varthabharthi


ಕರ್ನಾಟಕ

ಕೊಡಗು: ಭಾರೀ ಭೂಕುಸಿತ; ತಲಕಾವೇರಿ ಪ್ರಧಾನ ಅರ್ಚಕರ ಸಹಿತ ಐವರು ಜೀವಂತ ಸಮಾಧಿ

ವಾರ್ತಾ ಭಾರತಿ : 6 Aug, 2020

ಮಡಿಕೇರಿ, ಆ.6: ಬಿರುಗಾಳಿ ಸಹಿತ ಮಹಾಮಳೆಗೆ ಬ್ರಹ್ಮಗಿರಿ ಬೆಟ್ಟದ ಒಂದು ಭಾಗ ಜರಿದು ಎರಡು ಮನೆಗಳ ಮೇಲೆ ಬಿದ್ದ ಪರಿಣಾಮ ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕ ನಾರಾಯಣ ಆಚಾರ್ (80) ಸೇರಿದಂತೆ ಐವರು ಜೀವಂತ ಸಮಾಧಿಯಾಗಿರುವ ಘಟನೆ ಕೊಡಗು ಜಿಲ್ಲೆಯ ಭಾಗಮಂಡಲ ವ್ಯಾಪ್ತಿಯ ತಲಕಾವೇರಿಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.

ತಲಕಾವೇರಿ ದೇವಸ್ಥಾನದ ಅರ್ಚಕರ ಎರಡು ಮನೆಗಳ ಮೇಲೆ ಬೆಟ್ಟವೇ ಕುಸಿದು ಬಿದ್ದಿದ್ದು, ಪ್ರವಾಹದ ರೀತಿ ಹರಿದ ನೀರು, ಮಣ್ಣು ಹಾಗೂ ಬಿದ್ದ ಮರಗಳ ರಭಸಕ್ಕೆ ಮನೆಗಳ ಸಹಿತ ವ್ಯಕ್ತಿಗಳು ಮತ್ತು ಎಲ್ಲಾ ಪರಿಕರಗಳು ನಾಪತ್ತೆಯಾಗಿವೆ. ಘಟನೆ ನಡೆದ ಪ್ರದೇಶದಲ್ಲಿ ಮನೆಗಳಿದ್ದ ಕುರುಹುಗಳೇ ಇಲ್ಲವಾಗಿವೆ.

ನಾರಾಯಣ ಆಚಾರ್ ಅವರ ಪತ್ನಿ ಶಾಂತಾ(70), ಸಹೋದರ ಆನಂದತೀರ್ಥ ಸ್ವಾಮಿ (86), ಸಹಾಯಕ ಅರ್ಚಕರಾದ ಕಾಸರಗೋಡಿನ ಮುಳ್ಳೇರಿಯಾದ ಶ್ರೀನಿವಾಸ ಪಡ್ಡಿಲ್ಲಾಯ (36) ಹಾಗೂ ಬಿ.ಸಿ.ರೋಡ್‌ನ ರವಿಕಿರಣ್ (29) ಮಣ್ಣಿನಡಿ ಸಿಲುಕಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸಹಾಯಕ ಅರ್ಚಕರಿಬ್ಬರೂ ಒಂದು ತಿಂಗಳ ಹಿಂದೆಯಷ್ಟೇ ತಮ್ಮ ಊರುಗಳಿಂದ ತಲಕಾವೇರಿಗೆ ಬಂದಿದ್ದರು. ಇವರಿಬ್ಬರೂ ಅವಿವಾಹಿತರಾಗಿದ್ದಾರೆ. ನಾರಾಯಣ ಆಚಾರ್ ಅವರಿಗೆ ಇಬ್ಬರು ಪುತ್ರಿಯರಿದ್ದು, ಆಸ್ಟ್ರೇಲಿಯದಲ್ಲಿ ಉದ್ಯೋಗದಲ್ಲಿದ್ದಾರೆ.

ಘಟನೆ ಸಂದರ್ಭ ಹಸುಗಳು ಹಾಗೂ ಕೆಲವು ವಾಹನಗಳು ಕೂಡ ಕೊಚ್ಚಿ ಹೋಗಿರುವ ಬಗ್ಗೆ ಮಾಹಿತಿ ಲಭಿಸಿದೆ. ಐವರು ನಾಪತ್ತೆಯಾಗಿದ್ದಾರೆ ಎಂದು ಜಿಲ್ಲಾಡಳಿತ ಪ್ರಕರಣ ದಾಖಲಿಸಿಕೊಂಡಿದ್ದು, ಎನ್‌ಡಿಆರ್‌ಎಫ್ ತಂಡದ ಮೂಲಕ ಪತ್ತೆ ಕಾರ್ಯಾಚರಣೆ ನಡೆಸಿದೆ.

ಭಾಗಮಂಡಲ ಹಾಗೂ ತಲಕಾವೇರಿಯಲ್ಲಿ ಗಾಳಿ ಸಹಿತ ಮಳೆಯಾಗುತ್ತಿರುವುದರಿಂದ ಮತ್ತು ದುರಂತ ನಡೆದ ಪ್ರದೇಶದಲ್ಲಿ ರಭಸವಾಗಿ ನೀರು ಹರಿಯುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಜೆಸಿಬಿ ಯಂತ್ರವನ್ನು ತರಲು ಭಾಗಮಂಡಲ ರಸ್ತೆಯುದ್ದಕ್ಕೂ ಬಿದ್ದಿರುವ ಮಣ್ಣಿನ ರಾಶಿ ಅಡ್ಡಿಯಾಗಿದೆ. ಅಲ್ಲದೆ ಭಾಗಮಂಡಲದಲ್ಲಿ ಕಾವೇರಿ ನದಿ ನೀರು ಪ್ರವಾಹದ ರೂಪದಲ್ಲಿ ರಸ್ತೆಯನ್ನು ಆವರಿಸಿದ್ದು, ವಾಹನಗಳ ಸಂಚಾರ ಕಷ್ಟ ಸಾಧ್ಯವಾಗಿದೆ. ಶುಕ್ರವಾರ ಕಾರ್ಯಾಚರಣೆಯನ್ನು ಮುಂದುವರಿಸುವುದಾಗಿ ಪ್ರಕೃತಿ ವಿಕೋಪ ನಿರ್ವಹಣಾ ತಂಡದ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಭಾಗಮಂಡಲದಿಂದ ತಲಕಾವೇರಿಗೆ ತೆರಳುವ ರಸ್ತೆಯಲ್ಲಿ ಹಲವು ಭಾಗಗಳಲ್ಲಿ ಭೂ ಕುಸಿತ ಉಂಟಾಗಿದ್ದು, ಯಾವುದೇ ವಾಹನಗಳು ತೆರಳಲು ಸಾಧ್ಯವಾಗುತ್ತಿಲ್ಲ. ಲೋಕೋಪಯೋಗಿ ಇಲಾಖೆ ಮೂಲಕ ಮಣ್ಣನ್ನು ತೆರವುಗೊಳಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದ್ದಾರೆ.

ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚುರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಎಂ.ಪಿ.ಸುನೀಲ್ ಸುಬ್ರಮಣಿ ಅವರು ಸ್ಥಳ ಪರಿಶೀಲನೆ ನಡೆಸಿದರು.

ಬಿ.ಸಿ.ರೋಡ್‌ನ ಅರ್ಚಕ ಕಣ್ಮರೆ

ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಸಂಭವಿಸಿರುವ ಭೂ ಕುಸಿತ ದುರಂತದಲ್ಲಿ ಬಂಟ್ವಾಳ ತಾಲೂಕಿನ ರವಿಕಿರಣ್ ರಾವ್ (29) ಕಣ್ಮರೆಯಾಗಿರುವುದಾಗಿ ತಿಳಿದುಬಂದಿದೆ. ತಾಲೂಕಿನ ಕಳ್ಳಿಗೆ ಗ್ರಾಮದ ಕನಪಾಡಿ ದೈವಸ್ಥಾನದ ಬಳಿಯ ರಾಮಕೃಷ್ಣ ರಾವ್ ಅವರ ಅವಳಿ ಪುತ್ರರಲ್ಲಿ ಮೊದಲನೆಯವರಾದ ರವಿಕಿರಣ್ ರಾವ್ ಎರಡು ವರ್ಷಗಳ ಹಿಂದೆ ತಲಕಾವೇರಿಗೆ ಸಹಾಯಕ ಅರ್ಚಕರಾಗಿ ತೆರಳಿದ್ದರು. ಮೇ ತಿಂಗಳಲ್ಲಿ ಮನೆಗೆ ಬಂದು ಹೋಗಿದ್ದರು ಎನ್ನಲಾಗಿದೆ.

ನಾಪತ್ತೆಯಾದವರಲ್ಲಿ ಕಾಸರಗೋಡಿನ ಅರ್ಚಕ
ಕೊಡಗು ಕಾವೇರಿಯ ಮೂಲಸ್ಥಾನ ತಲಕಾವೇರಿಯಲ್ಲಿ ರುವ ಬ್ರಹ್ಮಗಿರಿಬೆಟ್ಟ ಕುಸಿದ ಪರಿಣಾಮ ನಾಪತ್ತೆಯಾದವರಲ್ಲಿ ಕಾಸರಗೋಡು ಅಡೂರು ನಿವಾಸಿ ಒಳಗೊಂಡಿದ್ದು, ನಾಪತ್ತೆಯಾದ ಸಹಾಯಕ ಅರ್ಚಕರಲ್ಲಿ ಅಡೂರು ಕಾಯರ್ತಿಮೂಲೆ ಶ್ರೀನಿವಾಸ ಪಡ್ಡಿಲ್ಲಾಯ(36)ಸೇರಿದ್ದಾರೆ. ಇವರು ಅಡೂರು ನಿವಾಸಿಯಾಗಿದ್ದು, ಸಹಾಯಕ ಅರ್ಚಕರಾಗಿ ತಲಕಾವೇರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು. ಲಾಕ್ ಡೌನ್ ಹಿನ್ನೆಲೆಯಲ್ಲಿ ಊರಿನಲ್ಲಿದ್ದ ಅವರು ಎರಡು ವಾರಗಳ ಹಿಂದೆ ಲಾಕ್‌ಡೌನ್ ಸಡಿಲಿಕೆಯ ಸಂದರ್ಭ ತಲಕಾವೇರಿಗೆ ತೆರಳಿದ್ದರು.

'ಸುರಕ್ಷಿತ ಸ್ಥಳಕ್ಕೆ ತೆರಳಲು ಸೂಚಿಸಿದ್ದರೂ ತೆರಳದ ನಾರಾಯಣ ಆಚಾರ್'
ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಜಿ.ಬೋಪಯ್ಯ, ಪ್ರಧಾನ ಅರ್ಚಕರಾದ ನಾರಾಯಣ ಆಚಾರ್ ಅವರಿಗೆ ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಈ ಹಿಂದೆ ಮನವಿ ಮಾಡಿಕೊಳ್ಳಲಾಗಿತ್ತು. ಆದರೆ, ಅವರು ಕಾವೇರಮ್ಮನ ಸನ್ನಿಧಿಯಲ್ಲೇ ಇರುವುದಾಗಿ ತಿಳಿಸಿದ್ದರು ಎಂದು ಬೇಸರ ವ್ಯಕ್ತಪಡಿಸಿದರು.

ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ವಿ.ಅನ್ಬುಕುಮಾರ್ ಸೂಚನೆ

ಜಿಲ್ಲೆಯಲ್ಲಿ ಎಡಬಿಡದೆ ಧಾರಾಕಾರ ಮಳೆ ಸುರಿಯುತ್ತಿದ್ದು, ಪ್ರವಾಹ ಉಂಟಾಗುವ ಪ್ರದೇಶ, ತಗ್ಗು ಪ್ರದೇಶದಲ್ಲಿ ವಾಸಿಸುವ ಜನರನ್ನು ಸ್ಥಳಾಂತರಿಸುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ.ಅನ್ಬುಕುಮಾರ್ ನಿರ್ದೇಶನ ನೀಡಿದ್ದಾರೆ.

ಪರಿಹಾರ ಕೇಂದ್ರ ಸ್ಥಾಪನೆ: ಕೊಡಗು ಜಿಲ್ಲೆಯಲ್ಲಿ ಕಳೆದ 3 ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ಕೆಲವು ಭಾಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಸದ್ಯ ಜಿಲ್ಲೆಯ ಮೂರು ಭಾಗಗಳಲ್ಲಿ 3 ಪರಿಹಾರ ಕೇಂದ್ರಗಳನ್ನು ತೆರೆಯಲಾಗಿದ್ದು, ಒಟ್ಟು 20 ಕುಟುಂಬದ 48 ಜನರಿಗೆ ಆಶ್ರಯ ನೀಡಲಾಗಿದೆ. ಪರಿಹಾರ ಕೇಂದ್ರಗಳಲ್ಲಿ ಆಹಾರ ಸೇರಿದಂತೆ ಎಲ್ಲಾ ಮೂಲಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ತಿಳಿಸಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)