varthabharthi


ರಾಷ್ಟ್ರೀಯ

ವಿರಾಟ್ ಕೊಹ್ಲಿ ಬಂಧನ ಕೋರಿ ಮದ್ರಾಸ್ ಹೈಕೋರ್ಟ್ ನಲ್ಲಿ ಅಪೀಲು

ವಾರ್ತಾ ಭಾರತಿ : 1 Aug, 2020

ಚೆನ್ನೈ: ಆನ್‍ಲೈನ್ ಜೂಜಿಗೆ ಪ್ರೋತ್ಸಾಹ ನೀಡಿದ ತಪ್ಪಿಗಾಗಿ ಭಾರತೀಯ ಕ್ರಿಕೆಟ್ ತಂಡದ ಕಪ್ತಾನ ವಿರಾಟ್ ಕೊಹ್ಲಿ ಹಾಗೂ ನಟಿ ತಮನ್ನಾ ಅವರನ್ನು ಬಂಧಿಸಬೇಕೆಂದು ಕೋರಿ ಮದ್ರಾಸ್ ಹೈಕೋರ್ಟ್ ನಲ್ಲಿ ಚೆನ್ನೈ ಮೂಲದ ವಕೀಲರೊಬ್ಬರು ಅಪೀಲು ಸಲ್ಲಿಸಿದ್ದಾರೆ.

ಆನ್‍ಲೈನ್ ಜೂಜು ಕುರಿತಾದ ಆ್ಯಪ್‍ಗಳಿಗೆ ಯುವಜನತೆ ದಾಸರಾಗುತ್ತಿರುವುದರಿಂದ ಅವುಗಳಿಗೆ ನಿಷೇಧ ಹೇರಬೇಕೆಂದೂ ಅಪೀಲುದಾರರು ಕೋರಿದ್ದಾರೆ. ಈ ಆನ್‍ಲೈನ್ ಜೂಜಿನ ಕಂಪೆನಿಗಳು ಸೆಲೆಬ್ರಿಟಿಗಳಾದ ವಿರಾಟ್ ಕೊಹ್ಲಿ ಮುಂತಾದವರನ್ನು ಬಳಸಿ ಯುವಜನತೆಯನ್ನು ಬ್ರೈನ್ ವಾಶ್ ಮಾಡುತ್ತಿವೆ. ಆದುದರಿಂದ ಇಬ್ಬರನ್ನೂ ಬಂಧಿಸಬೇಕೆಂದು ಅಪೀಲಿನಲ್ಲಿ ಹೇಳಲಾಗಿದೆ.

ಆನ್‍ಲೈನ್ ಜೂಜಾಟಕ್ಕಾಗಿ ಹಣ ಸಾಲ ಪಡೆದು ಅದನ್ನು ವಾಪಸ್ ಕೊಡಲಾಗದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಹಾಗೂ ತಮಿಳುನಾಡಿನಲ್ಲಿ ಆನ್‍ಲೈನ್ ಜೂಜಾಟದಲ್ಲಿ ಹಣ ಕಳೆದುಕೊಂಡು ಯುವಕರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಪ್ರಕರಣಗಳೂ ಏರಿಕೆಯಾಗುತ್ತಿರುವ ಕುರಿತಂತೆ ಅಪೀಲಿನಲ್ಲಿ ಹೈಕೋರ್ಟ್‍ನ ಗಮನ ಸೆಳೆಯಲಾಗಿದೆ.

ಈ ಆನ್‍ಲೈನ್ ಜೂಜಾಟವನ್ನು ಹಲವಾರು ಯುವಕರನ್ನು ಬಲಿ ಪಡೆದ ಬ್ಲೂ ವೇಲ್ ಆನ್‍ಲೈನ್ ಗೇಮ್‍ಗೆ ಅಪೀಲುದಾರರು ಹೋಲಿಸಿದ್ದಾರೆ.

ಈ ಪ್ರಕರಣದ ವಿಚಾರಣೆ ಮುಂದಿನ ಮಂಗಳವಾರಕ್ಕೆ ನಿಗದಿಯಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)