varthabharthi


ವಿಶೇಷ-ವರದಿಗಳು

ಸ್ಟೀಡನ್ ನಲ್ಲಿ ಯಶಸ್ವಿಯಾಗಿದೆ ಇದೇ ಕಾರ್ಯತಂತ್ರ

‘ಶಾಲೆಗಳನ್ನು ತೆರೆಯಿರಿ, ಮಾಸ್ಕ್ ಗಳು ಬೇಡ’: ಕೊರೋನವನ್ನು ಸೋಲಿಸಲು ವೈರಾಣುಶಾಸ್ತ್ರಜ್ಞನ ತಂತ್ರ

ವಾರ್ತಾ ಭಾರತಿ : 9 Aug, 2020

ಒಂದು ತಿಂಗಳ ಹಿಂದಷ್ಟೇ ಸ್ವೀಡನ್  ಕೊರೋನ ವೈರಸ್ ವಿರುದ್ಧದ ಹೋರಾಟದಲ್ಲಿ ಯಾವುದೇ ಹಸ್ತಕ್ಷೇಪ ಮಾಡದಿರುವ ನೀತಿಯನ್ನು ಅಳವಡಿಸಿಕೊಂಡಾಗ ವಿಶ್ವದ ಹಲವು ವಿಜ್ಞಾನಿಗಳ ಹುಬ್ಬುಗಳು ಮೇಲಕ್ಕೇರಿದ್ದವು. ದೇಶದಲ್ಲಿ ಶಾಲೆಗಳು, ರೆಸ್ಟೋರೆಂಟ್ ಅಥವಾ ಬಾರ್‌ಗಳನ್ನು ಮುಚ್ಚದಿರಲು ನಿರ್ಧರಿಸಿದ್ದ ಸ್ವೀಡನ್,ಮಾಸ್ಕ್‌ಗಳನ್ನು ಧರಿಸದಂತೆ ತನ್ನ ಪ್ರಜೆಗಳಿಗೆ ತಿಳಿಸಿತ್ತು. ಇದಕ್ಕೂ ಮುನ್ನ ಎಪ್ರಿಲ್ ಅಂತ್ಯದ ವೇಳೆಗೆ ದೇಶದಲ್ಲಿ ಕೋವಿಡ್-19 ಸಾವುಗಳ ಸಂಖ್ಯೆ ಏರುತ್ತಲೇ ಇತ್ತು ಮತ್ತು ಸ್ವೀಡನ್ ತ್ವರಿತವಾಗಿ ಹಬ್ಬುತ್ತಿದ್ದ ವೈರಸ್‌ನ ಮುಂದೆ ಮಂಡಿಯೂರಿದಂತಿತ್ತು. ಕಂಗಾಲಾದ ಅಧಿಕಾರಿಗಳು ಸರಕಾರಕ್ಕೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿದ್ದರು.

ದೇಶದ ಸಾರ್ವಜನಿಕ ಆರೋಗ್ಯ ಏಜೆನ್ಸಿಯು ಸರಕಾರವು ಕೈಗೊಂಡಿದ್ದ ನೀತಿಯನ್ನು ಇನ್ನಷ್ಟು ಪರಿಷ್ಕರಿಸಿ ಅದನ್ನು ಅನುಷ್ಠಾನಗೊಳಿಸಿತ್ತು. ದೇಶದ ಮುಖ್ಯ ಸಾಂಕ್ರಾಮಿಕ ರೋಗಗಳ ತಜ್ಞ ಆ್ಯಂಡರ್ಸ್ ಟೆಗ್ನೆಲ್ ಅವರು ಬಿಕ್ಕಟ್ಟಿನ ಮುಖವಾಗಿ ಪರಿಗಣಿಸಲ್ಪಟ್ಟಿದ್ದರು.

ಕೊರೋನ ವೈರಸ್ ವಿರುದ್ಧ ಹೋರಾಟದ ಅಂಗವಾಗಿ ಇತರ ದೇಶಗಳು ಅಂಗಡಿ-ಮುಂಗಟ್ಟುಗಳು ಮತ್ತು ಶಾಲೆಗಳನ್ನು ಮುಚ್ಚಿ ಸಾರ್ವಜನಿಕ ಜೀವನವನ್ನು ಸ್ಥಗಿತಗೊಳಿಸುವ ಮೂಲಕ ಲಾಕ್‌ಡೌನ್ ಕ್ರಮವನ್ನು ಜಾರಿಗೊಳಿಸುತ್ತಿದ್ದರೆ, ಇದರಿಂದ ದೂರವೇ ಉಳಿದಿದ್ದ ಸ್ವೀಡನ್ ಆರ್ಥಿಕತೆಯ ಮೇಲೆ ಕನಿಷ್ಠಸಾಧ್ಯ ಪರಿಣಾಮದೊಂದಿಗೆ ಸಾಂಕ್ರಾಮಿಕ ಪಿಡುಗನ್ನು ಎದುರಿಸಲು ಪ್ರಯತ್ನಿಸುತ್ತಿತ್ತು. ದೇಶದ ಪ್ರತಿಷ್ಠಿತ ವೈರಾಣು ಶಾಸ್ತ್ರಜ್ಞೆ ಲೀನಾ ಇನ್‌ಹಾರ್ನ್ ಅವರಂತೂ ಸ್ವೀಡನ್ ನೀತಿಯನ್ನು ‘ಹುಚ್ಚುತನ ’ಎಂದು ಬಣ್ಣಿಸಿದ್ದರು. ಸ್ವೀಡನ್‌ನಲ್ಲಿ ಕೊರೋನ ಸಾವುಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಕಂಡು ಎಚ್ಚೆತ್ತುಕೊಂಡಿದ್ದ ನಾರ್ವೆ ಸ್ವೀಡನ್ ಜೊತೆಗಿನ ತನ್ನ ಗಡಿಯನ್ನು ಮುಚ್ಚಿತ್ತು.

ಹಾಗೆ ನೋಡಿದರೆ ತಲಾವಾರು ಆಧಾರದಲ್ಲಿ ಸ್ವೀಡನ್‌ನಲ್ಲಿ ಕೊರೋನ ವೈರಸ್ ಪಿಡುಗು ಅಮೆರಿಕ,ಫ್ರಾನ್ಸ್ ಅಥವಾ ಇತರ ಯಾವುದೇ ನಾರ್ಡಿಕ್ ನೆರೆರಾಷ್ಟ್ರಕ್ಕಿಂತಲೂ ಹೆಚ್ಚು ಮಾರಣಾಂತಿಕವಾಗಿತ್ತು. ಆದರೆ ಕಳೆದ ಆರು ವಾರಗಳಲ್ಲಿ ಈ ದೇಶದಲ್ಲಿ ಚಿತ್ರಣ ಸಂಪೂರ್ಣ ಬದಲಾಗಿದೆ. ಅಧಿಕೃತ ಅಂಕಿಸಂಖ್ಯೆಗಳಂತೆ ಪ್ರತಿದಿನ ವರದಿಯಾಗುವ ಹೊಸ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಕಳೆದ ಹಲವಾರು ತಿಂಗಳುಗಳಲ್ಲಿಯ ಕನಿಷ್ಠ ಮಟ್ಟಕ್ಕಿಳಿದಿದೆ. ಆಸ್ಪತ್ರೆಗಳಿಗೆ ದಾಖಲಾಗುವ ರೋಗಿಗಳ ಸಂಖ್ಯೆ ಶೂನ್ಯವೆಂದೇ ಹೇಳಬಹುದು ಮತ್ತು ಕಳೆದ ಏಳು ದಿನಗಳಲ್ಲಿ ಕೇವಲ 44 ಜನರು ಕೋವಿಡ್ ಸೋಂಕಿನಿಂದ ಮೃತರಾಗಿದ್ದಾರೆ. ಇದೇ ವೇಳೆ ಯುರೋಪ್ ಖಂಡದಾದ್ಯಂತ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಲೇ ಇದೆ.

ಇತ್ತೀಚಿನ ಕೋವಿಡ್ ಅಂಕಿಸಂಖ್ಯೆಗಳು ಸರಕಾರದ ನೀತಿಯನ್ನು ಸಮರ್ಥಿಸಿವೆ ಎನ್ನುತ್ತಾರೆ ಟೆಗ್ನೆಲ್.

ಕಳೆದ ವಾರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಸಂದರ್ಭ ಟೆಗ್ನೆಲ್,ಸ್ವೀಡನ್‌ನಲ್ಲಿ ಮಾಸ್ಕ್‌ಗಳ ಅಗತ್ಯವಿಲ್ಲ ಎಂದು ಹೇಳಿದ್ದರು. ಈ ವಾರ fortune.com ಗೆ ನೀಡಿದ ಸಂದರ್ಶನದಲ್ಲಿ ತನ್ನ ನಿಲುವನ್ನು ಇನ್ನಷ್ಟು ಸಮರ್ಥಿಸಿಕೊಂಡ ಟೆಗ್ನೆಲ್,‘ದೇಶದಲ್ಲಿ ಕೊರೋನ ವೈರಸ್ ಪ್ರಕರಣಗಳ ಸಂಖ್ಯೆ ಇಳಿಮುಖಗೊಳ್ಳುತ್ತಿದೆ,ಹೀಗಾಗಿ ಈ ಕಾಲಘಟ್ಟದಲ್ಲಿ ಮಾಸ್ಕ್ ಧರಿಸುವುದನ್ನು ನಾವು ಜಾರಿಗೊಳಿಸಬೇಕಿಲ್ಲ. ಹೊಸ ಕ್ರಮವನ್ನು ಪರಿಚಯಿಸಲು ಇದು ಸಮಯವಲ್ಲ ’ ಎಂದು ಹೇಳಿದ್ದಾರೆ.

ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಯಾವುದೇ ಮುಂಜಾಗ್ರತಾ ಕ್ರಮ ಇಲ್ಲದೆ ಇರುವುದಕ್ಕಿಂತ ಬಾಯಿ ಮತ್ತು ಮುಖವನ್ನು ಮುಚ್ಚಿಕೊಳ್ಳುವಂತಹ ಕ್ರಮವು ಉತ್ತಮ ಎಂದು ಅಲೆಗಳೋಪಾದಿಯಲ್ಲಿ ಹೊರಬರುತ್ತಿರುವ ನೂತನ ಅಧ್ಯಯನ ವರದಿಗಳು ಹೇಳುತ್ತಿವೆಯಾದರೂ ಮಾಸ್ಕ್ ಚರ್ಚೆಯು ಕಾನೂನು ರೂಪಕರು ಮತ್ತು ವಿಜ್ಞಾನಿಗಳಲ್ಲಿ ಒಡಕನ್ನುಂಟು ಮಾಡುತ್ತಿದೆ. ಆದರೆ ಟೆಗ್ನೆಲ್ ಮಾತ್ರ ಕೊರೋನ ವೈರಸ್‌ನಂತಹ ಸಾರ್ವಜನಿಕ ಆರೋಗ್ಯಕ್ಕೆ ಬೆದರಿಕೆಯನ್ನು ತಡೆಯುವಲ್ಲಿ ಮಾಸ್ಕ್ ಪರಿಣಾಮಕಾರಿ ಸಾಧನವಲ್ಲ ಎಂಬ ಗಟ್ಟಿನಿಲುವನ್ನು ಹೊಂದಿದ್ದಾರೆ.

‘ಮಾಸ್ಕ್ ಬಳಕೆ ತುಂಬ ಸಂಕೀರ್ಣವಾಗಿದೆ. ಅದನ್ನು ಯಾವಾಗ ಬಳಸಬೇಕು,ಅದನ್ನು ಯಾರು ಬಳಸಬೇಕು ಎನ್ನುವುದನ್ನು ನೀವೇ (ಜನತೆ) ನಿರ್ಧರಿಸಬೇಕು ಮತ್ತು ಅಂತಹ ಸಂದರ್ಭದಲ್ಲಿ ಅದನ್ನು ಸಮರ್ಪಕವಾಗಿ ಬಳಸಲು ನಿಮಗೆ ಸಾಧ್ಯವೇ ಎನ್ನುವುದನ್ನು ಕಂಡುಕೊಳ್ಳಲು ಪ್ರಯತ್ನಿಸಬೇಕು. ನಾನು ರೆಸ್ಟಾರಂಟ್‌ಗಳಲ್ಲಿಯ ಗೋಜಲುಗಳ ಬಗ್ಗೆ ಮಾತನಾಡುತ್ತಿದ್ದೇನೆ. ಮಾಸ್ಕ್ ಧರಿಸಿ ಆಹಾರ ಸೇವಿಸಲು ಸಾಧ್ಯವಿಲ್ಲ’ ಎಂದ ಹೇಳಿದ ಟೆಗ್ನೆಲ್,ಜನರು ಮಾಸ್ಕ್ ಧರಿಸುವಂತೆ ಕಠಿಣ ನಿಯಮವನ್ನು ಹೊಂದಿರುವ ಸ್ಪೇನ್‌ನಲ್ಲಿ ಇತ್ತೀಚಿಗೆ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಬೆಟ್ಟು ಮಾಡಿದರು.

 ಸುರಕ್ಷಿತ ಅಂತರವನ್ನು ಕಾಯ್ದುಕೊಳ್ಳುವುದು ಎಲ್ಲಕ್ಕಿಂತ ಉತ್ತಮ. ಜನರು ಪರಸ್ಪರದಿಂದ ಅಂತರವನ್ನು ಕಾಯ್ದುಕೊಳ್ಳುವುದು ಸೋಂಕು ಹರಡುವ ಅಪಾಯವನ್ನು ತಗ್ಗಿಸಲು ನೀವು ಮಾಡಬಹುದಾದ ಅತ್ಯುತ್ತಮ ಪ್ರಯತ್ನವಾಗಿದೆ. ಮನೆಯಿಂದಲೇ ಕೆಲಸ ಮಾಡಲು ಯತ್ನಿಸಿರಿ. ಸಾಧ್ಯವಾದರೆ ಕೆಲಸಕ್ಕೆ ಹೋಗುವ ಸಂದರ್ಭದಲ್ಲಿ ಬಸ್‌ಗಳ ಬದಲು ಸೈಕಲ್‌ಗಳನ್ನು ಬಳಸಿ. ಮಾಸ್ಕ್ ನೀತಿಯನ್ನು ಅಪ್ಪಿಕೊಳ್ಳುವ ಮುನ್ನ ನೀವು ಅನುಸರಿಸಬಹುದಾದ ಹಲವಾರು ಇತರ ವಿಧಾನಗಳಿವೆ ಎಂದು ಹೇಳಿದ ಟೆಗ್ನೆಲ್,ಶಾಲೆಗಳ ನಿರ್ವಹಣೆ ವಿಷಯದಲ್ಲಿ ಸ್ವೀಡನ್ ಇತರ ದೇಶಗಳಿಗೆ ಮಾದರಿಯಾಗಬಲ್ಲದು ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

 ಕಳೆದ ವಸಂತ ಋತುವಿನಲ್ಲಿ ತನ್ನ ಡೇಕೇರ್ ಸೆಂಟರ್‌ಗಳನ್ನು ಮತ್ತು ಶಾಲೆಗಳನ್ನು ಮುಚ್ಚದಿರಲು ಸ್ವೀಡನ್ ನಿರ್ಧರಿಸಿತ್ತು. ಇದು ಸೋಂಕು ಹರಡುವಿಕೆ ದರದ ಮೇಲೆ ಹೆಚ್ಚಿನ ಪರಿಣಾಮವನ್ನೇನೂ ಬೀರಿರಲಿಲ್ಲ ಎನ್ನುವುದು ಟೆಗ್ನೆಲ್ ವಾದ. ಸಾರ್ವಜನಿಕ ಆರೋಗ್ಯ ಏಜೆನ್ಸಿಯು ತನ್ನ ಶಾಲಾ ನೀತಿ ನಿರ್ಧಾರದ ಕುರಿತು ದತ್ತಾಂಶಗಳನ್ನು ಸಂಗ್ರಹಿಸಿ ಅದನ್ನು ಹಂಚಿಕೊಂಡಿದೆ. ಕೊರೋನ ವೈರಸ್ ಪಿಡುಗು ಆರಂಭಗೊಂಡ ಮಾರ್ಚ್‌ನಿಂದ ಜೂನ್ ಮಧ್ಯಭಾಗದಲ್ಲಿ ಶಾಲೆಗಳಿಗೆ ರಜೆ ಘೋಷಿಸುವವರೆಗೆ ಸ್ವೀಡನ್‌ನಲ್ಲಿ ಶಾಲಾ ಮಕ್ಕಳು ಸೋಂಕಿಗೆ ಗುರಿಯಾದ 1,124 ಪ್ರಕರಣಗಳು ವರದಿಯಾಗಿದ್ದು,ಇದು ಈ ಅವಧಿಯಲ್ಲಿ ದೇಶಾದ್ಯಂತ ವರದಿಯಾಗಿದ್ದ ಎಲ್ಲ ಪ್ರಕರಣಗಳ ಶೇ.2.1ರಷ್ಟಾಗಿತ್ತು. ಈ ಪೈಕಿ 14 ಮಕ್ಕಳನ್ನು ಆಸ್ಪತ್ರೆಯ ಐಸಿಯುಗಳಿಗೆ ದಾಖಲಿಸಲಾಗಿತ್ತು. ಫಿನ್ಲಂಡ್‌ನ ನಿದರ್ಶನ ನೀಡಿದ ಟೆಗ್ನೆಲ್,ಆ ರಾಷ್ಟ್ರವು ತನ್ನೆಲ್ಲ ಶಾಲೆಗಳನ್ನು ಮುಚ್ಚಿತ್ತು ಮತ್ತು ನಮ್ಮಲ್ಲಿ ಶಾಲೆಗಳು ತೆರೆದಿದ್ದವು. ಕನಿಷ್ಠ ನಮಗೆ ಸಂಬಂಧಿಸಿದಂತೆ ಇದು ಸೋಂಕು ಹರಡುವಿಕೆಯಲ್ಲಿ ಅಥವಾ ಅಸ್ವಸ್ಥಗೊಳ್ಳುವ ಮಕ್ಕಳ ಸಂಖ್ಯೆಯಲ್ಲಿ ಬೃಹತ್ ವ್ಯತ್ಯಾಸವನ್ನೇನೂ ಉಂಟು ಮಾಡಿಲ್ಲ. ಮಕ್ಕಳು ಸೋಂಕಿಗೆ ಗುರಿಯಾಗುವಂತೆ ಕಂಡು ಬರುತ್ತಿದೆ. ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗುವುದು ವಿರಳ ಮತ್ತು ಅವರು ಸಮಾಜದಲ್ಲಿಯ ಇತರರಿಗೆ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡುವಂತೆ ಕಂಡು ಬರುತ್ತಿಲ್ಲ ಎಂದರು.

 ಆದರೆ ತುಲನಾತ್ಮಕ ಅಂಕಿಅಂಶಗಳು ಹೇಳುವಂತೆ ಫಿನ್ಲಂಡ್‌ನ ಮಕ್ಕಳು ಶಾಲೆಗೆ ಬದಲು ಮೂರು ತಿಂಗಳು ಮನೆಗಳಲ್ಲಿಯೇ ಇದ್ದರು ಮತ್ತು ಅವರಲ್ಲಿ ಸೋಂಕಿನ ಪ್ರಮಾಣ ಸ್ವೀಡನ್‌ನ ಮಕ್ಕಳ ನಾಲ್ಕನೇ ಒಂದರಷ್ಟಿತ್ತು. ಸ್ವೀಡನ್‌ನ 14 ಮಕ್ಕಳಿಗೆ ಹೋಲಿಸಿದರೆ ಫಿನ್ಲಂಡ್‌ನ ಒಂದು ಮಗು ಮಾತ್ರ ಐಸಿಯುಗೆ ದಾಖಲಿಸಲ್ಪಟ್ಟಿತ್ತು.

ಶಾಲಾ ಮಕ್ಕಳು ಕಡಿಮೆ ಸೋಂಕು ವಾಹಕರಾಗಿದ್ದಾರೆ ಮತ್ತು ಅವರು ಮನೆಯ ಬದಲು ಶಾಲೆಗಳಲ್ಲಿರಬೇಕು. ಯಾವುದೇ ನಕಾರಾತ್ಮಕ ಪರಿಣಾಮಗಳು ಉಂಟಾಗದಂತೆ ಶಾಲೆಗಳನ್ನು ತೆರೆಯುವುದು ಸಾಧ್ಯವಿದೆ ಎನ್ನುತ್ತಾರೆ ಟೆಗ್ನೆಲ್.

ಕೃಪೆ: fortune.com

                            

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)