varthabharthi


ಅಂತಾರಾಷ್ಟ್ರೀಯ

ಬೈರೂತ್ ಸ್ಫೋಟದ ನಂತದ ಜನಾಕ್ರೋಶ: ರಾಜೀನಾಮೆ ಘೋಷಿಸಿದ ಲೆಬನಾನ್ ಪ್ರಧಾನಿ

ವಾರ್ತಾ ಭಾರತಿ : 11 Aug, 2020

ಬೈರೂತ್: ಲೆಬನಾನ್ ರಾಜಧಾನಿ ಬೈರೂತ್ ನ ಬಂದರು ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಭಾರೀ ಸ್ಫೋಟದಲ್ಲಿ ಅಪಾರ ಸಾವು-ನೋವು ಸಂಭವಿಸಿದ ನಂತರ ದೇಶದಲ್ಲಿ ಸರಕಾರದ ವಿರುದ್ಧ ಜನರು ಬೀದಿಗಿಳಿದು ಪ್ರತಿಭಟನೆಗಳನ್ನು ನಡೆಸುತ್ತಿರುವ ಬೆನ್ನಲ್ಲೇ ಅಲ್ಲಿನ ಪ್ರಧಾನಿ ಹಸನ್ ದಿಯಾಬ್ ತಮ್ಮ ಸರಕಾರದ ರಾಜೀನಾಮೆಯನ್ನು ಘೋಷಿಸಿದ್ದಾರೆ.

ಈಗಾಗಲೇ ಹಲವಾರು ಸಚಿವರು ಸರಕಾರಕ್ಕೆ ರಾಜೀನಾಮೆ ನೀಡಿದ್ದರೆ ಸೋಮವಾರದ ಸಚಿವ ಸಂಪುಟ ಸಭೆಯಲ್ಲಿ ಇನ್ನೂ ಹಲವಾರು ಸಚಿವರು ರಾಜೀನಾಮೆ ನೀಡುವ ಇಂಗಿತ ವ್ಯಕ್ತಪಡಿಸಿದ್ದರಿಂದ ಸರಕಾರದ ಪತನ ಅನಿವಾರ್ಯ ಎಂದು ಮನಗಂಡು ಪ್ರಧಾನಿ ಸರಕಾರದ ರಾಜೀನಾಮೆ ಘೋಷಿಸಿದ್ದಾರೆ.

ದೇಶದ ಭ್ರಷ್ಟ ರಾಜಕೀಯ ವ್ಯವಸ್ಥೆಗೆ ಅಂತ್ಯ ಹಾಡುವಂತೆ ಆಗ್ರಹಿಸಿ ಅಲ್ಲಿನ ಉದ್ರಿಕ್ತ ನಾಗರಿಕರು ಬೀದಿಗಿಳಿದು ಪ್ರತಿಭಟನೆ ನಡೆಸಿದ ವೇಳೆ ಅವರ ಹಾಗೂ ಭದ್ರತಾ ಪಡೆಗಳ ನಡುವೆ ಹಲವು ಬಾರಿ ಸಂಘರ್ಷಗಳು ನಡೆದಿವೆ.

ದಿಯಾಬ್ ಸರಕಾರ ರಾಜೀನಾಮೆ ಘೋಷಿಸುತ್ತಿದ್ದಂತೆಯೇ ಜನರು ನಗರದ ರಸ್ತೆಗಳಲ್ಲಿ ತಮ್ಮ ಕಾರುಗಳ ಹಾರ್ನ್ ಬಾರಿಸಿ ಸಂತಸ ವ್ಯಕ್ತ ಪಡಿಸಿದರಲ್ಲದೆ, ತ್ರಿಪೋಲಿ ನಗರದಲ್ಲಿ ಕೆಲವರು ಸಂಭ್ರಮಾಚರಣೆಯ ಭಾಗವಾಗಿ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ.

ಕಳೆದ ತಿಂಗಳು ಸ್ಫೋಟಕಗಳ ಬಗ್ಗೆ ಎಚ್ಚರಿಸಿದ್ದ ಭದ್ರತಾ ಅಧಿಕಾರಿಗಳು

ಬೈರೂತ್‌ನ ಬಂದರಿನಲ್ಲಿ ಶೇಖರಿಸಿಡಲಾಗಿರುವ 2,750 ಟನ್ ಅಮೋನಿಯಂ ನೈಟ್ರೇಟ್ ರಾಸಾಯನಿಕವು ಭದ್ರತಾ ಬೆದರಿಕೆಯಾಗಿದೆ ಹಾಗೂ ಅದು ಒಂದು ವೇಳೆ ಸ್ಫೋಟಗೊಂಡರೆ ರಾಜಧಾನಿಯನ್ನು ನಾಶಗೊಳಿಸಬಹುದಾಗಿದೆ ಎಂಬುದಾಗಿ ಲೆಬನಾನ್‌ನ ಭದ್ರತಾ ಅಧಿಕಾರಿಗಳು ಕಳೆದ ತಿಂಗಳು ಪ್ರಧಾನಿ ಮತ್ತು ಅಧ್ಯಕ್ಷರನ್ನು ಎಚ್ಚರಿಸಿದ್ದರು ಎಂದು ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.

ಅವರು ಎಚ್ಚರಿಸಿದ ಎರಡೇ ವಾರಗಳಲ್ಲಿ ಕೈಗಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕವು ಬೃಹತ್ ಪ್ರಮಾಣದಲ್ಲಿ ಸ್ಫೋಟಿಸಿದೆ. ಸ್ಫೋಟದಿಂದಾಗಿ ಬಂದರಿನ ಹೆಚ್ಚಿನ ಭಾಗ ನಾಮಾವಶೇಷವಾಗಿದೆ ಹಾಗೂ ರಾಜಧಾನಿಯ ಹಲವು ಭಾಗಗಳು ಧ್ವಂಸಗೊಂಡಿವೆ.

ಸ್ಫೋಟದಲ್ಲಿ ಕನಿಷ್ಠ 163 ಮಂದಿ ಮೃತಪಟ್ಟಿದ್ದಾರೆ ಹಾಗೂ 6,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಸುಮಾರು 6,000 ಕಟ್ಟಡಗಳು ಧ್ವಂಸಗೊಂಡಿವೆ ಎಂದು ಮುನಿಸಿಪಲ್ ಅಧಿಕಾರಿಗಳು ಹೇಳಿದ್ದಾರೆ.

ಸ್ಫೋಟಕ್ಕೆ ಕಾರಣವಾದ ಅಂಶಗಳ ಬಗ್ಗೆ ಸರಕಾರಿ ಭದ್ರತಾ ಮಹಾನಿರ್ದೇಶನಾಲಯವು ವರದಿಯೊಂದನ್ನು ಸಿದ್ಧಪಡಿಸಿದೆ ಹಾಗೂ ಈ ವರದಿಯಲ್ಲಿ, ಭಾರೀ ಪ್ರಮಾಣದ ಸ್ಫೋಟಕಗಳ ಸಂಗ್ರಹವು ಒಡ್ಡಿರುವ ಅಪಾಯದ ಬಗ್ಗೆ ಅಧ್ಯಕ್ಷ ಮೈಕಲ್ ಅವೌನ್ ಮತ್ತು ಪ್ರಧಾನಿ ಹಸನ್ ದಿಯಾಬ್‌ಗೆ ಜುಲೈ 20ರಂದು ಬರೆಯಲಾದ ಖಾಸಗಿ ಪತ್ರವೊಂದನ್ನು ಪ್ರಸ್ತಾಪಿಸಲಾಗಿದೆ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)