varthabharthi


ರಾಷ್ಟ್ರೀಯ

ಅಯೋಧ್ಯೆ ಕಾರ್ಯಕ್ರಮಕ್ಕೆ ಮುನ್ನ ಅಸ್ಸಾಮಿನಲ್ಲಿ ಗುಂಪು ಘರ್ಷಣೆ

ವಾರ್ತಾ ಭಾರತಿ : 4 Aug, 2020

ಗುವಾಹಟಿ, ಆ.4: ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕೇವಲ ಎರಡು ದಿನಗಳ ಮುನ್ನ ದಕ್ಷಿಣ ಅಸ್ಸಾಮಿನ ಕಾಚಾರ್ ಜಿಲ್ಲೆಯ ವಾಣಿಜ್ಯ ಕೇಂದ್ರ ಸಿಲ್ಚಾರ್‌ನಲ್ಲಿ ಗುಂಪು ಘರ್ಷಣೆಯಿಂದಾಗಿ ಉದ್ವಿಗ್ನತೆ ಸೃಷ್ಟಿಯಾಗಿದೆ.

 ರವಿವಾರ ಸಂಜೆ ನಗರದಲ್ಲಿಯ ಮುಸ್ಲಿಂ ಬಾಹುಳ್ಯದ ಪ್ರದೇಶವಾಗಿರುವ ಮಾಲುಗ್ರಾಮ್‌ನಲ್ಲಿ ಎರಡು ಕೋಮುಗಳ ನಡುವೆ ಕಲ್ಲುತೂರಾಟವು ಪರಸ್ಪರ ಘರ್ಷಣೆಗೆ ತಿರುಗಿದ ಬಳಿಕ ಕರ್ಫ್ಯೂ ಹೇರಲಾಗಿದೆ. ಉಭಯ ಕೋಮುಗಳಿಗೆ ಸೇರಿದ ಅಂಗಡಿಗಳ ಮೇಲೆ ದಾಳಿಗಳು ನಡೆದಿವೆ. ದುಷ್ಕರ್ಮಿಗಳು ಒಂದು ಆ್ಯಂಬುಲೆನ್ಸ್‌ಗೂ ಹಾನಿಯನ್ನುಂಟು ಮಾಡಿದ್ದಾರೆ. ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಗಿವೆ ಎಂದು ಕಾಚಾರ್ ಜಿಲ್ಲಾಧಿಕಾರಿ ಕೀರ್ತಿ ಜಾಲಿ ಅವರು ಸುದ್ದಿಗಾರರಿಗೆ ತಿಳಿಸಿದರು.

ಇಬ್ಬರು ಬಾಲಕರ ನಡುವಿನ ಜಗಳ ಗುಂಪು ಘರ್ಷಣೆಗೆ ತಿರುಗಿದ್ದು,ಯಾರಿಗೂ ಗಾಯಗಳಾಗಿಲ್ಲ ಎಂದು ಪೊಲೀಸ್ ಅಧಿಕಾರಿಯೋರ್ವರು ತಿಳಿಸಿದರು.

ಘಟನೆಯ ಬಳಿಕ ನೆರೆಯ ಹೈಲಕಂಡಿ ಮತ್ತು ಕರೀಮ್‌ಗಂಜ್ ಜಿಲ್ಲೆಗಳಲ್ಲಿ ಕಟ್ಟೆಚ್ಚರವನ್ನು ವಹಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)