varthabharthi


ಸಂಪಾದಕೀಯ

ಕ್ಷಯವನ್ನು ಅಕ್ಷಯವಾಗಿಸುತ್ತಿರುವ ಕೊರೋನ ದಿನಗಳು!

ವಾರ್ತಾ ಭಾರತಿ : 7 Aug, 2020

ಶ್ರೀಮಂತ ರಾಷ್ಟ್ರಗಳ ಕೊರೋನ ವಿರುದ್ಧ ಹೋರಾಟದಲ್ಲಿ ಸ್ಪರ್ಧೆಗಿಳಿದು ಬಡರಾಷ್ಟ್ರಗಳು ಇತ್ತ ಕೊರೋನವನ್ನು ಪೂರ್ಣ ಪ್ರಮಾಣದಲ್ಲಿ ಎದುರಿಸಲಾಗದೆ, ಅತ್ತ ಕೊರೋನದ ಜೊತೆಗೆ ಇನ್ನಿತರ ಅವಘಡಗಳನ್ನು ಮೈಮೇಲೆ ಎಳೆದುಕೊಂಡು ಕಂಗಾಲಾಗಿ ನಿಂತಿವೆ. ಈಗಾಗಲೇ ತಮ್ಮ ನೆಲದಲ್ಲಿ ಕೊರೋನಕ್ಕಿಂತ ಭೀಕರವಾದ ಸಾಂಕ್ರಾಮಿಕ ರೋಗಗಳನ್ನು ಸಾಕುತ್ತಾ ಬಂದಿರುವ ಭಾರತದಂತಹ ಹಲವು ಬಡ ದೇಶಗಳು ಕೊರೋನ ಸಾಂಕ್ರಾಮಿಕ ರೋಗವನ್ನು ಎದುರಿಸಲು ಲಾಕ್‌ಡೌನ್ ಘೋಷಿಸಿ ಅಳಿದುಳಿದ ಆರ್ಥಿಕತೆಯನ್ನು ಸರ್ವನಾಶ ಮಾಡಿಕೊಂಡಿವೆ. ‘ಕೊರೋನ ಮಾರಣಾಂತಿಕ ರೋಗವಲ್ಲ, ಅದು ಅತಿ ಶೀಘ್ರವಾಗಿ ಹರಡುವ ವೈರಸ್ ಅಷ್ಟೇ’ ಎನ್ನುವುದನ್ನು ಈಗಾಗಲೇ ವೈದ್ಯರು ತಿಳಿಸಿದ್ದಾರೆ.

ಇನ್ನೂ ಔಷಧಿ ಕಂಡು ಹುಡುಕದಿದ್ದರೂ ಕೊರೋನ ಸೋಂಕಿತರು ಯಾವುದೇ ಔಷಧಿಯಿಲ್ಲದೆಯೇ ಗುಣವಾಗಿದ್ದಾರೆ. ಆರಂಭದಲ್ಲಿ ಸರಕಾರಿ ಆಸ್ಪತ್ರೆಗಳಲ್ಲಿ ಕ್ವಾರಂಟೈನ್ ಕಡ್ಡಾಯ ಎಂದು ಘೋಷಿಸಲಾಗಿದ್ದರೂ, ಈಗ ಕೊರೋನ ಸೋಂಕಿತರು ಮನೆಯಲ್ಲೇ ಆರಾಮವಾಗಿ ವಿಶ್ರಾಂತಿಯನ್ನು ಪಡೆಯಬಹುದು ಎಂದು ವೈದ್ಯರು ಹೇಳುತ್ತಿದ್ದಾರೆ. ಇತರ ರೋಗಗಳಿಂದ ಬಳಲುತ್ತಿರುವ ವೃದ್ಧರಿಗೆ ಈ ಸೋಂಕು ದುಷ್ಪರಿಣಾಮಗಳನ್ನು ಬೀರಬಹುದು ಎನ್ನುವ ಅಪಾಯವನ್ನು ಹೊರತು ಪಡಿಸಿ, ಈ ರೋಗಕ್ಕೆ ಅಂಜಿ ಮನೆಮಾರು ತ್ಯಜಿಸಿ ಕೂರುವಷ್ಟು ‘ಆರೋಗ್ಯವಂತ ಸಮಾಜ’ವೊಂದನ್ನು ನಾವು ಹೊಂದಿಲ್ಲ. ತನ್ನ ಮಡಿಲಲ್ಲಿ ಹಸಿವು ಎನ್ನುವ ಮಾರಕ ರೋಗವೊಂದನ್ನು ಬಚ್ಚಿಟ್ಟುಕೊಂಡ ಯಾವುದೇ ದೇಶಗಳು ಕೊರೋನದಂತಹ ಸಾಂಕ್ರಾಮಿಕ ರೋಗಕ್ಕೆ ಹೆದರಿ ಬಾಗಿಲು ಮುಚ್ಚಿ ಮನೆಯೊಳಗೆ ಎರಡು ಮೂರು ತಿಂಗಳು ಕಳೆಯುವುದೆಂದರೆ, ಇನ್ನಷ್ಟು ರೋಗಗಳನ್ನು ಮೈಮೇಲೆ ಎಳೆದುಕೊಂಡಂತೆ. ಮಾತ್ರವಲ್ಲ, ಇರುವ ರೋಗಗಳನ್ನು ಇನ್ನಷ್ಟು ಭೀಕರವಾಗಿಸಿ ಸಾವುನೋವುಗಳಿಗೆ ಕಾರಣವಾದಂತೆ. ಇದೀಗ ಕೊರೋನ ಕುರಿತಂತೆ ಬಿಡುಗಡೆಯಾಗುತ್ತಿರುವ ಹೊಸ ಹೊಸ ಸತ್ಯಗಳು, ಭವಿಷ್ಯದಲ್ಲಿ ಬಡರಾಷ್ಟ್ರಗಳು ಲಾಕ್‌ಡೌನ್ ಕಾರಣಗಳಿಂದ ಎದುರಿಸಬೇಕಾಗಿರುವ ಅನಾಹುತಗಳನ್ನು ಹೇಳುತ್ತಿವೆ.

ಭಾರತ ಈ ಹಿಂದೆ ಕೊರೋನಕ್ಕಿಂತ ಭೀಕರವಾದ ಮಾರಣಾಂತಿಕ ಸಾಂಕ್ರಾಮಿಕ ರೋಗಗಳನ್ನು ಎದುರಿಸಿದೆ. ಅವುಗಳಲ್ಲಿ ಹತ್ತು ಹಲವು ರೋಗಗಳು ನಮ್ಮ ನಡುವಿನಿಂದ ಕಾಣೆಯಾಗಿವೆ. ಪ್ಲೇಗ್, ಇಲಿಜ್ವರ, ಸಿಡುಬು, ಕಾಲರಾದಿಂದ ಊರಿಗೆ ಊರೇ ಸಾವಿನ ಬಾಗಿಲು ತಟ್ಟಿದ ಉದಾಹರಣೆಗಳಿವೆ. ಇದೇ ಸಂದರ್ಭದಲ್ಲಿ, ಭಾರತ ಕೆಲವು ರೋಗಗಳನ್ನು ಸಂಪೂರ್ಣವಾಗಿ ಎದುರಿಸಲಾಗದೆ, ಇನ್ನೂ ತನ್ನ ಮಡಿಲಲ್ಲಿ ಬಚ್ಚಿಟ್ಟುಕೊಂಡಿದೆ ಮತ್ತು ಈ ರೋಗಗಳು ಕೊರೋನಕ್ಕಿಂತ ಹಲವು ಪಟ್ಟು ಅಪಾಯಕಾರಿ. ಯಾಕೆಂದರೆ, ಕೊರೋನ ವೃದ್ಧರು, ದೈಹಿಕವಾಗಿ ತೀರಾ ದುರ್ಬಲರನ್ನು ಬಲಿತೆಗೆದುಕೊಳ್ಳುತ್ತದೆಯಾದರೆ, ಭಾರತದಲ್ಲಿ ಈಗಾಗಲೇ ಅಸ್ತಿತ್ವದಲ್ಲಿರುವ ರೋಗಗಳು ಯುವಕರು, ವೃದ್ಧರು ಎಂಬ ಭೇದವನ್ನೇ ಮಾಡದೆ ಹರಡುತ್ತಾ ಅವರನ್ನು ದೈಹಿಕವಾಗಿ ಹಿಂಡಿ ಹಿಪ್ಪೆ ಮಾಡಿ ಎಸೆದು ಬಿಡುತ್ತವೆ. ಈ ರೋಗದ ಹೆಸರೇ ‘ಕ್ಷಯ’. ಭಾರತದಲ್ಲಿ ಕ್ಷಯ ಅಕ್ಷಯವಾಗುತ್ತಿರುವ ದಿನಗಳಲ್ಲಿ ಕೊರೋನ ಕಾಲಿಟ್ಟಿದೆ. ಕೊರೋನದಿಂದ ಸತ್ತವರ ಸಂಖ್ಯೆಯ ಹಿಂದಿರುವ ವಾಸ್ತವವೇನು ಎನ್ನುವುದು ಇನ್ನಷ್ಟೇ ನಮಗೆ ಸ್ಪಷ್ಟವಾಗಬೇಕು. ಆದರೆ ಈ ಕೊರೋನದೆಸೆಯಿಂದ ಭಾರತದಲ್ಲಿ ಕ್ಷಯ, ಮಲೇರಿಯಾದಂತಹ ರೋಗಗಳು ಇನ್ನಷ್ಟು ಭೀಕರವಾಗಲಿವೆ ಎನ್ನುವ ಆತಂಕವನ್ನು ವಿಶ್ವದ ವೈದ್ಯಕೀಯ ತಜ್ಞರು ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಜಗತ್ತಿನ ಭೀಕರ ಮಾರಣಾಂತಿಕ ಕಾಯಿಲೆಯಾಗಿ ಗುರುತಿಸಲ್ಪಟ್ಟಿರುವುದು ಕೊರೋನ ಅಲ್ಲ, ಬದಲಿಗೆ ಕ್ಷಯ. ಬಹುಶಃ ಈ ರೋಗ ಶ್ರೀಮಂತ ರಾಷ್ಟ್ರಗಳ ಸಮಸ್ಯೆ ಅಲ್ಲವಾಗಿರುವುದರಿಂದ ಅದು ಜಗತ್ತಿನ ಸಮಸ್ಯೆಯಾಗಿ ಬಿಂಬಿತವಾಗಿಲ್ಲ. ಕೊರೋನ ನೇರವಾಗಿ ಶ್ರೀಮಂತ ರಾಷ್ಟ್ರಗಳನ್ನೇ ಗುರಿ ಮಾಡಿ ಹರಡುತ್ತಾ ಹೋದ ಕಾರಣಕ್ಕಾಗಿ ಜಗತ್ತಿನಲ್ಲಿ ಕೊರೋನ ಹಾಹಾಕಾರವಾಯಿತು. ಅಧ್ಯಯನದ ಪ್ರಕಾರ, ಕ್ಷಯ ರೋಗಕ್ಕೆ ಪ್ರತಿ ವರ್ಷ 15 ಲಕ್ಷ ಜನರು ಮೃತಪಡುತ್ತಿದ್ದಾರೆ. ಈ ಜನರು ಬಹುತೇಕ ಅಭಿವೃದ್ಧಿ ಹೊಂದುತ್ತಿರುವ ಮತ್ತು ಬಡ ರಾಷ್ಟ್ರಗಳಿಗೆ ಸೇರಿದವರು. ಭಾರತ ತಾನು ಕೊರೋನವನ್ನು ಎದುರಿಸುವಲ್ಲಿ ಭಾಗಶಃ ಯಶಸ್ವಿಯಾಗಿದ್ದೇನೆ ಎಂದು ಹೇಳಿಕೊಳ್ಳಬಹುದಾದರೂ, ಬರೇ ಲಾಕ್‌ಡೌನ್ ಎರಡು ತಿಂಗಳ ಅವಧಿಯಲ್ಲಿ ಅದು ಕ್ಷಯ ರೋಗವನ್ನು ಹಲವು ಪಟ್ಟು ಮಾರಕವಾಗಿಸಿಕೊಂಡಿದೆ ಎಂದು ವೈದ್ಯರು ಅಭಿಪ್ರಾಯ ಪಡುತ್ತಾರೆ. ಲಾಕ್‌ಡೌನ್‌ನಿಂದಾಗಿ ಭಾರತದಂತಹ ಬಡ ರಾಷ್ಟ್ರಗಳಲ್ಲಿ ಕ್ಷಯ ಮತ್ತು ಮಲೇರಿಯಾಗಳಿಗೆ ಸೂಕ್ತ ಔಷಧಿ ಸಿಗದೆ ಲಕ್ಷಾಂತರ ಜನರ ರೋಗ ಉಲ್ಬಣಗೊಂಡಿದೆ ಎಂದು ಅಧ್ಯಯನ ತಂಡವೊಂದು ಹೇಳುತ್ತದೆ. ಜಗತ್ತಿನ ಒಟ್ಟು ಕ್ಷಯ ರೋಗ ಪ್ರಕರಣಗಳಲ್ಲಿ ಶೇ. 27ರಷ್ಟು ಭಾರತದಲ್ಲೇ ಇವೆ. ಈ ರೋಗಕ್ಕೆ ಸೂಕ್ತ ಕಾಲದಲ್ಲಿ ತಪಾಸಣೆ, ಔಷಧ, ಉಪಚಾರ ಅತ್ಯಗತ್ಯ.

ದುರದೃಷ್ಟಕ್ಕೆ, ಕೊರೋನ ಕಾಲದಲ್ಲಿ ಕ್ಷಯ ರೋಗದ ತಪಾಸಣೆ ಶೇ. 75ಕ್ಕೆ ಇಳಿದಿದೆ. ಇದು ಭವಿಷ್ಯದಲ್ಲಿ ಭಾರತದ ಕ್ಷಯ ಪೀಡಿತರ ಸಂಖ್ಯೆಯನ್ನು ಹೆಚ್ಚಿಸಲಿದೆ ಮತ್ತು ಈ ರೋಗಕ್ಕೆ ಬಡ ವರ್ಗವೇ ನೇರ ಬಲಿ ಎನ್ನುವುದನ್ನು ನಾವು ಗಮನಿಸಬೇಕಾಗಿದೆ. ಒಂದು ಊಹೆಯ ಪ್ರಕಾರ, ಕೊರೋನ ಸಹಜ ಸ್ಥಿತಿಗೆ ಬರುವಷ್ಟರಲ್ಲಿ ಕ್ಷಯ ರೋಗಕ್ಕೆ ಈ ಹಿಂದೆ ಸಾಯುತ್ತಿದ್ದ ಸಂಖ್ಯೆಗೆ ಹೋಲಿಸಿದರೆ ಹೆಚ್ಚುವರಿ 14 ಲಕ್ಷ ಮಂದಿ ಸಾಯಬಹುದು. ಸೂಕ್ತ ಥೆರಪಿ ಸಿಗದೆ 5 ಲಕ್ಷ ಎಚ್‌ಐವಿ ಸೋಂಕಿತರು ಸಾಯಬಹುದು ಎಂದು ವಿಶ್ವದ ವೈದ್ಯರು ಅಂದಾಜಿಸಿದ್ದಾರೆ. ಮಲೇರಿಯಾದಿಂದ ಸಾಯುವವರ ಸಂಖ್ಯೆ ದುಪ್ಪಟ್ಟುಗೊಳ್ಳಲಿದೆ. ಈ ಬಾರಿ ಹೆಚ್ಚುವರಿ 7,70,000 ಮಂದಿ ಸಾಯಬಹುದು ಎಂದು ಅಂದಾಜಿಸಲಾಗಿದೆ.

ಲಾಕ್‌ಡೌನ್ ಬಡರಾಷ್ಟ್ರಗಳ ಹಸಿವನ್ನು ಇನ್ನಷ್ಟು ಹೆಚ್ಚಳಗೊಳಿಸಿದೆ. ಕ್ಷಯದಂತಹ ರೋಗಗಳ ಮೂಲವೇ ಹಸಿವು. ಭಾರತದಲ್ಲಿ ಲಾಕ್‌ಡೌನ್ ಬಳಿಕ ನಿರುದ್ಯೋಗಿಗಳ ಸಂಖ್ಯೆ ವಿಪರೀತ ಹೆಚ್ಚಿವೆ. ಜನರು ಒಂದು ಹೊತ್ತಿನ ಊಟಕ್ಕೆ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇವೆಲ್ಲವೂ ಭವಿಷ್ಯದಲ್ಲಿ ಲಕ್ಷಾಂತರ ಜನರನ್ನು ಬೇರೆ ಬೇರೆ ರೋಗಗಳಿಗೆ ನೂಕಲಿವೆ. ನಗರದ ಕೂಲಿ ಕಾರ್ಮಿಕನೊಬ್ಬ ಮಾಧ್ಯಮದೊಂದಿಗೆ ಮಾತನಾಡುತ್ತಾ ‘‘ನಾನು ಕೊರೋನಕ್ಕೆ ಹೆದರುವುದಿಲ್ಲ, ಹಸಿವಿನಿಂದ ಸಾಯುವ ಬದಲು ಕೊರೋನದಿಂದಲೇ ಸಾಯುವುದು ವಾಸಿ’’ ಎಂದು ಅಭಿಪ್ರಾಯ ಪಡುತ್ತಾನೆ. ಇದು ಒಬ್ಬ ಕಾರ್ಮಿಕನ ಮಾತಲ್ಲ. ಈ ದೇಶದ ಕೋಟ್ಯಂತರ ಬಡವರ್ಗದ ಧ್ವನಿಯಾಗಿದೆ. ಆದುದರಿಂದ ನಾಳೆ ಕೊರೋನ ಇಲ್ಲವಾದರೂ ಭಾರತದಂತಹ ಬಡದೇಶಗಳ ಸಂಘರ್ಷ ಮುಗಿಯುವುದಿಲ್ಲ. ಕೊರೋನಕ್ಕಿಂತಲೂ ಭೀಕರವಾದ ರೋಗಗಳ ವಿರುದ್ಧ ಸಂಘರ್ಷಕ್ಕೆ ಭಾರತ ಈಗಲೇ ಸಿದ್ಧತೆ ಮಾಡಿಕೊಳ್ಳಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)