varthabharthi


ಕರಾವಳಿ

ದ.ಕ. ಜಿಲ್ಲೆಯಲ್ಲಿ ಪ್ಲಾಸ್ಮಾ ಕೇಂದ್ರ ತೆರೆಯುವಂತೆ ವೆಲ್‌ನೆಸ್ ಹೆಲ್ಪ್‌ಲೈನ್ ಆಗ್ರಹ

ವೃದ್ಧೆಗಾಗಿ ಬೆಂಗಳೂರಿಗೆ ತೆರಳಿ ‘ಪ್ಲಾಸ್ಮಾ’ ದಾನ ಮಾಡಿದ ಮಂಗಳೂರಿನ ಯುವಕರು

ವಾರ್ತಾ ಭಾರತಿ : 11 Aug, 2020

ಮಂಗಳೂರು, ಆ.10: ಕೋವಿಡ್-19 ಪಾಸಿಟಿವ್ ಅಂದೊಡನೆ ಆ ವ್ಯಕ್ತಿಯಿಂದ ಜನಸಾಮಾನ್ಯರು ಮಾರುದ್ದ ದೂರ ಸರಿಯುವುದು ಮತ್ತು ಸೋಂಕಿಗೊಳಗಾದ ವ್ಯಕ್ತಿ ಕೂಡ ಆತಂಕಕ್ಕೊಳಗಾಗುವುದು ಸಹಜ. ಆದರೆ ಕೊರೋನ ಪಾಸಿಟಿವ್‌ಗೊಳಗಾದ ಮಂಗಳೂರು ಮೂಲದ ಇಬ್ಬರು ಯುವಕರು ಗುಣಮುಖರಾಗುತ್ತಲೇ ಪರಿಚಯವೇ ಇಲ್ಲದ ವೃದ್ಧರೊಬ್ಬರಿಗೆ ‘ಪ್ಲಾಸ್ಮಾ’ ದಾನ ಮಾಡಿ ಶ್ಲಾಘನೆಗೊಳಗಾಗಿದ್ದಾರೆ.

ಬಜ್ಪೆಯ ಹೈದರ್ ಅಲಿ ಮತ್ತು ಸುರತ್ಕಲ್ ಸಮೀಪದ ಇಡ್ಯದ ನ್ಯಾಯವಾದಿ ಜೀಶಾನ್ ಅಲಿ ‘ಪ್ಲಾಸ್ಮಾ’ ದಾನ ಮಾಡಿದವರು. ಇವರು ‘ಪ್ಲಾಸ್ಮಾ’ ದಾನ ಮಾಡಲು ಪ್ರೇರಣೆ ನೀಡಿದ್ದು, ಮಂಗಳೂರಿನ ವೆಲ್‌ನೆಸ್ ಹೆಲ್ಪ್‌ಲೈನ್‌ನ ಮುಖ್ಯಸ್ಥರು.

ಭಟ್ಕಳ ಮೂಲದ 85 ವರ್ಷದ ವೃದ್ಧರೊಬ್ಬರು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಿಗೆ ‘ಪ್ಲಾಸ್ಮಾ’ದ ಅಗತ್ಯವಿತ್ತು. ಈ ಬಗ್ಗೆ ಮಾಹಿತಿ ಪಡೆದ ವೆಲ್‌ನೆಸ್ ಹೆಲ್ಪ್‌ಲೈನ್‌ನ ಸಂಯೋಜಕ ಝಕರಿಯಾ ಫರ್ವೇಝ್ ದಾನಿಗಳಾದ ಜೀಶಾನ್ ಅಲಿ ಮತ್ತು ಹೈದರ್ ಅಲಿಯವರನ್ನು ಸಂಪರ್ಕಿಸಿದರು. ಆದರೆ ಮಂಗಳೂರಿನಲ್ಲಿ ‘ಪ್ಲಾಸ್ಮಾ’ ಸಂಗ್ರಹ ಕೇಂದ್ರವಿಲ್ಲದ ಕಾರಣ ರವಿವಾರ ಸಂಜೆ 5:30ಕ್ಕೆ ಬೆಂಗಳೂರಿಗೆ ಹೊರಟು ರಾತ್ರಿ ತಲುಪಿದರು. ಹಾಗೇ ಸೋಮವಾರ ಬೆಳಗ್ಗೆ ಇಬ್ಬರು ದಾನಗೈದ ಪ್ಲಾಸ್ಮಾದೊಂದಿಗೆ ಹೊರಟ ಫರ್ವೇಝ್ ಮಧ್ಯಾಹ್ನದ ವೇಳೆ ಮಂಗಳೂರು ತಲುಪಿದ್ದಾರೆ. ಹೀಗೆ ಕೆಲವೇ ಗಂಟೆಗಳ ಅಂತರದಲ್ಲಿ ಇಬ್ಬರು ಪ್ಲಾಸ್ಮಾ ದಾನಗೈದು ಗಂಭೀರ ಸ್ಥಿತಿಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವೃದ್ಧರಿಗೆ ನೆರವಾಗಿದ್ದಾರೆ.

ಮಂಗಳೂರಿನಲ್ಲಿ ವ್ಯವಸ್ಥೆ ಇಲ್ಲ: ಮಂಗಳೂರಿನಲ್ಲಿ ‘ಪ್ಲಾಸ್ಮಾ’ ಸಂಗ್ರಹದ ವ್ಯವಸ್ಥೆಯೇ ಇಲ್ಲ. ಆ ಬಗ್ಗೆ ಜಾಗೃತಿಯೂ ಇಲ್ಲ. ಒಂದೆಡೆ ಜಾಗೃತಿಯ ಕೊರತೆ ಮತ್ತು ಇನ್ನೊಂದೆಡೆ ಸಂಗ್ರಹ ಕೇಂದ್ರ ವಿಲ್ಲದ ಕಾರಣ ‘ಪ್ಲಾಸ್ಮಾ’ ವ್ಯರ್ಥವಾಗುತ್ತದೆ ಎಂಬ ಮಾತು ಕೇಳಿಬರುತ್ತಿದೆ. ರಾಜ್ಯ ಸರಕಾರವು ಪ್ಲಾಸ್ಮಾ ಸಂಗ್ರಹಕ್ಕೆ ಬೆಂಗಳೂರಿನ ಕೆಲವೇ ಆಸ್ಪತ್ರೆಗಳಿಗೆ ಅನುಮತಿ ನೀಡಿದ ಕಾರಣ ರಾಜ್ಯದ ವಿವಿಧ ಜಿಲ್ಲೆಯ ದಾನಿಗಳು ಮಾತ್ರವಲ್ಲ, ‘ಪ್ಲಾಸ್ಮಾ’ ಅಗತ್ಯವಿರುವ ರೋಗಿಗಳು ಕೂಡ ಕಂಗಾಲಾಗಿದ್ದಾರೆ.

ಕೋವಿಡ್-19 ಸಂದರ್ಭ ವೈದ್ಯಕೀಯ- ಆರೋಗ್ಯ ಕ್ಷೇತ್ರದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ‘ವೆಲ್‌ನೆಸ್ ಹೆಲ್ಪ್‌ಲೈನ್’ನ ಮುಖ್ಯಸ್ಥರು ಈ ನಿಟ್ಟಿನಲ್ಲಿ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಶಾಸಕರಾದ ಯು.ಟಿ.ಖಾದರ್, ವೇದವ್ಯಾಸ ಕಾಮತ್ ಮತ್ತಿತರ ಜೊತೆ ಚರ್ಚೆ ನಡೆಸಿದ್ದಾರೆ. ಮಂಗಳೂರಿನಲ್ಲೂ ‘ಪ್ಲಾಸ್ಮಾ’ ಸಂಗ್ರಹ ಕೇಂದ್ರ ಸ್ಥಾಪಿಸಲು ಮುತುವರ್ಜಿ ವಹಿಸುವಂತೆ ಮನವಿ ಮಾಡಿದ್ದಾರೆ.

''ಮಂಗಳೂರಿನಲ್ಲಿ ‘ಪ್ಲಾಸ್ಮಾ’ ದಾನದ ಬಗ್ಗೆ ಹೆಚ್ಚು ಜಾಗೃತಿ ಇಲ್ಲ. ಮಾಹಿತಿಯ ಕೊರತೆಯೂ ಇದೆ. ಆದಾಗ್ಯೂ ಮಂಗಳೂರಿನಲ್ಲಿ ಸಾಕಷ್ಟು ಸಂಖ್ಯೆಯ ‘ಪ್ಲಾಸ್ಮಾ’ ದಾನಿಗಳಿದ್ದಾರೆ. ಆದರೆ, ಪ್ಲಾಸ್ಮಾ ಸಂಗ್ರಹ ಕೇಂದ್ರವಿಲ್ಲ. ಪ್ಲಾಸ್ಮಾ ದಾನ ಮಾಡುವವರು ಬೆಂಗಳೂರಿಗೆ ಹೋಗುವ ಅನಿವಾರ್ಯತೆ ಇದೆ. ಮೊದಲೇ ಬೆಂಗಳೂರು ಕೊರೋನದಿಂದ ನಲುಗಿರುವುದರಿಂದ ಅಲ್ಲಿಗೆ ಹೋಗಲು ದಾನಿಗಳು ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ ಜಿಲ್ಲೆಯ ಉಸ್ತುವಾರಿ ಸಚಿವರು, ಶಾಸಕರು, ಸಂಸದರು, ಜಿಲ್ಲಾಧಿಕಾರಿ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ''.

-ಝಕರಿಯಾ ಫರ್ವೇಝ್, ಸಂಯೋಜಕರು
ವೆಲ್‌ನೆಸ್ ಹೆಲ್ಪ್‌ಲೈನ್-ಮಂಗಳೂರು


ಪ್ಲಾಸ್ಮಾ ನೀಡಲು ಭಯ ಬೇಡ

ನಾನು ಮೂಲತಃ ಬಜ್ಪೆ ನಿವಾಸಿ. ಸೌದಿ ಅರೇಬಿಯಾದಲ್ಲಿ ಉದ್ಯಮಿಯಾಗಿದ್ದೇನೆ. ಅಲ್ಲೇ ಕೊರೋನ ಪಾಸಿಟಿವ್‌ಗೊಳಗಾಗಿ ಬಳಿಕ ಗುಣಮುಖನಾಗಿ ಊರಿಗೆ ಮರಳಿದ್ದೆ. ಹಿದಾಯ ಫೌಂಡೇಶನ್‌ನ ಖಾಸಿಮ್ ಅಹ್ಮದ್ ಕರೆ ಮಾಡಿ ರೋಗಿಯೊಬ್ಬರಿಗೆ ಪ್ಲಾಸ್ಮಾದ ಅಗತ್ಯವಿದ್ದು, ಅವರಿಗೆ ಪ್ಲಾಸ್ಮಾ ದಾನ ಮಾಡುವ ಬಗ್ಗೆ ಪ್ರಸ್ತಾಪಿಸಿದರು. ತಕ್ಷಣ ನಾನು ಸ್ಪಂದಿಸಿದೆ. ಅಲ್ಲದೆ ಬೆಂಗಳೂರಿಗೆ ತೆರಳಿ ಪ್ಲಾಸ್ಮಾ ದಾನ ಮಾಡಿದೆ. ಪ್ಲಾಸ್ಮಾ ದಾನದ ಬಗ್ಗೆ ಯಾರೂ ಆತಂಕಪಡಬೇಕಿಲ್ಲ. -ಹೈದರ್ ಅಲಿ ಬಜ್ಪೆ, ಅನಿವಾಸಿ ಉದ್ಯಮಿ

ಪ್ಲಾಸ್ಮಾ ದಾನ ಬಹಳ ಸರಳ

ಕೊರೋನ ಪಾಸಿಟಿವ್ ಬಂತೆಂದರೆ ಯಾರೂ ಗಾಬರಿ ಪಡಬೇಕಿಲ್ಲ. ಆತ್ಮಸ್ಥೈರ್ಯ ಬೆಳೆಸಿದರೆ ಈ ರೋಗವನ್ನು ಜಯಿಸಬಹುದು. ಇನ್ನು ‘ಪ್ಲಾಸ್ಮಾ’ ದಾನ ಮಾಡಲೂ ಹೆದರಬೇಕಿಲ್ಲ. ಒಮ್ಮೆ ರಕ್ತದಾನ ಮಾಡಿದವರು ಮತ್ತೊಮ್ಮೆ ರಕ್ತದಾನ ಮಾಡಲು 28 ದಿನ ಕಾಯಬೇಕು. ಆದರೆ, ‘ಪ್ಲಾಸ್ಮಾ’ ದಾನವನ್ನು ಮತ್ತೊಮ್ಮೆ ಮಾಡಲು ಕೇವಲ 14 ದಿನ ಕಾದರೆ ಸಾಕು. ಪ್ಲಾಸ್ಮಾ ದಾನ ಮಾಡಿದರೆ ಯಾವುದೇ ನಿಶ್ಶಕ್ತಿ ಉಂಟಾಗುವುದಿಲ್ಲ. ಶಕ್ತಿ ವೃದ್ಧಿಸುತ್ತದೆ. ಹಾಗಾಗಿ ಈ ಬಗ್ಗೆ ಆತಂಕಪಡಬೇಕಿಲ್ಲ. ದಾನ ಪ್ರಕ್ರಿಯೆ ಕೇವಲ ಅರ್ಧ ಗಂಟೆಯಲ್ಲೇ ಮುಗಿಯಿತು. ನನ್ನಿಂದಾಗಿ ಒಬ್ಬರ ಜೀವ ಉಳಿಸುವ ಪುಣ್ಯ ಕಾರ್ಯವಾದರೆ ಅದಕ್ಕಿಂತ ಸಂತೋಷದ ವಿಷಯ ಬೇರೆ ಇಲ್ಲ. ಮಂಗಳೂರಿನಲ್ಲಿ ಪ್ಲಾಸ್ಮಾ ದಾನದ ಬಗ್ಗೆ ಜಾಗೃತಿ ಮೂಡಿಸಬೇಕಿದೆ. ಅಲ್ಲದೆ ಸಂಗ್ರಹ ಕೇಂದ್ರವನ್ನೂ ಸ್ಥಾಪಿಸಬೇಕಿದೆ. -ಜೀಶಾನ್ ಅಲಿ, ನ್ಯಾಯವಾದಿ, ಇಡ್ಯ ಸುರತ್ಕಲ್

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)