varthabharthi


ಕರಾವಳಿ

ಬೈಕಂಪಾಡಿ, ತಣ್ಣೀರುಬಾವಿಯಲ್ಲಿ ಕಡಲ್ಕೊರೆತ

ವಾರ್ತಾ ಭಾರತಿ : 8 Aug, 2020

ಮಂಗಳೂರು, ಆ.8: ಕರಾವಳಿಯಲ್ಲಿ ಹಲವು ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಸಾಕಷ್ಟು ಹಾನಿ ಸಂಭವಿ ಸಿದೆ. ಇತ್ತ ಕಡಲ ತೀರದಲ್ಲೂ ಸಂಕಷ್ಟದ ಬವಣೆ ಹೇಳತೀರದಾಗಿದೆ. ಸಮುದ್ರದಂಚಿನ ಬೈಕಂಪಾಡಿ, ಮೀನಕಳಿಯ, ತಣ್ಣೀರುಬಾವಿಯಲ್ಲಿ ಕಡಲು ಕೊರೆತದ ಅಬ್ಬರ ದಿನದಿಂದ ದಿನಕ್ಕೆ ವಿಸ್ತರಿಸುತ್ತಿದೆ.

ಕಡಲ್ಕೊರೆತದಿಂದಾಗಿ ಸ್ಥಳೀಯರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಬೈಕಂಪಾಡಿ ಸಮೀಪ ಸುಮಾರು ಅರ್ಧ ಕಿಮೀ ವ್ಯಾಪ್ತಿಯಲ್ಲಿ ಸಮುದ್ರ ರುದ್ರನರ್ತನ ಪ್ರದರ್ಶಿಸುತ್ತಿದೆ. ತಣ್ಣೀರುಬಾವಿಯ ಸಂಸ್ಥೆಯೊಂದರ ಉಪ್ಪು ನೀರು ಸಂಸ್ಕರಣಾ ಘಟಕ ಬಳಿ ಸಮುದ್ರದ ಅಲೆಗಳು ಸುಮಾರು 70-80 ಮೀಟರ್ ಪೂರ್ವಕ್ಕೆ ಬಂದಿದ್ದು, ಘಟಕದ ಒಳಭಾಗಕ್ಕೂ ಸಮುದ್ರದ ನೀರು ನುಗ್ಗಿದೆ ಎಂದು ತಿಳಿದುಬಂದಿದೆ.

ಬೈಕಂಪಾಡಿ, ತಣ್ಣೀರುಬಾವಿ, ಮೀನಕಳಿಯದ ಕಡಲ್ಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ಶಾಸಕ ಡಾ.ವೈ.ಭರತ್ ಶೆಟ್ಟಿ ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು.

‘ಬೈಕಂಪಾಡಿ ವ್ಯಾಪ್ತಿಯಲ್ಲಿನ ದೋಣಿ ಶೆಡ್‌ಗಳ ಪರಿಸರ, ತೆಂಗಿನಮರಗಳು ಸಮುದ್ರಪಾಲಾಗಿವೆ. ಮೀನು ಮಾರಾಟ ಕಟ್ಟಡ, ವಿಶ್ರಾಂತಿ ಕಟ್ಟಡ ಅಪಾಯದಲ್ಲಿದೆ. ಈ ಪ್ರದೇಶಕ್ಕೆ ತಡೆಗೋಡೆ ನಿರ್ಮಿಸಲು ಈ ಹಿಂದೆ ಪ್ರಸ್ತಾಪಿಸಲಾಗಿತ್ತು. ಆದರೆ ದೋಣಿ ಸಂಚಾರಕ್ಕೆ ಇದರಿಂದ ತಡೆಯಾಗುವ ಕಾರಣದಿಂದ ಇದಕ್ಕೆ ವಿರೋಧ ವ್ಯಕ್ತವಾಗಿ ಯೋಜನೆಗೆ ತಡೆಯಾಗಿತ್ತು ಎಂದು ಸ್ಥಳೀಯರೊಬ್ಬರು ತಿಳಿಸಿದರು.

ಈ ಸಂದರ್ಭ ತಹಶೀಲ್ದಾರ್ ಗುರುಪ್ರಸಾದ್, ಎಂಆಪಿಎಲ್ ಅಧಿಕಾರಿಗಳು, ಪಾಲಿಕೆ ಸದಸ್ಯೆ ಸುನೀತಾ ಮೊದಲಾದವರು ಉಪಸ್ಥಿತರಿದ್ದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)