varthabharthi


ಕರ್ನಾಟಕ

ಏಸು ಕ್ರಿಸ್ತ, ಟಿಪ್ಪು ಪಠ್ಯ ಕೈಬಿಡುವ ನಿರ್ಧಾರ ಪುನರ್ ಪರಿಶೀಲನೆಗೆ ದೇವೇಗೌಡ ಆಗ್ರಹ

ವಾರ್ತಾ ಭಾರತಿ : 1 Aug, 2020

ಬೆಂಗಳೂರು, ಆ. 1: ಮೈಸೂರು ಹುಲಿ ಎಂದೇ ಖ್ಯಾತಿಗಳಿಸಿರುವ ಟಿಪ್ಪು ಸುಲ್ತಾನ್ ಮತ್ತು ಏಸುಕ್ರಿಸ್ತ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯಪುಸ್ತಕದಿಂದ ಕೈಬಿಟ್ಟಿರುವ ರಾಜ್ಯ ಸರಕಾರದ ಕ್ರಮ ಸರಿಯಲ್ಲ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಟ ಎಚ್.ಡಿ.ದೇವೇಗೌಡ ಆಕ್ಷೇಪಿಸಿದ್ದಾರೆ.

ಶನಿವಾರ ನಗರದ ಜೆಡಿಎಸ್ ಕಚೇರಿ ಜೆ.ಪಿ.ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಎಂಬುದನ್ನು ನಾವು ಪ್ರಾಥಮಿಕ ಶಾಲೆಯಿಂದ ಓದಿಕೊಂಡು ಬಂದಿದ್ದೇವೆ. ಆದರೆ, ಇದೀಗ ರಾಜ್ಯ ಸರಕಾರ ಟಿಪ್ಪು ವಿಚಾರವನ್ನು ಪಠ್ಯದಿಂದ ತೆಗೆದಿರುವುದು ಸರಿಯಲ್ಲ. ಟಿಪ್ಪು ಹೆಸರಲ್ಲಿ ವಸತಿ ಶಾಲೆ ಮಾಡಿದ್ದೇವೆ. ಕಲಬುರಗಿ, ವಿಜಯಪುರ, ಶ್ರೀರಂಗಪಟ್ಟಣ, ರಾಮನಗರ, ಧಾರವಾಡದಲ್ಲಿ ಟಿಪ್ಪು ಹೆಸರಲ್ಲಿ ವಸತಿ ಶಾಲೆಗಳು ಇವೆ. ಆಗ ಯಾರೂ ವಿರೋಧ ಮಾಡಿರಲಿಲ್ಲ ಎಂದು ಕಿಡಿಕಾರಿದರು.

ಇದೀಗ ರಾಜ್ಯ ಬಿಜೆಪಿ ಸರಕಾರ ಈ ವಿಚಾರದಲ್ಲಿ ಅನಗತ್ಯ ವಿವಾದ ಸೃಷ್ಟಿ ಮಾಡುವ ಅಗತ್ಯವಿರಲಿಲ್ಲ. ಈ ಬಗ್ಗೆ ಸರಕಾರ ಪುನರ್ ಪರಿಶೀಲನೆ ಮಾಡಬೇಕು. ಎಲ್ಲರಿಗೂ ಸಮಾಧಾನ ಆಗುವಂತಹ ನಿರ್ಧಾರ ತೆಗೆದುಕೊಳ್ಳಬೇಕು ಎಂದು ದೇವೇಗೌಡ ಆಗ್ರಹಿಸಿದರು.

ಸಾಕ್ಷ್ಯ ಇದೆಯೇ: ಸಿ.ಪಿ.ಯೋಗೇಶ್ವರ್ ಆರೋಪಕ್ಕೆ ಸಾಕ್ಷಿಯಾಧಾರ ಇದೀಯಾ? ಕುಮಾರಸ್ವಾಮಿ ಕದ್ದು ಹೋಗಿ ಯಾರನ್ನೂ ಭೇಟಿ ಮಾಡುವ ಅವಶ್ಯಕತೆ ಇಲ್ಲ. ಯಡಿಯೂರಪ್ಪ ಅವರು ಹೇಳಿದಂತೆ ಒಂದು ಕಾಲದಲ್ಲಿ ಕುಮಾರಸ್ವಾಮಿ-ಬಿಎಸ್‍ವೈ ಇಬ್ಬರು ಅಧಿಕಾರ ಮಾಡಿದ್ದಾರೆ. ರಾಜಕಾರಣಿಗಳು ಸುಮ್ಮನೆ ಈ ರೀತಿ ಮತ್ತೊಬ್ಬರ ಬಗ್ಗೆ ಲಘುವಾಗಿ ಮಾತಾಡಬಾರದು ಎಂದು ದೇವೇಗೌಡ ತಿರುಗೇಟು ನೀಡಿದರು.

ರಾಜ್ಯಾದ್ಯಂತ ಚಳವಳಿ: ಭೂ ಸುಧಾರಣಾ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆ ತಿದ್ದುಪಡಿ ವಿರೋಧಿಸಿ ರಾಜ್ಯ ಸರಕಾರದ ವಿರುದ್ಧ ಹೋರಾಟ ರೂಪಿಸಲಿದ್ದು, ಕೊರೋನ ಸೋಂಕಿನ ನಡುವೆಯೇ ಚಳವಳಿ ನಡೆಸಲಿದ್ದೇವೆ ಎಂದ ಅವರು, ಅಧಿವೇಶನ ಕರೆಯಲು ಮೀನಾಮೇಷ ಎಣಿಸುತ್ತಿರುವ ಸರಕಾರದ ಕ್ರಮವನ್ನು ರಾಜ್ಯಪಾಲರ ಗಮನಕ್ಕೆ ತರುತ್ತೇವೆ ಎಂದು ಹೇಳಿದರು.

ತ್ಯಾಗ ಬಲಿದಾನದ ಜೊತೆಗೆ ವಿಶ್ವ ಭ್ರಾತೃತ್ವವನ್ನು ಸಾರುವ ಪವಿತ್ರ ಬಕ್ರೀದ್ ಹಬ್ಬವು ನಾಡಿನಲ್ಲಿ ಸ್ನೇಹ-ಸೌಹಾರ್ದತೆಯನ್ನು ಬೆಳೆಸಲು ಪ್ರೇರಣೆ ನೀಡಲಿ. ಸಮಸ್ತ ಮುಸ್ಲಿಂ ಬಾಂಧವರಿಗೆ ಬಕ್ರೀದ್ ಹಬ್ಬದ ಶುಭಾಶಯಗಳು

-ಎಚ್.ಡಿ.ದೇವೇಗೌಡ, ಮಾಜಿ ಪ್ರಧಾನಿ

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)