಷ್ಟವಾಗಿ ಮಾತನಾಡಿದ್ದರು, ದಶಕಗಳ ಹಿಂದೆ ನಡೆದ ತಮ್ಮ ಹೆತ್ತವರ ಅಂತ್ಯಕ್ರಿಯೆಯ ಬಗ್ಗೆ ಮಾತನಾಡಿದ್ದರು ಎಂದು ತಿಳಿದು ಬಂದಿದೆ. ಜೈಲಿನಲ್ಲಿ ರಾವ್ ಅವರನ್ನು ನೋಡಿಕೊಳ್ಳುವ ಹಾಗೂ ಭೀಮಾ ಕೋರೆಗಾಂವ್ ಪ್ರಕರಣದ ಇನ್ನೊಬ್ಬ ಆರೋಪಿ, 61 ವರ್ಷದ ವೆರ್ನೊನ್ ಗೊನ್ಸಾಲ್ವಿಸ್ ಅವರು ರಾವ್ ಕುಟುಂಬಕ್ಕೆ ತಿಳಿಸಿದಂತೆ ರಾವ್ ಅವರಿಗೆ ಸ್ವತಂತ್ರವಾಗಿ ಶೌಚಾಲಯಕ್ಕೆ ಹೋಗಲು, ನಡೆಯಲು ಆಗುತ್ತಿಲ್ಲ ಹಾಗೂ ತಾವಾಗಿಯೇ ಹಲ್ಲುಜ್ಜಲೂ ಆಗುತ್ತಿಲ್ಲ.

ವೈದ್ಯಕೀಯ ಕಾರಣಗಳಿಗಾಗಿ ಮಧ್ಯಂತರ ಜಾಮೀನು ಕೋರಿ ರಾವ್ ಅವರು ಸಲ್ಲಿಸಿದ್ದ  ಅಪೀಲನ್ನು ತಿರಸ್ಕರಿಸಿರುವುದರ ವಿರುದ್ಧ ಸಲ್ಲಿಸಲಾದ ಮೇಲ್ಮನವಿಯನ್ನು  ತಕ್ಷಣ ಕೈಗೆತ್ತಿಕೊಳ್ಳುವಂತೆ  ಅವರ ವಕೀಲರು ಬಾಂಬೆ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)