varthabharthi


ಕ್ರೀಡೆ

ಯುಎಸ್ ಓಪನ್: ಸುಮಿತ್ ನಾಗಲ್ ನೇರ ಪ್ರವೇಶ

ವಾರ್ತಾ ಭಾರತಿ : 6 Aug, 2020

ಹೊಸದಿಲ್ಲಿ: ಈ ತಿಂಗಳಾಂತ್ಯದಲ್ಲಿ ಆರಂಭಗೊಳ್ಳಲಿರುವ ಯುಎಸ್ ಓಪನ್ ಟೂರ್ನಮೆಂಟ್‌ನಿಂದ ಹಲವಾರು ಅಗ್ರ ಶ್ರೇಯಾಂಕದ ಆಟಗಾರರು ಹೊರಬಂದ ನಂತರ ಯುಎಸ್ ಓಪನ್ ಸಿಂಗಲ್ಸ್‌ನಮುಖ್ಯ ಡ್ರಾದಲ್ಲಿ ಭಾರತದ ಯುವ ಟೆನಿಸ್ ಆಟಗಾರ ಸುಮಿತ್ ನಾಗಲ್ ನೇರ ಪ್ರವೇಶವನ್ನು ಪಡೆದಿದ್ದಾರೆ. 128ನೇ ಶ್ರೇಯಾಂಕದೊಂದಿಗೆ ನೇರ ಪ್ರವೇಶವನ್ನು ಪಡೆದ ಕೊನೆಯ ಆಟಗಾರ ಸುಮಿತ್ ನಾಗಲ್.

  ಪುರುಷರ ಸಿಂಗಲ್ಸ್‌ನಲ್ಲಿ ನಾಗಲ್ ಭಾರತದ ಪರ ಸ್ಥಾನ ಗಿಟ್ಟಿಸಿಕೊಂಡ ಏಕೈಕ ಆಟಗಾರ. ರೋಜರ್ ಫೆಡರರ್ ಮುಖಾಮುಖಿ ಸೇರಿದಂತೆ ಕಳೆದ ವರ್ಷ ನಾಗಲ್ ತನ್ನ ಎಲ್ಲ ಅರ್ಹತಾ ಸುತ್ತಿನ ಪಂದ್ಯಗಳನ್ನು ಗೆದ್ದ ನಂತರ ಮೊದಲ ಗ್ರಾನ್ ಸ್ಲಾಮ್ ತಲುಪಿದ್ದರು.

 ಮೂರು ಬಾರಿ ಯುಎಸ್ ಓಪನ್ ಚಾಂಪಿಯನ್ ಮತ್ತು ವಿಶ್ವದ ನಂ.1 ಆಟಗಾರ ನೊವಾಕ್ ಜೊಕೊವಿಕ್, ಫೆಡರರ್ ಮತ್ತು ರಾಫೆಲ್ ನಡಾಲ್ ಸೇರಿದಂತೆ ಹಲವು ಮಂದಿ ಖ್ಯಾತ ಆಟಗಾರರು ಯುಎಸ್ ಓಪನ್‌ನಿಂದ ಹೊರಗುಳಿದಿದ್ದಾರೆ.

 ಮೊಣಕಾಲಿನ ಗಾಯದಿಂದಾಗಿ ಫೆಡರರ್ ಈ ವರ್ಷ ಎಲ್ಲಾ ಸ್ಪರ್ಧೆಗಳಿಂದ ಹಿಂದೆ ಸರಿದಿದ್ದರು. ಹಾಲಿ ಚಾಂಪಿಯನ್ ನಡಾಲ್ ಕೋವಿಡ್-19 ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕೂಟದಿಂದ ಹೊರಬಂದರು. ಮಾಜಿ ಚಾಂಪಿಯನ್ ಸ್ಟಾನ್ ವಾವ್ರಿಂಕಾ, ನಿಕ್ ಕಿರ್ಗಿಯೊಸ್, ಫ್ಯಾಬಿಯೊ ಫೊಗ್ನಿನಿ ಮತ್ತು ಗೇಲ್ ಮೊನ್ಫಿಲ್ಸ್ ಪುರುಷರ ಸಿಂಗಲ್ಸ್‌ನಿಂದ ಕಾಣೆಯಾದ ಇತರ ಅಗ್ರ ಶ್ರೇಯಾಂಕದ ಆಟಗಾರರು.

        ಕೊರೋನ ವೈರಸ್ ಏಕಾಏಕಿ ಹೆಚ್ಚಳಗೊಂಡ ಕಾರಣ ವೃತ್ತಿಪರ ಟೆನಿಸ್ ಟೂರ್ ಮಾರ್ಚ್ ನಿಂದ ಸ್ಥಗಿತಗೊಂಡಿದೆೆ. ಈ ವಾರ ಇಟಲಿಯಲ್ಲಿ ನಡೆದ ಪಲೆರ್ಮೊ ಲೇಡೀಸ್ ಓಪನ್‌ನಲ್ಲಿ ಮಹಿಳೆಯರಿಗಾಗಿ ಆಟ ಪುನರಾರಂಭವಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)