varthabharthi


ರಾಷ್ಟ್ರೀಯ

ದಿಲ್ಲಿ ಹೊತ್ತಿ ಉರಿಯುತ್ತಿದ್ದರೂ ಸುಪ್ರೀಂ ಕೋರ್ಟ್ ಮೂಕ ಪ್ರೇಕ್ಷಕನಾಗಿತ್ತು: ಪ್ರಶಾಂತ್ ಭೂಷಣ್

ವಾರ್ತಾ ಭಾರತಿ : 3 Aug, 2020

ಹೊಸದಿಲ್ಲಿ, ಆ.3: ಈಶಾನ್ಯ ದಿಲ್ಲಿಯಲ್ಲಿ ಸಂಭವಿಸಿದ ಕೋಮು ಹಿಂಸಾಚಾರದ ಬಗ್ಗೆ ಸುಪ್ರೀಂ ಕೋರ್ಟ್ ಮೂಕ ಪ್ರೇಕ್ಷಕನಾಗಿದೆ ಎಂದು ನ್ಯಾಯವಾದಿ ಪ್ರಶಾಂತ್ ಭೂಷಣ್ ಹೇಳಿದ್ದಾರೆ.

ಸುಪ್ರೀಂ ಕೋರ್ಟ್ ಹಾಗೂ ಮುಖ್ಯ ನ್ಯಾಯಮೂರ್ತಿ ಎಸ್.ಎ. ಬೊಬ್ಡೆ ವಿರುದ್ಧ ಟ್ವೀಟ್ ಮಾಡಿರುವುದಕ್ಕೆ ತನ್ನ ವಿರುದ್ಧ ಸುಪ್ರೀಂ ಕೋರ್ಟ್ ದಾಖಲಿಸಿದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಲ್ಲಿಸಿದ ಪ್ರತಿ ಅಫಿಡವಿಟ್‌ನಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ತನ್ನ ಟ್ವೀಟ್ ಗಳಿಗೆ ಕ್ಷಮೆ ಕೋರಲು ಪ್ರಶಾಂತ್ ಭೂಷಣ್ ನಿರಾಕರಿಸಿದ್ದಾರೆ. ಅದಕ್ಕೆ ಟ್ವೀಟ್ ಗಳು ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುತ್ತದೆ ಎಂದು ಅವರು ಸಮರ್ಥನೆ ನೀಡಿದ್ದಾರೆ. ಅಲ್ಲದೆ, ಸುಪ್ರೀಂ ಕೋರ್ಟ್‌ನ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ ಫೆಬ್ರವರಿ 15ರಂದು, ದೀಪಕ್ ಗುಪ್ತಾ ಫೆಬ್ರವರಿ 24ರಂದು ವ್ಯಕ್ತಪಡಿಸಿದ ಭಿನ್ನಮತವನ್ನು ತನ್ನ ವಾದಕ್ಕೆ ಪೂರಕವಾಗಿ ಉಲ್ಲೇಖಿಸಿದ್ದಾರೆ.

ನ್ಯಾಯಮೂರ್ತಿ ಚಂದ್ರಚೂಡ ಅವರು ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಫೆಬ್ರವರಿ 15ರಂದು ನೀಡಿದ ಪಿಡಿ ದೇಸಾಯಿ ಸ್ಮಾರಕ 15ನೇ ಉಪನ್ಯಾಸದಲ್ಲಿ ಭಿನ್ನಮತೀಯರಿಗೆ ದೇಶದ್ರೋಹಿಗಳು ಎಂದು ಹಣೆಪಟ್ಟಿ ಹಚ್ಚುವುದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದರು. ಆನಂತರ ಒಂದು ವಾರದ ಬಳಿಕ ದಿಲ್ಲಿಯಲ್ಲಿ ಗಲಭೆ ಆರಂಭವಾಯಿತು. ಆದರೆ, ದಿಲ್ಲಿ ಹೊತ್ತಿ ಉರಿಯುತ್ತಿದ್ದರೂ ಸುಪ್ರೀಂ ಕೋರ್ಟ್ ಮೂಕ ಪ್ರೇಕ್ಷಕನಾಯಿತು ಎಂದು ಅಫಿದಾವಿತ್ ಹೇಳಿದೆ.

ಪ್ರಶಾಂತ್ ಭೂಷಣ್ ಅವರು ಎರಡು ಟ್ವೀಟ್ ‌ಗಳನ್ನು ಮಾಡಿದ್ದರು. ಜೂನ್ 27ರಂದು ಸುಪ್ರೀಂ ಕೋರ್ಟ್‌ನ ವಿರುದ್ಧ ಹಾಗೂ ಎರಡು ದಿನಗಳ ಬಳಿಕ ಮುಖ್ಯ ನ್ಯಾಯಮೂರ್ತಿ ಸಿಜೆಐ ಬೊಬ್ಡೆ ವಿರುದ್ಧ. ಈ ಎರಡು ಟ್ವೀಟ್ ‌ಗಳ ಹಿನ್ನೆಲೆಯಲ್ಲಿ ಅವರ ವಿರುದ್ಧ ಸುಪ್ರೀಂ ಕೋರ್ಟ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿತ್ತು ಹಾಗೂ ಜುಲೈ 22ರಂದು ನೋಟಿಸು ಜಾರಿ ಮಾಡಿತ್ತು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)