varthabharthi


ಕ್ರೀಡೆ

ಕೋವಿಡ್ ವಿರಾಮದ ಬಳಿಕ ತರಬೇತಿ ಪುನರಾರಂಭಿಸಿದ ಸೈನಾ ನೆಹ್ವಾಲ್

ವಾರ್ತಾ ಭಾರತಿ : 10 Aug, 2020

ಹೊಸದಿಲ್ಲಿ, ಆ.9: ಕೊರೋನ ವೈರಸ್ ಹಾವಳಿಯಿಂದಾಗಿ ದೀರ್ಘ ಸಮಯ ವಿರಾಮ ಪಡೆದಿದ್ದ ಲಂಡನ್ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾಲ್ ಹೈದರಾಬಾದ್‌ನಲ್ಲಿ ಪ್ರತ್ಯೇಕ ವ್ಯವಸ್ಥೆಯಲ್ಲಿ ತರಬೇತಿಯನ್ನು ಪುನರಾರಂಭಿಸಿದರು. ಕೆಲವೇವಾರಗಳಲ್ಲಿ ಸಾಯ್ ಪುಲ್ಲೇಲ ಗೋಪಿಚಂದ್ ಅಕಾಡಮಿ ಯಲ್ಲಿರುವ ರಾಷ್ಟ್ರೀಯ ಶಿಬಿರಕ್ಕೆ ಸೇರ್ಪಡೆಯಾಗಲಿದ್ದಾರೆ.

ತೆಲಂಗಾಣ ಸರಕಾರ ಆಗಸ್ಟ್ 1ರಂದು ಅನುಮತಿ ನೀಡಿದ ಬಳಿಕ ಆಗಸ್ಟ್ 7ರಿಂದ ಸಾಯ್ ಪುಲ್ಲೇಲ ಗೋಪಿಚಂದ್ ಅಕಾಡಮಿಯಲ್ಲಿ ತರಬೇತಿ ಪುನರಾರಂಭಿಸಲು ಭಾರತ ಕ್ರೀಡಾ ಪ್ರಾಧಿಕಾರ(ಸಾಯ್) ದಿಂದ ಅವಕಾಶ ಪಡೆದ 8 ಮಂದಿ ಒಲಿಂಪಿಕ್ಸ್ ಆಕಾಂಕ್ಷಿಗಳ ಪೈಕಿ ಸೈನಾ ಕೂಡ ಒಬ್ಬರಾಗಿದ್ದಾರೆ.

ವಿಶ್ವದ ಮಾಜಿ ನಂ.1 ಆಟಗಾರ್ತಿ ಸೈನಾ, ಗೋಪಿಚಂದ್ ಅಕಾಡಮಿಯ ಸಮೀಪ ಬೇರೊಂದು ಕೇಂದ್ರದಲ್ಲಿ ಶಟ್ಲರ್ ಹಾಗೂ ಪತಿ ಪಾರುಪಳ್ಳಿ ಕಶ್ಯಪ್ ಹಾಗೂ 2014ರ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತ ಆರ್.ಎಂ.ವಿ. ಗುರುಸಾಯಿದತ್ತ ಅವರೊಂದಿಗೆ ತರಬೇತಿ ನಡೆಸಲು ನಿರ್ಧರಿಸಿದರು.

 ‘‘ನಾವು ಒಂದು ವಾರದಿಂದ ಗೋಪಿಚಂದ್ ಅಕಾಡಮಿಯ ಸಮೀಪವಿರುವ ಸೆಂಟರ್‌ನಲ್ಲಿ ತರಬೇತಿ ನಡೆಸುತ್ತಿದ್ದೇವೆ. ಇಲ್ಲಿ ಸೀಮಿತ ವ್ಯವಸ್ಥೆ ಇದೆ. ದೀರ್ಘ ಸಮಯದ ಬಳಿಕ ಕೋರ್ಟ್‌ಗೆ ಇಳಿದಿರುವ ನಾವು ಅಭ್ಯಾಸ ಆರಂಭಿಸಿದ್ದೇವೆ. ಸೈನಾ ನಮ್ಮಾಂದಿಗೆ ಈಗಷ್ಟೇ ಸೇರಿಕೊಂಡಿದ್ದಾರೆ. ಆಕೆ ಕೆಲವೇ ವಾರಗಳಲ್ಲಿ ಗೋಪಿಚಂದ್ ಅಕಾಡಮಿಯಲ್ಲಿ ತರಬೇತಿ ಆರಂಭಿಸಲಿದ್ದಾರೆ. ಆಕೆ ಗೋಪಿ ಸರ್ ಅವರ ಅನುಮತಿಯ ನಿರೀಕ್ಷೆಯಲ್ಲಿದ್ದಾರೆ. ಇಂಡೋನೇಶ್ಯದ ಹೊಸ ಕೋಚ್ ಅಗುಸ್ ಡ್ವಿಸ್ಯಾಂಟೊಸೊರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ’’ ಎಂದು ಮಾಜಿ ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಕಶ್ಯಪ್ ಹೇಳಿದ್ದಾರೆ.

‘‘8 ಬ್ಯಾಡ್ಮಿಂಟನ್ ಆಟಗಾರರ ಪೈಕಿ ಚಿರಾಗ್, ಸಾತ್ವಿಕ್ ಹಾಗೂ ಅಶ್ವಿನಿ ಈಗ ಹೈದರಾಬಾದ್‌ನಲ್ಲಿಲ್ಲ. ಈಗ ಕೇವಲ 4-5 ಆಟಗಾರರು ಅಭ್ಯಾಸ ನಡೆಸುತ್ತಿದ್ದಾರೆ. ಒಟ್ಟು 9 ಕೋರ್ಟ್‌ಗಳಿವೆ. ಆಟಗಾರರು ಸಾಮಾನ್ಯವಾಗಿ ಒಂದರಿಂದ ಎರಡು ಗಂಟೆ ಅಭ್ಯಾಸ ನಡೆಸುತ್ತಾರೆ.ಇನ್ನಷ್ಟು ಆಟಗಾರರಿಗೆ ಇಲ್ಲಿ ಅಭ್ಯಾಸ ನಡೆಸಲು ಅವಕಾಶ ನೀಡಬಹುದು’’ ಎಂದು ಲಂಡನ್ ಒಲಿಂಪಿಕ್ಸ್‌ನಲ್ಲಿ ಕ್ವಾ.ಫೈನಲ್ ತಲುಪಿದ್ದ ಕಶ್ಯಪ್ ಹೇಳಿದ್ದಾರೆ.

ನಾಲ್ಕು ತಿಂಗಳ ಕೊರೋನ ವೈರಸ್ ಲಾಕ್‌ಡೌನ್‌ನ್ನು ಅಂತ್ಯಗೊಳಿಸಿರುವ ವಿಶ್ವದ ಮಾಜಿ ನಂ.6ನೇ ಆಟಗಾರ ಕಶ್ಯಪ್, ಡಬಲ್ಸ್ ಸ್ಪೆಷಲಿಸ್ಟ್ ಬಿ. ಸುಮೀತ್ ರೆಡ್ಡಿ,ವಿಶ್ವ ಚಾಂಪಿಯನ್ ಪಿ.ವಿ. ಸಿಂಧು ಅವರ ಜೊತೆಗೆ ಬಿ.ಸಾಯಿ ಪ್ರಣೀತ್ ಹಾಗೂ ಎನ್.ಸಿಕ್ಕಿ ರೆಡ್ಡಿ ಹೈದರಾಬಾದ್‌ನಲ್ಲಿರುವ ಗೋಪಿಚಂದ್ ಅಕಾಡಮಿಯಲ್ಲಿ ಕಠಿಣ ಸುರಕ್ಷತಾ ಶಿಷ್ಟಾಚಾರಗಳೊಂದಿಗೆ ಶುಕ್ರವಾರ ಅಭ್ಯಾಸಪುನರಾರಂಭಿಸಿದ್ದಾರೆ.

 ಇತರ ಒಲಿಂಪಿಕ್ಸ್ ಆಕಾಂಕ್ಷಿಗಳ ಜೊತೆಗೆ ಪುರುಷರ ಡಬಲ್ಸ್ ಆಟಗಾರರಾದ ಚಿರಾಗ್ ಶೆಟ್ಟಿ ಹಾಗೂ ಸಾತ್ವಿಕ್‌ಸಾಯಿರಾಜ್ ರಾಂಕಿರೆಡ್ಡಿ ಕೋವಿಡ್-19 ಭೀತಿಯಲ್ಲಿ ಕ್ರಮವಾಗಿ ಮುಂಬೈ ಹಾಗೂ ಅಮಲಪುರಂ (ಆಂಧ್ರಪ್ರದೇಶ)ದಲ್ಲಿದ್ದಾರೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)