varthabharthi


ಅಂತಾರಾಷ್ಟ್ರೀಯ

ಟಿಕ್‌ಟಾಕನ್ನು ಅಮೆರಿಕದ ಕಂಪೆನಿಗೆ ಮಾರಾಟ ಮಾಡಲು 6 ವಾರ ಗಡು: ಟ್ರಂಪ್

ವಾರ್ತಾ ಭಾರತಿ : 4 Aug, 2020

ವಾಶಿಂಗ್ಟನ್, ಆ. 4: ಚೀನಾ ಕಂಪೆನಿಯೊಂದರ ಒಡೆತನದ ಟಿಕ್‌ಟಾಕ್ ಆ್ಯಪ್‌ನ ಅಮೆರಿಕ ಘಟಕವನ್ನು ಅಮೆರಿಕದ ಕಂಪೆನಿಯೊಂದಕ್ಕೆ ಮಾರಾಟ ಮಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಆ ಆ್ಯಪ್‌ಗೆ ಆರು ವಾರಗಳ ಕಾಲಾವಕಾಶವನ್ನು ನೀಡಿದ್ದಾರೆ.

ಆ ಅವಧಿಯಲ್ಲಿ ಮಾರಾಟ ಆಗದಿದ್ದರೆ ಚೀನೀ ಆ್ಯಪ್ ಅಮೆರಿಕದಲ್ಲಿ ವ್ಯವಹಾರವನ್ನು ಮುಂದುವರಿಸಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ. ಅದೂ ಅಲ್ಲದೆ, ಈ ವ್ಯವಹಾರದಿಂದ ಸರಕಾರಕ್ಕೆ ಆರ್ಥಿಕ ಲಾಭವಾಗಬೇಕು ಎಂದಿದ್ದಾರೆ.

‘‘ಅದು ಅಮೆರಿಕದ ಕಂಪೆನಿಯಾಗಬೇಕು... ಅದರ ಒಡೆತನ ಇಲ್ಲಿಯವರಿಗೇ ಸೇರಬೇಕು’’ ಎಂದು ಟ್ರಂಪ್ ನುಡಿದರು. ‘‘ಭದ್ರತೆಯ ವಿಷಯದಲ್ಲಿ ಯಾವುದೇ ಸಮಸ್ಯೆಯನ್ನು ಎದುರಿಸಲು ನಾವು ಸಿದ್ಧರಿಲ್ಲ’’ ಎಂದರು.

ಟಿಕ್‌ಟಾಕನ್ನು ಖರೀದಿಸಲು ಮೈಕ್ರೋಸಾಫ್ಟ್ ಮಾತುಕತೆಯಲ್ಲಿ ತೊಡಗಿದೆ ಎಂದು ಟ್ರಂಪ್ ತಿಳಿಸಿದರು. ಸ್ಮಾರ್ಟ್‌ಫೋನ್‌ಗಳಲ್ಲಿ 60 ಸೆಕೆಂಡ್‌ಗಳ ಚುಟುಕು ವೀಡಿಯೊಗಳನ್ನು ಪ್ರಸಾರ ಮಾಡುವ ಟಿಕ್‌ಟಾಕ್‌ಗೆ ಜಗತ್ತಿನಾದ್ಯಂತ 100 ಕೋಟಿಗೂ ಅಧಿಕ ಬಳಕೆದಾರರಿದ್ದಾರೆ.

ಟಿಕ್‌ಟಾಕ್ ‘ಕಳ್ಳತನ’ವನ್ನು ಚೀನಾ ಸಹಿಸುವುದಿಲ್ಲ: ‘ಚೀನಾ ಡೇಲಿ’ ಪತ್ರಿಕೆ

ಶಾಂಘೈ (ಚೀನಾ), ಆ. ಚೀನಾದ ತಂತ್ರಜ್ಞಾನ ಕಂಪೆನಿಯ ‘ಕಳ್ಳತನ’ವನ್ನು ಚೀನಾ ಸಹಿಸುವುದಿಲ್ಲ ಹಾಗೂ ಸಣ್ಣ ವೀಡಿಯೊಗಳ ಆ್ಯಪ್ ಟಿಕ್‌ಟಾಕ್‌ನ ಅಮೆರಿಕ ಘಟಕವನ್ನು ಮೈಕ್ರೋಸಾಫ್ಟ್ ಕಂಪೆನಿಗೆ ಮಾರಾಟ ಮಾಡುವಂತೆ ಬೈಟ್‌ ಡಾನ್ಸ್ ಕಂಪೆನಿಯ ಮೇಲೆ ಅಮೆರಿಕ ಹೇರಿರುವ ಒತ್ತಡಕ್ಕೆ ಪ್ರತಿಕ್ರಿಯಿಸುವ ಸಾಮರ್ಥ್ಯ ಚೀನಾಕ್ಕಿದೆ ಎಂದು ಚೀನಾದ ಸರಕಾರಿ ಒಡೆತನದ ಪತ್ರಿಕೆ ‘ಚೀನಾ ಡೇಲಿ’ ಮಂಗಳವಾರ ಹೇಳಿದೆ.

ಚೀನಾದ ತಂತ್ರಜ್ಞಾನ ಕಂಪೆನಿಗಳನ್ನು ಅಮೆರಿಕ ‘ಪೀಡಿಸುತ್ತಿರುವುದು’ ಅಮೆರಿಕದ ‘ಅಮೆರಿಕ ಫಸ್ಟ್’ ಎಂಬ ದೂರದರ್ಶಿತ್ವವಿಲ್ಲದ ನೀತಿಯ ಪರಿಣಾಮವಾಗಿದೆ ಹಾಗೂ ಇದು ಚೀನಾಕ್ಕೆ ‘ತಾಂತ್ರಿಕ ಕ್ಷೇತ್ರದಲ್ಲಿ ಶರಣಾಗತಿ ಅಥವಾ ಸಾಯುವವರೆಗೆ ಹೋರಾಟವಲ್ಲದೆ ಬೇರೆ ಆಯ್ಕೆಯಿಲ್ಲ’ ಎಂಬ ಪರಿಸ್ಥಿತಿಯನ್ನು ನಿರ್ಮಿಸಿದೆ ಎಂದು ಪತ್ರಿಕೆಯು ತನ್ನ ಮಂಗಳವಾರದ ಸಂಚಿಕೆಯ ಸಂಪಾದಕೀಯದಲ್ಲಿ ಹೇಳಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)