varthabharthi


ಗಲ್ಫ್ ಸುದ್ದಿ

ಕೊರೋನ ಕಾರಣ ಸೌದಿಯ ನಿವಾಸಿಗಳಿಗೆ ಮಾತ್ರ ಈ ಬಾರಿ ಅವಕಾಶ

ಪವಿತ್ರ ಹಜ್ ಯಾತ್ರೆಯ ಮೊದಲ ದಿನ ಮಿನಾಗೆ ಆಗಮಿಸಿದ 1,000 ಯಾತ್ರಾರ್ಥಿಗಳು

ವಾರ್ತಾ ಭಾರತಿ : 29 Jul, 2020

ಜೆದ್ದಾ:  ಹಜ್ ಯಾತ್ರೆ ಕೈಗೊಂಡಿರುವ ಸುಮಾರು  1,000 ಯಾತ್ರಾರ್ಥಿಗಳು ಬುಧವಾರ ಮಕ್ಕಾದ  ಹೊರಗಿನ ಮಿನಾದಲ್ಲಿ ಜಮಾಯಿಸಲಿದ್ದು, ತಮ್ಮ ಯಾತ್ರೆಯನ್ನು ಆರಂಭಿಸಲಿದ್ದಾರೆ.

ಈ ಬಾರಿ ಕೋವಿಡ್ ಸಮಸ್ಯೆಯಿಂದಾಗಿ  ಸಾಮಾನ್ಯವಾಗಿ ನಡೆಯುವ ಪ್ರಮುಖ  ರೀತಿರಿವಾಜುಗಳು ಇರುವುದಿಲ್ಲವಾದುದರಿಂದ ಯಾತ್ರಾರ್ಥಿಗಳು  ಗುರುವಾರ ಸೂರ್ಯಾಸ್ತದ ತನಕ ಪ್ರಾರ್ಥನೆ ಸಲ್ಲಿಸುತ್ತಾ ಸಮಯ ಕಳೆಯಲಿದ್ದಾರೆ.

ಮಕ್ಕಾದ  ಮಸೀದಿಯಿಂದ ಈಶಾನ್ಯ ದಿಕ್ಕಿನಲ್ಲಿ ಸುಮಾರು 7 ಕಿ.ಮೀ. ದೂರದಲ್ಲಿರುವ  ಮಿನಾದಲ್ಲಿ ಸಾಮಾನ್ಯವಾಗಿ ಇತರ ವರ್ಷಗಳಲ್ಲಿ  ವಿಶ್ವದ ಅತ್ಯಂತ ದೊಡ್ಡ ಟೆಂಟ್ ನಗರ ತಲೆಯೆತ್ತುತ್ತಿತ್ತಲ್ಲದೆ, ಇಲ್ಲಿ ಸುಮಾರು 25 ಲಕ್ಷ ಯಾತ್ರಾರ್ಥಿಗಳಿಗೆ  ವಸತಿ ಸೌಲಭ್ಯ ಕಲ್ಪಿಸಲಾಗುತ್ತದೆ.

ಆದರೆ ಈ ಬಾರಿ ಕೋವಿಡ್ 19 ಸಮಸ್ಯೆಯಿಂದಾಗಿ ಹಜ್ ಯಾತ್ರಾರ್ಥಿಗಳ ಸಂಖ್ಯೆಯನ್ನು ಸೀಮಿತಗೊಳಿಸಲಾಗಿದ್ದು  ಸೌದಿಯ ನಾಗರಿಕರಿಗೆ ಹಾಗೂ ಅಲ್ಲಿಯೇ ನೆಲೆಸಿರುವ ವಲಸಿಗರಿಗೆ ಮಾತ್ರ ಸೀಮಿತ ಸಂಖ್ಯೆಯಲ್ಲಿ ಅವಕಾಶ ನೀಡಲಾಗಿದೆ. ಹಜ್ ಯಾತ್ರೆಗೆ ಆಯ್ಕೆಗೊಂಡವರ ದೇಹದ ತಾಪಮಾನ ಪರೀಕ್ಷೆ ನಡೆಸಲಾಗಿದೆಯಲ್ಲದೆ ಅವರನ್ನು ಮಕ್ಕಾಗೆ ಆಗಮಿಸಿದಂತೆಯೇ  ಕ್ವಾರಂಟೈನಿನಲ್ಲಿರಿಸಲಾಗಿದೆ ಹಾಗೂ ಅವರ ಸಾಮಾಗ್ರಿಗಳನ್ನು ಕೂಡ ಸ್ಯಾನಿಟೈಸ್ ಮಾಡಲಾಗಿದೆ.

ಕಾಬಾದ ಪ್ರದೇಶದ ಸುತ್ತಮುತ್ತ ಕೂಡ ಸ್ಯಾನಿಟೈಸ್ ಮಾಡಲಾಗಿದ್ದು, ಇಡೀ ಕಾಬಾದ ಪ್ರದೇಶದಲ್ಲಿ ಭಾರೀ ಭದ್ರತೆ ಕಲ್ಪಿಸಲಾಗಿದೆ. ಯಾತ್ರಾರ್ಥಿಗಳಿಗೆ ಯಾವುದೇ ಸ್ಥಳ ಮುಟ್ಟದಂತೆ ಸೂಚನೆ ನೀಡಲಾಗಿದೆ. ಯಾತ್ರಾರ್ಥಿಗಳಿಗೆ  ಮಾಸ್ಕ್ ಧರಿಸುವುದು ಹಾಗೂ ಸಾಮಾಜಿಕ ಅಂತರ ಕಾಪಾಡುವುದು ಕಡ್ಡಾಯವಾಗಿದ್ದು, ಸಂಚಾರಿ ಕ್ಲಿನಿಕ್ ಗಳು ಹಾಗೂ ಆ್ಯಂಬುಲೆನ್ಸು ಗಳನ್ನು ಕೂಡ ಸನ್ನದ್ಧ ಸ್ಥಿತಿಯಲ್ಲಿರಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)