varthabharthi


ಕರಾವಳಿ

ಕಬಕದಲ್ಲಿ ನಡೆದ ಘಟನೆ

ವಿದ್ಯುತ್ ಆಘಾತಕ್ಕೊಳಗಾಗಿದ್ದ ಕಾರ್ಮಿಕನ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟ ನೀಡಿದ ಇರ್ಫಾನ್ ಮತ್ತು ಗೆಳೆಯರು

ವಾರ್ತಾ ಭಾರತಿ : 1 Aug, 2020

ಪುತ್ತೂರು, ಆ.1: ವಿದ್ಯುತ್ ಕಂಬ ಬದಲಾವಣೆ ಕಾಮಗಾರಿ ನಡೆಸುತ್ತಿದ್ದ ವೇಳೆ ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೊಳಗಾಗಿ ಇಬ್ಬರು ಕಾರ್ಮಿಕರು ತೀವ್ರ ಗಾಯಗೊಂಡ ಘಟನೆ ನಗರದ ಹೊರವಲಯದ ಕಬಕದಲ್ಲಿ ಶುಕ್ರವಾರ ಸಂಭವಿಸಿದೆ. ಈ ವೇಳೆ ಮೂವರು ಯುವಕರು ಅವರನ್ನು ರಕ್ಷಿಸಿ ಆಸ್ಪತ್ರೆಗೆ ಸಾಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಪುತ್ತೂರು ತಾಲೂಕಿನ ಬೆಳ್ಳಿಪ್ಪಾಡಿ ನಿವಾಸಿ ಕ್ರೇನ್ ಆಪರೇಟರ್ ರುಕ್ಮಯ(35) ಮತ್ತು ನೂತನ ಕಡಬ ತಾಲೂಕಿನ ನೂಜಿಬಾಳ್ತಿಲ ಕಾಪಿನಡ್ಕ ನಿವಾಸಿ ಬಿಬಿನ್(22) ಗಾಯಗೊಂಡವರು.

ಆಪತ್ಬಾಂಧವರಾದ ಯುವಕರು

ಕಾಮಗಾರಿ ನಡೆಸುತ್ತಿದ್ದ ವೇಳೆ ರುಕ್ಮಯ ಮತ್ತು ಬಿಬಿನ್ ವಿದ್ಯುತ್ ಆಘಾತಕ್ಕೊಳಗಾಗಿದ್ದರು. ಬೊಬ್ಬೆ ಕೇಳಿ ಕೂಡಲೇ ಸ್ಥಳಕ್ಕಾಗಮಿಸಿದ ಸ್ಥಳೀಯರಾದ ಇರ್ಫಾನ್, ಸಂಶೀರ್ ಶಾಫಿ ಮತ್ತು ತೌಸೀಫ್ ಎಂಬವರು ಅವರನ್ನು ಮೇಲೆತ್ತಿದರು. ಈ ವೇಳೆ ತೀವ್ರ ಅಸ್ವಸ್ಥಗೊಂಡಿದ್ದ ಬಿಬಿನ್ ಸ್ಥಿತಿ ಗಂಭೀರವಾಗಿತ್ತು. ಇದನ್ನು ಗಮನಿಸಿದ ಇರ್ಫಾನ್ ಮತ್ತು ಗೆಳೆಯರು ಅವರ ಬಾಯಿಗೆ ಬಾಯಿ ಇಟ್ಟು ಕೃತಕ ಉಸಿರಾಟ ನೀಡುವ ಮೂಲಕ ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ. ಬಳಿಕ ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದಾರೆ. ಈ ಸಂದರ್ಭ ಸ್ಥಳೀಯರಾದ ರಾಜೇಶ್, ಸಮೀರ್, ಅಫ್ಲಾಲ್ ಮತ್ತಿತರರು ನೆರವಾಗಿದ್ದಾರೆ ಎಂದು ಇರ್ಫಾನ್ ‘ವಾರ್ತಾಭಾರತಿ’ಗೆ ಮಾಹಿತಿ ನೀಡಿದ್ದಾರೆ.

ಘಟನೆ ವಿವರ: ರುಕ್ಮಯ(35) ಮತ್ತು ಬಿಬಿನ್(22) ಕಬಕದ ವಿದ್ಯಾಪುರ ಎಂಬಲ್ಲಿ ನೆಟ್ಲಮುಡ್ನೂರಿನಿಂದ ಪುತ್ತೂರಿಗೆ ಬರುತ್ತಿದ್ದ 33 ಕೆವಿ ವಿದ್ಯುತ್ ಲೈನ್‌ನ ಬಳಿ ವಿದ್ಯುತ್ ಕಂಬ ಬದಲಾವಣೆ ಕಾಮಗಾರಿ ನಡೆಸುತ್ತಿದ್ದರೆನ್ನಲಾಗಿದೆ. ಈ ವೇಳೆ ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೊಳಗಾದ ಇವರಿಬ್ಬರು ಎಸೆಯಲ್ಪಟ್ಟು ಗಾಯಗೊಂಡಿದ್ದರು.

ಗಂಭೀರಾವಸ್ಥೆಯಲ್ಲಿ ಬಿದ್ದಿದ್ದ ಇವರಿಬ್ಬರನ್ನು ಗಮನಿಸಿದ ಸಂಶೀರ್ ಶಾಫಿ, ಇರ್ಫಾನ್ ಮತ್ತು ತೌಸೀಫ್ ತಕ್ಷಣ ಅವರ ನೆರವಿಗೆ ಧಾವಿಸಿದ್ದಾರೆ. ನಿಶ್ಚಲವಾಗಿ ಬಿದ್ದಿದ್ದ ಬಿಬಿನ್‌ರಿಗೆ ಕೋವಿಡ್-19 ಅಪಾಯಕಾರಿ ಸನ್ನಿವೇಶದ ನಡುವೆಯೂ ಬಾಯಿಯ ಮೂಲಕ ಪ್ರಾಣವಾಯು ನೀಡಿದ್ದಾರೆ. ಅಲ್ಲದೆ ಗಾಯಾಳುಗಳನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳುಗಳ ಪೈಕಿ ರುಕ್ಮಯ ಚಿಕಿತ್ಸೆ ಪಡೆದು ಮರಳಿದ್ದಾರೆ. ಬಿಬಿನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಹಬ್ಬದ ಸಂದರ್ಭದಲ್ಲಿ ಯುವಕರ ಈ ಮಾನವೀಯ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇಲಾಖೆಯ ಬೇಜವಾಬ್ದಾರಿ: ಆರೋಪ

ಕಾಮಗಾರಿ ನಡೆಯುವ ವೇಳೆಯಲ್ಲಿ ವಿದ್ಯುತ್ ಸ್ಥಗಿತಗೊಳಿಸಬೇಕಾಗಿತ್ತು ಕಾರ್ಮಿಕರು ಕೆಲಸ ಮಾಡುವ ಸಂದರ್ಭದಲ್ಲಿ ಮೆಸ್ಕಾಂನವರು ಸ್ಥಳಕ್ಕೆ ಆಗಮಿಸಿ ವಿದ್ಯುತ್ ಸ್ಥಗಿತಗೊಳಿಸಿರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕಿತ್ತು. ಆದರೆ ಅದ್ಯಾವುದನ್ನೂ ಪಾಲಿಸದೆ ಮೆಸ್ಕಾಂ ಇಲಾಖೆ ಬೇಜವಾಬ್ದಾರಿಯಾಗಿ ವರ್ತಿಸಿರುವುದರಿಂದ ಈ ಅವಘಡ ಸಂಭವಿಸಿದೆ ಎಂದು ಸಾರ್ವಜನಿಕರಿಂದ ಆರೋಪ ವ್ಯಕ್ತವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)