varthabharthi


ರಾಷ್ಟ್ರೀಯ

ಈ ರೂಪದರ್ಶಿ, 'ಮಿಸ್ ಇಂಡಿಯಾ ಫೈನಲಿಸ್ಟ್' ಗೆ ಯುಪಿಎಸ್‍ಸಿ ಪರೀಕ್ಷೆಯಲ್ಲಿ 93ನೇ ರ‍್ಯಾಂಕ್

ವಾರ್ತಾ ಭಾರತಿ : 5 Aug, 2020

ಹೊಸದಿಲ್ಲಿ: ಛಲವೊಂದಿದ್ದರೆ  ಜೀವನದಲ್ಲಿ ಏನನ್ನೂ ಸಾಧಿಸಬಹುದೆಂಬುದಕ್ಕೆ  ಐಶ್ವರ್ಯ ಶಿಯೋರನ್ ಉದಾಹರಣೆಯಾಗಿದ್ದಾರೆ. ರೂಪದರ್ಶಿ ಹಾಗೂ ಮಿಸ್ ಇಂಡಿಯಾ ಸ್ಫರ್ಧೆಯ ಮಾಜಿ ಫೈನಲಿಸ್ಟ್ ಆಗಿರುವ ಈಕೆ  ಮಂಗಳವಾರ ಬಿಡುಗಡೆಯಾದ ಯುಪಿಎಸ್‍ಸಿ ಫಲಿತಾಂಶ ಪಟ್ಟಿಯಲ್ಲಿ 93ನೇ ರ‍್ಯಾಂಕ್ ಗಳಿಸಿದ್ದಾರೆ.

“ಐಎಎಸ್ ಅಧಿಕಾರಿಣಿಯಾಗಬೇಕೆಂಬುದು ನನ್ನ ಕನಸಾಗಿತ್ತು” ಎಂದು ಹೇಳುವ ಐಶ್ವರ್ಯಾ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುವ ಉದ್ದೇಶದಿಂದ ತಮ್ಮ ಮಾಡೆಲಿಂಗ್ ವೃತ್ತಿಗೆ ತಾತ್ಕಾಲಿಕ ವಿರಾಮ ಹಾಡಿದ್ದರು.

“ನನ್ನ ತಾಯಿ ನನಗೆ ಐಶ್ವರ್ಯಾ ರೈ ಅವರಂತೆಯೇ ಐಶ್ವರ್ಯಾ ಹೆಸರಿಟ್ಟಿದ್ದರಲ್ಲದೆ ನಾನು ಮಿಸ್ ಇಂಡಿಯಾ ಆಗಬೇಕೆಂಬು ಬಯಸಿದ್ದರು. ಅಂತೆಯೇ ಮಿಸ್ ಇಂಡಿಯಾ ಸ್ಫರ್ಧೆಯಲ್ಲಿ ಟಾಪ್ 21 ಫೈನಲಿಸ್ಟ್‍ ಗಳಲ್ಲಿ ನಾನೂ ಒಬ್ಬಳಾಗಿದ್ದೆ'' ಎನ್ನುತ್ತಾರೆ ಈಕೆ.

ಆರಂಭದಲ್ಲಿ ಡೆಲ್ಲಿ ಟೈಮ್ಸ್ ಫ್ರೆಶ್ ಫೇಸ್ ಆಗಿ ಆಯ್ಕೆಯಾಗಿದ್ದ ಆಕೆ ನಂತರ ಮಿಸ್ ಇಂಡಿಯಾದಲ್ಲಿ ಸ್ಪರ್ಧಿಸಿ ಮುಂದೆ ಮಾಡೆಲಿಂಗ್ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದರು.

ಕಲಿಕೆಯಲ್ಲಿ ಯಾವತ್ತೂ ಮುಂದಿದ್ದ ಆಕೆ ಐಎಎಸ್ ಪರೀಕ್ಷೆಗಾಗಿ ಎಲ್ಲಿಯೂ ಕೋಚಿಂಗ್ ಪಡೆಯದೆ ತಾವಾಗಿಯೇ  ಮುತುವರ್ಜಿಯಿಂದ ಕಲಿತಿದ್ದರು. ಶಾಲಾ ದಿನಗಳಲ್ಲಿ ಶಾಲಾ ನಾಯಕಿಯಾಗಿದ್ದ ಆಕೆ  ಶ್ರೀ ರಾಮ್  ಜಾಲೇಜ್ ಆ ಕಾಮರ್ಸ್‍ನಿಂದ ಪದವಿ ಪಡೆದಿದ್ದರು. ಆಕೆಯ ತಂದೆ ಅಜಯ್ ಕುಮಾರ್ ಅವರು ಎನ್‍ಸಿಸಿ ತೆಲಂಗಾಣ ಬೆಟಾಲಿಯನ್‍ನ ಕಮಾಂಡಿಕ್ ಆಫೀಸರ್ ಆಗಿದ್ದಾರೆ. “ಸಿವಿಲ್ ಸರ್ವಿಸಸ್ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗೆ ಬಹಳಷ್ಟು ಅವಕಾಶಗಳಿವೆ'' ಎಂದು ಆಕೆ ಹೇಳುತ್ತಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)