varthabharthi


ವಿಶೇಷ-ವರದಿಗಳು

ಮಾಧ್ಯಮ ಸಂದರ್ಶನದಲ್ಲಿ ಬಾಯ್ಬಿಟ್ಟ ದಂಗೆಕೋರ

"ದಿಲ್ಲಿ ಹಿಂಸಾಚಾರ ಮುಸ್ಲಿಮರ ವಿರುದ್ಧ ಪ್ರತೀಕಾರವಾಗಿತ್ತು, ಪೊಲೀಸರು ನಮಗೆ ಪೂರ್ಣ ಸ್ವಾತಂತ್ರ್ಯ ನೀಡಿದ್ದರು"

ವಾರ್ತಾ ಭಾರತಿ : 2 Aug, 2020
ಅಮಿತ್ ಪಾಂಡೆ, ಶಾಹಿದ್ ತಾಂತ್ರೆ -caravanmagazine.in

ಹೊಸದಿಲ್ಲಿ, ಆ.2: ‘ನೀವದನ್ನು ಆತ್ಮ ರಕ್ಷಣೆ ಅಥವಾ ಪ್ರತೀಕಾರ ಎನ್ನಬಹುದು,ಆದರೆ ಅದು ಮುಖ್ಯವಾಗಿ ಪ್ರತೀಕಾರವಾಗಿತ್ತು’ ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ್ದ ಕೋಮು ಹಿಂಸಾಚಾರದಲ್ಲಿ ಭಾಗಿಯಾಗಿದ್ದ ಕಾರವಲ್ ನಗರದ ನಿವಾಸಿಯಾಗಿರುವ 22ರ ಹರೆಯದ ಯುವಕನೋರ್ವ ಹೇಳಿಕೊಂಡಿದ್ದು ಹೀಗೆ. caravanmagazine.in ನಿಯತಕಾಲಿಕಕ್ಕೆ ನೀಡಿರುವ ಎರಡು ಸಂದರ್ಶನಗಳಲ್ಲಿ ಈ ಯುವಕ ದಂಗೆಯ ಸಂದರ್ಭದಲ್ಲಿ ತಾನು ಮತ್ತು ಇತರ ಸಂಘಪರಿವಾರದ ಯುವಕರು ಮುಸ್ಲಿಮರಿಗೆ ಸೇರಿದ ವಾಹನಗಳನ್ನು ಮತ್ತು ಅಂಗಡಿಗಳನ್ನು ಹೇಗೆ ಗುರಿಯಾಗಿಸಿಕೊಂಡು ಅವುಗಳನ್ನು ಧ್ವಂಸಗೊಳಿಸಿದ್ದೆವು ಅಥವಾ ಬೆಂಕಿ ಹಚ್ಚಿದ್ದೆವು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ.

‘ಜೈ ಶ್ರೀರಾಮ ’ಎಂದು ಕೂಗಲು ನಿರಾಕರಿಸಿದ್ದಕ್ಕಾಗಿ ಮುಸ್ಲಿಮರನ್ನು ಥಳಿಸಿದ್ದನ್ನೂ ಆತ ಒಪ್ಪಿಕೊಂಡಿದ್ದಾನೆ. ‘ಮುಸ್ಲಿಮರ ವಿರುದ್ಧ ದಾಳಿ ನಡೆಸಲು ದಿಲ್ಲಿ ಪೊಲೀಸರು ನಮಗೆ ಮುಕ್ತ ಸ್ವಾತಂತ್ರ ನೀಡಿದ್ದರು. ಮುಸ್ಲಿಂ ಪ್ರದೇಶಗಳಿಗೆ ನುಗ್ಗಿ ದಾಳಿ ನಡೆಸಿರಿ, ನಾವು ಅಲ್ಲಿಗೆ ಬರುವುದಿಲ್ಲ. ನೀವು ಹಿಂದೂಗಳು ಎನ್ನುವುದನ್ನು ನಮಗೆ ಸಾಬೀತುಗೊಳಿಸಿ’ ಎಂದು ದಿಲ್ಲಿ ಪೊಲೀಸರು ತಮಗೆ ತಿಳಿಸಿದ್ದಾಗಿ ಈ ಯುವಕ ಹೇಳಿದ್ದಾನೆ. ‘ಸಂಘಪರಿವಾರದ ದಂಗೆಕೋರರಿಗೆ ಚಾನ್ಸ್ ಒಂದನ್ನು ನೀಡಿದ್ದೇವೆ. ನಮಗೆ ಮೇಲಿನಿಂದ ಸಂದೇಶ ಬಂದಾಗ ನಾವು ನಿಮ್ಮನ್ನು ತಡೆಯುತ್ತೇವೆ. ಆದರೆ ಅಲ್ಲಿಯವರೆಗೆ ನಿಮ್ಮ ಮನಸ್ಸಿಗೆ ಬಂದಿದ್ದನ್ನು ಮಾಡಿ’ ಎಂದೂ ಓರ್ವ ಪೊಲೀಸ್ ಅಧಿಕಾರಿ ದುಷ್ಕರ್ಮಿಗಳಿಗೆ ಭರವಸೆ ನೀಡಿದ್ದ.

ಮುಸ್ಲಿಮರಿಗೆ ಸೇರಿದ್ದ ಆಸ್ತಿಪಾಸ್ತಿಗಳನ್ನು ಧ್ವಂಸಗೊಳಿಸುವಾಗ ತಾನು ಆರೇಳು ಅಡಿ ಉದ್ದದ ಬಡಿಗೆಯನ್ನು ಬಳಸುತ್ತಿದ್ದನ್ನು ಕಂಡು ಬಜರಂಗಿಯೋರ್ವ ತನಗೆ ಕಬ್ಬಿಣದ ರಾಡ್ ನೀಡಿದ್ದ. ಮುಸ್ಲಿಮರ ವಿರುದ್ಧ ಒಂದಾಗುವಂತೆ ದುಷ್ಕರ್ಮಿಗಳಿಗೆ ಉತ್ತೇಜಿಸಿದ್ದ ಬಜರಂಗಿ,‘ಈಗ ನೀವೇನಾದರೂ ಮಾಡದಿದ್ದರೆ ಇನ್ನೆಂದಿಗೂ ನಿಮಗೆ ಏನನ್ನೂ ಮಾಡಲು ಸಾಧ್ಯವಾಗುವುದಿಲ್ಲ ’ಎಂದು ದಂಗೆಕೋರರನ್ನು ಹುರಿದುಂಬಿಸಿದ್ದ. ಈ ಹಿಂಸಾಚಾರದ ಸಂದರ್ಭದಲ್ಲಿ ರಾಜಕೀಯ ಮತಭೇದಗಳನ್ನು ಮರೆಯುವಂತೆ ಮತ್ತು ಹಿಂದೂಗಳಾಗಿ ಒಗ್ಗಟ್ಟಾಗುವಂತೆ ಪ್ರಚೋದಿಸಿದ್ದ ಎಂದೂ ಯುವಕ ಸಂದರ್ಶನದಲ್ಲಿ ಹೇಳಿದ್ದಾನೆ.

ದಿಲ್ಲಿಯಲ್ಲಿ ದಂಗೆಗಳು ನಡೆಯುತ್ತಿದ್ದ ದಿನಗಳಲ್ಲಿ ತನಗೆ ಹಲವಾರು ವಾಟ್ಸ್‌ಆ್ಯಪ್ ಸಂದೇಶಗಳು ಮತ್ತು ಕರೆಗಳು ಬಂದಿದ್ದು, ಮುಸ್ಲಿಮರ ವಿರುದ್ಧ ದಾಳಿನಡೆಸಲು ಪ್ರಚೋದನೆಯನ್ನು ನೀಡಿದ್ದವು. ‘ಸಂಘಪರಿವಾರದ ಗುಂಪೊಂದು ಮೂವರು ಮುಸ್ಲಿಮರನ್ನು ಕೊಂದ ಘಟನೆಗೆ ನಾನು ಪ್ರತ್ಯಕ್ಷದರ್ಶಿಯಾಗಿದ್ದೆ. ಈ ಪೈಕಿ ಓರ್ವ ‘ಜೈ ಶ್ರೀರಾಮ್’ ಎಂದು ಕೂಗಲು ನಿರಾಕರಿಸಿದ್ದಕ್ಕಾಗಿ ಗುಂಪು ಆತನನ್ನು ವಾಹನವೊಂದರ ಮೇಲೆ ಎಸೆದಿತ್ತು. ಬಳಿಕ ವಾಹನಕ್ಕೆ ಬೆಂಕಿ ಹಚ್ಚಿ ಆತನನ್ನು ಕೊಂದುಹಾಕಿತ್ತು’ ಎಂದು ಹೇಳಿರುವ ಯುವಕ ಸಂದರ್ಶನದಲ್ಲಿ ಬಿಜೆಪಿ ನಾಯಕ ಕಪಿಲ್ ಮಿಶ್ರಾ ಅವರನ್ನು ಸಿಕ್ಕಾಪಟ್ಟೆ ಹೊಗಳಿದ್ದಾನೆ. ‘ಮಿಶ್ರಾ ಒಳ್ಳೆಯ ಕೆಲಸ ಮಾಡಿದ್ದಾರೆ. ಅವರು ಜನತೆಯನ್ನು ತನ್ನೊಂದಿಗೆ ಒಯ್ದಿದ್ದರು ಮತ್ತು ಹಲವಾರು ಸೂಚನೆಗಳನ್ನು ನೀಡಿದ್ದರು’ ಎಂದು ಆತ ಹೇಳಿದ್ದಾನೆ.

ಫೆ.24 ಮತ್ತು 26ರ ನಡುವೆ ಈಶಾನ್ಯ ದಿಲ್ಲಿಯಲ್ಲಿ ಭುಗಿಲೆದ್ದಿದ್ದ ಕೋಮು ಹಿಂಸಾಚಾರದಲ್ಲಿ 38 ಮುಸ್ಲಿಮರು ಸೇರಿದಂತೆ ಒಟ್ಟು 53 ಜನರು ಕೊಲ್ಲಲ್ಪಟ್ಟಿದ್ದರು. ಫೆ.23ರಂದು ಮಿಶ್ರಾ ಜಫ್ರಾಬಾದ್ ಮೆಟ್ರೋ ರೈಲು ನಿಲ್ದಾಣದ ಬಳಿ ಪ್ರಚೋದನಾಕಾರಿ ಭಾಷಣವೊಂದನ್ನು ಮಾಡಿದ್ದರು. ಸಮೀಪದಲ್ಲಿಯೇ ಈಶಾನ್ಯ ದಿಲ್ಲಿಯ ಮುಸ್ಲಿಂ ನಿವಾಸಿಗಳು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ಶಾಂತಿಯುತವಾಗಿ ಧರಣಿ ನಡೆಸುತ್ತಿದ್ದರು. ಪ್ರತಿಭಟನಾಕಾರರನ್ನು ಪೊಲೀಸರು ತೆರವುಗೊಳಿಸದಿದ್ದರೆ ಜನರೇ ಆ ಕೆಲಸವನ್ನು ಮಾಡಲಿದ್ದಾರೆ ಎಂದು ಮಿಶ್ರಾ ಈಶಾನ್ಯ ದಿಲ್ಲಿಯ ಡಿಸಿಪಿ ವೇದಪ್ರಕಾಶ ಸೂರ್ಯ ಅವರ ಉಪಸ್ಥಿತಿಯಲ್ಲಿಯೇ ಸಭೆಯಲ್ಲಿ ಬೆದರಿಕೆಯೊಡ್ಡಿದ್ದರು. ಮಿಶ್ರಾರ ಭಾಷಣದ ಬೆನ್ನಲ್ಲೇ ಸಂಘಪರಿವಾರದ ಗುಂಪುಗಳು ಮತ್ತು ಮುಸ್ಲಿಂ ಪ್ರತಿಭಟನಾಕಾರರ ನಡುವೆ ಘರ್ಷಣೆಗಳು ಆರಂಭಗೊಂಡಿದ್ದವು ಮತ್ತು ಕೆಲವೇ ಗಂಟೆಗಳಲ್ಲಿ ಈಶಾನ್ಯ ದಿಲ್ಲಿ ಕೋಮು ಹಿಂಸಾಚಾರದ ದಳ್ಳುರಿಯಲ್ಲಿ ಬೇಯತೊಡಗಿತ್ತು.

ತನ್ನೊಂದಿಗೆ ಗುಂಪಿನಲ್ಲಿದ್ದ ಕೆಲವರ ಬಳಿ ಪಿಸ್ತೂಲುಗಳೂ ಇದ್ದವು,ಆದರೆ ಅವರು ಗುಂಡುಗಳನ್ನು ಹಾರಿಸಿದ್ದನ್ನು ತಾನು ನೋಡಲಿಲ್ಲ ಎಂದಿರುವ ಯುವಕ,ತಾನು ಸುಮಾರು ಆರೇಳು ಬೈಕ್‌ಗಳಿಗೆ ಬೆಂಕಿ ಹಚ್ಚಿದ್ದಾಗಿ ಒಪ್ಪಿಕೊಂಡಿದ್ದಾನೆ.

ಹಿಂಸಾಚಾರದಲ್ಲಿ ಭಾಗಿಯಾಗಿದ್ದಕ್ಕೆ ಎಂದಾದರೂ ಪಶ್ಚಾತ್ತಾಪದ ಭಾವನೆ ಮೂಡಿತ್ತೇ ಎಂಬ ಪ್ರಶ್ನೆಗೆ ಯುವಕ,‘ಆ ಸಂದರ್ಭದಲ್ಲಿ ನಾನು ಸರಿಯಾಗಿದ್ದನ್ನೇ ಮಾಡುತ್ತಿದ್ದೇನೆ ಎಂದೆನಿಸಿತ್ತು. ಆದರೆ ನಮ್ಮ ದಾಳಿಗೆ ಗುರಿಯಾದವರೆಲ್ಲ ಬಡವರೇ ಆಗಿದ್ದರು ಎಂದು ನಂತರ ಗೊತ್ತಾಗಿತ್ತು. ಕೆಲವೊಮ್ಮೆ ಪಶ್ಚಾತ್ತಾಪವಾಗುತ್ತದೆ. ಆದರೆ ಏನಾಗಬೇಕಿತ್ತೋ ಅದು ನಡೆದುಹೋಗಿದೆ. ದ್ವೇಷದ ಅಲೆಯಲ್ಲಿ ನನ್ನ ಸಹಚರರ ಜೊತೆ ನಾನು ಕೊಚ್ಚಿಹೋಗಿದ್ದೆ. ಜನರನ್ನು ಕೊಲ್ಲಬಾರದಿತ್ತು,ಆದರೆ ಮುಸ್ಲಿಮರನ್ನು ಮಟ್ಟ ಹಾಕಲು ಅದು ಅಗತ್ಯವಾಗಿತ್ತು. ಈ ಮೊದಲು ಅವರು ಸಿಂಹಗಳಂತೆ ಎಗರಾಡುತ್ತಿದ್ದರು ಮತ್ತು ಈಗ ಇಲಿಗಳಂತಾಗಿದ್ದಾರೆ. ಇನ್ನು ಮುಂದೆ ನಮ್ಮ ವಿರುದ್ಧ ದಾಳಿ ನಡೆಸಲು ಅವರು ಯೋಚಿಸುವುದಿಲ್ಲ’ ಎಂದು ಉತ್ತರಿಸಿದ.

ಕೃಪೆ: caravanmagazine.in 

                                       

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)