varthabharthi


ರಾಷ್ಟ್ರೀಯ

ಸುಶಾಂತ್ ಸಾವು ಪ್ರಕರಣ ಸಿಬಿಐಗೆ ಹಸ್ತಾಂತರ: ಸುಪ್ರೀಂಗೆ ತಿಳಿಸಿದ ಕೇಂದ್ರ

ವಾರ್ತಾ ಭಾರತಿ : 5 Aug, 2020

ಹೊಸದಿಲ್ಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವು ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಲಾಗಿದೆ ಎಂದು ಕೇಂದ್ರ ಸರಕಾರ ಇಂದು ಸುಪ್ರೀಂ ಕೋರ್ಟ್‍ಗೆ ತಿಳಿಸಿದೆ.

ಪ್ರಕರಣದ ಸಿಬಿಐ ತನಿಖೆ ನಡೆಸಬೇಕೆಂದು ಬಿಹಾರ ಸರಕಾರ ಮಾಡಿರುವ ಮನವಿಗೆ ಕೇಂದ್ರ ಸರಕಾರ ಒಪ್ಪಿ ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ ಎಂದು ಕೇಂದ್ರ ಸರಕಾರದ ಪರ ವಕೀಲರಾಗಿರುವ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಇಂದು ಸುಪ್ರೀಂ ಕೋರ್ಟ್‍ಗೆ ತಿಳಿಸಿದರು. ಬಿಹಾರ ಸರಕಾರದ ಪರ ವಕೀಲ ಮುಕುಲ್ ರೋಹಟ್ಗಿ ತಾವು ಸರಕಾರದ ನಿರ್ಧಾರವನ್ನು ಸ್ವಾಗತಿಸಿದ್ದೇವೆ ಎಂದರು.

ಮುಂಬೈ ಪೊಲೀಸರು ಪ್ರಕರಣದ ಸಾಕ್ಷ್ಯವನ್ನು ತಿರುಚುತ್ತಿದ್ದಾರೆಂಬ ಗಂಭೀರ ಆರೋಪವನ್ನು ಇಂದಿನ ಸುಪ್ರೀಂ ಕೋರ್ಟ್ ವಿಚಾರಣೆ ವೇಳೆ ಸುಶಾಂತ್ ತಂದೆ ಪರ ವಕೀಲ ವಿಕಾಸ್ ಸಿಂಗ್ ಮಾಡಿದರಲ್ಲದೆ, ಮುಂಬೈ ಪೊಲೀಸರು ಬಿಹಾರ ಪೊಲೀಸರಿಗೆ ತನಿಖೆಯಲ್ಲಿ ಸಹಕರಿಸಬೇಕೆಂದೂ ಕೋರಿದ್ದರು.

ತರುವಾಯ ಮಹಾರಾಷ್ಟ್ರ ಸರಕಾರದ ಪರ ವಕೀಲ ಆರ್ ಬಸಂತ್ ತಮ್ಮ ವಾದ ಮಂಡಿಸುತ್ತಾ ಮುಂಬೈ ಪೊಲೀಸರ ವಿರುದ್ಧದ ಆರೋಪಗಳು ರಾಜಕೀಯ ಪ್ರೇರಿತ ಎಂದರಲ್ಲದೆ ಬಿಹಾರ ಪೊಲೀಸರಿಗೆ ಮುಂಬೈ ವ್ಯಾಪ್ತಿಯಲ್ಲಿ ನಡೆದ ಪ್ರಕರಣ ಸಂಬಂಧ ಎಫ್‍ಐಆರ್ ದಾಖಲಿಸುವ ಅಧಿಕಾರವಿಲ್ಲ ಎಂದರು. ಮುಂಬೈಯಲ್ಲಿ ಇಲ್ಲಿಯ ತನಕ ಎಫ್‍ಐಆರ್ ದಾಖಲಾಗಿಲ್ಲ ಹಾಗೂ ಮುಂಬೈ ಪೊಲೀಸರ ತನಿಖೆಯ ಕುರಿತು ತೀರ್ಪು ನೀಡುವ ಹಕ್ಕು ಬಿಹಾರ ಪೊಲೀಸರಿಗಿಲ್ಲ ಎಂದರು.

ಮುಂಬೈ ಪೊಲೀಸರು ಅಸ್ವಾಭಾವಿಕ ಸಾವು ಪ್ರಕರಣ ದಾಖಲಿಸಿದ್ದು ಪಾಟ್ನಾದಲ್ಲಿ ದಾಖಲಾಗಿರುವ ಎಫ್‍ಐಆರ್ ಇತರ ವಿಚಾರಗಳನ್ನು ಎತ್ತಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಮಹಾರಾಷ್ಟ್ರ, ಬಿಹಾರ ಸರಕಾರಗಳು ಹಾಗೂ ಕೇಂದ್ರ ಸರಕಾರಗಳು ತಮ್ಮ ಪ್ರತಿಕ್ರಿಯೆಯನ್ನು ಮೂರು ದಿನಗಳೊಳಗೆ ಸಲ್ಲಿಸುವಂತೆ ಹಾಗೂ ಮಹಾರಾಷ್ಟ್ರ ಸರಕಾರಕ್ಕೆ ತನಿಖೆಯ ಕುರಿತು ವರದಿಯನ್ನು ಸಲ್ಲಿಸುವಂತೆ ಹೇಳಿದೆ.  ಮುಂದಿನ ವಿಚಾರಣೆ ಮುಂದಿನ ವಾರ ನಡೆಯಲಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)