varthabharthi


ಕರ್ನಾಟಕ

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ

ಚಾಮರಾಜನಗರ: ಎಸ್ಪಿಗೆ ಕ್ರೈಸ್ತ ಧರ್ಮದ ಫೋಟೊ ಉಡುಗೊರೆ ನೀಡಿದ ಅರ್ಚಕ

ವಾರ್ತಾ ಭಾರತಿ : 9 Aug, 2020

ಚಾಮರಾಜನಗರ, ಆ.9: ಜಿಲ್ಲೆಯ ಕೊಳ್ಳೇಗಾಲ ಪಟ್ಟಣದ ಪ್ರಸನ್ನ ವೀರಾಂಜನೇಯ ದೇವಸ್ಥಾನಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರ ಥಾಮಸ್ ಭೇಟಿ ನೀಡಿದ ವೇಳೆ ಅಲ್ಲಿನ ಅರ್ಚಕರೊಬ್ಬರು ಕ್ರೈಸ್ತ ಧರ್ಮದ ಫೋಟೊ ನೀಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಸಾರಾ ಥಾಮಸ್ ಅವರು ಆ.5ರಂದು ಕೊಳ್ಳೇಗಾಲಕ್ಕೆ ಭೇಟಿ ನೀಡಿದ ಸಮಯದಲ್ಲಿ ನಾರಾಯಣಸ್ವಾಮಿ ಗುಡಿ ಬೀದಿಯಲ್ಲಿರುವ ಶ್ರೀ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯಕ್ಕೆ ತೆರಳಿದ್ದರು. ದೇವಾಲಯದ ಅರ್ಚಕ ರಾಘವನ್ ಕ್ರೈಸ್ತ ಧರ್ಮದ ಫೋಟೊವನ್ನು ಆಂಜನೇಯ ಮೂರ್ತಿಯ ಪಾದದ ಬಳಿ ಇಟ್ಟು ಪೂಜೆ ಮಾಡಿ ಕೊಟ್ಟಿರುವುದನ್ನು ಸಂಘಪರಿವಾರದ ಕೆಲವು ಕಾರ್ಯಕರ್ತರು ವಾಟ್ಸ್‌ಆ್ಯಪ್ ಮತ್ತು ಫೇಸ್‌ಬುಕ್‌ನಲ್ಲಿ ಹರಿಬಿಟ್ಟಿದ್ದು, ಅರ್ಚಕರ ವಿರುದ್ಧ ವ್ಯಾಪಕ ಟೀಕೆ ವ್ಯಕ್ತವಾಗಿದೆ.

ಈ ಬಗ್ಗೆ ಕೊಳ್ಳೇಗಾಲದ ಪ್ರಸನ್ನ ವೀರಾಂಜನೇಯ ಸ್ವಾಮಿ ದೇವಾಲಯದ ಪ್ರಧಾನ ಅರ್ಚಕ ರಾಘವನ್ ಸ್ಪಷ್ಟನೆ ನೀಡಿದ್ದು, ದೇವಾಲಯಕ್ಕೆ ಬರುವ ಗಣ್ಯರಿಗೆ ಗೌರವ ಕೊಡುವುದು ಸಾಮಾನ್ಯವಾಗಿದೆ. ಅದರಲ್ಲೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಮಿಸಿದಾಗ ಅವರ ಧರ್ಮಕ್ಕೆ ಅನುಸಾರವಾದ ಉಡುಗೊರೆ ಕೊಟ್ಟಿದ್ದೇನೆ ವಿನಃ ಬೇರೆ ಅರ್ಥದಲ್ಲಿ ಅಲ್ಲ ಎಂದು ಹೇಳಿ, ಇದರಿಂದ ಹಿಂದೂಗಳಿಗೆ ಮತ್ತು ಸಂಘಟನೆ ಕಾರ್ಯಕರ್ತರಿಗೆ ನೋವಾಗಿದ್ದರೆ ಕ್ಷಮೆ ಕೋರುವೆ ಎಂದು ಹೇಳಿಕೆ ನೀಡಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)