varthabharthi


ಸಂಪಾದಕೀಯ

ಅಭಿವ್ಯಕ್ತಿ ಎಂಬುದು ನ್ಯಾಯಾಂಗ ನಿಂದನೆಯೇ?

ವಾರ್ತಾ ಭಾರತಿ : 5 Aug, 2020

ನ್ಯಾಯಾಂಗ ನಿಂದನೆ ಅಂದರೆ ಯಾವುದು? ಯಾವುದೇ ಜ್ವಲಂತ ಪ್ರಶ್ನೆಯ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸುವುದನ್ನು ನ್ಯಾಯಾಂಗ ನಿಂದನೆ ಎಂದು ಕರೆಯಬಹುದೇ? ಈ ಪ್ರಶ್ನೆ ಈಗ ಮತ್ತೆ ಚರ್ಚೆಗೆ ಬಂದಿದೆ. ಈ ದೇಶದ ಹೆಸರಾಂತ ನ್ಯಾಯವಾದಿ ಹಾಗೂ ನಾಗರಿಕ ಹಕ್ಕುಗಳ ಪರವಾಗಿ ಸದಾ ಧ್ವನಿಯೆತ್ತುತ್ತಾ ಬಂದಿರುವ ಪ್ರಶಾಂತ್ ಭೂಷಣ್ ಮಾಡಿದ ಎರಡು ಟ್ವೀಟ್‌ಗಳನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿದ ಸರ್ವೋಚ್ಚ ನ್ಯಾಯಾಲಯ ಕಾನೂನು ಪ್ರಕ್ರಿಯೆ ಆರಂಭಿಸಲು ಆದೇಶಿಸಿದೆ. ಈ ಮಧ್ಯೆ ಪ್ರಶಾಂತ್ ಭೂಷಣ್ ಅವರು ಸುಪ್ರಿಂಕೋರ್ಟಿಗೆ ಪ್ರತಿ ಪ್ರಮಾಣ ಪತ್ರ ಸಲ್ಲಿಸಿ ತನ್ನ ಟ್ವೀಟ್‌ಗಳು ವಾಕ್ ಸ್ವಾತಂತ್ರ್ಯದ ವ್ಯಾಪ್ತಿಯಲ್ಲಿ ಬರುವುದರಿಂದ ಕ್ಷಮೆ ಕೋರಲು ನಿರಾಕರಿಸಿದ್ದಾರೆ.

ಸುಪ್ರೀಂಕೋರ್ಟಿನ ನ್ಯಾಯಮೂರ್ತಿಗಳಾದ ಚಂದ್ರಚೂಡ ಮತ್ತು ದೀಪಕ್ ಗುಪ್ತಾ ಅವರು ಫೆಬ್ರವರಿ 15 ಮತ್ತು ಫೆಬ್ರವರಿ 24 ರಂದು ವ್ಯಕ್ತಪಡಿಸಿದ ಅಭಿಪ್ರಾಯಗಳನ್ನು ತನ್ನ ವಾದಕ್ಕೆ ಪೂರಕವಾಗಿ ಉಲ್ಲೇಖಿಸಿದ್ದಾರೆ. ನ್ಯಾಯಮೂರ್ತಿ ಚಂದ್ರಚೂಡ ಅವರು ಫೆಬ್ರವರಿ 15ರಂದು ಗುಜರಾತ್ ಉಚ್ಚ ನ್ಯಾಯಾಲಯದಲ್ಲಿ ಪಿ.ಡಿ .ದೇಸಾಯಿ ಸ್ಮಾರಕ ಉಪನ್ಯಾಸ ನೀಡುತ್ತ ‘‘ಭಿನ್ನಮತೀಯರನ್ನು ದೇಶದ್ರೋಹದ ಹಣೆಪಟ್ಟಿ ಹಚ್ಚಿ ದಮನ ಮಾಡಬಾರದು’’ ಎಂದು ಹೇಳಿದ್ದರು. ಇದಾಗಿ ಒಂದು ವಾರದ ಬಳಿಕ ದೇಶದ ರಾಜಧಾನಿ ದಿಲ್ಲಿಯಲ್ಲಿ ಭಾರೀ ಗಲಭೆ ನಡೆಯಿತು ಆಗ ಸುಪ್ರೀಂಕೋರ್ಟ್ ಮೂಕ ಪ್ರೇಕ್ಷಕನಂತೆ ವರ್ತಿಸಿತು ಎಂದು ಪ್ರಶಾಂತ್ ಭೂಷಣ್ ತನ್ನ ಪ್ರತಿ ಪ್ರಮಾಣ ಪತ್ರದಲ್ಲಿ ತಿಳಿಸಿದ್ದಾರೆ.

ಸುಪ್ರೀಂಕೋರ್ಟ್ ಮತ್ತು ಸುಪ್ರೀಂಕೋರ್ಟಿನ ಮುಖ್ಯ ನ್ಯಾಯಮೂರ್ತಿ ಎಸ್. ಎ. ಬೋಬ್ಡೆ ಅವರ ವಿರುದ್ಧ ಪ್ರಶಾಂತ್ ಭೂಷಣ್ ಅವರು ಎರಡು ಟ್ವೀಟ್ ಗಳನ್ನು ಮಾಡಿದ್ದರು. ಭಾರತದ ನ್ಯಾಯಾಂಗ ಟೀಕಾತೀತವೇನಲ್ಲ. ಹಿಂದೆ ಇಂತಹ ವಿಮರ್ಶೆಗಳು ಬಂದಾಗ ಸುಪ್ರೀಂಕೋರ್ಟ್ ಮುಕ್ತ ಮನಸ್ಸಿನಿಂದ ಸ್ವಾಗತಿಸಿದ ಉದಾಹರಣೆಗಳೂ ಇವೆ. ನರ್ಮದಾ ನದಿಗೆ ಕಟ್ಟಲಾಗಿರುವ ಅಣೆಕಟ್ಟಿನ ಕುರಿತು ಸುಪ್ರೀಂಕೋರ್ಟ್ ನೀಡಿದ ತೀರ್ಪಿಗೆ ಸಂಬಂಧಿಸಿದಂತೆ ಅರುಂಧತಿ ರಾಯ್ ಅವರು ಬರೆದ ಲೇಖನವೊಂದು ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಎದುರಿಸಿತ್ತು.ಆಗ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯಾಗಿದ್ದ ಎಸ್.ಪಿ. ಬರೂಚಾ ಅವರು ‘‘ಅರುಂಧತಿ ರಾಯ್ ಹೇಳಿಕೆಯನ್ನು ನಾನು ಒಪ್ಪುವುದಿಲ್ಲ. ಆದರೆ ಅದಕ್ಕಾಗಿ ಅವರ ವಿರುದ್ಧ ಕ್ರಮವನ್ನು ಕೈಗೊಳ್ಳಬೇಕೆಂಬುದನ್ನೂ ನಾನು ಒಪ್ಪುವುದಿಲ್ಲ’’ ಎಂದು ಹೇಳಿದ್ದರು.ಎಸ್. ಮುಳಗಾಂವಕರ್ ಪ್ರಕರಣದಲ್ಲೂ ಅಂದಿನ ಮುಖ್ಯ ನ್ಯಾಯಮೂರ್ತಿ ವಿ.ಆರ್.ಕೃಷ್ಣ ಅಯ್ಯರ್ ಅವರು ‘‘ನ್ಯಾಯಾಂಗವು ಟೀಕಾತೀತವಲ್ಲ. ಆದರೆ ನ್ಯಾಯಾಂಗದ ಘನತೆಯನ್ನು ಕುಗ್ಗಿಸುವ ಟೀಕೆಯಾಗಿದ್ದರೆ ನಿರ್ಲಕ್ಷಿಸಲಾಗದು. ಇಂತಹ ಸಂದರ್ಭಗಳಲ್ಲಿ ಹೃದಯ ವೈಶಾಲ್ಯದ ಮಾನವೀಯ ನಿಲುವು ತಾಳುವುದು ಅಗತ್ಯ’’ ಎಂದು ಹೇಳಿದ್ದರು.

  ನ್ಯಾಯಾಂಗ ನಿಂದನೆ ಅಂದರೆ ಏನು? ನ್ಯಾಯಾಲಯ ನೀಡುವ ತೀರ್ಪುಗಳನ್ನು ಉದ್ದೇಶ ಪೂರ್ವಕವಾಗಿ ಯಾರಾದರೂ ಉಲ್ಲಂಘನೆ ಮಾಡಿದಾಗ ನ್ಯಾಯಾಂಗದ ಘನತೆಯನ್ನು ರಕ್ಷಿಸಲು ನ್ಯಾಯಾಂಗ ನಿಂದನೆ ಎಂಬ ಬ್ರಹ್ಮಾಸ್ತ್ರ ಬಳಸಬಹುದು. ಆದರೆ ಯಾವುದೇ ಸಾರ್ವಜನಿಕ ವಿಷಯದ ಬಗ್ಗೆ ವ್ಯಕ್ತಿಗತವಾಗಿ ಮಾಡುವ ಟೀಕೆಯನ್ನು ಅಥವಾ ಟ್ವೀಟ್‌ಗಳನ್ನು ನ್ಯಾಯಾಂಗ ನಿಂದನೆ ಎಂದು ವ್ಯಾಖ್ಯಾನಿಸಬಹುದೇ? ಬಹಳವೆಂದರೆ ಇದನ್ನು ಮಾನನಷ್ಟ ಎಂದು ಪರಿಗಣಿಸಬಹುದು. ಆದರೆ ಟ್ವಿಟರ್‌ನಂತಹ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುವ ಅಭಿಪ್ರಾಯಗಳನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಿ ಕ್ರಮಕ್ಕೆ ಮುಂದಾದರೆ ಅದು ಸಂವಿಧಾನದತ್ತವಾದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕಿದಂತಲ್ಲವೇ? ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಎತ್ತಿ ಹಿಡಿದ ಇತಿಹಾಸ ಭಾರತೀಯ ನ್ಯಾಯಾಂಗಕ್ಕಿದೆ.

ಅದರಲ್ಲೂ ವಿ. ಆರ್.ಕೃಷ್ಣ ಅಯ್ಯರ್ ಅವರು ಸುಪ್ರೀಂ ಕೋರ್ಟಿನ ನ್ಯಾಯಾಧೀಶರಾಗಿದ್ದಾಗ ಪತ್ರಿಕೆಗಳ ಓದುಗರ ವಿಭಾಗದಲ್ಲಿ ಪ್ರಕಟವಾದ ಪತ್ರಗಳನ್ನು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಎಂದು ಪರಿಗಣಿಸಿ ಸಮಾಜದ ತಳ ಸಮುದಾಯಗಳ ಜನರಿಗೆ ನ್ಯಾಯ ಒದಗಿಸಿರುವುದನ್ನು ಮರೆಯಲು ಸಾಧ್ಯವಿಲ್ಲ. ಆದರೆ ನ್ಯಾಯಾಲಯಗಳ ಇತ್ತೀಚಿನ ತೀರ್ಪುಗಳ ಬಗ್ಗೆ ಅಲ್ಲಲ್ಲಿ ಟೀಕೆಗಳು ಕೇಳಿ ಬರುತ್ತಿರುವುದು ಸುಳ್ಳಲ್ಲ. ಇದನ್ನು ನ್ಯಾಯಾಂಗ ಉದಾರ ಮನಸ್ಸಿನಿಂದ ಸ್ವಾಗತಿಸಬೇಕು. ದೇಶದಲ್ಲಿ ಎಲ್ಲೂ ನ್ಯಾಯ ಸಿಗದಿದ್ದರೆ ಕೊನೆಗೆ ಜನ ನ್ಯಾಯಾಲಯಗಳ ಮೊರೆ ಹೋಗುತ್ತಾರೆ. ಅಲ್ಲೂ ನ್ಯಾಯ ಲಭಿಸದಿದ್ದರೆ ಈ ವ್ಯವಸ್ಥೆಯಲ್ಲಿ ಅವರು ನಂಬಿಕೆ ಕಳೆದುಕೊಳ್ಳುತ್ತಾರೆ. ಪ್ರಜಾಪ್ರಭುತ್ವದ ಆಧಾರ ಸ್ತಂಭವೊಂದು ಅಪನಂಬಿಕೆಗೆ ಗುರಿಯಾಗಬಾರದು. ಹಾಗಾಗದಂತೆ ನ್ಯಾಯಾಂಗ ನೋಡಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)