varthabharthi


ನಿಮ್ಮ ಅಂಕಣ

ಜಾತಿ ಮೀರಿ ಬೆಳೆದ ಬಾಬಾಸಾಹೇಬ್ ಡಾ.ಅಂಬೇಡ್ಕರ್

ವಾರ್ತಾ ಭಾರತಿ : 5 Aug, 2020
ರಘೋತ್ತಮ ಹೊ.ಬ., ಮೈಸೂರು

ಬಾಬಾ ಸಾಹೇಬ್ ಅಂಬೇಡ್ಕರ್‌ರನ್ನು ಒಂದು ಜಾತಿಗೆ ಸೀಮಿತಗೊಳಿಸಲು ಸಾಧ್ಯವೇ? ಹೀಗೊಂದು ಪ್ರಶ್ನೆ ಇಟ್ಟುಕೊಂಡು ಚರ್ಚೆಗಿಳಿಯುವುದಾದರೆ ದೊರಕುವ ಉತ್ತರ ಇಲ್ಲ ಎಂಬುದು. ಯಾಕೆ? ನಿಜ, ಮನುಷ್ಯ ಭಾರತದಲ್ಲಿ ಹುಟ್ಟಿನ ಆಧಾರದ ಮೇಲೆ ಆತ ಹೀಗೆ, ಇಲ್ಲಿಗೆ ಎಂದು ನಿರ್ಧರಿಸಲ್ಪಡುತ್ತಾನೆ. ಅದಕ್ಕೆ ಕಾರಣ ಜಾತಿ. ಆದರೆ ಪ್ರಶ್ನೆ ಏನೆಂದರೆ ಜಾತಿಯನ್ನು ಮೀರಿದ ಒಂದು ಅಂಶವಿರುತ್ತದೆ. ಅದು ಸಾಧನೆ. ಹೌದು, ಸಾಧನೆಯ ಆಧಾರದ ಮೇಲೆ ಅಥವಾ ವ್ಯಕ್ತಿಯ ಸಾಧನೆ ತನ್ನ ಜಾತಿಯನ್ನು ಮೀರಿ ಆತನನ್ನು ಮುಂದಕ್ಕೆ ಕೊಂಡೊಯ್ಯುತ್ತದೆ. ಉದಾಹರಣೆಗೆ ಅಬ್ದುಲ್ ಕಲಾಂ. ಅವರನ್ನು ಯಾರೂ ಒಂದು ಧರ್ಮ ಅಥವಾ ಜಾತಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ. ‘ಕ್ಷಿಪಣಿಯ ಜನಕ’ ಎಂದೇ ಅವರು ಪ್ರಖ್ಯಾತ. ಹಾಗೆಯೇ ಆಲ್ಬರ್ಟ್ ಐನ್‌ಸ್ಟೈನ್. ಸಾಪೇಕ್ಷ ಸಿದ್ಧಾಂತದ ಪ್ರತಿಪಾದಕ ಅವರು. ಹಾಗೆಯೇ ಕಾರ್ಲ್ ಮಾರ್ಕ್ಸ್ ಕಮ್ಯುನಿಸ್ಟ್ ಸಿದ್ಧಾಂತದ ಪ್ರತಿಪಾದಕ. ಮಾರ್ಕ್ಸ್ ಜರ್ಮನಿಯಲ್ಲಿ ಹುಟ್ಟಿದ್ದರೂ ಆತನ ಪರ ಮತ್ತು ವಿರೋಧ ಮಾತಾಡುವವರು ಇಂದು ಪ್ರಪಂಚದಾದ್ಯಂತ ಇದ್ದಾರೆ. ವಿರೋಧ ಮಾಡಲಿಕ್ಕಾದರೂ ಮಾರ್ಕ್ಸ್ ಬೇಕೇಬೇಕು! ಹಾಗೆಯೇ ಬಾಬಾಸಾಹೇಬ್ ಅಂಬೇಡ್ಕರ್‌ರ ಸ್ಥಿತಿಯೂ. ಅಂಬೇಡ್ಕರ್ ಪರ ಇರುವವರಿಗೆ ಅವರ ಸಾಧನೆಗಳ ಅಭಿಮಾನ ಕಾರಣವಾದರೆ ವಿರೋಧ ಇರುವವರಿಗೆ ಈ ಪರಿಯ ಅಂಬೇಡ್ಕರ್ ಅಭಿಮಾನಕ್ಕೆ ಕಾರಣವೇನು ಎಂಬ ಹುಡುಕಾಟದ ಕಾರಣ. ಅಲ್ಲಿ ಕಂಡುಬರುವುದು ಪರೋಕ್ಷವಾಗಿ ಅಂಬೇಡ್ಕರರು ಮಾಡಿದ ಸಾಧನೆಗಳ ಅನುಕರಣೆ.

ಹೌದು, ಮಾನವಶಾಸ್ತ್ರದ ಪ್ರಕಾರ ಸಮಾಜ ನಿರ್ಮಾಣ ಆಗುವುದು ಮುಖ್ಯವಾಗಿ ಅನುಕರಣೆಯಿಂದ. ಅದರಲ್ಲೂ ಯಾವುದು ಉತ್ತಮ, ಉನ್ನತ ಅದರ ಅನುಕರಣೆಯಿಂದ. ಉದಾಹರಣೆಗೆ ಆರಂಭದಲ್ಲಿ ಎಲ್ಲರೂ ಅಂಬೇಡ್ಕರರು ಪ್ರತಿಪಾದಿಸಿ ಪಡೆದುಕೊಂಡ ಮೀಸಲಾತಿ ವಿರೋಧಿಸಿದರು. ಆದರೆ ಒಳಗೊಳಗೆ ಅವರನ್ನು ಅನುಕರಿಸಿ ತಮ್ಮ ಸಮುದಾಯಗಳಿಗೂ ಇಷ್ಟಿಷ್ಟು ಶೇಕಡಾ ಎಂದು ಮೀಸಲಾತಿ ಪಡೆದುಕೊಂಡರು. ಹಾಗೆಯೇ ಅಂಬೇಡ್ಕರ್ ಅನುಯಾಯಿಗಳು ದೇಶದಾದ್ಯಂತ ಅವರನ್ನು ಪೂಜಿಸಲು ಆರಂಭಿಸಿದರು. ಆಗ ಇತರ ಸಮುದಾಯಗಳು ತಮ್ಮ ಐಕಾನ್‌ಗಳು ಯಾರು ಎಂದು ಹುಡುಕಲಾರಂಭಿಸಿದರು. ತಮ್ಮ ಜಾತಿಗಳಿಗೂ ಒಬ್ಬೊಬ್ಬ ಐಕಾನ್‌ಗಳನ್ನು ಹುಡುಕಿಕೊಂಡರು. ಹಾಗೆ ಅದಕ್ಕೆ ರಜೆ, ಪ್ರತಿಮೆ, ಸಂಭ್ರಮ...ಇತ್ಯಾದಿ ಆಚರಣೆಗೆ ತಂದರು.
 
ಅಂಬೇಡ್ಕರ್ ಹಿಂದೂ ಧರ್ಮದ ವಿರುದ್ಧ ಅನೇಕ ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ಆಗ ಅವರ ವಿರೋಧಿಗಳು ಅವುಗಳನ್ನು ಓದಲಾರಂಭಿಸಿದರು. ಪರಿಣಾಮ ವೈಯಕ್ತಿಕವಾಗಿ ಅಂಬೇಡ್ಕರ್‌ರನ್ನು ವಿರೋಧಿಸುತ್ತಲೇ ಅವರು ಬರೆದಿರುವ ಅಂಶಗಳ ಆಧಾರದ ಮೇಲೆ ತಮ್ಮ ರಾಜಕೀಯ ಚಿಂತನೆಗಳಿಂದ ತಮ್ಮನ್ನು ತಾವು ಕಟ್ಟಿಕೊಳ್ಳತೊಡಗಿದರು. ಇಂತಹ ಸಂದರ್ಭದಲ್ಲಿ ಅಂಬೇಡ್ಕರ್‌ರನ್ನು ವಿರೋಧಿಯಾಗಿ ಬಿಂಬಿಸಿಯೂ ಅಂತಹವರು ತಮ್ಮ ಓಟ್ ಬ್ಯಾಂಕ್ ಹೆಚ್ಚಿಸಿಕೊಂಡಿರಬಹುದು! ಅಂದಹಾಗೆ ಅಂಬೇಡ್ಕರರು ತಾವು ಬದುಕಿದ್ದಾಗ ರಾಜಕೀಯ ಪಕ್ಷವೊಂದರ ವಿರುದ್ಧ ಪುಸ್ತಕವೊಂದನ್ನು ಬರೆದರು. ಪ್ರಶ್ನೆ ಏನೆಂದರೆ ಈಗ ಆ ಪಕ್ಷದ ಕತೆ ಏನಾಗಿದೆ? ಮುಖ್ಯವಾಗಿ ಭಾರತದ ಪ್ರತಿಯೊಂದೂ ಇಂದು ಸಂವಿಧಾನದ ಮೂಲಕವೇ ನಡೆಯಬೇಕು. ತಿದ್ದುಪಡಿ ಆಗಬೇಕು ಎಂದಾಗಲೂ ಕೂಡ ಅದಕ್ಕೆ ಬಾಬಾಸಾಹೇಬರು ಯಾವ ಮಾರ್ಗ ತೋರಿದ್ದಾರೆ ಹಾಗೆಯೇ ಮುನ್ನಡೆಯಬೇಕು. ಇನ್ನು ಸಂವಿಧಾನ ರದ್ದು ಮಾಡುತ್ತೇವೆ ಎಂದು ಮಾತನಾಡುವವರ ಭಯ ಇರುವುದು ಕೂಡ ಸಂವಿಧಾನದ ಕಾರಣಕ್ಕಲ್ಲ. ಬದಲಿಗೆ ಅದನ್ನು ಅಂಬೇಡ್ಕರ್ ಬರೆದಿದ್ದಾರೆ ಎಂಬ ಕಾರಣಕ್ಕೆ. ಅಂದರೆ ಇಲ್ಲಿ ಅಂಬೇಡ್ಕರ್‌ರ ಸಾಧನೆ, ಅಂದರೆ ಅವರ ಸಂವಿಧಾನ ಸಾಧನೆ ಲೆಕ್ಕಕ್ಕೆ ಬರುತ್ತದೆಯೇ ಹೊರತು ಬೇರೇನಲ್ಲ. ಅಂಬೇಡ್ಕರ್‌ರ ಆ ಸಾಧನೆ ಅದು ಜಾತಿ ಮೀರಿ ಬೆಳೆದಿದೆ. ಯಾಕೆಂದರೆ ಜಾತಿ ಆಧಾರದ ಮೇಲೆ ಹೇಳುವುದಾದರೆ ಅಂಬೇಡ್ಕರ್‌ರ ಜಾತಿ ಅಕ್ಷರ ಕಲಿಯುವ ಹಾಗೆ ಇರಲಿಲ್ಲ!

ಅಂದಹಾಗೆ ನ್ಯಾಯಾಲಯಗಳು ತೀರ್ಪು ಕೊಡುತ್ತವೆ. ಅಲ್ಲಿಯೂ ಅಷ್ಟೇ ಸಂವಿಧಾನವನ್ನು ನೋಡಿ ತೀರ್ಪು ಕೊಡಲಾಗುತ್ತದೆಯೇ ಹೊರತು ಮತ್ತೇನನ್ನೂ ಅಲ್ಲ. ಇನ್ನು ಭಾರತದ ಶಾಸಕಾಂಗ, ಕಾರ್ಯಾಂಗ, ಆಡಳಿತ... ಎಲ್ಲವೂ ಸಂವಿಧಾನಬದ್ಧ. ಈ ನಡುವೆ ಸಾಮಾಜಿಕ ರಚನೆ ಮತ್ತು ಅದಕ್ಕೆ ನೀಡಬೇಕಾದ ಅನುಕೂಲಗಳು? ಅದಕ್ಕೂ ಅಷ್ಟೇ ಅಂಬೇಡ್ಕರ್ ತೆಗೆದುಕೊಂಡ ನಿಲುವುಗಳೇ ಈಗಲೂ ಮಾದರಿ. ಬರೀ ಒಂದು ಜಾತಿಗಲ್ಲ, ಎಲ್ಲಾ ಜಾತಿಗಳಿಗೂ ಅಂಬೇಡ್ಕರ್ ಅಂದು ತಮ್ಮ ಜಾತಿಯ ವಿಮೋಚನೆಗಾಗಿ ಅನುಸರಿಸಿದ ಮಾರ್ಗಗಳೇ ಮಾದರಿ! ಒಟ್ಟಾರೆ ಹೇಳುವುದಾದರೆ ಭಾರತದಲ್ಲಿ ಅಂಬೇಡ್ಕರ್ ನಡೆಸಿದ ಹೋರಾಟಗಳು, ಬರೆದಿಟ್ಟು ಹೋಗಿರುವ ಚಿಂತನೆಗಳು, ಸಾಂವಿಧಾನಿಕ ಸಾಧನೆ... ಭಾರತದ ಪ್ರತಿಯೊಂದು ಬೆಳವಣಿಗೆಗೂ ದಾರಿ ದೀಪವಾಗಿದೆ. ಅದು ಅವರ ಪರ ಅಥವಾ ಅವರ ವಿರುದ್ಧದ ಸುತ್ತಲೇ ಗಿರಕಿ ಹೊಡೆಯುತ್ತಿರುತ್ತದೆ. ನಿಲುವು ತೆಗೆದುಕೊಳ್ಳಲು ಅಂಬೇಡ್ಕರರ ನಿಲುವುಗಳ ಚಿತ್ರಣ ಇಂದು ಎಲ್ಲಾ ಸಮುದಾಯಗಳಿಗೂ ಬೇಕು, ಸರಕಾರಗಳಿಗಂತೂ ಬೇಕೇಬೇಕು. ಹೀಗಿರುವಾಗ ಬಾಬಾಸಾಹೇಬ್ ಅಂಬೇಡ್ಕರ್‌ರನ್ನು ಯಾವುದೋ ಒಂದು ಜಾತಿಗೆ ಸೀಮಿತಗೊಳಿಸುವುದು ಹೇಗೆ ಸಾಧ್ಯ? ಸಾಧ್ಯವಿಲ್ಲ. ಏಕೆಂದರೆ ಅವರ ಸಾಧನೆಗಳು ಎಂದೋ ಜಾತಿ ಮೀರಿ ಬೆಳೆದು ನಿಂತಿವೆೆ. ಉಳಿದಿರುವುದು ಇಡೀ ದೇಶ ಅವರ ಆದರ್ಶದ ಅನುಕರಣೆಯಲ್ಲಿ ಸಾಗಬೇಕಾಗಿರುವುದಷ್ಟೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)