varthabharthi


ವಿಶೇಷ-ವರದಿಗಳು

ಹಡಪದ ಅಪ್ಪಣ್ಣನವರೇ ಸಂಗಮೇಶ್ವರದ ಅಪ್ಪಣ್ಣ

ವಾರ್ತಾ ಭಾರತಿ : 11 Aug, 2020
ರಂಜಾನ್ ದರ್ಗಾ

ಹಡಪದ ಅಪ್ಪಣ್ಣನವರ ಚರಿತ್ರೆಯಲ್ಲೂ ಗೊಂದಲಗಳಿವೆ. ಅವರ ಜನ್ಮಸ್ಥಳ ಮತ್ತು ಬದುಕಿನ ವಿವರಗಳು ಸಿಕ್ಕಿಲ್ಲ. ಅವರ 251 ವಚನಗಳು ಮತ್ತು ಅವರ ಪುಣ್ಯಸ್ತ್ರೀ ಲಿಂಗಮ್ಮನ 114 ವಚನಗಳು ಸಿಕ್ಕಿವೆ. ಹಡಪದ ಅಪ್ಪಣ್ಣನವರ ಕೆಲವೊಂದು ವಚನಗಳು ಸಂಗಮೇಶ್ವರದ ಅಪ್ಪಣ್ಣನವರ ವಚನಗಳಲ್ಲಿ ಸೇರಿಹೋಗಿವೆ ಎಂದು ಕೆಲವು ವಿದ್ವಾಂಸರು ತಿಳಿಸಿದ್ದಾರೆ. ಸಂಗಮೇಶ್ವರದ ಅಪ್ಪಣ್ಣನವರ ಹೆಸರಿನಲ್ಲಿ 103 ವಚನಗಳು ಪ್ರಕಟವಾಗಿವೆ.
 ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧವಾದ ವಚನ ಸಂಪುಟಗಳಲ್ಲಿನ 4ನೇ ಸಂಕೀರ್ಣ ಸಂಪುಟದಲ್ಲಿ ಹಡಪದ ಅಪ್ಪಣ್ಣ ಅವರ ಹೆಸರಿನಲ್ಲಿ ಮತ್ತು ಸಂಗಮೇಶ್ವರದ ಅಪ್ಪಣ್ಣನವರ ಹೆಸರಿನಲ್ಲಿ ವಚನಗಳನ್ನು ಪ್ರಕಟಿಸಲಾಗಿದೆ. ಡಾ. ಬಿ. ಆರ್. ಹಿರೇಮಠ ಅವರು ಈ ಸಂಪುಟದ ಸಂಪಾದಕರು. ಪ್ರಸ್ತುತ ಪರಿಷ್ಕರಣ ಸಂಪುಟದ ಸಂಪಾದಕಿ ಡಾ. ವೈ.ಸಿ. ಭಾನುಮತಿ. ಆದರೆ ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣ ಬೇರೆ ಬೇರೆ ಅಲ್ಲ ಎಂದು ಹೇಳಲು ಅನೇಕ ಆಧಾರಗಳಿವೆ.


ಭಾಗ-1

12ನೇ ಶತಮಾನದ ವಚನಗಳು ಮೇಲ್ನೋಟಕ್ಕೆ ಸರಳವೆನಿಸಿದರೂ ಆಳವಾದ ಲೌಕಿಕ ಮತ್ತು ಆನುಭಾವಿಕ ಅರ್ಥವನ್ನೊಳಗೊಂಡಿದ್ದು ಅವುಗಳನ್ನು ಅರ್ಥೈಸಿಕೊಳ್ಳುವಲ್ಲಿ ಸಾಕಷ್ಟು ಶ್ರಮವಹಿಸಬೇಕಾಗು ವುದು. ಏಕೆಂದರೆ ವಚನಗಳನ್ನು ಅರ್ಥೈಸುವಲ್ಲಿ ಅನೇಕ ತೊಂದರೆಗಳಿವೆ.

 ವಚನ ಚಳವಳಿಯಿಂದ ಅಹಿಂಸಾತ್ಮಕವಾದ ಕಲ್ಯಾಣಕ್ರಾಂತಿಯನ್ನು ಮಾಡುವ ಮೂಲಕ ಆರ್ಥಿಕ, ಸಾಮಾಜಿಕ, ಧಾರ್ಮಿಕ ಸಮಾನತೆಯನ್ನು ಸಾಧಿಸುವ ಬಹುದೊಡ್ಡ ಕನಸನ್ನು ಬಸವಾದಿ ಶರಣರು ಕಂಡಿದ್ದರು. ಅಂತಹ ಸಮಾನತೆಯ ಮಾದರಿ ಸಮಾಜವನ್ನು ಶರಣಸಂಕುಲದ ಹೆಸರಿನಲ್ಲಿ ರಚಿಸಿದ್ದರು.
 ಕಲ್ಯಾಣದ ಶರಣಸಂಕುಲದಲ್ಲಿ ಸಮಾನತೆಯ ಕ್ರಾಂತಿ ನಿರಂತರವಾಗಿತ್ತು. ಆದರೆ ಸಮಗಾರ ಹರಳಯ್ಯನವರ ಮಗ ಶೀಲವಂತ ಮತ್ತು ಬ್ರಾಹ್ಮಣ ಮೂಲದ ಮಧುವರಸರ ಮಗಳು ಲಾವಣ್ಯಳ ವಿವಾಹವನ್ನು ಮನುಸ್ಮತಿಯ ಪ್ರಕಾರ ಧರ್ಮಬಾಹಿರವಾದ ವಿಲೋಮ ವಿವಾಹ ಎಂದು ಮನುವಾದಿಗಳು ವಾದಿಸಿದರು. ಹರಳಯ್ಯ ಮಧುವರಸರು ಲಿಂಗವಂತರು. ಲಿಂಗವಂತ ಧರ್ಮದಲ್ಲಿ ಜಾತಿಗಳಿಲ್ಲ. ಆದ್ದರಿಂದ ಇಷ್ಟಲಿಂಗಧಾರಿಗಳೆಲ್ಲ ಸಮಾನರು ಎಂಬ ಸತ್ಯವನ್ನು ತಿಳಿಹೇಳಿದರೂ ಮನುವಾದಿಗಳು ಕಡೆಗಣಿಸಿದರು. ರಾಜ್ಯಸತ್ತೆಯ ಮೇಲೆ ಒತ್ತಡ ತಂದು ಕ್ಷಿಪ್ರಕ್ರಾಂತಿ ಮಾಡಿಸಿದರು. ಆ ಮೂಲಕ ಶರಣರು ಬಯಸಿದ ಕಲ್ಯಾಣಕ್ರಾಂತಿ ಆಗದಂತೆ ನೋಡಿಕೊಂಡರು.

ಇಂತಹ ವಿಷಮ ಗಳಿಗೆಯಲ್ಲಿ ಸಹಸ್ರಾರು ಶರಣರು ಸಾವು ನೋವುಗಳನ್ನು ಅನುಭವಿಸಿದರು. ಬಹುಪಾಲು ಶರಣರು ವಿವಿಧ ದಿಕ್ಕುಗಳಲ್ಲಿ ಚದುರಿ ಹೋದರು. ವಚನಕಟ್ಟುಗಳು ಚಲ್ಲಾಪಿಲ್ಲಿಯಾದವು. ಅಳಿದುಳಿದ ವಚನಕಟ್ಟುಗಳ ರಕ್ಷಣೆಗಾಗಿ ಶರಣರು ಅಕ್ಕನಾಗಮ್ಮ, ಚೆನ್ನಬಸವಣ್ಣ, ಮಡಿವಾಳ ಮಾಚಿದೇವ ಮುಂತಾದ ಶರಣರ ನೇತೃತ್ವದಲ್ಲಿ ಕಲ್ಯಾಣದಿಂದ ಉಳವಿಯ ಕಡೆಗೆ ಹೋದರು.

ಆ ಸಂದರ್ಭದಲ್ಲಿ ವಚನ ಸಾಹಿತ್ಯವನ್ನು ‘ಪ್ರಭುತ್ವ ವಿರೋಧಿ ಸಾಹಿತ್ಯ’ವೆಂದು ಪರಿಗಣಿಸಲಾಗಿತ್ತು. ಇಂದು ಆ ಶರಣರು ರಕ್ಷಿಸಿದ ವಚನಕಟ್ಟುಗಳಿಲ್ಲ. ಇರಲು ಸಾಧ್ಯವೂ ಇಲ್ಲ. ತಾಡೋಲೆಗಳು 800 ವರ್ಷಗಳವರೆಗೆ ಉಳಿಯಲಾರವು. ಈಗಿನ ಕಾಲದಲ್ಲಿನ ಹಸ್ತಪ್ರತಿ ಸಂರಕ್ಷಣಾ ವಿಧಾನದ ವ್ಯವಸ್ಥೆ ಆ ಕಾಲದಲ್ಲಿರಲಿಲ್ಲ. ಆಯಾ ಕಾಲದಲ್ಲಿ ತಾಡೋಲೆಗಳನ್ನು ಪ್ರತಿ ಮಾಡುತ್ತ ಬರಲಾಗಿದೆ. ಅಂತಹ ಸಂದರ್ಭದಲ್ಲಿ ಕಾಲದ ಒತ್ತಡಕ್ಕೆ ತಕ್ಕಂತೆ ಮತ್ತು ಸ್ವಾರ್ಥ ಸಾಧನೆಗಾಗಿ ಅನೇಕ ವಚನಗಳಲ್ಲಿ ಪದಗಳ ಬದಲಾವಣೆ ಮಾಡಲಾಗಿದೆ. ವಚನಕಟ್ಟುಗಳಲ್ಲಿ ಕೆಲ ಪ್ರಕ್ಷಿಪ್ತ ವಚನಗಳನ್ನೂ ಸೇರಿಸಲಾಗಿದೆ. ಕೆಲ ದೋಷಗಳು ಅಜ್ಞಾನದಿಂದ ಆಗಿವೆ. ಮತ್ತೆ ಕೆಲ ದೋಷಗಳು ತಪ್ಪು ಗ್ರಹಿಕೆಯಿಂದ ಆಗಿವೆ. ಕೆಲ ದೋಷಗಳು ಕಾಗುಣಿತ ದೋಷಗಳಿಂದ ಆಗಿವೆ. ಇನ್ನೂ ಕೆಲ ದೋಷಗಳು ಜನರಿಗೆ ಸರಳವಾಗಿ ತಿಳಿಸುವ ಉದ್ದೇಶದೊಂದಿಗೆ ಆಗಿವೆ.

ಇತಿಹಾಸದಲ್ಲಿ ಅಮರರಾಗಬೇಕೆಂಬ ಬಯಕೆಯನ್ನು ವಚನಕಾರರು ಹೊಂದಿದ್ದಿಲ್ಲ. ಹೀಗಾಗಿ ವಚನಕಾರರ ಮೂಲದ ಬಗ್ಗೆಯೂ ತೊಡಕುಗಳಿವೆ. ವಚನ ಸಾಹಿತ್ಯಕ್ಕೆ ಸಂಬಂಧಿಸಿದ ಎಲ್ಲ ರೀತಿಯ ಗೊಂದಲಗಳ ನಿವಾರಣೆಗಾಗಿ ಈಗಿನ ವಿದ್ವಾಂಸರು ಪ್ರಯತ್ನಿಸಬೇಕಾಗಿದೆ. 12ನೇ ಶತಮಾನ ವಚನಯುಗವಾದರೆ 15ನೇ ಶತಮಾನ ವಚನಸಂಕಲನ ಯುಗವಾಗಿದೆ. ಈಗ 21ನೇ ಶತಮಾನ ವಚನಪರಿಷ್ಕರಣ ಯುಗವಾಗಬೇಕಿದೆ.

ಹಡಪದ ಅಪ್ಪಣ್ಣನವರ ಇತಿವೃತ್ತ
 ಹಡಪದ ಅಪ್ಪಣ್ಣನವರ ಚರಿತ್ರೆಯಲ್ಲೂ ಗೊಂದಲಗಳಿವೆ. ಅವರ ಜನ್ಮಸ್ಥಳ ಮತ್ತು ಬದುಕಿನ ವಿವರಗಳು ಸಿಕ್ಕಿಲ್ಲ. ಅವರ 251 ವಚನಗಳು ಮತ್ತು ಅವರ ಪುಣ್ಯಸ್ತ್ರೀ ಲಿಂಗಮ್ಮನ 114 ವಚನಗಳು ಸಿಕ್ಕಿವೆ. ಹಡಪದ ಅಪ್ಪಣ್ಣನವರ ಕೆಲವೊಂದು ವಚನಗಳು ಸಂಗಮೇಶ್ವರದ ಅಪ್ಪಣ್ಣನವರ ವಚನಗಳಲ್ಲಿ ಸೇರಿಹೋಗಿವೆ ಎಂದು ಕೆಲವು ವಿದ್ವಾಂಸರು ತಿಳಿಸಿದ್ದಾರೆ. ಸಂಗಮೇಶ್ವರದ ಅಪ್ಪಣ್ಣನವರ ಹೆಸರಿನಲ್ಲಿ 103 ವಚನಗಳು ಪ್ರಕಟವಾಗಿವೆ.
 ಡಾ. ಎಂ. ಎಂ. ಕಲಬುರ್ಗಿ ಅವರ ಪ್ರಧಾನ ಸಂಪಾದಕತ್ವದಲ್ಲಿ ಸಿದ್ಧವಾದ ವಚನ ಸಂಪುಟಗಳಲ್ಲಿನ 4ನೇ ಸಂಕೀರ್ಣ ಸಂಪುಟದಲ್ಲಿ ಹಡಪದ ಅಪ್ಪಣ್ಣ ಅವರ ಹೆಸರಿನಲ್ಲಿ ಮತ್ತು ಸಂಗಮೇಶ್ವರದ ಅಪ್ಪಣ್ಣನವರ ಹೆಸರಿನಲ್ಲಿ ವಚನಗಳನ್ನು ಪ್ರಕಟಿಸಲಾಗಿದೆ. ಡಾ. ಬಿ. ಆರ್. ಹಿರೇಮಠ ಅವರು ಈ ಸಂಪುಟದ ಸಂಪಾದಕರು. ಪ್ರಸ್ತುತ ಪರಿಷ್ಕರಣ ಸಂಪುಟದ ಸಂಪಾದಕಿ ಡಾ. ವೈ.ಸಿ. ಭಾನುಮತಿ. ಆದರೆ ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣ ಬೇರೆ ಬೇರೆ ಅಲ್ಲ ಎಂದು ಹೇಳಲು ಅನೇಕ ಆಧಾರಗಳಿವೆ.

ವಚನಾಂಕಿತ 
ಹಡಪದ ಅಪ್ಪಣ್ಣನವರು ಐದು ಪ್ರಕಾರದಲ್ಲಿ ವಚನಾಂಕಿತಗಳನ್ನು ಬಳಸಿದ್ದಾರೆ.

1 ಬಸವಪ್ರಿಯ ಕೂಡಲಚೆನ್ನಬಸವಣ್ಣಾ
2 ಬಸವಪ್ರಿಯ ಕೂಡಲಚೆನ್ನಸಂಗಮದೇವಾ
3 ಬಸವಪ್ರಿಯ ಕೂಡಲಸಂಗಮದೇವಾ
4 ಬಸವಪ್ರಿಯ ಕೂಡಲಸಂಗಮದೇವ ಪ್ರಭುವೆ
5 ಬಸವಪ್ರಿಯ ಕೂಡಲಸಂಗನಬಸವಣ್ಣ

ಈ ವಚನಾಂಕಿತಗಳಲ್ಲಿ ‘ಬಸವಪ್ರಿಯ’ ಎಂಬ ವಿಶೇಷಣ ಸ್ಥಾಯಿಯಾಗಿದೆ. ಸಂಗಮೇಶ್ವರದ ಅಪ್ಪಣ್ಣ ಹೆಸರಿನ ವಚನಗಳಲ್ಲಿ 4 ಪ್ರಕಾರದ ವಚನಾಂಕಿತಗಳನ್ನು ಬಳಸಲಾಗಿದೆ. ಆ ವಚನಗಳ ವಚನಾಂಕಿತಗಳಲ್ಲಿ ಕೂಡ ಬಸವಪ್ರಿಯ ಎಂಬ ವಿಶೇಷಣ ಸ್ಥಾಯಿಯಾಗಿದೆ. ಅಷ್ಟೇ ಅಲ್ಲದೆ ಸಂಗಮೇಶ್ವರದ ಅಪ್ಪಣ್ಣ ಹೆಸರಿನ ಎಲ್ಲ ವಚನಾಂಕಿತಗಳು ಹಡಪದ ಅಪ್ಪಣ್ಣನವರ ಕೂಡಲಚೆನ್ನಸಂಗಮದೇವ ವಚನಾಂಕಿತಕ್ಕೆ ಅನುಗುಣವಾಗಿವೆ! ಆದ್ದರಿಂದ ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣ ಹೆಸರಿನಲ್ಲಿ ಪ್ರಕಟವಾದ ವಚನಾಂಕಿತಗಳು ಬೇರೆ ಬೇರೆ ಅಲ್ಲ ಎಂಬುದು ಇದರಿಂದ ಸ್ಪಷ್ಟವಾಗುವುದು.

 ಸಂಗಮೇಶ್ವರದ ಅಪ್ಪಣ್ಣ ಹೆಸರಲ್ಲಿ ಪ್ರಕಟವಾದ ವಚನಗಳ ವಚನಾಂಕಿತಗಳು:
1 ಬಸವಪ್ರಿಯ ಕೂಡಲಚೆನ್ನಸಂಗ
2 ಬಸವಪ್ರಿಯ ಕೂಡಲಚೆನ್ನಸಂಗಮದೇವ
3 ಬಸವಪ್ರಿಯ ಕೂಡಲಚೆನ್ನಸಂಗಯ್ಯ
4 ಬಸವಪ್ರಿಯ ಕೂಡಲಚೆನ್ನಸಂಗಮದೇವಯ್ಯಿ

ಹಡಪದ ಅಪ್ಪಣ್ಣ ಮತ್ತು ಸಂಗಮೇಶ್ವರದ ಅಪ್ಪಣ್ಣ ಹೆಸರಿನ ವಚನಗಳ ವಚನಾಂಕಿತಗಳಲ್ಲಿನ ‘ಬಸವಪ್ರಿಯ’ ವಿಶೇಷಣ ಪದ ತೆಗೆದಾಗ ಉಳಿಯುವ ಪದಗಳು ಕೆಳಗೆ ಕಾಣಿಸಿದ ಚೆನ್ನಬಸವಣ್ಣನವರ ವಚನಾಂಕಿತಗಳಿಗೆ ಸಮನಾಗುತ್ತವೆ! ಚೆನ್ನಬಸವಣ್ಣನವರು ಮೂರು ಪ್ರಕಾರದ ವಚನಾಂಕಿತಗಳನ್ನು ಬಳಸಿದ್ದಾರೆ. ಅವು ಕೂಡ ಒಂದಕ್ಕೊಂದು ಅನುಗುಣವಾಗಿವೆ.
 1 ಕೂಡಲಚೆನ್ನಸಂಗಯ್ಯ
 2 ಕೂಡಲಚೆನ್ನಸಂಗಮದೇವ
 3 ಕೂಡಲಚೆನ್ನಸಂಗ
  ಆದ್ದರಿಂದ ‘ಬಸವಪ್ರಿಯ’ ವಿಶೇಷಣ ತೆಗೆದರೆ ಹಡಪದ ಅಪ್ಪಣ್ಣ, ಸಂಗಮೇಶ್ವರದ ಅಪ್ಪಣ್ಣ ಮತ್ತು ಚೆನ್ನಬಸವಣ್ಣನವರ ವಚನಾಂಕಿತಗಳಲ್ಲಿ ವ್ಯತ್ಯಾಸವೇ ಉಳಿಯುವುದಿಲ್ಲ!

ಈ ಹಿನ್ನೆಲೆಯಲ್ಲಿ ‘ಬಸವಪ್ರಿಯ’ ವಿಶೇಷಣದಿಂದ ಕೂಡಿದ ಹಡಪದ ಅಪ್ಪಣ್ಣನವರ ವಚನಾಂಕಿತಗಳಲ್ಲಿ ಒಂದಾದ ‘ಬಸವಪ್ರಿಯ ಕೂಡಲಚೆನ್ನಸಂಗಮದೇವ’ ಮತ್ತು ಸಂಗಮೇಶ್ವರದ ಅಪ್ಪಣ್ಣ ಹೆಸರಿನ ವಚನಗಳಲ್ಲಿನ ನಾಲ್ಕೂ ಸಂವಾದಿಯಾದ ವಚನಾಂಕಿತಗಳು ಒಂದೇ ಆಗಿರುವುದರಿಂದ ಹಡಪದ ಅಪ್ಪಣ್ಣನವರಿಗೆ ‘ಸಂಗಮೇಶ್ವರದ ಅಪ್ಪಣ್ಣ’ ಎಂದೂ ಕರೆಯುತ್ತಿದ್ದರು ಎಂಬುದು ಸಾಬೀತಾಗುತ್ತದೆ.

ಪ್ರಭು ಕಲ್ಯಾಣಕ್ಕೆ ಬಂದ ಸಂಪಾದನೆ
 ಗೂಳೂರು ಸಿದ್ಧವೀರಣ್ಣೊಡೆಯರು ಸಂಗ್ರಹಿಸಿದ ಶೂನ್ಯಸಂಪಾದನೆಯ ‘ಪ್ರಭು ಕಲ್ಯಾಣಕ್ಕೆ ಬಂದ ಸಂಪಾದನೆ’ಯಲ್ಲಿ; ಅಲ್ಲಮಪ್ರಭುಗಳು ಮತ್ತು ಸಿದ್ಧರಾಮರು ಕಲ್ಯಾಣದ ಮಹಾಮನೆಯ ಹೆಬ್ಬಾಗಿಲ ಬಳಿ ಬರುವರು. ಅವರನ್ನು ನೋಡಿದ ಹಡಪದ ಅಪ್ಪಣ್ಣನವರು ಹರ್ಷಗೊಂಡು ಲಿಂಗಾರ್ಚನೆಯಲ್ಲಿ ಮಗ್ನರಾಗಿದ್ದ ಬಸವಣ್ಣನವರನ್ನು ಕರೆತರಲು ಹೋಗುವ ದೃಶ್ಯದೊಂದಿಗೆ ಈ ಸಂಪಾದನೆ ಆರಂಭವಾಗುತ್ತದೆ. ಇದರಲ್ಲಿ ಹಡಪದ ಅಪ್ಪಣ್ಣನವರ 7 ವಚನಗಳಿವೆ:
 1. ದೇವ ದೇವ ಮಹಾಪ್ರಸಾದ; ಕಂಗಳಲ್ಲಿ ಕರುಳಿಲ್ಲ, ಕಾಯದಲ್ಲಿ ಹೊರೆಯಿಲ್ಲ.
2. ಮನಕ್ಕೆ ಮನ ಏಕಾರ್ಥವಾಗಿ, ಕಾಯಕ್ಕೆ ಕಾಯ ಸಂಬಂಧವಾಗಿ.
3. ಅಂಗದ ಕಳೆ ಲಿಂಗದಲ್ಲಿ ಲೀಯವಾಗದು, ಲಿಂಗದ ಕಳೆ ಅಂಗದಲ್ಲಿ ಲೀಯವಾಗದು.

4. ನಿಮ್ಮ ತನು, ನಿಮ್ಮ ಮನ, ನಿಮ್ಮ ಧನ ನಿಮ್ಮದಲ್ಲದೆ ಅನ್ಯವೆಂದಣುಮಾತ್ರವಿಲ್ಲ ನೋಡಯ್ಯ. 5. ಲಿಂಗ ಜಂಗಮ, ಜಂಗಮ ಲಿಂಗವೆಂಬುದನಾರು ಬಲ್ಲರಯ್ಯ?
6. ದೇವ ದೇವ ಮಹಾಪ್ರಸಾದ; ನಿಮ್ಮ ಶರಣರ ಮನೆಗೆ ಸಲುಗೆಯ ಬಂಟ ನಾನಲ್ಲಯ್ಯ.
7. ನಿನ್ನಳವಲ್ಲ ಎನ್ನಳವಲ್ಲ ಇದಾರಳವಲ್ಲದ ಘನವು ನೋಡಯ್ಯ.
  ಶೂನ್ಯಸಂಪಾದನೆಯ ಪ್ರಕಾರ ಇವು ಹಡಪದ ಅಪ್ಪಣ್ಣನವರ ವಚನಗಳಾಗಿವೆ. ಆದರೆ ಸಂಕೀರ್ಣ ವಚನ ಸಂಪುಟ 4ರಲ್ಲಿ ಈ ಏಳೂ ವಚನಗಳು ಸಂಗಮೇಶ್ವರದ ಅಪ್ಪಣ್ಣ ಹೆಸರಲ್ಲಿ ಪ್ರಕಟವಾಗಿವೆ! ಇದೇ ಸಂಕೀರ್ಣ ವಚನ ಸಂಪುಟದಲ್ಲಿ ಹಡಪದ ಅಪ್ಪಣ್ಣನವರ ವಚನಗಳೂ ಇವೆ. ಆದರೆ ಅವುಗಳ ಜೊತೆ ಈ ವಚನಗಳು ಪ್ರಕಟವಾಗಿಲ್ಲ!

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)