varthabharthi


ಆರೋಗ್ಯ

ಕೊರೋನ, ಇಮ್ಯೂನಿಟಿ ಮತ್ತು ಹಾರ್ಮೋನುಗಳು

ವಾರ್ತಾ ಭಾರತಿ : 18 Jul, 2020
ಪ್ರೊ. ಎಂ. ನಾರಾಯಣ ಸ್ವಾಮಿ, ತ್ಯಾವನಹಳ್ಳಿ

ಕೊರೋನ ಬಂದಾಗಿನಿಂದ ರೊಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಕರೆಕೊಡಲಾಗುತ್ತಿದೆ. ಶರೀರದ ಇಮ್ಯೂನಿಟಿ ಅಥವಾ ಪ್ರತಿರಕ್ಷಣೆ ಕಾರ್ಯವು ಸದೃಢವಾಗಿರಬೇಕು. ಸಸಾರಜನಕ, ಕೊಬ್ಬು, ಶರ್ಕರಪಿಷ್ಠ, ಲವಣ, ಜೀವಸತ್ವಯುಕ್ತ ಪೌಷ್ಟಿಕ ಆಹಾರವು ಇಮ್ಯೂನಿಟಿಯನ್ನು ಹೆಚ್ಚು ಮಾಡುತ್ತದೆ. ಬಿಳಿರಕ್ತ ಕಣಗಳಲ್ಲೊಂದಾದ ಬಿ - ಲಿಂಫೋಸೈಟ್‌ಗಳು ಇಮ್ಯೂನೋಗ್ಲಾಬ್ಯುಲಿನ್ (ಆ್ಯಂಟಿಬಾಡಿ, ಪ್ರತಿಕಾಯ) ಎಂಬ ಪ್ರತಿರೋಧಕ ಬುಲೆಟ್‌ಗಳನ್ನು ತಯಾರಿಸುತ್ತವೆ. ಆ ಬುಲೆಟ್‌ಗಳು ರಕ್ತದಲ್ಲಿ ಸಂಚರಿಸುತ್ತಾ ಕೊರೋನ (ಕೋವಿಡ್ -19) ವೈರಾಣುಗಳ ಸೋಂಕನ್ನು ತಡೆಯುತ್ತವೆ. ಶರೀರದಲ್ಲಿ ಉತ್ಪತ್ತಿಯಾಗುವ ಹಲವು ಹಾರ್ಮೋನು (ಚೋಧಕಸ್ರಾವ)ಗಳು ಇಮ್ಯೂನಿಟಿಯನ್ನು ವರ್ದಿಸುವಲ್ಲಿ ಸಹಕರಿಸುತ್ತವೆ. ಕೆಲವು ದಮನ ಮಾಡುತ್ತವೆ. ಅವುಗಳ ಸ್ರವಿಸುವಿಕೆಯು ವ್ಯಕ್ತಿಯಿಂದ ವ್ಯಕ್ತಿಗೆ ವ್ಯತ್ಯಾಸವಾಗುತ್ತದೆ. ಹಾರ್ಮೋನುಗಳ ಉತ್ಪಾದನೆಗೆ ಪೌಷ್ಟಿಕ ಆಹಾರದ ಸೇವನೆಯು ಅತ್ಯಗತ್ಯ.

ಇಮ್ಯೂನಿಟಿ ವರ್ಧಕ ಹಾರ್ಮೋನುಗಳು
ಪ್ರೊಲಾಕ್ಟಿನ್: ಪಿಟ್ಯೂಟರಿ ಗ್ರಂಥಿಯಲ್ಲಿ ತಯಾರಾಗುವ ಪ್ರೊಲಾಕ್ಟಿನ್‌ಇಮ್ಯೂನಿಟಿಯನ್ನು ಅಭಿವೃದ್ಧಿಪಡಿಸುತ್ತದೆ. ಬಿ ಲಿಂಫೋಸೈಟ್‌ಗಳು (ಬಿ ಕೋಶಗಳು), ಮ್ಯಾಕ್ರೋಫೇಜ್, ಡೆಂಡ್ರೈಟಿಕ್ ಕೋಶಗಳ ಕಾರ್ಯಕ್ಷಮತೆಯನ್ನು ಹೆಚ್ಚಿಸುವ ಮೂಲಕ ಇಮ್ಯೂನಿಟಿಯನ್ನು ಕಾಪಾಡಿಕೊಳ್ಳುತ್ತದೆ. ಬಿ ಕೋಶಗಳು ಕೊರೋನ ವೈರಸ್‌ನ ಆ್ಯಂಟಿಜೆನ್‌ಅನ್ನು ಎದುರಿಸಲು ಪ್ರತಿಕಾಯಗಳನ್ನು ಸ್ರವಿಸುತ್ತದೆ.

ಬೆಳವಣಿಗೆಯ ಹಾರ್ಮೋನು:  
ಪಿಟ್ಯೂಟರಿ ಗ್ರಂಥಿಯ ಈ ಹಾರ್ಮೋನು ಟಿ ಕೋಶ ಮತ್ತು ಬಿ ಕೋಶಗಳ ಉತ್ಪಾದನೆಯಲ್ಲಿ ತೊಡಗುತ್ತದೆ. ಪ್ರತಿಕಾಯಗಳು ತಯಾರಾಗುವಂತೆ ಮಾಡುತ್ತದೆ. ಥೈಮಸ್‌ಗ್ರಂಥಿಯ ಕಾರ್ಯನಿರ್ವಹಣೆ ಹೆಚ್ಚುತ್ತದೆ. ರೋಗನಿರೋಧಕ ಶಕ್ತಿಯಲ್ಲಿ ಸೈಟೋಕೈನ್‌ಗಳ ಪ್ರತಿಕ್ರಿಯೆಯನ್ನು ಹೆಚ್ಚಿಸುತ್ತದೆ.

ಥೈರಾಯ್ಡಿ ಸ್ಟಿಮುಲೇಟಿಂಗ್ ಹಾರ್ಮೋನು: 
ಇದು ಥೈರಾಯ್ಡ ಗ್ರಂಥಿ ಯನ್ನು ಪ್ರಚೋದಿಸುತ್ತದೆ. ಇಮ್ಯೂನ್ ಕೋಶಗಳು ಸೋಂಕಿನ ಆ್ಯಂಟಿಜೆನ್‌ಗೆ ಒಳಗಾದಾಗ ಈ ಹಾರ್ಮೋನು ಇಮ್ಯೂನ್ ಕೋಶಗಳಿಂದಲೂ ತಯಾರಾಗಿ ಇಮ್ಯೂನಿಟಿಯನ್ನು ಹೆಚ್ಚು ಮಾಡುತ್ತದೆ ಎನ್ನುವುದು ಇತ್ತೀಚಿನ ಕೆಲ ದಶಕಗಳ ಸಂಶೋಧನೆಯಿಂದ ತಿಳಿದು ಬಂದಿದೆ.
ಅಡ್ರಿನೋಕಾರ್ಟಿಕೋಟ್ರೋಫಿಕ್ ಹಾರ್ಮೋನು: ದೇಹದ ಸಕ್ಕರೆಯ ಚಯಾಪಚಯಕ್ರಿಯೆಯಲ್ಲಿ ಪಾಲ್ಗೊಂಡು ಇಮ್ಯೂನಿಟಿಯನ್ನು ನಿಗ್ರಹಿಸುತ್ತದೆ. ಒತ್ತಡದ ಸಂದರ್ಭದಲ್ಲಿ ಇದರ ಸ್ರವಿಸುವಿಕೆ ಅತಿಹೆಚ್ಚು.ಒತ್ತಡಕ್ಕೆ ಒಳಗಾಗದಿರುವುದು ಲೇಸು.

ವಿಟಮಿನ್ ಡಿ3: ಬೆಳಗಿನ ಎಳೆಬಿಸಿಲಿಗೆ ಮೈಯೊಡ್ಡಿದಾಗ ಮೂತ್ರಕೋಶದಲ್ಲಿ ವಿಟಮಿನ್ ಡಿ3 ತಯಾರಾಗುತ್ತದೆ. ಬಿಳಿರಕ್ತಕಣಗಳ ಮೇಲೆ ಪ್ರಭಾವ ಬೀರಿ ಅವುಗಳನ್ನು ಇನ್ನಷ್ಟು ಚುರುಕುಗೊಳಿಸುತ್ತದೆ.ಕೊರೋನ ತಡೆಯಲು ಬೆಳಗಿನ ಬಿಸಿಲಿಗೆ ಮೈಯೊಡ್ಡಲು ಸಲಹೆ ನೀಡಲಾಗಿದೆ.

ಆಕ್ಸಿಟೋಸಿನ್ ಮತ್ತು ವೇಸೋಪ್ರೆಸ್ಸಿನ್: 
ಮೆದುಳಿನ ಹೈಪೋಥಲಾಮಸ್‌ನಲ್ಲಿ ತಯಾರಾಗುವ ಈ ಎರಡು ಹಾರ್ಮೋನುಗಳು ಒಂದಿಲ್ಲೊಂದು ವಿಧದಲ್ಲಿ ಇಮ್ಯೂನಿಟಿಗೆ ಸಹಕಾರಿ. ಸಂತೋಷದ ಸಂದರ್ಭದಲ್ಲಿ ಆಕ್ಸಿಟೋಸಿನ್ ಸ್ರವಿಸುವಿಕೆ ಹೆಚ್ಚು. ಚಿಂತೆ ಬಿಟ್ಟು ಆನಂದದಿಂದ ಇದ್ದರೆ ಇಮ್ಯೂನಿಟಿ ವೃದ್ಧಿಸುತ್ತದೆ.

ಎಂಡಾರ್ಫಿನ್ ಮತ್ತು ಎನ್‌ಕೆಫಲಿನ್‌ಗಳು:  
ಮನಸ್ಸು ಉಲ್ಲಾಸದಿಂದಿದ್ದಾಗ ಮೆದುಳಿನಲ್ಲಿ ತಯಾರಾಗುತ್ತವೆ. ಲಿಂಫೋಸೈಟ್‌ಗಳ ಮೇಲೆ ತಮ್ಮ ಪ್ರಭಾವ ಬೀರಿ ಪ್ರತಿಕಾಯಗಳ ಉತ್ಪಾದನೆ ಮತ್ತು ಇನ್ನಷ್ಟು ಲಿಂಫೋಸೈಟ್‌ಗಳ ಉತ್ಪಾದನೆಯನ್ನು ನೆರವೇರಿಸುವಲ್ಲಿ ಕಾರ್ಯನಿರ್ವಹಿಸುತ್ತವೆ. ಮೆಲಟೋನಿನ್: ಇದು ಪೈನಿಯಲ್ ಗ್ರಂಥಿಯ ಹಾರ್ಮೋನು. ಬಿಳಿರಕ್ತಕಣ ಮತ್ತು ಇಂಟರ್‌ಲ್ಯೂಕಿನ್ಸ್ ಉತ್ಪಾದನೆಯಲ್ಲಿ ಸಹಕಾರಿ. ನಿದ್ದೆ ಮಾಡುವಾಗ ಹೆಚ್ಚು ಮೆಲಟೋನಿನ್ ತಯಾರಾಗುತ್ತದೆ. ಕೊರೋನ ಎದುರಿಸಲು ಏಳೆಂಟು ಗಂಟೆಗಳ ಕಾಲ ನಿದ್ದೆ ಮಾಡಿರಿ ಎಂಬ ಸಲಹೆಯನ್ನು ನೀಡಲಾಗಿದೆ.

ಥೈಮಸ್‌ಗ್ರಂಥಿಯ ಹಾರ್ಮೋನುಗಳು: ಎದೆಭಾಗದಲ್ಲಿ ಹೃದಯದಿಂದ ಕೊಂಚ ಮೇಲೆ ಇರುವ ಥೈಮಸ್‌ಗ್ರಂಥಿಯು ಇಮ್ಯುನಿಟಿಗೆ ಸಹಕಾರಿಯಾದ ಕೆಲ ಹಾರ್ಮೋನುಗಳನ್ನು ತಯಾರು ಮಾಡುತ್ತದೆ. ಈ ಗ್ರಂಥಿಯು ಹುಟ್ಟಿನಿಂದ ಪ್ರೌಢಾವಸ್ಥೆವರೆಗೆ ಬೆಳೆಯುತ್ತಾ ಹೋಗುತ್ತದೆ. ನಂತರ ಕುಗ್ಗುತ್ತಾ ಹೋಗಿ ಅರವತ್ತು ವರ್ಷಕ್ಕೆ ಅದರ ಕಾರ್ಯಕ್ಷಮತೆ ಕಡಿಮೆಯಾಗುತ್ತದೆ.ಆದ್ದರಿಂದಲೇ, ಐವತ್ತು-ಅರವತ್ತು ವರ್ಷವಾದವರಿಗೆ ರೋಗನಿರೋಧಕ ಶಕ್ತಿ ಕಮ್ಮಿಯಿರುವುದರಿಂದಲೇ ಕೊರೋನ ಸೋಂಕಿಗೆ ಒಳಗಾಗದಿರುವಂತೆ ಸೂಚಿಸಲಾಗಿದೆ.

ಕಟೆಕೋಲಮೈನ್ ಹಾರ್ಮೋನುಗಳು: 

ಇದೊಂದು ಗುಂಪು. ಡೋಪಮೈನ್, ಅಡ್ರಿನಾಲಿನ್, ನಾರ್‌ಅಡ್ರಿನಾಲಿನ್ ಹಾರ್ಮೋನುಗಳು ಈ ಗುಂಪಿಗೆ ಸೇರಿವೆ. ಲಿಂಫೋಸೈಟ್, ಸೈಟೋಕೈನ್ ಮತ್ತು ಆ್ಯಂಟಿಬಾಡಿಗಳ ಉತ್ಪಾದನೆಯಲ್ಲಿ ಇವು ತೊಡಗುತ್ತವೆ. ಹಾಗೆಯೇ ಈಸ್ಟ್ರೋಜೆನ್, ಹಿಸ್ಟಮಿನ್, ಲೆಪ್ಟಿನ್, ಇನ್ಸುಲಿನ್, ಸೆರಟೋನಿನ್, ಗೊನ್ಯಾಡೋಟ್ರೋಪಿನ್ ರಿಲೀಸಿಂಗ್ ಹಾರ್ಮೋನ್, ಲ್ಯುಟಿನೈಸಿಂಗ್ ಹಾರ್ಮೋನ್ ರಿಲೀಸಿಂಗ್ ಹಾರ್ಮೋನ್, ಹ್ಯೂಮನ್‌ಕೋರಿಯೋನಿಕ್ ಗೊನ್ಯಾಡೋಟ್ರೋಪಿನ್, ವೇಸೋಆಕ್ಟಿವ್‌ಇಂಟೆಸ್ಟೈನಲ್ ಪಾಲಿಪೆಪ್ಟೈಡ್, ರೆನಿನ್, ಏಂಜಿಯೋಟೆನ್ಸಿನ್ ಮುಂತಾದ ಹಾರ್ಮೋನುಗಳು ಸಹ ಇಮ್ಯೂನಿಟಿ ನಿರ್ವಹಣೆಯಲ್ಲಿ ಪಾಲ್ಗೊಳ್ಳುತ್ತವೆ.

ಇಮ್ಯೂನಿಟಿ ದಮನಕಾರಿ ಹಾರ್ಮೋನುಗಳು 

ಟೆಸ್ಟೊಸ್ಟಿರಾನ್ ಮತ್ತು ಪ್ರೊಜೆಸ್ಟಿರಾನ್: ಗಂಡಸರ ಲೈಂಗಿಕ ಹಾರ್ಮೋನಾದ ಟೆಸ್ಟೊಸ್ಟಿರಾನ್ ಹೆಚ್ಚಿನ ಪ್ರಮಾಣದಲ್ಲಿದ್ದರೆ ಇಮ್ಯೂನಿಟಿ ಕಡಿಮೆಯಾಗುತ್ತದೆ. ಇತ್ತೀಚೆಗೆ ಜಿಮ್‌ಗಳಲ್ಲಿ ಅಂಗಸಾಧನೆ ಮಾಡುವವರು ಇಂತಹ ಆಂಡ್ರೋಜನ್‌ಗಳನ್ನು ತೆಗೆದುಕೊಳ್ಳುತ್ತಾರೆ ಎಂಬ ಸುದ್ದಿಗಳಿವೆ. ಅದು ಅಪಾಯಕಾರಿ. ಅಂಡಾಶಯ ಮೇಲಿನ ಕಾರ್ಪಸ್ ಲೂಟಿಯಮ್‌ನಿಂದ ಸ್ರವಿಸುವ ಅಧಿಕ ಪ್ರಮಾಣದ ಪ್ರೊಜೆಸ್ಟಿರಾನ್ ಇಮ್ಯೂನಿಟಿಯನ್ನು ಕಡಿಮೆ ಮಾಡುತ್ತದೆ.

ಕಾರ್ಟಿಸಾಲ್: ಅಡ್ರಿನಲ್ ಕಾರ್ಟೆಕ್ಸ್‌ನಿಂದ ತಯಾರಾಗುವ ಕಾರ್ಟಿಸಾಲ್ ‌ಒತ್ತಡದ ಹಾರ್ಮೋನು. ದೀರ್ಘಕಾಲದವರೆಗೆ ಜಾಸ್ತಿ ಪ್ರಮಾಣದಲ್ಲಿದ್ದರೆ ಇಮ್ಯೂನಿಟಿಯನ್ನು ಕಡಿಮೆ ಮಾಡುತ್ತದೆ.

ಉಪಸಂಹಾರ
ಹತ್ತು ಹಲವು ಹಾರ್ಮೋನುಗಳು ಇಮ್ಯೂನಿಟಿಯಲ್ಲಿ ತೊಡಗುತ್ತವೆ. ಹಲವಾರು ಶರೀರಕ್ರಿಯೆಗಳಿಗೆ ಹಾರ್ಮೋನುಗಳು ಬೇಕು. ಹಾರ್ಮೋನುಗಳು ಔಷಧಗಳಾಗಿ ಲಭ್ಯವಾಗುತ್ತಿವೆ. ಆದರೆ, ಅವನ್ನು ಅತಿಅಗತ್ಯ ಸಂದರ್ಭಗಳಲ್ಲಿ ಮಾತ್ರ ವೈದ್ಯರ ಸಲಹೆಯ ಮೇರೆಗೆ ಜೀವರಕ್ಷಕ ಔಷಧಗಳನ್ನಾಗಿ ತೆಗೆದುಕೊಳ್ಳಬೇಕು. ಬಾಹ್ಯವಾಗಿ ತೆಗೆದುಕೊಂಡ ಹಾರ್ಮೋನುಗಳು ಬಹುತೇಕ ಸಂದರ್ಭಗಳಲ್ಲಿ ಅಡ್ಡಪರಿಣಾಮಗಳನ್ನು ಬೀರಬಹುದಾಗಿರುತ್ತವೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)