varthabharthi


ಕರಾವಳಿ

ಬಂಟ್ವಾಳ: ಶರತ್ ಮಡಿವಾಳ ಕೊಲೆ ಆರೋಪಿಯ ಕೊಲೆಗೆ ಯತ್ನ

ವಾರ್ತಾ ಭಾರತಿ : 7 Aug, 2020

ಬಂಟ್ವಾಳ, ಆ. 7: ಆರೆಸ್ಸೆಸ್ ಕಾರ್ಯಕರ್ತ ಶರತ್ ಮಡಿವಾಳ ಕೊಲೆ ಆರೋಪಿ ಶರೀಫ್ ಎಂಬಾತನ ಮೇಲೆ ದುಷ್ಕರ್ಮಿಗಳ ತಂಡವೊಂದು ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಕೊಲೆಗೆ ಯತ್ನಿಸಿರುವ ಘಟನೆ ಶುಕ್ರವಾರ ಮಧ್ಯಾಹ್ನ ಸಜೀಪ ಮುನ್ನೂರು ಗ್ರಾಮದ ಆಲಂಪಾಡಿಯಲ್ಲಿ ನಡೆದಿದೆ. ಆದರೆ ಆತ ಓಡಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದು ಸಣ್ಣ ಪುಟ್ಟ ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ತಿಳಿದುಬಂದಿದೆ.

ತಾಲೂಕಿನ ಸಜಿಪ ಮುನ್ನೂರು ಗ್ರಾಮದ ಆಲಂಪಾಡಿ ಶಾರದಾ ನಗರದ ನಿವಾಸಿಯಾದ ಶರೀಫ್ ಮನೆಯಿಂದ ಬೈಕ್ ನಲ್ಲಿ ತೆರಳುತ್ತಿದ್ದ ವೇಳೆ ಎರಡು ಬೈಕ್, ಒಂದು ಕಾರಿನಲ್ಲಿ ಬಂದ ದುಷ್ಕರ್ಮಿಗಳ ತಂಡ ದಾಳಿ ನಡೆಸಿದೆ ಎನ್ನಲಾಗಿದೆ. 

ಶರೀಫ್ ತೆರಳುತ್ತಿದ್ದ ಬೈಕಿಗೆ ದುಷ್ಕರ್ಮಿಗಳು ಬಂದ ಬೈಕನ್ನು ಢಿಕ್ಕಿ ಹೊಡೆಸಿ ಕೆಳಗೆ ಬೀಳಿಸಿದ್ದಾರೆ. ಈ ಸಂದರ್ಭ ಬೈಕ್ ನಲ್ಲಿದ್ದ ಹಿಂಬದಿ ಸವಾರರು ಮತ್ತು ಕಾರಿನಲ್ಲಿದ್ದವರು ಇಳಿದು ಶರೀಫ್ ಗೆ ತಲವಾರು ಬೀಸಿದ್ದಾರೆ. ಅಪಾಯದ ಅರಿವಾದ ಶರೀಫ್ ಓಡಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ.

ಗಾಯಾಳು ಶರೀಫ್ ತುಂಬೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. 

ಸಜೀಪ ಮುನ್ನೂರು ನಿವಾಸಿ, ಆರೆಸ್ಸೆಸ್ ಕಾರ್ಯಕರ್ತನಾಗಿದ್ದ ಬಿ.ಸಿ.ರೋಡ್ ಉದಯ ಲಾಂಡ್ರಿ ಮಾಲಕ ಶರತ್ ಮಡಿವಾಳ ಎಂಬವರ ಮೇಲೆ 2017ರ ಜುಲೈ 4ರಂದು ಲಾಂಡ್ರಿ ಒಳಗೆ ತಂಡವೊಂದು ದಾಳಿ ನಡೆಸಿತ್ತು. ಜುಲೈ 7ರಂದು ಶರತ್ ಚಿಕಿತ್ಸೆ ಫಲಕಾರಿ ಆಗದೆ ಮಂಗಳೂರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ಶರೀಫ್ ಆರೋಪಿಯಾಗಿದ್ದಾನೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)