varthabharthi


ನಿಮ್ಮ ಅಂಕಣ

ಬನ್ನಿ ಹಬ್ಬ ಮಾಡೊಮೋ...

ವಾರ್ತಾ ಭಾರತಿ : 29 Jul, 2020
ಚಂದ್ರಾವತಿ ಬಡ್ಡಡ್ಕ

ದೂರದ ಚೀನಾದ ವುಹಾನ್‌ನ ಮಾರುಕಟ್ಟೆಯೊಂದರಲ್ಲಿ ಉದ್ಭವಿಸಿದ ವೈರಸ್ಸೊಂದು ಜಗತ್ತನ್ನೇ ಅಲುಗಾಡಿಸಿ ಬಿಟ್ಟಿತು. ಎಲ್ಲರೂ ಅಲುಗಾಡಿ ಹೋದೆವು. ಅನಿವಾರ್ಯವೋ ಎಂಬಂತೆ ಎಲ್ಲವೂ ಸ್ತಬ್ಧವಾಯಿತು. ದಿನಬೆಳಗಾಗುವುದರಲ್ಲಿ ಲಾಕ್‌ಡೌನ್ ಎಲ್ಲರನ್ನೂ ಲಾಕ್ ಮಾಡಿಬಿಟ್ಟಿತು. ಬಾಗಿಲು ಮುಚ್ಚಿತು. ಬದುಕಿನ ಕರಾಳತೆಯನ್ನು ಬಿಚ್ಚಿತು. ಮನೆಯೊಳಗೇ ಕೂತು ಸೋತು ಸುಣ.್ಣ ಮಾಸುವಂತಾಯಿತು ಬದುಕಿನ ಬಣ್ಣ.

ಮನೆಯೊಳಗೇ ಕೂತುಕೂತು ತಲೆ ಚಿಟ್ಟು ಹಿಡಿಯುವಂತಹ ಸ್ಥಿತಿ. ಯಾರಿಗೇ ಆದರೂ ಒಂದು ರೀತಿಯ ಮಾನಸಿಕ ಖಿನ್ನತೆಯಿಂದ ನಿರುತ್ಸಾಹ ಅಟಕಾಯಿಸಿಕೊಂಡಿರುತ್ತೆ. ಎಷ್ಟೂಂತ ಅದೇ ಟಿವಿ ನೋಡಿಕೊಂಡು ಅದರ ಆರ್ಭಟ ಸಹಿಸಿಕೊಂಡು ಇರಬಹುದು? ಆದರೆ ಸೃಜನಶೀಲರು ಯಾವಾಗಿದ್ದರೂ ಹೇಗಿದ್ದರೂ ಕ್ರಿಯಾಶೀಲರಾಗಿಯೇ ಇರುತ್ತಾರೆ. ಶಾಪವನ್ನೂ ವರವಾಗಿಸಬಲ್ಲ ಚಾಕಚಕ್ಯತೆ ಅವರಿಗಿರುತ್ತೆ. ಲೋಕವೇ ಲಾಕ್‌ಡೌನ್ ಆದರೇನಂತೆ, ನಮಗೆ ಅಂಗೈಯೊಳಗೇ ಲೋಕವಿಲ್ಲವೇ ಅಂತ ಸಾಮಾಜಿಕ ಜಾಲತಾಣಗಳು, ಆನ್‌ಲೈನ್ ಮಾಧ್ಯಮಗಳು, ವೇದಿಕೆಗಳನ್ನು ಅರ್ಥಪೂರ್ಣವಾಗಿ ಬಳಸಿಕೊಂಡು ಕಾಲದ ವ್ಯಂಗ್ಯಕ್ಕೆ ಸಮರ್ಥವಾಗಿಯೇ ಸೆಡ್ಡು ಹೊಡೆದಿದ್ದಾರೆ.

ನಾವು ಕಂಡಿದ್ದೇವೆ. ಫೇಸ್‌ಬುಕ್ ಹಾಗೂ ಇತರ ಆನ್‌ಲೈನ್ ವೇದಿಕೆಗಳಲ್ಲಿ ಹಲವು ಇ-ಕಾರ್ಯಕ್ರಮಗಳು (ಛಿಟ್ಟಟಜ್ಟಞಞಛಿ) ನಡೆದಿವೆ, ನಡೆಯುತ್ತಿವೆ. ಇದರಲ್ಲಿ ಕನ್ನಡ, ತುಳು, ಅರೆಭಾಷೆ, ಕೊಡವ ಕವನಗಳ ಸರಣಿ ಮುಂತಾದ ಸಾಹಿತ್ಯಿಕ ಕಾರ್ಯಕ್ರಮಗಳು ಗಮನ ಸೆಳೆದು ಮನೆಯಲ್ಲೇ ಕೂತು ಹೀಗೂ ಯಶಸ್ವೀ ಕಾರ್ಯಕ್ರಮಗಳನ್ನು ನಡೆಸಬಹುದು ಎಂದು ತೋರಿಸಿಕೊಟ್ಟಿವೆ.

ಅರೆಭಾಷೆ ಎಂಬುದು ಕನ್ನಡದ ಒಂದು ಉಪಭಾಷೆ. ದಕ್ಷಿಣ ಕನ್ನಡ, ಕೊಡಗು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಮಾತನಾಡುವ ಭಾಷೆಗೆ ಅದರದ್ದೇ ಅದ ಇಂಪು-ಕಂಪು ಸೊಗಡಿದೆ. ದಕ್ಷಿಣದ ಗೌಡ ಜನಾಂಗದ ಭಾಷೆಯಾಗಿದ್ದರೂ ಇದು ಈ ಪ್ರದೇಶಗಳಲ್ಲಿ ಜಾತಿ-ಮತದ ಭೇದವಿಲ್ಲದಂತೆ ಎಲ್ಲರನ್ನೂ ಆವರಿಸಿದೆ. ಸುಳ್ಯ ಸುತ್ತುಮುತ್ತಲ ಪ್ರದೇಶದಲ್ಲಿ ಅನಧಿಕೃವಾಗಿ ಅಧಿಕೃತ ಭಾಷೆಯಂತೆಯೇ ಚಲಾವಣೆಯಲ್ಲಿದೆ. ಅರೆಭಾಷೆಗೆ ಅದರದ್ದೇ ಆದ ಅಕಾಡಮಿಯೂ ಇದೆ. ಭಾಷೆ ಸಂಸ್ಕೃತಿ ಸಾಹಿತ್ಯದ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆೆ. ಈ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ಸೃಜನಶೀಲ ಮನಸ್ಸುಗಳು ಹಮ್ಮಿಕೊಂಡ ಸಾಹಿತ್ಯ-ಸಂಸ್ಕೃತಿ ಕಾರ್ಯಗಳು ಮಾಮೂಲಿಗಿಂತ ಅರೆಭಾಷಿಕರಿಗೆ ಹೆಚ್ಚೇ ‘ಚುರುಕುಮುಟ್ಟಿಸಿತು’ ಎಂದರೆ ಅತಿಶಯ ಆಗಲಾರದು.

ಫೇಸ್‌ಬುಕ್‌ನಲ್ಲಿ ನಡೆದ ಅರೆಭಾಷೆ ಪದ್ಯದಂಗಡಿಯ ಕವಿಗಳನ್ನು ಎದ್ದು ಕೂರಿಸುವಂತೆ ಮಾಡಿತು. ಹಳಬರು ಧೂಳು ಕೊಡವಿಕೊಂಡರೆ, ಹೊಸ ಕವಿಗಳು ಹುಟ್ಟಿಕೊಂಡರು. ಕಾಳುಜೊಳ್ಳು ಒತ್ತಟ್ಟಿಗಿರಲಿ. ಅರೆಭಾಷೆಯಲ್ಲಿ ಇಷ್ಟೊಂದು ಬರಹಗಾರರಿದ್ದಾರೆಯೇ ಎಂಬ ಉದ್ಗಾರ ಹೊರಡಿಸಿತು. ಇದಕ್ಕೆ ಪ್ರಪಂಚವಿಂದು ಅಂಗೈಯೊಳಗೇ ಬಂದು ಕುಳಿತಿರುವುದು ಬಲವಾದ ಕಾರಣ. ಅಂಗೈ ಒಳಗೇ ಆಡಿಯೊ ವೀಡಿಯೊ ಎಲ್ಲವೂ ಇದ್ದು ಯಾರ ಮುಲಾಜಿಗೂ ಒಳಗಾಗಬೇಕಾಗಿರುವ ದುರ್ದು ಇಲ್ಲದ ಕಾರಣ ಈ ಒಂದು ಮುಕ್ತತೆಯ ಸದ್ಬಳಕೆಯಾಗಿದ್ದು ಎಲ್ಲರಲ್ಲೂ ಒಂದು ಹೊಸ ಚೈತನ್ಯ ಮೂಡಿಸಿ ಉತ್ಸಾಹವನ್ನು ಹುಟ್ಟುಹಾಕಿತು. ಮಾಧ್ಯಮಗಳಲ್ಲಿ ಕಾರ್ಯಕ್ರಮಗಳು ನಡೆದವು, ಚರ್ಚೆಯಾದವು, ಲೇಖನಗಳು ಪ್ರಕಟಗೊಂಡವು.

ಇದರಂತೆಯೇ ‘ಸೂರಡಿ ಕವಿಗೋಷ್ಠಿ’ ಎಂಬ ಫೇಸ್‌ಬುಕ್ ಲೈವ್ ಕಾರ್ಯಕ್ರಮ ನಡೆದು ಆಯೋಜಕರು ಕವಿಗಳು ಕೇಳುಗರೂ ಎನರ್ಜಿ ತುಂಬಿಕೊಳ್ಳುವಂತಾಯಿತು. ಈ ಮಧ್ಯೆ ಅರೆಭಾಷೆಯ ಮೇಲೆ ಒಲವಿದ್ದು ಕಲಿಯುವ ಕಲಿಕಾಸಕ್ತರಿಗೆ ಒಂದು ಮಾದರಿ ಅನಿಸುವ ರೀತಿಯ ‘ಬನ್ನಿ ಅರೆಭಾಷೆ ಕಲಿಯಮೋ’ ಎಂಬ ಟ್ಯಾಗ್‌ಲೈನ್ ಜೊತೆಯಲ್ಲಿ 3 ವಾರಗಳ ಆನ್ ಲೈನ್ ಭಾಷಾ ಕಲಿಕೆ ತರಗತಿಗಳು ನಡೆದವು. ಕೊರೋನ ಸಂಕಷ್ಟದ ಕಾಲವನ್ನು ಮಾದರಿ ಎಂಬಂತೆ ಸದುಪಯೋಗ ಪಡಿಸಿಕೊಂಡಾಗಿದೆ.

ಅರೆಭಾಷಿಕರಿಗೆ ಒಕ್ಕಲುತನವೇ ಮೂಲ. ಕೃಷಿಯೇ ಬದುಕು ಆಗಿತ್ತು. ಆದರೆ ಕಾಲಕ್ರಮೇಣ ಲೋಕರೂಢಿಯಂತೆ ಇಂದು ಎಲ್ಲರೂ ಕೃಷಿಗೇ ಅಂಟಿಕೊಂಡಿಲ್ಲ. ಬದುಕು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ದೇಶಾದ್ಯಂತ, ವಿಶ್ವಾದ್ಯಂತ ಪಸರಿಸಿದ್ದಾರೆ. ಅರೆಭಾಷಿಕರ ಬದುಕಿನಲ್ಲಿ ಕೃಷಿ ಹಾಸುಹೊಕ್ಕಾಗಿದ್ದರಿಂದ ಆಟಿಗೂ ಅರೆಭಾಷೆಗೂ ಅದರದ್ದೇ ಆದ ನಂಟಿದೆ, ಅಂಟಿದೆ, ವಿಶೇಷತೆ ಇದೆ. ಕೊರೋನದ ದುರಿತ ಇಲ್ಲದಿರುತ್ತಿದ್ದರೆ ಆಟಿ ತಿಂಗಳಲ್ಲಿ ಅಲ್ಲಲ್ಲಿ ಆಟಿ ಉತ್ಸವಗಳು ನಡೆದು ಮನಸ್ಸು-ಹೊಟ್ಟೆಗಳು ತುಂಬುತ್ತಿದ್ದವು. ಆದರೆ ಲೋಕಕ್ಕೆ ಕಂಟಕವಾದ ಮಹಾಮಾರಿಯ ದೆಸೆಯಿಂದ ಇದು ಇಂದು ಸಾಧ್ಯವಾಗದೇ ಹೋಗಿದೆ. ಜನರು ಬೇಕುಬೇಕಾದಂತೆ ಒಟ್ಟು ಸೇರುವಂತಿಲ್ಲ, ಬೆರೆಯುವಂತಿಲ್ಲ.

ವಿಶ್ವ ಅರೆಭಾಷೆ ಹಬ್ಬ
ಹಾಗಾಗಿ ಫೇಸ್‌ಬುಕ್ಕೆಂಬ ಪ್ರಬಲ ಜಾಲತಾಣವನ್ನು ಬಳಸಿಕೊಂಡು ಇದೇ ಆಗಸ್ಟ್ 3ರಂದು (ಆಟಿ ತಿಂಗಳ 18ನೇ ದಿನ) ವಿಶ್ವ ಅರೆಭಾಷೆ ಹಬ್ಬ ಮಾಡಲು ವೇದಿಕೆ ಸಜ್ಜಾಗುತ್ತಿದೆ. ಎಲ್ಲಿದ್ದೇವೋ ಅಲ್ಲಿಂದಲೇ ಈ ಇ-ಕೂಟವನ್ನು ಹಮ್ಮಿಕೊಳ್ಳಲಾಗಿದ್ದು ಈ ನಿಮಿತ್ತ ಭರ್ಜರಿ ತಯಾರಿಗಳು ನಡೆಯುತ್ತಿವೆ.
ಧಾಂ... ಧೂಂ ಅಂತ ಹಬ್ಬ ಮಾಡೋಣ ಅನ್ನುತ್ತಾ ಟವೆಲ್ ಕೊಡವಿ ಎದ್ದು ನಿಂತಿರುವ ತಂಡ ಅರೆಭಾಷೆಯ ಪ್ರತಿಭೆಗಳನ್ನು ಒಟ್ಟು ಮಾಡುವ ಪ್ರಯತ್ನಕ್ಕೆ ಮುಂದಾಗಿದೆ. ‘ಅರೆಭಾಷೆ ಎಂಬುದು ಬರಿಯ ಭಾಷೆ ಅಲ್ಲ ಬದುಕಿನ ಬೇರು’ ಎಂಬ ಟ್ಯಾಗ್‌ಲೈನ್ ಹೊಂದಿರುವ ಆಮಂತ್ರಣವು ಜೋರಿನಿಂದ ಹರಿದಾಡುತ್ತಿದೆ. ಭಾಷೆ ಎಂಬುದು ಬರಿಯ ಭಾಷೆ ಅಲ್ಲ ಅದು ಸಂಸ್ಕೃತಿ ಸಂಸ್ಕಾರವೂ ಕೂಡ ಆಗಿರುವುದರಿಂದ ಆಂಗಿಕ ಫೇಸ್‌ಬುಕ್ ಪೇಜ್ ಮುಖಾಂತರ ಇ-ಕೂಟಕ್ಕೆ ತಂಡ ಸಜ್ಜಾಗಿದೆ.

ಆಂಗಿಕ ಮಲ್ಟಿ ಮೀಡಿಯಾ, ಸೂರಡಿ ತಂಡ, ಸುಳ್ಯ ಜೇಸಿ, ಅರೆಭಾಷೆ ಸಾಹಿತ್ಯ ಪರಿಷತ್ತು ವಾಟ್ಸ್ ಆ್ಯಪ್ ಗ್ರೂಪ್, ಭಾಗಮಂಡಲದ ನಾಟ್ಯ ಮಿಲನ ತಂಡ, ಅಮರ ಸುಳ್ಯ ಸಂಘಟನಾ ಸಮಿತಿ ಮತ್ತು ರೂಪೇಶ್ ಫೋಟೋಗ್ರಫಿ ಮತ್ತು ಸಮಾನ ಮನಸ್ಕರು ಭಾಷಾಭಿಮಾನಿಗಳು ಇದರಲ್ಲಿ ತೊಡಗಿಕೊಂಡಿದ್ದಾರೆ.

ಈ ಕಾರ್ಯಕ್ರಮದಲ್ಲಿ ಅರೆಭಾಷಾ ಸಾಹಿತಿಗಳು, ಬರಹಗಾರರು, ಕಲಾವಿದರು, ವಿದ್ವಾಂಸರು, ಇತರ ಪ್ರತಿಭೆಗಳು ಎಲ್ಲರೂ ಭಾಗವಹಿಸುತ್ತಿದ್ದು, ಎಲ್ಲರೂ ಎಲ್ಲೆಲ್ಲಿದ್ದಾರೋ ಅಲ್ಲಲ್ಲಿಂದಲೇ ಕಾರ್ಯಕ್ರಮ ನೀಡಿ, ಅಲ್ಲಲ್ಲಿಂದಲೇ ಕಾರ್ಯಕ್ರಮ ನೋಡಿ ಖುಷಿಪಡುವ ಯೋಗಾಯೋಗ. ಯಾವ ದೇಶದಲ್ಲಿದ್ದರೇನು ಭಾಷೆ ಒಂದೇ ಆಗಿರುವಾಗ. ವಿಶ್ವಾದ್ಯಂತ ಅರೆಭಾಷಿಕರು ಇರುವುದರಿಂದ ಇದು ವಸ್ತುಶಃ ಮತ್ತು ಅಕ್ಷರಶಃ ವಿಶ್ವ ಅರೆಭಾಷೆ ಹಬ್ಬವೇ. ಮನೆಕೆಲಸ ಕಾರ್ಯಗಳನ್ನು ಬಿಟ್ಟು ಹೇಗೆ ಹೋಗುವುದು ಎಂಬ ಚಿಂತೆ ಇಲ್ಲ. ಕಾರ್ಯಕ್ರಮಕ್ಕೆ ಹೋದಲ್ಲಿ ಅರ್ಧದಿಂದ ಎದ್ದು ಹೋಗುವುದು ಹೇಗೆಂಬ ಮುಜುಗರವಿಲ್ಲ. ಮನೆಯಲ್ಲಿ ಮಕ್ಕಳು ಕಾಯುತ್ತಾರೆಂಬ ಧಾವಂತವಿಲ್ಲ. ಮನೆಯಲ್ಲೇ ಕುಳಿತು ಕಣ್ಣ ಚಾ ಸಮಿಯುತ್ತಾ, ಹಪ್ಪಳ ಮೆಲ್ಲುತ್ತಾ, ಎಲ್ಲರೂ ಒಟ್ಟಾಗಿ ಕಾರ್ಯಕ್ರಮವನ್ನು ಕಣ್ತುಂಬಿಕೊಳ್ಳುವ ಸದವಕಾಶ. ಆದರೆ ನೆಟ್ವರ್ಕ್ ನೆಟ್ಟಗಿಲ್ಲದಿದ್ದರೆ, ಕರೆಂಟ್ ಕೈ ಕೊಟ್ಟರೆ ಎಂಬ ‘ರೇ’ ಗಳೂ ಇಲ್ಲದಿಲ್ಲ.

ಈ ಹಬ್ಬದ ನಿಮಿತ್ತ ಈಗಾಗಲೇ ಸ್ಪರ್ಧೆಗಳು ಆರಂಭವಾಗಿವೆ. ಗಾದೆ ಮಾತುಗಳು, ಕೊಡಗಿನ ವಾಲಗಕ್ಕೆ ನೃತ್ಯ, ಕಾರ್ಡಿನಲ್ಲಿ ಕಥೆ, ಮಕ್ಕಳಿಗೆ ಅಜ್ಜಿಕತೆ ಹೇಳುವ ಸ್ಪರ್ಧೆ ಮುಂತಾದ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಸ್ಪರ್ಧಿಗಳಿಗೆ ಆಹ್ವಾನ ನೀಡಲಾಗಿದೆ. ಸ್ಪರ್ಧಿಗಳೂ ಭಾಗವಹಿಸುವ ಸಿದ್ಧತೆಯಲ್ಲಿ ತೊಡಗಿದ್ದಾರೆ.

ಈ ಹಬ್ಬದಲ್ಲಿ ಭಾಷೆಗೆ ಸಂಬಂಧಿಸಿದಂತೆ ಎಲ್ಲಾ ಪ್ರಕಾರಗಳ ಪ್ರದರ್ಶನಕ್ಕೂ ಇಲ್ಲಿ ಅವಕಾಶ ನೀಡಲಾಗಿದೆ. ವಿವಿಧರಂಗದಲ್ಲಿ ಆಸಕ್ತರು ಪಂಟರೂ ಎಲ್ಲರೂ ಭಾಗವಹಿಸುವ ಮುಕ್ತ ಅವಕಾಶ ಇದೆ. ಹಾಡು, ಹಸೆ, ಕತೆ ಕವನ, ನೃತ್ಯ, ನಾಟಕ, ಜಾನಪದ, ಜನಪದ, ಹಳ್ಳಿ ಮದ್ದು, ಸಾಧಕರ ಪರಿಚಯ, ಕಿರುಚಿತ್ರ, ಹಾಸ್ಯ, ನಗು, ಹರಟೆ, ಸೋಭಾನೆ, ಡಾಕ್ಯುಮಂಟರಿ, ಕರೋಕೆ ಹಾಡು, ಹಿರಿಯರ ಬದುಕಿನ ಅನುಭವದ ಚಿತ್ರಣ, ಜಾತ್ರೆ, ಕೋಲ, ನೇಮ, ತಂಬಿಲ, ಹೊಸಕ್ಕಿ ಊಟ, ಹುತ್ತರಿ, ಮದುವೆ ಕಾರ್ಯಕ್ರಮದ ವೀಡಿಯೊಗಳು, ಗಾದೆ, ಒಗಟು, ಅಜ್ಜಿಕತೆ, ಕೋಲಾಟ, ಕೃಷಿ ಸಂಬಂಧಿ ಆಟೋಟಗಳು .... ಹೀಗೆ ಯಾವುದೇ ಮಿತಿ ಅಂತ ಇಲ್ಲದೆ ಆಸಕ್ತರು ಅವರವರ ಭಾವ-ಅನುಭವ-ಆಸಕ್ತಿಗೆ ತಕ್ಕಂತೆ ಕಾರ್ಯಕ್ರಮ ಅರೆಭಾಷೆಯಲ್ಲಿ ನೀಡಲು ಮುಕ್ತ ಅವಕಾಶ. ಹಾಗಾಗಿ ಇಲ್ಲಿ ‘ಸ್ಕೈ ಈಸ್ ದಿ ಒನ್ಲಿ ಲಿಮಿಟ್’ (ದಿಗಂತ ಒಂದೇ ಮಿತಿ) ಎಂಬ ಮಾತನ್ನು ಅಳವಡಿಸಿಕೊಳ್ಳಬಹುದು.

ಭಾಷೆ-ಸಂಸ್ಕೃತಿಯ ಹರಿಕಾರರನ್ನು ಕರೆತರಲಾಗುತ್ತಿದ್ದು ಅವರವರ ಕ್ಷೇತ್ರದ ಕುರಿತು ಮಾತುಗಳನ್ನಾಡಲಿದ್ದಾರೆ. ಉದ್ಘಾಟನೆ ಇದೆ, ಪ್ರಧಾನ ಭಾಷಣವಿದೆ, ಅತಿಥಿಗಳಿದ್ದಾರೆ. ಎಲ್ಲವೂ ಇದೆ.
ಒಟ್ಟಿನಲ್ಲಿ ಜಡಗಟ್ಟಿದವರನ್ನು ಚಿವುಟಿ ಎಬ್ಬಿಸಲು ಅರೆಭಾಷೆ ವಿಶ್ವ ಹಬ್ಬದ ತಂಡವು ಅಡಿ ಇಟ್ಟಿದೆ ಎಂಬುದು ಈ ಕಾರ್ಯದ ಪರಿಕಲ್ಪನೆಯ ಪ್ರಧಾನ ಸಂಘಟಕ ಲೋಕೇಶ್ ಊರುಬೈಲು ಅವರ ಮಾತು. ಅರೆಭಾಷೆಯಲ್ಲಿ ‘ಇ-ಪರಿಕಲ್ಪನೆಯ ಈ ಇ-ಕೂಟ’ ಆಸಕ್ತಿಯಿಂದ ಕುತೂಹಲದಿಂದ ಕಾಯುವಂತೆ ಮಾಡಿದೆ.

ಬನ್ನಿ ಹಬ್ಬ ಮಾಡುತ್ತಾ ಕಿಟಿಕಿಟಿ ಎಂಬಂತೆ ಜೋರಾಗಿ ನಗುತ್ತಾ ಮನದ ಕ್ಲೇಷ ನೀಗಿಸಿಕೊಂಡು ಹಗುರಾಗೋಣ ಎಂಬ ಆಹ್ವಾನದ ಆಮಂತ್ರಣವು ಎಲ್ಲೆಡೆ ಬಿರುಸಿನಿಂದ ಹರಿದಾಡುತ್ತಿದೆ. ಈ ಕಾರ್ಯಕ್ರಮವು ಫೇಸ್‌ಬುಕ್ಕಿನ https://www.facebook.com/Angika-Multimedia-113266047128031 ಮುಖಾಂತರ ನಡೆಯಲಿದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತರು ಲೋಕೇಶ್ ಊರುಬೈಲು ಅವರನ್ನು 9611355496 ಇಲ್ಲಿ ಸಂಪರ್ಕಿಸಬಹುದು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)