varthabharthi


ನಿಮ್ಮ ಅಂಕಣ

ಪಾತಕಿ ವಿಕಾಸ್ ದುಬೆ ಹತ್ಯೆಯೂ.. ಬ್ರಾಹ್ಮಣ ಮತ್ತು ಠಾಕೂರ್ ಸಮುದಾಯಗಳ ಸಂಘರ್ಷವೂ...!

ವಾರ್ತಾ ಭಾರತಿ : 29 Jul, 2020
ಡಾ. ಡಿ. ಸಿ. ನಂಜುಂಡ

ನಿಜವಾಗಿಯೂ ನಮ್ಮ ದೇಶವಾಸಿಗಳಿಗೆ ಏನಾಗಿದೆ ಗೊತ್ತಾಗುತ್ತಿಲ್ಲ. ಜಾತಿ ವ್ಯವಸ್ಥೆ ಎನ್ನುವುದು ಈ ದೇಶದ ಮಣ್ಣಿನಲ್ಲಿ ಬೆರೆತು ಹೋಗಿದೆ ಎನಿಸುತ್ತದೆ. ಇನ್ನು ಸಾವಿರಾರು ವರ್ಷ ಕಳೆದರೂ ಈ ಜಾತಿ ವ್ಯವಸ್ಥೆ ಈ ದೇಶವನ್ನು ಬಿಟ್ಟು ಹೋಗುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ದೇಶದ ಎಲ್ಲಾ ಕ್ಷೇತ್ರಗಳಲ್ಲೂ ಕಾಣಿಸಿಕೊಂಡ ಜಾತಿ ವ್ಯವಸ್ಥೆ ಇತ್ತೀಚೆಗೆ 8 ಜನ ಪೊಲೀಸರನ್ನು ಕೊಂದು ಹಾಕಿದ ಉತ್ತರ ಪ್ರದೇಶದ ವಿಕಾಸ್ ದುಬೆ ಎನ್‌ಕೌಂಟರ್ ವಿಚಾರದಲ್ಲಿ ಸಹ ತಳುಕು ಹಾಕಿಕೊಂಡಿದೆ. ಈ ಪಾತಕಿಯ ಎನ್‌ಕೌಂಟರ್ ವಿರುದ್ಧ ಹಲವಾರು ಅನುಮಾನಗಳಿದ್ದರೂ, ಆತ ಸತ್ತ ನಂತರ ಉತ್ತರ ಪ್ರದೇಶದಲ್ಲಿ ನಡೆಯುತ್ತಿರುವ ಎರಡು ಮೇಲ್ವರ್ಗದ ಜಾತಿಗಳ ಮತ್ತು ಹಿತಾಸಕ್ತಿಗಳ ಸಂಘರ್ಷ ಈ ನಾಗರಿಕ ಸಮಾಜವನ್ನು ತಲೆತಗ್ಗಿಸುವಂತೆ ಮಾಡಿದೆ.


ತನ್ನನ್ನು ಹಿಡಿಯಲು ಬಂದ ಪೊಲೀಸರನ್ನು ಕೊಂದು ಹಾಕಿದ ಉತ್ತರ ಪ್ರದೇಶದ ಪಾತಕಿ ವಿಕಾಸ್ ದುಬೆಯನ್ನು ಪೊಲೀಸರು ಎನ್‌ಕೌಂಟರ್ ಮಾಡಿದ ನಂತರ ಉತ್ತರ ಪ್ರದೇಶದಲ್ಲಿ ಎರಡು ದೊಡ್ಡ ಜಾತಿಗಳ ನಡುವೆ ಸಂಘರ್ಷ ಎಗ್ಗಿಲ್ಲದೆ ನಡೆಯುತ್ತಿದೆ. ದುಬೆಯ ಎನ್‌ಕೌಂಟರ್‌ನ್ನು ಅಲ್ಲಿನ ಬ್ರಾಹ್ಮಣ ವರ್ಗ ತಮ್ಮ ಜಾತಿಯ ಮೇಲೆ ಆದ ಅತ್ಯಾಚಾರವೆಂದು ಬಿಂಬಿಸುತ್ತಿದೆ! (ವಿಕಾಸ್ ದುಬೆ ಬ್ರಾಹ್ಮಣ ಜಾತಿಯಂತೆ) ಉತ್ತರ ಪ್ರದೇಶದಲ್ಲಿ ಬ್ರಾಹ್ಮಣ ವರ್ಗ ಇದನ್ನು ಪ್ರತಿಷ್ಠೆಯ ವಿಚಾರವಾಗಿ ಪರಿಗಣಿಸಿ ಬ್ರಾಹ್ಮಣ ಸಮುದಾಯವನ್ನು ಸರಕಾರದ ವಿರುದ್ಧ ಎತ್ತಿಕಟ್ಟುವ ಕೆಲಸ ನಡೆಯುತ್ತಿದೆ ಎಂದು ಇತ್ತೀಚೆಗೆ ಕೆಲವು ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ. ದುಬೆ ಸಾವು, ಸಂಪೂರ್ಣ ಬ್ರಾಹ್ಮಣ ವರ್ಗಕ್ಕೆ ಮಾಡಿದ ಅನ್ಯಾಯವೆಂದೂ, ದುಬೆ ಕೇವಲ ಬ್ರಾಹ್ಮಣನಲ್ಲ ಆತ ನಿಜವಾದ ಹುಲಿ ಎಂದೂ ಆತನ ಎನ್‌ಕೌಂಟರ್ ಕುರಿತು ಯಾರಾದರೂ ಚಲನಚಿತ್ರ ಮಾಡಿದರೆ ಅಂತಹ ಚಿತ್ರಮಂದಿರಗಳನ್ನು ಸುಟ್ಟು ಹಾಕುವುದಾಗಿ ಬೆದರಿಕೆ ಸಂದೇಶಗಳು ವ್ಯಾಟ್ಸ್ ಆ್ಯಪ್‌ಗಳಲ್ಲಿ, ಟ್ವಿಟರ್‌ಗಳಲ್ಲಿ, ಫೇಸ್‌ಬುಕ್‌ಗಳಲ್ಲಿ ಅವಿರತವಾಗಿ ಬರುತ್ತಿವೆೆ!. ಮುಖ್ಯಮಂತ್ರಿ ಆದಿತ್ಯನಾಥ್ ಬ್ರಾಹ್ಮಣ ಸಮುದಾಯವನಕಡೆಗಣಿಸುತ್ತಿದ್ದಾರೆ ಎಂದು ಅನೇಕ ಬ್ರಾಹ್ಮಣರು ಆರೋಪಿಸುತ್ತಿದ್ದಾರೆ. ಅವರು ಬ್ರಾಹ್ಮಣರು ಕೊಲ್ಲಲ್ಪಟ್ಟ ನಿದರ್ಶನಗಳನ್ನು ಪಟ್ಟಿ ಮಾಡುತ್ತಿದ್ದಾರೆ ಮತ್ತು ಬ್ರಾಹ್ಮಣ ಸಮುದಾಯದ ಅಪರಾಧಿಗಳನ್ನು ಹೊಗಳುತ್ತಿದ್ದಾರೆ!.

ವಿಕಾಸ್ ದುಬೆ ಅವರಂತಹವರನ್ನು ‘ಬ್ರಾಹ್ಮಣ ಬಾಹುಬಾಲಿಗಳು’ ಎಂದು ಕರೆಯುತ್ತಾರೆ. ಇದು ಎಲ್ಲಿಗೆ ಬಂದು ತಲುಪಿದೆ ಎಂದರೆ ಸಾಮಾಜಿಕ ಮಾಧ್ಯಮಗಳಲ್ಲಿ ವಿಕಾಸ್ ದುಬೆಯನ್ನು ಪರಶುರಾಮನಿಗೆ ಹೋಲಿಸಲಾಗುತ್ತಿದೆ. ಅಂದು ಪರಶುರಾಮ ಭೂಮಿಯನ್ನು 21 ಬಾರಿ ಸುತ್ತಿ ಎಲ್ಲಾ ಕ್ಷತ್ರಿಯರನ್ನು ಕೊಂದು ಹಾಕಿದ ಹಾಗೆ ಪೊಲೀಸರ ಸಾವನ್ನು ಸಂಭ್ರಮಿಸಿ ಮಾನವೀಯತೆಗೆ ಪ್ರಶ್ನೆ ಹಾಕುತ್ತಿದ್ದಾರೆ. ಇಲ್ಲಿ ಜಾತಿ ಪ್ರೇಮ ಎಲ್ಲಿಗೆ ಬಂದಿದೆ ಎಂದರೆ ರಾಜ್ಯದ ಪ್ರತಿಯೊಬ್ಬ ಬ್ರಾಹ್ಮಣ ಸಹ ದುಬೆಯಂತೆ ಗನ್ ಹಿಡಿಯಬೇಕು ಎಂದು ಕರೆ ನೀಡಲಾಗುತ್ತಿದೆ. ಈ ದೇಶದ ವಿದ್ಯಾವಂತ ಮಂದಿ ಎತ್ತ ಸಾಗುತ್ತಿದ್ದಾರೆ? ನಿಜ ಹೇಳಬೇಕಾದರೆ ಉತ್ತರ ಪ್ರದೇಶದ ಇತಿಹಾಸವನ್ನು ನಾವು ಗಮನಿಸುವುದಾದರೆ ಜಾತಿಸಂಘರ್ಷಗಳಿಂದಲೇ ಈ ರಾಜ್ಯವು ಹುಟ್ಟಿದ್ದು ಎಂದು ಹೇಳಬಹುದು. ಅಲ್ಲಿ ನಡೆಯುತ್ತಿರುವ ಜಾತಿ ಸಂಘರ್ಷಗಳಿಗೆ ಸರಿ ಸುಮಾರು 400 ವರ್ಷಗಳ ಇತಿಹಾಸವಿದೆ. ದೇಶದಲ್ಲಿ ಮೊದಲ ದಲಿತ ಸಂಘರ್ಷ ಚಳವಳಿ ಹುಟ್ಟಿದ್ದೇ ಈ ರಾಜ್ಯದಲ್ಲಿ. ಕೆಲವೊಂದು ಜಾತಿ ಸಂಘಟನೆಗಳು ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಲು ಹುಟ್ಟಿಕೊಂಡರೆ, ಹೆಚ್ಚಿನ ಜಾತಿ ಸಂಘಟನೆಗಳು ತಮ್ಮ ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಪಾಡಲು ಹುಟ್ಟಿಕೊಂಡಿವೆ. ಈ ರೀತಿ ಹುಟ್ಟಿಕೊಂಡ ಜಾತಿ ಸಂಘಟನೆಗಳು ಕ್ರಮೇಣ ರಾಜಕೀಯ ಸಂಘಟನೆಗಳಾಗಿ ಬದಲಾವಣೆಗೊಂಡವು. ರಾಜಕೀಯ ನಾಯಕರು ಇಂತಹ ಜಾತಿ ಸಂಘಟನೆಗಳನ್ನು ತಮ್ಮ ವೈಯಕ್ತಿಕ ಹಿತಾಸಕ್ತಿಗಳನ್ನು ಕಾಪಾಡಲು ಬಳಸಿಕೊಂಡರು.

ಈ ನಡುವೆ ಕೆಲವು ಸಮಾಜಘಾತುಕ ಶಕ್ತಿಗಳು, ತಮ್ಮದೇ ಆದ ಅನೌಪಚಾರಿಕ ಸಂಘಟನೆಗಳನ್ನು ಕಟ್ಟಿಕೊಂಡು ರಾಜಕೀಯಕ್ಕೆ ಧುಮುಕಿದರು. ಅಲ್ಲಿಗೆ ರಾಜಕಾರಣಿಗಳು ಮತ್ತು ಸಮಾಜಘಾತುಕರ ನಡುವೆ ಒಂದು ರೀತಿಯ ಅವಿನಾಭಾವ ಸಂಬಂಧ ಮೂಡಲು ಆರಂಭವಾಯಿತು. ಇಂತಹ ಸಂಬಂಧಗಳ ಪಾಪದ ಫಲವೇ ವಿಕಾಸ್ ದುಬೆ. ಈ ಸಂಬಂಧ ಇಷ್ಟಕ್ಕೇ ಮುಗಿಯಲಿಲ್ಲ. ಇಂತಹ ಸಮಾಜಘಾತುಕ ಶಕ್ತಿಗಳನ್ನು ಪೊಲೀಸರು ತಮಗೆ ಬೇಕಾದ ರೀತಿಯಲ್ಲಿ ಬಳಸಿಕೊಳ್ಳಲು ಆರಂಭಿಸಿದರು. ಈ ರಾಜ್ಯದಲ್ಲಿ ಪೊಲೀಸರು ಮತ್ತು ಪಾತಕಿಗಳ ನಡುವೆ ಇರುವ ಸಂಬಂಧ ಬಹಳ ವರ್ಷಗಳಿಂದಲೇ ಚರ್ಚೆಯ ವಿಷಯವಾಗಿತ್ತು. ಹಾಗಾಗಿ ಈ ವಿಕಾಸ್ ದುಬೆ ಮೇಲೆ ಸರಿಸುಮಾರು 60 ಪ್ರಕರಣಗಳು ಇದ್ದರೂ ಯಾವ ಪ್ರಕರಣದಲ್ಲೂ ಆತನಿಗೆ ಇದುವರೆಗೂ ಶಿಕ್ಷೆಯಾಗಿಲ್ಲ ಮತ್ತು ಎಲ್ಲಾ ಪ್ರಕರಣದಲ್ಲಿ ಆತನಿಗೆ ಜಾಮೀನು ಸಿಕ್ಕಿದೆ ಎಂದರೆ ಅಲ್ಲಿಗೆ ನಾವು ಅರ್ಥ ಮಾಡಿಕೊಳ್ಳಬೇಕು, ಈ ರಾಜ್ಯದಲ್ಲಿ ಪೊಲೀಸರ ಮತ್ತು ಪಾತಕಿಗಳ ನಡುವಿನ ಸ್ನೇಹ ಬಾಂಧವ್ಯವನ್ನು. ಶೂಟೌಟ್‌ನಲ್ಲಿ ಪ್ರಾಣ ಕಳೆದುಕೊಂಡ ಪೊಲೀಸರಲ್ಲಿ ಬ್ರಾಹ್ಮಣರು ಸಹ ಇದ್ದರು, ವಿಕಾಸನಿಗೆ ಮಾಹಿತಿ ನೀಡುತ್ತಿದ್ದ ಹೆಚ್ಚಿನ ಪೊಲೀಸರು ಬ್ರಾಹ್ಮಣ ವರ್ಗದವರು ಮತ್ತು ಮೊನ್ನೆ ನಡೆದ ಎನ್‌ಕೌಂಟರ್ ಸ್ಥಳವು ಬ್ರಾಹ್ಮಣ ಪ್ರಭಾವ ಇರುವ ಸ್ಥಳ ಎನ್ನಲಾಗುತ್ತಿದೆ.

ಈ ಪಾತಕಿಗೆ ಎನ್‌ಕೌಂಟರ್ ಆಗುವವರೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ದುಬೆ ಯಾವ ರೀತಿ ಮಾಧ್ಯಮಗಳನ್ನು, ಪೊಲೀಸರನ್ನು ಮತ್ತು ಆದಿತ್ಯನಾಥ ಸರಕಾರವನ್ನು ಮೂರ್ಖರನ್ನಾಗಿ ಮಾಡಿದ ಎಂದು ಕಿಚಾಯಿಸುವ ಧ್ವನಿಯಲ್ಲಿ ಸಂದೇಶಗಳು ಹರಿದಾಡುತ್ತಿದ್ದವು. ಅಲ್ಲಿ ಮಾಧ್ಯಮ, ಪೊಲೀಸರು ಮತ್ತು ಸರಕಾರವನ್ನು ಒಂದು ರೀತಿಯಲ್ಲಿ ಜೋಕರ್ ಆಗಿ ಸಾಮಾಜಿಕ ಮಾಧ್ಯಮಗಳಲ್ಲಿ ಬಿಂಬಿಸಲಾಗಿತ್ತು. ಆದರೆ ಎನ್‌ಕೌಂಟರ್ ನಂತರ ಬ್ರಾಹ್ಮಣ ವರ್ಗದ ಭಾವನೆಗಳು ಬದಲಾಗಿವೆ. ಇವರ ಕೋಪವು ಇನ್ನೊಂದು ಅಲ್ಪಸಂಖ್ಯಾತರ ಕಡೆಗೆ ತಿರುಗಿದೆ ಎನ್ನುವ ಸುದ್ದಿಗಳು ಸ್ಥಳೀಯ ಪತ್ರಿಕೆಗಳಲ್ಲಿ ಹರಿದಾಡುತ್ತಿವೆ.

ಇದೀಗ ಅಲ್ಲಿನ ಬ್ರಾಹ್ಮಣ ಸಂಘಟನೆಗಳು ಆದಿತ್ಯನಾಥ್ ಸರಕಾರಕ್ಕೆ 2022ರ ರಾಜ್ಯ ಚುನಾವಣೆಯನ್ನು ನೆನಪು ಮಾಡಿ ಬ್ಲಾಕ್‌ಮೇಲ್ ಮಾಡುತ್ತಿವೆ ಎನ್ನಲಾಗಿದೆ. ಮುಂದಿನ ಚುನಾವಣೆಯಲ್ಲಿ ಈ ಸರಕಾರಕ್ಕೆ ತಕ್ಕ ಪಾಠ ಕಲಿಸುವುದಾಗಿ ಬೆದರಿಕೆ ಹಾಕುತ್ತಿವೆ. ಆದಿತ್ಯನಾಥ್ ಪ್ರಬಲ ಠಾಕೂರ್ ವರ್ಗಕ್ಕೆ ಸೇರಿದ್ದಾರೆ. ಉತ್ತರ ಪ್ರದೇಶದಲ್ಲಿ ಬಹಳ ವರ್ಷಗಳಿಂದ ಬ್ರಾಹ್ಮಣ ಮತ್ತು ಠಾಕೂರ್ ವರ್ಗದ ನಡುವೆ ಸಂಘರ್ಷಗಳು ನಡೆಯುತ್ತಿವೆ. ಠಾಕೂರ್ ವರ್ಗವು ಬ್ರಾಹ್ಮಣ ವರ್ಗವನ್ನು ಶೋಷಣೆ ಮಾಡುತ್ತಿದೆ ಎಂದು ಆರೋಪ ಮಾಡಲಾಗುತ್ತಿದೆ. ಇದು ಇತ್ತೀಚೆಗೆ ನಡೆದ ಅಲ್ಲಿನ ಗೋರಖ್‌ಪುರ ಲೋಕಸಭಾ ಚುನಾವಣೆಯಲ್ಲಿ ಸಹ ಕಂಡು ಬಂದಿತ್ತು. ಈ ಚುನಾವಣೆಯಲ್ಲಿ ಸ್ವತಃ ಮುಖ್ಯಮಂತ್ರಿ ತವರೂರಾದ ಗೋರಖ್‌ಪುರವನ್ನು ಬಿಜೆಪಿ ಕಳೆದುಕೊಂಡಿತ್ತು. ಇದಕ್ಕೆ ಮುಖ್ಯ ಕಾರಣ ಎರಡು ಈ ವರ್ಗಗಳ ಜಾತಿ ಸಂಘರ್ಷ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಠಾಕೂರ್ ಸಮುದಾಯದ ಆದಿತ್ಯನಾಥ್ ಮುಖ್ಯಮಂತ್ರಿಯಾದ ನಂತರ ಅವರು ಈ ಸಮುದಾಯಕ್ಕೆ ಹೆಚ್ಚಿನ ಮಹತ್ವ ನೀಡುತ್ತಿದ್ದಾರೆ ಮತ್ತು ಈ ಸಮುದಾಯದ ಮಠ-ಮಂದಿರಗಳಿಗೆ ಹೆಚ್ಚಿನ ದೇಣಿಗೆ ನೀಡುತ್ತಿದ್ದಾರೆ. ಹಾಗಾಗಿ ಇಂದು ಉತ್ತರ ಪ್ರದೇಶದ ಎಲ್ಲೆಡೆ ಠಾಕೂರ್ ವರ್ಗವೇ ಮೇಲುಗೈ ಸಾಧಿಸಿದೆ. ಆದಿತ್ಯನಾಥ್‌ರ ಪಕ್ಷದ ಚಿಹ್ನೆ ಕೇಸರಿಬಣ್ಣ ಮತ್ತು ಆದಿತ್ಯನಾಥ್ ಹೆಚ್ಚಾಗಿ ನಂಬುವ ಗೋರಖ್‌ಪುರದ ಮಠವನ್ನು ಸಹ ಈ ಸಂಘರ್ಷದಲ್ಲಿ ಎಳೆದು ತರಲಾಗಿದೆ. ಸರಕಾರದ ಆಯಕಟ್ಟಿನ ಸ್ಥಳಗಳಲ್ಲಿ ಮತ್ತು ಮಂತ್ರಿಮಂಡಲದಲ್ಲಿ ಹೆಚ್ಚಿನವರು ಠಾಕೂರ್ ಸಮುದಾಯಕ್ಕೆ ಸೇರಿದವರು ಮತ್ತು ಅವರಿಗೆ ಒಳ್ಳೆಯ ಖಾತೆಗಳನ್ನು ನೀಡಲಾಗಿದೆ. ಆದರೆ ರಾಜ್ಯದ ಮುಖ್ಯ ಕಾರ್ಯದರ್ಶಿ ಬ್ರಾಹ್ಮಣ ವರ್ಗದವರು!.

ಆದಿತ್ಯನಾಥ್‌ರ ಮೇಲೆ ಬ್ರಾಹ್ಮಣ ವರ್ಗದ ಕೋಪಕ್ಕೆ ಇನ್ನೂ ಒಂದು ಕಾರಣವಿದೆ. ಅದು ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ವಿಚಾರದಲ್ಲಿ ರಾಜ್ಯದ ಬೇರೆ ಪ್ರಬಲ ಜಾತಿ ಸಮುದಾಯಗಳ ಪ್ರಭಾವ. ಸಾಮಾನ್ಯವಾಗಿ ರಾಮನ ವಿಚಾರದಲ್ಲಿ ಇಲ್ಲಿ ಬ್ರಾಹ್ಮಣ ವರ್ಗದ ಹೋರಾಟ ಹೆಚ್ಚಾಗಿತ್ತು. ಆದರೆ ತೀರ್ಪು ಪರವಾಗಿ ಬಂದ ಮೇಲೆ ಸರಕಾರ ಬ್ರಾಹ್ಮಣ ವರ್ಗವನ್ನು ದೂರ ಇರಿಸಿದೆ ಎನ್ನುವ ಮನೋಭಾವನೆ ಇಲ್ಲಿ ಬ್ರಾಹ್ಮಣರಲ್ಲಿ ಮೂಡಲಾರಂಭಿಸಿದೆ ಎನ್ನಲಾಗಿದೆ. ರಾಜ್ಯದಲ್ಲಿ ಬ್ರಾಹ್ಮಣರನ್ನು ಗುರಿಯಾಗಿಸಿಕೊಂಡು ದೌರ್ಜನ್ಯ ನಡೆಸಲಾಗುತ್ತಿದೆ ಎಂಬ ಸಾಮಾನ್ಯ ಆರೋಪ ಇತ್ತೀಚೆಗೆ ಇಲ್ಲಿ ಕೇಳಿ ಬರುತ್ತಿದೆ.

ಉತ್ತರ ಪ್ರದೇಶದಲ್ಲಿ ಕಂಡು ಬರುತ್ತಿರುವ ಸಾವಿರಾರು ಜಾತಿ ಸಂಘಟನೆಗಳು ಆಂತರಿಕವಾಗಿ ತಮ್ಮದೇ ಸಮಸ್ಯೆಗಳನ್ನು ಹೊಂದಿವೆ. ಬಹಳಷ್ಟು ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಕ್ರಮೇಣ ಇಲ್ಲಿನ ಎಲ್ಲಾ ಮೇಲ್ವರ್ಗದ ಬೆಂಬಲವನ್ನು ಕಳೆದುಕೊಂಡಿದೆ. ಅದರಲ್ಲೂ ವಿಶೇಷವಾಗಿ ಬ್ರಾಹ್ಮಣರು ಈ ಪಕ್ಷದ ಪರವಾಗಿ ಇಲ್ಲ. ಸಾಮಾಜಿಕ ನ್ಯಾಯ ಪಡೆಯುವ ಹೋರಾಟದಲ್ಲಿ ಜಾತಿ ಸಂಘಟನೆಗಳು ಪ್ರಮುಖ ಪಾತ್ರವನ್ನು ವಹಿಸಿವೆ. ಮೊದಲು ಜಾತಿ ಸಂಘಟನೆಗಳು ಕೆಳವರ್ಗದ ಜಾತಿಗೆ ಮಾತ್ರ ಸೀಮಿತವಾಗಿದ್ದವು. ಆದರೆ ಜಾತಿ ಸಂಘಟನೆಗಳ ಪ್ರಭಾವ ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಹೆಚ್ಚಾಗುತ್ತಿದ್ದಂತೆ ಮೇಲು ವರ್ಗದ ಜನರು ತಮ್ಮದೇ ಆದ ಜಾತಿ ಸಂಘಟನೆಗಳನ್ನು ಕಟ್ಟಿಕೊಳ್ಳಲಾರಂಭಿಸಿದರು. ಈ ಹಿನ್ನೆಲೆಯಲ್ಲಿ ಇಲ್ಲಿ ಬ್ರಾಹ್ಮಣ, ರಜಪೂತ, ಠಾಕೂರ್ ಇತ್ಯಾದಿ ನೂರಾರು ಸಂಘಟನೆಗಳು ಈ ರಾಜ್ಯದಲ್ಲಿ ಹುಟ್ಟಿಕೊಂಡಿವೆ. ಬ್ರಾಹ್ಮಣರು ಪುರಾಣ ಕಥೆಗಳನ್ನು ಪಕ್ಕಕ್ಕಿಟ್ಟು ಪರಶುರಾಮ ಜಯಂತಿಯನ್ನು ದೊಡ್ಡದಾಗಿ ಆಚರಿಸಲು ಆರಂಭಿಸಿದ್ದಾರೆ. ಪುರಾಣದಲ್ಲಿ ಅಂತರ್ಗತವಾಗಿರುವ ಹಿಂಸಾಚಾರವನ್ನು ನಿರ್ಲಕ್ಷಿಸಲಾಗುತ್ತದೆ.

ಕಳೆದ ಕೆಲವು ವರ್ಷಗಳಲ್ಲಿ ಹೆಚ್ಚಾಗಿ ಮೇಲಿನ ಜಾತಿಯವರು ತಮ್ಮ ತಮ್ಮ ಜಾತಿಗಳ ಬಗ್ಗೆ ಹೆಮ್ಮೆಯನ್ನು ಬಹಿರಂಗವಾಗಿ ತೋರಿಸುತ್ತಿದ್ದಾರೆ. ತಮ್ಮ ಹೆಸರಿನ ಕೊನೆಯಲ್ಲಿ, ವಾಹನಗಳ ಮೇಲೆ ಸಹ ಬರೆಯುತ್ತಿದ್ದಾರೆ. ಜಾತೀಯತೆ ಮತ್ತು ಸ್ವಜನ ಪಕ್ಷಪಾತದ ವಿರುದ್ಧ ಹೋರಾಡಿದಷ್ಟು ಜಾತಿಯ ವಿಚಾರಗಳು ಮತ್ತೆ ಮತ್ತೆ ಹೊಸ ರೂಪವನ್ನು ಪಡೆದುಕೊಂಡು ನಮ್ಮ ಮುಂದೆ ಬಂದು ಸವಾಲು ಹಾಕುತ್ತವೆ. ಮೇಲ್ಜಾತಿಯ ಸಂಘಟನೆಗಳ ಪ್ರಭಾವ ಹೆಚ್ಚಾದಂತೆ ಸಾಮಾಜಿಕ ನ್ಯಾಯವು ಮೂಲೆ ಸೇರುವ ಭಯ ಇದೆ. ರಾಜಕೀಯವೇ ಹಾಗೆ, ಅದು ಸದಾ ಬಲಿಪಶುಗಳನ್ನು ಹುಡುಕುತ್ತಿರುತ್ತದೆ. ಈ ಮಧ್ಯೆ ಆರ್ಥಿಕ ಆಧಾರದ ಮೇಲೆ ಮೇಲ್ಜಾತಿಗಳಿಗೆ ಶೇ.10 ಮೀಸಲಾತಿಯನ್ನು ಕಾನೂನು ಬದ್ಧಗೊಳಿಸುವ ಮೂಲಕ ಬಿಜೆಪಿ ಮೀಸಲಾತಿಯ ತರ್ಕವನ್ನು ತನ್ನ ತಲೆಯ ಮೇಲೆ ತಿರುಗಿಸಿಕೊಂಡಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)