varthabharthi


ಕರ್ನಾಟಕ

ಮಳೆ ಕ್ಷೀಣಿಸಿದರೂ ಮುಂದುವರಿದ ಪ್ರಾಕೃತಿಕ ವಿಕೋಪ: ಚಿಕ್ಕಮಗಳೂರಿನಲ್ಲಿ 5ಕ್ಕೇರಿದ ಸಾವಿನ ಸಂಖ್ಯೆ

ವಾರ್ತಾ ಭಾರತಿ : 9 Aug, 2020

ಚಿಕ್ಕಮಗಳೂರು, ಆ.9: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಧಾರಾಕಾರವಾಗಿ ಸುರಿದು ಮಲೆನಾಡಿನ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದ ಆಶ್ಲೇಷ ಮಳೆಯ ಅಬ್ಬರ ಕಳೆದ ಎರಡು ದಿನಗಳಿಂದ ಕಡಿಮೆಯಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿ ನೀರಿನ ಮಟ್ಟ ಇಳಿಕೆಯಾಗಿದ್ದು, ಸದ್ಯ ಜಿಲ್ಲೆಯಾದ್ಯಂತ ಸಾಧಾರಣ ಮಳೆಯಾಗುತ್ತಿದೆ. ವಾರದಿಂದ ಎಡಬಿಡದೇ ಸುರಿದ ಮಳೆ ಹಾಗೂ ಗಾಳಿಯಿಂದ ಸಂಭವಿಸಿದ ಭೂಕುಸಿತ, ಮರ, ವಿದ್ಯುತ್ ಕಂಬಗಳ ತೆರವು ಕಾರ್ಯಾಚರಣೆಗೆ ಇಲಾಖೆ ವತಿಯಿಂದ ನಡೆಯುತ್ತಿದೆ.

ರವಿವಾರ ರಾತ್ರಿ ಮೂಡಿಗೆರೆ ತಾಲೂಕಿನ ಹೆಮ್ಮಕ್ಕಿ ಗ್ರಾಮದಲ್ಲಿ ಯತೀಶ್ ಎಂಬವರ ಮನೆ ಕುಸಿದು ಬಿದ್ದಿರುವ ಪರಿಣಾಮ ಮನೆ ಕಳೆದುಕೊಂಡಿರುವ ಯತೀಶ್ ಕುಟುಂಬ ಪಕ್ಕದ ಶೆಡ್ ವೊಂದರಲ್ಲಿ ವಾಸಮಾಡುವಂತಾಗಿದೆ. ಮಕ್ಕಳನ್ನು ಸಂಬಂಧಿಕರ ಮನೆಗೆ ಕಳಿಸಿರುವ ಅವರು, ವಾಸಕ್ಕೆ ಬೇರೆಡೆ ವ್ಯವಸ್ಥೆ ಕಲ್ಪಿಸಿಕೊಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ. ಭದ್ರಾನದಿಯ ಪ್ರವಾಹಕ್ಕೆ ಹೊರನಾಡು ಮುಂಡುಗದಮನೆ ಸಂಪರ್ಕ ಕಲ್ಪಿಸುವ ಕಾಲುಸಂಕ ಕೊಚ್ಚಿ ಹೋಗಿದ್ದು, ಗ್ರಾಮದ ಸಂಪರ್ಕ ಕಡಿತಗೊಂಡಿದೆ. ಗ್ರಾಮಸ್ಥರು ಕಳಸ ಪಟ್ಟಣಕ್ಕೆ ಬರಲು 6 ಕಿ.ಮೀ ಸುತ್ತುವರೆದು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಕೊಟ್ಟಿಗೆಹಾರ ಭಾಗದಲ್ಲಿ ಎರಡು ದಿನಗಳಿಂದ ಮಳೆ ಕಡಿಮೆಯಾಗಿದೆಯಾದರೂ ಆಗಾಗ್ಗೆ ಸಾಧಾರಣ ಮಳೆಯಾಗುತ್ತಲೇ ಇರುವುದರಿಂದ ಮತ್ತೆ ಮತ್ತೆ ಧರೆ ಕುಸಿತ ಸಂಭವಿಸುತ್ತಿದೆ. ಘಾಟಿ ಪ್ರದೇಶದಲ್ಲಿ ಭೂಕುಸಿತ ಮತ್ತು ರಸ್ತೆ ಬಿರುಕು ಬಿಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ವಾಹನ ಸಂಚಾರವನ್ನು ನಿಷೇಧಿಸಿದೆ. ರಸ್ತೆ ಮೇಲೆ ಬಿದ್ದಿರುವ ಮಣ್ಣು, ಮರ, ಕಲ್ಲುಗಳ ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇನ್ನು ತಾಲೂಕಿನ ಕಳಸ ಸುತ್ತಮುತ್ತ ಮಳೆ ಕ್ಷೀಣಗೊಂಡಿರುವುದರಿಂದ ಭದ್ರಾನದಿಯಲ್ಲಿ ನೀರಿನ ಹರಿವು ಇಳಿಕೆಯಾಗಿದ್ದು, ಮುಳುಗಡೆಯಾಗಿದ್ದ ಹೊರನಾಡು-ಕಳಸ ಸಂಪರ್ಕದ ಹೆಬ್ಬಾಳೆ ಸೇತುವೆ ಮೇಲೆ ನೀರು ತೆರವಾಗಿದ್ದು, ಸಂಪರ್ಕ ಪುನಾರಂಭಗೊಂಡಿದೆ.

ನರಸಿಂಹರಾಜಪುರ ತಾಲೂಕು ಬಾಳೆಹೊನ್ನೂರು ಭಾಗದಲ್ಲಿ ರವಿವಾರ ಸಾಧಾರಣ ಮಳೆಯಾಗಿದ್ದು, ಭದ್ರಾನದಿಯಲ್ಲಿ ನೀರಿನ ಮಟ್ಟ ಇಳಿಕೆಯಾಗಿದೆ. ಭದ್ರಾ ನದಿಯ ನೆರೆ ಕಡಿಮೆಯಾಗಿರುವುದರಿಂದ ತೋಟ, ಗದ್ದೆಗಳಿಗೆ ನುಗ್ಗಿದ್ದ ನೀರು ಇಳಿಕೆಯಾಗಿದೆ. ಜಯಪುರ ಸಮೀಪದ ಜಲದುರ್ಗದ ಬಳಿ ಚಿಕ್ಕಮಗಳೂರು-ಶೃಂಗೇರಿ ಹೆದ್ದಾರಿ ಬದಿಯಲ್ಲಿ ಧರೆ ಕುಸಿದಿರುವ ಪರಿಣಾಮ ಈ ರಸ್ತೆಯಲ್ಲಿ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.

ಶೃಂಗೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 169ರ ನೆಮ್ಮಾರ್ ಸಮೀಪದ ಸಾಲುಮರದ ಬಳಿ ತುಂಗಾನದಿಯಲ್ಲಿ ನೀರಿನ ರಭಸಕ್ಕೆ ರಸ್ತೆ ಬಿರುಕು ಬಿಟ್ಟಿದ್ದು, ಶೃಂಗೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ ಸಂಪರ್ಕ ಕಡಿತಗೊಂಡಿದೆ. ಈ ರಸ್ತೆಯಲ್ಲಿ ವಾಹನ ಸಂಚಾರವನ್ನು ಜಿಲ್ಲಾಡಳಿತ ಬಂದ್ ಮಾಡಿದೆ. ಇನ್ನು ಶೃಂಗೇರಿ ಶಾರದಾಂಭ ದೇವಸ್ಥಾನದ ಭೋಜನಾ ಶಾಲೆ, ಗಾಂಧಿ ಮೈದಾನ ಆವರಿಸಿದ್ದ ತುಂಗೆಯ ಪ್ರವಾಹದ ನೀರು ಸಂಪೂರ್ಣ ಇಳಿಕೆಯಾಗಿದೆ. ಅಡಿಕೆ ತೋಟ ಭತ್ತದ ಗದ್ದೆಗಳಿಗೆ ನುಗ್ಗಿದ್ದ ನೀರು ಇಳಿಕೆಯಾಗಿದೆ. 

ಚಿಕ್ಕಮಗಳೂರು ನಗರ ಸೇರಿದಂತೆ ತಾಲೂಕಿನಾದ್ಯಂತ ಆಗಾಗ್ಗೆ ರವಿವಾರ ತುಂತುರು ಮಳೆಯಾಗಿದೆ. ತಾಲೂಕಿನ ಚಂದ್ರವಳ್ಳಿ ಗ್ರಾಮದಲಿ ಶನಿವಾರ ಸಂಜೆ ವೇಳೆ ಸುರಿದ ಭಾರೀ ಮಳೆಗೆ ಪ್ರಕಾಶ್ ಎಂಬವರ ಮನೆಯ ಹಿಂಭಾಗದಲ್ಲಿ ಧರೆ ಕುಸಿದು ಮನೆ ಜಖಂಗೊಂಡಿದ್ದು, ಮನೆಯ ಸುತ್ತ ಭಾರೀ ಪ್ರಮಾಣದಲ್ಲಿ ಮಣ್ಣು ಸಂಗ್ರಹವಾಗಿದ್ದು, ಮಣ್ಣು ತೆರವಿಗೆ ಮನೆ ಮಂದಿ ಹರಸಾಹಸ ಪಡುವಂತಾಗಿದೆ. ತಾಲೂಕಿನ ಕಡಬಗೆರೆ ಎಂಬಲ್ಲಿ ರವಿವಾರ ಮುಂಜಾನೆ ಬೃಹತ್ ಮರವೊಂದು ಚಿಕ್ಕಮಗಳೂರು-ಬಾಳೆಹೊನ್ನೂರು ರಸ್ತೆ ಮೇಲೆ ಉರುಳಿ ಬಿದ್ದ ಪರಿಣಾಮ ಸುಮಾರು 2 ಗಂಟೆಗಳ ಕಾಲ ರಸ್ತೆಯಲ್ಲಿ ವಾಹನ ಸಂಚಾರ ಬಂದ್ ಆಗಿತ್ತು. ಈ ವೇಳೆ ರಸ್ತೆಯ ಎರಡು ಬದಿಯಲ್ಲಿ ಕಿಮೀ ಉದ್ದಕ್ಕೂ ವಾಹನಗಳ ಸಾಲು ಕಂಡುಬಂತು. ಅರಣ್ಯ ಇಲಾಖೆ ಹಾಗೂ ಸ್ಥಳೀಯರು ಮರ ತುಂಡರಿಸಿದ ಬಳಿಕ ವಾಹನ ಸಂಚಾರ ಪುನಾರಂಭಗೊಂಡಿದೆ. ಇನ್ನು ಕಡೂರು, ತರೀಕೆರೆ ಭಾಗದಲ್ಲೂ ರವಿವಾರ ಮೋಡಕವಿದ ವಾತಾವರಣ ಇದ್ದು, ಆಗಾಗ್ಗೆ ಸಾಧಾರಣ ಮಳೆಯಾಗಿದೆ.

ಒಟ್ಟಾರೆ ಆಶ್ಲೇಷ ಮಳೆಯ ಅಬ್ಬರ ಎರಡು ದಿನಗಳಿಂದ ಜಿಲ್ಲಾದ್ಯಂತ ಕಡಿಮೆಯಾಗಿದ್ದು, ಮಲೆನಾಡಿನ ಜನರು ನಿಟ್ಟುಸಿರು ಬಿಡುವಂತಾಗಿದೆ. ರವಿವಾರ ಜಿಲ್ಲಾದ್ಯಂತ ಮೋಡಕವಿದ ವಾತವರಣ ನಿರ್ಮಾಣವಾಗಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗುತ್ತಿದೆ. 

ಮಹಾಮಳೆಗೆ 5ನೇ ಬಲಿ: ಮೂಡಿಗೆರೆ ತಾಲೂಕಿನ ತರುವೆ ಗ್ರಾಮದ ರತ್ನಮ್ಮ (70) ಮಹಾಮಳೆಗೆ ಬಲಿಯಾಗಿದ್ದು, ಇದುವರೆಗೂ ಮಹಾಮಳೆ 5 ಮಂದಿಯನ್ನು ಬಲಿಪಡೆದುಕೊಂಡಿದೆ. ಮೂರು ದಿನಗಳ ಹಿಂದೆ ರತ್ನಮ್ಮ ಹಳ್ಳ ದಾಟುವ ಸಂದರ್ಭದಲ್ಲಿ ಬಿದ್ದು ಸೋಮವತಿ ಪ್ರವಾಹದಲ್ಲಿ ಕೊಚ್ಚಿ ಹೋಗಿದ್ದರು. ಮೂರು ದಿನಗಳಿಂದ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದು, ರವಿವಾರ ಬೆಳಗ್ಗೆ ರತ್ನಮ್ಮ ಅವರ ಮೃತದೇಹ ಬಿದ್ದ ಸ್ಥಳದಿಂದ ಎರಡು ಕಿ.ಮೀ. ದೂರದಲ್ಲಿ ಸಿಕ್ಕಿದೆ. 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)