varthabharthi


ಸಂಪಾದಕೀಯ

ಹಿಂದಿ ಭಾಷಿಗರು ಕನ್ನಡ ಕಲಿಯಲಿ

ವಾರ್ತಾ ಭಾರತಿ : 11 Aug, 2020

ಬಹುತ್ವವೇ ಭಾರತದ ಹೆಗ್ಗಳಿಕೆ. ಏಕ ಸಂಸ್ಕೃತಿ, ಏಕ ಭಾಷೆಯ ಆಧಾರದಲ್ಲಿ ಭಾರತ ರೂಪುಗೊಳ್ಳದೆ, ವೈವಿಧ್ಯತೆಯನ್ನು ಉಳಿಸಿಕೊಂಡೇ ಒಂದು ಧ್ವಜದಡಿಯಲ್ಲಿ ಭಾರತ ವಾಗಿ ಗುರುತಿಸಿಕೊಂಡಿತು. ವೈವಿಧ್ಯಮಯವಾದ ಭಾಷೆ, ಸಂಸ್ಕೃತಿ, ಧರ್ಮ, ಆಚರಣೆ, ಸಂಪ್ರದಾಯಗಳನ್ನು ಮಾನ್ಯ ಮಾಡುವ ಮೂಲಕ ಗಣರಾಜ್ಯವಾಗಿ ಭಾರತ ತನ್ನನ್ನು ಘೋಷಿಸಿಕೊಂಡಿತು. ನಾವು ಭಾರತೀಯರು ಎಷ್ಟು ನಿಜವೋ, ಹಾಗೆಯೇ ಕನ್ನಡಿಗರು, ತಮಿಳರು, ಕೇರಳಿಗರು ಎನ್ನುವುದು ಅಷ್ಟೇ ನಿಜ. ಕನ್ನಡತನವನ್ನು ಉಳಿಸಿಕೊಳ್ಳುವ ಮೂಲಕ ನಾವು ಅತ್ಯುತ್ತಮ ಭಾರತೀಯರಾಗಲು ಸಾಧ್ಯವೇ ಹೊರತು, ಕನ್ನಡತನವನ್ನು ತ್ಯಜಿಸುವ ಮೂಲಕವಲ್ಲ. ಭಾರತವೆಂದರೆ ಹಲವು ಭಾಷೆಗಳ, ಹಲವು ಸಂಸ್ಕೃತಿಗಳ ಜೇನುಗೂಡು. ಈ ಭಾಷೆ, ಸಂಸ್ಕೃತಿಗಳನ್ನು ತಿರಸ್ಕರಿಸಿದರೆ ಅಂತಿಮವಾಗಿ ಭಾರತವೆಂದು ಕರೆಸಿಕೊಳ್ಳಲು ಏನೂ ಉಳಿಯುವುದಿಲ್ಲ. ಹೀಗಿರುವಾಗ, ಭಾರತದ ಬಹುತ್ವಕ್ಕೆ ಧಕ್ಕೆ ತರುವ ಪ್ರಯತ್ನಗಳು ಕಳೆದ ಒಂದು ದಶಕದಿಂದ ವ್ಯಾಪಕವಾಗಿ ನಡೆಯುತ್ತಿವೆ. ಏಕ ಸಂಸ್ಕೃತಿ, ಏಕ ಭಾಷೆಯನ್ನು ಹೇರಿ ಭಾರತದ ವೈವಿಧ್ಯವನ್ನು ನಾಶ ಮಾಡುವ ಈ ಸಂಚಿನ ಹಿಂದೆ ಸಂಘಪರಿವಾರದ ರಾಜಕಾರಣ ವ್ಯವಸ್ಥಿತವಾಗಿ ಕೆಲಸ ಮಾಡುತ್ತಿದೆ. ಇತ್ತೀಚಿನ ದಿನಗಳಲ್ಲಿ ಇದರ ನೇತೃತ್ವವನ್ನು ಕೇಂದ್ರ ಸರಕಾರವೇ ವಹಿಸಿಕೊಂಡಿದೆ ಎಂದು ರಾಜ್ಯಗಳು ತಮ್ಮ ಆಕ್ರೋಶಗಳನ್ನು ವ್ಯಕ್ತಪಡಿಸುತ್ತಿವೆ. ರಾಜ್ಯಗಳ ಮೇಲೆ ಏಕ ಭಾಷೆಯನ್ನು ಹೇರುವ ಪ್ರಯತ್ನ ನಡೆಯುತ್ತಿರುವುದು ಇಂದು ನಿನ್ನೆಯಲ್ಲ. ಇದರ ಜೊತೆ ಜೊತೆಗೇ ಸಂಸ್ಕೃತಿಯ ಹೆಸರಿನಲ್ಲಿ ಭಾರತೀಯತೆಯನ್ನು ವೈದಿಕೀಕರಣಗೊಳಿಸುವ ಯತ್ನವೂ ನಡೆಯುತ್ತಿದೆ.

ಭಾರತೀಯ ಸಂಕೇತಗಳ ಬದಲಿಗೆ ವೈದಿಕ ಸಂಕೇತಗಳನ್ನು ತುರುಕುವ ಮೂಲಕ ದಕ್ಷಿಣದ ಮೇಲೆ ಉತ್ತರ ಭಾರತ ಸವಾರಿ ಮಾಡಲು ಯತ್ನಿಸುತ್ತಿದೆ. ಭಾರತವನ್ನು ಒಪ್ಪಿಕೊಳ್ಳುವುದೆಂದರೆ, ಉತ್ತರ ಭಾರತೀಯರ ಎಲ್ಲ ಬಗೆಯ ಹೇರಿಕೆಗಳಿಗೆ ತಲೆಬಾಗುವುದು ಎನ್ನುವ ಒಂದು ಹೊಸ ವ್ಯಾಖ್ಯಾನ ಸೃಷ್ಟಿಯಾಗಿದೆ. ದಕ್ಷಿಣ ಭಾರತದ ಹಲವು ರಾಜ್ಯಗಳು ಇವುಗಳಿಗೆ ಪ್ರತಿರೋಧಗಳನ್ನು ವ್ಯಕ್ತಪಡಿಸುತ್ತಿವೆ. ವಿಪರ್ಯಾಸವೆಂದರೆ, ಸಾಂಸ್ಕೃತಿಕವಾಗಿ ಮಾತ್ರವಲ್ಲ, ಆರ್ಥಿಕವಾಗಿಯೂ ರಾಜ್ಯಗಳ ಮೇಲೆ ದಬ್ಬಾಳಿಕೆಗಳು ನಡೆಯುತ್ತಿವೆ. ಹಂತ ಹಂತವಾಗಿ, ರಾಜ್ಯಗಳ ಆರ್ಥಿಕ ಸ್ವಾತಂತ್ರವನ್ನು ಕಸಿದುಕೊಳ್ಳಲಾಗುತ್ತಿದೆ. ರಾಜ್ಯಗಳಿಗೆ ಸೇರಬೇಕಾದ ಹಣವನ್ನು ದಕ್ಷಿಣ ಭಾರತದ ರಾಜ್ಯಗಳನ್ನು ಸತಾಯಿಸಲಾಗುತ್ತಿದೆ. ಜಿಎಸ್‌ಟಿ ವಿಷಯದಲ್ಲಂತೂ ರಾಜ್ಯಗಳ ಬೆನ್ನಿಗೆ ಕೇಂದ್ರ ಚೂರಿ ಹಾಕಿದೆ. ಇದರ ವಿರುದ್ಧ ದೊಡ್ಡ ಧ್ವನಿಯಲ್ಲಿ ಮಾತನಾಡುವ ಶಕ್ತಿಯನ್ನು ರಾಜ್ಯಗಳು ಕಳೆದುಕೊಂಡಿವೆೆ. ಕೇಂದ್ರದ ಬಳಿಯಿರುವ ತನ್ನದೇ ಹಣವನ್ನು ಅಧಿಕಾರಯುತವಾಗಿ ಕೇಳುವುದಕ್ಕೆ ಅಂಜುವ ದಯನೀಯ ಸ್ಥಿತಿಗೆ ರಾಜ್ಯ ಸರಕಾರಗಳು ತಲುಪಿವೆ. ಇದರ ಬೆನ್ನಿಗೇ, ತ್ರಿಭಾಷಾ ಸೂತ್ರ ಶಿಕ್ಷಣದ ಹೆಸರಲ್ಲಿ ಹಿಂಬಾಗಿಲಲ್ಲಿ ರಾಜ್ಯಗಳ ಮೇಲೆ ಹಿಂದಿಯನ್ನು ಅಥವಾ ಸಂಸ್ಕೃತವನ್ನು ಹೇರಲು ಪ್ರಯತ್ನ ನಡೆಯುತ್ತ್ತಿದೆ. ಈಗಾಗಲೇ ಹಿಂದಿಯನ್ನು ರಾಷ್ಟ್ರೀಯ ಭಾಷೆ ಎಂದು ನಂಬಿಸಿರುವ ಕೇಂದ್ರ ಸರಕಾರ, ಇನ್ನೇನು ಅದನ್ನು ರಾಷ್ಟ್ರೀಯ ಭಾಷೆಯೆಂದು ಅಧಿಕೃತವಾಗಿ ಘೋಷಿಸಿ, ಹಿಂದಿ ತಿಳಿಯದವರು ಭಾರತೀಯರಲ್ಲ ಎಂಬ ಹಣೆ ಪಟ್ಟಿ ನೀಡಲು ಸಿದ್ಧತೆ ನಡೆಸುತ್ತಿದೆ. ಅದರ ಒಂದು ಸಣ್ಣ ಅಣಕು ಪ್ರದರ್ಶನ ದಿಲ್ಲಿಯಲ್ಲಿ ನಡೆದಿದೆ.

ತಮಿಳುನಾಡಿನ ಸಂಸದೆ ಕನ್ನಿಮೋಳಿ ಅವರನ್ನು ಕೇಂದ್ರ ಭದ್ರತಾ ಪಡೆಯ ಅಧಿಕಾರಿಯೊಬ್ಬರು ‘‘ನೀವು ಭಾರತೀಯರೇ?’’ ಎಂದು ಪ್ರಶ್ನಿಸಿದ್ದಾರೆ. ಕಾರಣವಿಷ್ಟೇ. ಆತ ಹಿಂದಿಯಲ್ಲಿ ಮಾತನಾಡಿದಾಗ ‘‘ನನಗೆ ಹಿಂದಿ ಅರ್ಥವಾಗುವುದಿಲ್ಲ, ದಯವಿಟ್ಟು ಇಂಗ್ಲಿಷ್‌ನಲ್ಲಿ ಅಥವಾ ತಮಿಳಿನಲ್ಲಿ ಮಾತನಾಡಿ’’ ಎಂದು ಕನ್ನಿಮೋಳಿ ಮನವಿ ಮಾಡಿದ್ದರು. ಅಷ್ಟಕ್ಕೇ ಆತ, ಸಂಸದೆಯ ರಾಷ್ಟ್ರೀಯತೆಯನ್ನು ಅನುಮಾನಿಸಿದ್ದ. ಭಾರತೀಯರೆಂದರೆ, ಅವರಿಗೆ ಹಿಂದಿ ಬರಲೇ ಬೇಕು ಎನ್ನುವಂತಹ ಮನಸ್ಥಿತಿಯೇ ಇಂತಹದೊಂದು ಪ್ರಶ್ನೆಯನ್ನು ಕೇಳಿಸಿತ್ತು. ಇದು ಆಕಸ್ಮಿಕವೋ ಅಥವಾ ಅಧಿಕಾರಿಯ ಮುಗ್ಧತೆಯೋ ಅಲ್ಲ. ಮುಂದಿನ ದಿನಗಳಲ್ಲಿ ದೇಶಾದ್ಯಂತ ವ್ಯವಸ್ಥಿತವಾಗಿ ಹಿಂದಿಯನ್ನು ಹೇರುವ ಭಾಗವಾಗಿ, ದಕ್ಷಿಣ ಭಾರತೀಯರನ್ನು ಈ ಪ್ರಶ್ನೆಯ ಮೂಲಕ ಮುಜುಗರಕ್ಕೆ ತಳ್ಳುವ ಯತ್ನ ನಡೆಯುತ್ತಿದೆ. ಓರ್ವ ಸಂಸದೆಯನ್ನೇ ಒಬ್ಬ ಅಧಿಕಾರಿ ಹೀಗೆ ಪ್ರಶ್ನಿಸುವ ಧೈರ್ಯ ತೋರಿಸುತ್ತಾನೆ ಎಂದರೆ, ಉಳಿದ ಜನಸಾಮಾನ್ಯರ ಸ್ಥಿತಿ ಏನಾಗಬೇಕು? ಇಂದು ರೈಲ್ವೆ, ಬ್ಯಾಂಕ್ ಮೊದಲಾದ ಕಚೇರಿಗಳಲ್ಲಿ ಉದ್ದೇಶಪೂರ್ವಕವಾಗಿ ಉತ್ತರ ಭಾರತೀಯರನ್ನು ತುರುಕಿಸಲಾಗುತ್ತಿದೆ ಮತ್ತು ಅಲ್ಲಿ ಗ್ರಾಹಕರಿಗೆ ಹಿಂದಿ ಕಲಿಸುವ ಪ್ರಯತ್ನ ನಡೆಯುತ್ತಿದೆಯೇ ಹೊರತು, ಸಿಬ್ಬಂದಿಗೆ ಆಯಾ ಪ್ರಾದೇಶಿಕ ಭಾಷೆಗಳನ್ನು ಕಲಿಸುವ ಪ್ರಯತ್ನ ನಡೆಯುತ್ತಿಲ್ಲ. ‘ಹಿಂದಿ ದಿನಾಚರಣೆ’ಯನ್ನು ಬ್ಯಾಂಕ್‌ಗಳು ಸಂಭ್ರಮದಿಂದ ಆಚರಿಸಿದಂತೆ, ಕನ್ನಡ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿದ್ದಿಲ್ಲ. ಕರ್ನಾಟಕದ ರೈತನೊಬ್ಬ ಬ್ಯಾಂಕ್‌ನ ಮುಖ್ಯ ಶಾಖೆಗೆ ಹೋಗಿ ಕನ್ನಡದಲ್ಲಿ ವಿಚಾರಿಸಿದರೆ ಆತನಿಗೆ ಉತ್ತರ ಸಿಗುವುದಿಲ್ಲ ಮಾತ್ರವಲ್ಲ, ಕನ್ನಡ ಮಾತನಾಡಿದ ಕಾರಣಕ್ಕಾಗಿಯೇ ಆತನ ಮೇಲೆ ಉರಿದು ಬೀಳುವ ಸಿಬ್ಬಂದಿಯಿದ್ದಾರೆ. ಒಂದೆಡೆ ಇಂಗ್ಲಿಷ್ ಮೀಡಿಯಂನಿಂದಾಗಿ ಕನ್ನಡ ಮಾಧ್ಯಮ ಶಾಲೆಗಳು ಅಳಿವಿನಂಚಿನಲ್ಲಿವೆ. ಕನ್ನಡ ಒಂದಿಷ್ಟು ಉಳಿದಿರುವುದು ವೌಖಿಕವಾಗಿ ಮಾತ್ರ. ಹಿಂದಿ ಹೇರಿಕೆ ಹೀಗೆ ಮುಂದುವರಿದರೆ ಕನ್ನಡ ವೌಖಿಕ ಭಾಷೆಯಾಗಿಯೂ ನಮ್ಮ ನಡುವೆ ಉಳಿಯಲಾರದು.

ಬಣ್ಣ, ಭಾಷೆ, ಸಂಸ್ಕೃತಿಯ ಹೆಸರಿನಲ್ಲಿ ಈಗಾಗಲೇ ಉತ್ತರ ಭಾರತೀಯರು ದಕ್ಷಿಣ ಭಾರತೀಯರನ್ನು ಅನ್ಯರಂತೆ ಕಂಡಿದ್ದಾರೆ. ‘ನಾವು ದಕ್ಷಿಣ ಭಾರತೀಯರ ಜೊತೆಗೆ ಬಾಳುತ್ತಿಲ್ಲವೇ?’ ಎನ್ನುವ ಸಮರ್ಥನೆಯನ್ನು ನೀಡಿ, ಉತ್ತರ ಭಾರತೀಯರು ಜನಾಂಗೀಯವಾದಿಗಳಲ್ಲ ಎಂದು ಈ ಹಿಂದೆ ಬಿಜೆಪಿ ಮುಖಂಡರೊಬ್ಬರು ವಾದಿಸಲು ಹೋಗಿ ವಿವಾದಕ್ಕೊಳಗಾಗಿದ್ದರು. ಕೇರಳಿಗರ ಓಣಂ ಹಬ್ಬವನ್ನು ‘ವಾಮನ ಜಯಂತಿ’ಯನ್ನಾಗಿಸಲು ಹೊರಟು ಬಿಜೆಪಿಯ ನಾಯಕ ಅಮಿತ್ ಶಾ ಮುಖಭಂಗ ಅನುಭವಿಸಿರುವುದನ್ನೂ ಇಲ್ಲಿ ಸ್ಮರಿಸಬಹುದು. ಒಂದನ್ನು ನಾವು ಸ್ಪಷ್ಟವಾಗಿ ಅರಿತುಕೊಳ್ಳಬೇಕು. ಇಂದು ಆರೋಗ್ಯ, ಶಿಕ್ಷಣ, ಐಟಿ, ಬಿಟಿ, ಚಿತ್ರೋದ್ಯಮ, ಸಾಹಿತ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವುದು ದಕ್ಷಿಣ ಭಾರತದ ರಾಜ್ಯಗಳು. ಆರೋಗ್ಯದಲ್ಲಿ, ಶಿಕ್ಷಣದಲ್ಲಿ ಕೇರಳ ಪ್ರಥಮ ಸ್ಥಾನದಲ್ಲಿದೆ. ಬಡತನ, ಅನಕ್ಷರತೆ ಇವೆಲ್ಲವೂ ತಾಂಡವವಾಡುತ್ತಿರುವುದು ಹಿಂದಿ ಮಾತನಾಡುವ ಉತ್ತರ ಭಾರತದಲ್ಲಿ. ಹಿಂದಿ ಕಲಿಯದೇ ಈವರೆಗೆ ದಕ್ಷಿಣ ಭಾರತಕ್ಕೆ ಯಾವ ನಷ್ಟವೂ ಆಗಿಲ್ಲ. ಇದೇ ಸಂದರ್ಭದಲ್ಲಿ ಹಿಂದಿ ಗೊತ್ತಿದ್ದ ಕಾರಣಕ್ಕಾಗಿ ಉತ್ತರ ಪ್ರದೇಶ, ಬಿಹಾರದಂತಹ ರಾಜ್ಯಗಳು ಯಾವ ಅಭಿವೃದ್ಧಿಯನ್ನೂ ಕಂಡಿಲ್ಲ. ಹೀಗಿರುವಾಗ, ದಕ್ಷಿಣ ಭಾರತೀಯರಿಗೆ ಯಾವ ಕಾರಣಕ್ಕಾಗಿ ಕೇಂದ್ರ ಸರಕಾರ ಹಿಂದಿಯನ್ನು ಹೇರಲು ಹೊರಟಿದೆ? ಇದರ ಬದಲು ಹಿಂದಿ ಮಾತನಾಡುವ ಎಲ್ಲ ರಾಜ್ಯಗಳು ಕಡ್ಡಾಯವಾಗಿ ದಕ್ಷಿಣ ಭಾರತದ ಒಂದು ಭಾಷೆಯನ್ನು ಕಲಿಯುವುದನ್ನು ಕಡ್ಡಾಯಗೊಳಿಸಬೇಕು. ಈ ಮೂಲಕ, ಉತ್ತರ ಭಾರತೀಯರು ದಕ್ಷಿಣದ ಜೊತೆಗೆ ಕೊಂಡಿಯನ್ನು ಬೆಸೆಯಬೇಕಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)