varthabharthi


ರಾಷ್ಟ್ರೀಯ

ಕೇರಳ ವಿಮಾನ ದುರಂತ: ಮೃತರ ಸಂಖ್ಯೆ 17ಕ್ಕೆ ಏರಿಕೆ; 112 ಮಂದಿಗೆ ಗಾಯ

ವಾರ್ತಾ ಭಾರತಿ : 7 Aug, 2020

ಕೋಯಿಕ್ಕೋಡ್‌, ಆ. 7: ದುಬೈಯಿಂದ ಹಿಂದಿರುಗುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಕೋಝಿಕ್ಕೋಡ್‌ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕರಿಪುರ ವಿಮಾನ ನಿಲ್ದಾಣ)ದಲ್ಲಿ ಶುಕ್ರವಾರ ಸಂಜೆ ಇಳಿಯುವಾಗ ರನ್‌ವೇಯಲ್ಲಿ ಜಾರಿ ಕಣಿವೆಗೆ ಉರುಳಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ 17ಕ್ಕೆ ಏರಿಕೆಯಾಗಿದ್ದು, 112 ಮಂದಿ ಪ್ರಯಾಣಿಕರು ಗಾಯಗೊಂಡಿದ್ದಾರೆ. 

ವಿಮಾನದ ಪೈಲೆಟ್ ದೀಪಕ್ ವಸಂತ ಸಾಥೆ ಮೃತಪಟ್ಟಿದ್ದಾರೆ. ಸಹ ಪೈಲೆಟ್‌ನ ಸ್ಥಿತಿ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ರಾತ್ರಿ 8.15ರ ಹೊತ್ತಿಗೆ ಕೋಝಿಕ್ಕೋಡ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ರನ್‌ವೇಯಲ್ಲಿ ಇಳಿಯುತ್ತಿದ್ದಂತೆ ಜಾರಿ ತಡೆಗೋಡೆಗೆ ಢಿಕ್ಕಿ ಹೊಡೆಯಿತು. ಅನಂತರ 35 ಅಡಿ ಆಳದ ಕಣಿವೆಗೆ ಉರುಳಿತು. ಇದರಿಂದ ವಿಮಾನ ಎರಡು ತುಂಡುಗಳಾಯಿತು ಎಂದು ನಾಗರಿಕ ವಿಮಾನ ಯಾನದ ಪ್ರಧಾನ ನಿರ್ದೇಶನಾಲಯ (ಡಿಜಿಸಿಎ) ನೀಡಿದ ಹೇಳಿಕೆ ತಿಳಿಸಿದೆ.

‘‘ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ದುಬೈಯಿಂದ ಹಿಂದಿರುಗಿ ಕೋಝಿಕೋಡ್‌ನಲ್ಲಿ ರಾತ್ರಿ 8.15ಕ್ಕೆ ರನ್‌ವೇಯಲ್ಲಿ ಇಳಿಯುವ ಸಂದರ್ಭ ಜಾರಿ ದುರ್ಘಟನೆ ಸಂಭವಿಸಿದೆ. ಇಳಿಯುವ ಸಂದರ್ಭ ಯಾವುದೇ ರೀತಿಯ ಬೆಂಕಿ ಕಾಣಿಸಿಕೊಂಡಿಲ್ಲ. ವಿಮಾನದಲ್ಲಿ 10 ಮಕ್ಕಳು ಸೇರಿದಂತೆ 174 ಪ್ರಯಾಣಿಕರು, ಇಬ್ಬರು ಪೈಲೆಟ್‌ಗಳು, 5 ಕ್ಯಾಬಿನ ಸಿಬ್ಬಂದಿಗಳು ಇದ್ದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಗಾಯಗೊಂಡ ಪ್ರಯಾಣಿಕರನ್ನು ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ’’ ಎಂದು ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಸಂಸ್ಥೆಯ ಹೇಳಿಕೆ ತಿಳಿಸಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)