varthabharthi


ಸಂಪಾದಕೀಯ

ಅತಿವೃಷ್ಟಿ, ಪ್ರವಾಹ: ಸೂಕ್ತ ಪರಿಹಾರ ಅಗತ್ಯ

ವಾರ್ತಾ ಭಾರತಿ : 12 Aug, 2020


ಕಳೆದ ವರ್ಷ ಮಳೆಗಾಲದಲ್ಲಿ ಕರ್ನಾಟಕ ತತ್ತರಿಸಿ ಹೋಗಿತ್ತು. ಸುರಿವ ಮಳೆಗಿಂತಲೂ ಪ್ರವಾಹದ ಪರಿಣಾಮವಾಗಿ ಉತ್ತರ ಕರ್ನಾಟಕದಲ್ಲಿ ಸಾವಿರಾರು ಜನ ಮನೆ ಮಾರು ಕಳೆದುಕೊಂಡಿದ್ದರು. ಆಗ ಬೀದಿಗೆ ಬಿದ್ದವರಿಗೆ ಇನ್ನೂ ಸರಿಯಾದ ಪುನರ್ವಸತಿ ಕಲ್ಪಿಸಲು ಆಗಿಲ್ಲ. ಈಗ ಮತ್ತೆ ವರ್ಷಧಾರೆಯಿಂದ ರಾಜ್ಯದ ಅನೇಕ ಕಡೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ಈಗ ಒಂದೆರಡು ದಿನಗಳಿಂದ ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಕರಾವಳಿಯ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ ಹಾಗೂ ಕಲ್ಯಾಣ ಕರ್ನಾಟಕದ ಕೆಲ ಭಾಗಗಳಲ್ಲಿ ಮಳೆ ಸುರಿಯುತ್ತಲೇ ಇದೆ. ಎಲ್ಲ ಜಲಾಶಯಗಳು ಭರ್ತಿಯಾಗಿವೆ. ತುಂಬಿದ ಜಲಾಶಯಗಳಿಂದ ನೀರನ್ನು ಬಿಡುತ್ತಿರುವುದರಿಂದ ನಾಡಿನ ಕೆಲ ಪ್ರದೇಶಗಳಲ್ಲಿ ನೆರೆಯ ಭೀತಿ ಉಂಟಾಗಿದೆ. ಕೊರೋನ ಸೋಂಕಿನ ಜೊತೆ ಜೊತೆಗೆ ನೈಸರ್ಗಿಕ ಪ್ರಕೋಪವನ್ನು ಎದುರಿಸಬೇಕಾಗಿ ಬಂದಿದೆ. ಪ್ರವಾಹ ಪರಿಸ್ಥಿತಿ ಎದುರಿಸಲು ಹಣಕಾಸಿನ ಕೊರತೆಯಿಲ್ಲವೆಂದು ಮಂತ್ರಿಗಳು ಹೇಳುತ್ತಿದ್ದರೂ ಇಂತಹ ಪರಿಸ್ಥಿತಿಯನ್ನು ಎದುರಿಸುವ ಸಿದ್ಧತೆ ಆಡಳಿತದಲ್ಲಿ ಕಾಣುತ್ತಿಲ್ಲ ಎಂಬುದು ಮಡಿಕೇರಿ ಮುಂತಾದ ಕಡೆಯ ಅನಾಹುತಗಳಿಂದ ಸ್ಪಷ್ಟವಾಗುತ್ತದೆ.

ರಾಜ್ಯದ ಸಾರಥ್ಯ ವಹಿಸಿರುವ ಮುಖ್ಯಮಂತ್ರಿ ಯಡಿಯೂರಪ್ಪನವರು ಕಳೆದ ಬಾರಿ ಅತಿವೃಷ್ಟಿ ಉಂಟಾದಾಗ ಏಕಾಂಗಿಯಾಗಿ ನಾಡಿನುದ್ದಕ್ಕೂ ಓಡಾಡಿ ಪ್ರವಾಹದಿಂದ ನೊಂದವರಿಗೆ ಸಮಾಧಾನ ಹೇಳಿದ್ದರು. ಈ ಬಾರಿ ಕೋವಿಡ್‌ನಿಂದ ಆಸ್ಪತ್ರೆ ಸೇರಿದ್ದ ಅವರು ಸೋಮವಾರ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ಬಂದಿದ್ದಾರೆ. ಈ ನಡುವೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ತಲೆದೋರಿರುವ ಪ್ರವಾಹ ಪರಿಸ್ಥಿತಿಯನ್ನು ನಿಭಾಯಿಸಲು ನಾಲ್ಕು ಸಾವಿರ ಕೋಟಿ ರೂಪಾಯಿ ವಿಶೇಷ ಆರ್ಥಿಕ ನೆರವನ್ನು ನೀಡಬೇಕು ಹಾಗೂ ರಾಜ್ಯ ವಿಕೋಪ ಪರಿಹಾರ ನಿಧಿಯಿಂದ ಎರಡನೇ ಕಂತು 395 ಕೋಟಿ ರೂಪಾಯಿಗಳನ್ನು ತುರ್ತಾಗಿ ಬಿಡುಗಡೆ ಮಾಡಬೇಕೆಂದು ರಾಜ್ಯ ಸರಕಾರ ಪ್ರಧಾನಿಗಳಿಗೆ ಮನವಿ ಮಾಡಿದೆ. ಕರ್ನಾಟಕ ಸೇರಿದಂತೆ ನೆರೆ ಪೀಡಿತ ರಾಜ್ಯಗಳ ಜೊತೆ ಪ್ರಧಾನಿ ಮೋದಿ ಅವರು ವೀಡಿಯೊ ಸಂವಾದ ನಡೆಸಿದ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಅನುಪಸ್ಥಿತಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಮತ್ತು ಕಂದಾಯ ಸಚಿವ ಆರ್. ಅಶೋಕ್ ಮನವಿ ಮಾಡಿಕೊಂಡಿದ್ದಾರೆ. ಇದಕ್ಕೆ ಸ್ಪಂದಿಸಿದ ಪ್ರಧಾನಿ ನೆರವಿನ ಭರವಸೆ ನೀಡಿದ್ದಾರೆ.

ಮಳೆಯ ಅಬ್ಬರ ಕಡಿಮೆಯಾಗಿದ್ದರೂ ಪ್ರವಾಹದ ಭೀತಿಯಿಂದ ರಾಜ್ಯದ ಅನೇಕ ಕಡೆ ಆತಂಕದ ವಾತಾವರಣ ಉಂಟಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಶಿವಮೊಗ್ಗ, ಕೊಡಗು, ಹಾಸನ ಸೇರಿದಂತೆ ಎಂಟು ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಕೂಡ ಘೋಷಿಸಲಾಗಿತ್ತು. ಕರ್ನಾಟಕ ಒಂದೆಡೆ ಪ್ರವಾಹದ ಭೀತಿಯನ್ನು ಎದುರಿಸುತ್ತಿದ್ದರೆ, ಕಲ್ಯಾಣ ಕರ್ನಾಟಕದ ಬಹುತೇಕ ಕಡೆ ಅವಶ್ಯಕತೆಗಿಂತ ಹೆಚ್ಚು ಮಳೆಯಾಗಿ ಬಿತ್ತಿದ ಬೆಳೆಗಳು ಹಾಳಾಗುವ ಆತಂಕ ಎದುರಾಗಿದೆ. ಹಾಗಾಗಿ ಸರಕಾರ ಇವೆರಡನ್ನೂ ನಿಭಾಯಿಸಿ ನೊಂದವರ ಕಣ್ಣೀರು ಒರೆಸಲು ಮುಂದಾಗಬೇಕಾಗಿದೆ.

ಮಳೆ, ನೆರೆ ಪರಿಹಾರ ಕ್ರಮಕ್ಕೆ ಹಣದ ಕೊರತೆಯಿಲ್ಲ ಎಂದು ಹೇಳಿದರೆ ಸಾಲದು. ಅತಿವೃಷ್ಟಿ ಮತ್ತು ಪ್ರವಾಹದಿಂದ ತೊಂದರೆಗೊಳಗಾದ ಜನರಿಗೆ ಸಕಾಲದಲ್ಲಿ ನೆರವನ್ನು ಒದಗಿಸಬೇಕಾಗಿದೆ. ಜಿಲ್ಲಾಡಳಿತಗಳ ಹೊಣೆಗಾರಿಕೆ ತುಂಬಾ ಮಹತ್ವದ್ದಾಗಿದೆ. ಕಳೆದ ವರ್ಷದ ಅವಾಂತರ ಮರುಕಳಿಸಬಾರದು. ಪ್ರವಾಹ ಸಂತ್ರಸ್ತರಿಗೆ ಕಳೆದ ಬಾರಿ ಸಕಾಲದಲ್ಲಿ ಪರಿಹಾರದ ಹಣ ಸಂದಾಯವಾಗಿರಲಿಲ್ಲ. ಮನೆ ಮಾರು ಕಳೆದುಕೊಂಡವರಿಗೂ ಮನೆ ಕಟ್ಟಿಕೊಳ್ಳಲು ನೀಡಿದ ನೆರವಿನ ಹಗರಣಗಳ ಬಗ್ಗೆ ದೂರುಗಳು ಬಂದಿದ್ದವು. ಇದಕ್ಕೆ ಕಾರಣ ರಾಜ್ಯ ಸರಕಾರವೊಂದೇ ಅಲ್ಲ, ಕೇಂದ್ರ ಸರಕಾರದಿಂದ ಬರಬೇಕಾದ ನೆರವಿನ ಹಣ ಸಕಾಲದಲ್ಲಿ ಸೂಕ್ತ ಪ್ರಮಾಣದಲ್ಲಿ ಬಂದಿರಲಿಲ್ಲ. ಹೀಗಾಗಿ ರಾಜ್ಯ ಸರಕಾರ ಮೂಕ ಸಂಕಟ ಅನುಭವಿಸಿತ್ತು. ಈ ಬಾರಿ ಅದು ಮರುಕಳಿಸಬಾರದು. ಕೇಂದ್ರ ಸರಕಾರ ರಾಜ್ಯದ ಪಾಲಿನ ಹಣವನ್ನು ತಕ್ಷಣ ಬಿಡುಗಡೆ ಮಾಡಬೇಕು. ಲಾಕ್‌ಡೌನ್‌ನಿಂದ ಜನ ಸಾಮಾನ್ಯರ ಆರ್ಥಿಕ ಪರಿಸ್ಥಿತಿ ಮೂರಾಬಟ್ಟೆಯಾಗಿದೆ. ಇದರ ಜೊತೆಗೆ ಈಗ ಅತಿವೃಷ್ಟಿ ಮತ್ತು ಪ್ರವಾಹದ ಸಂಕಷ್ಟ. ಇಂತಹ ಸಂದರ್ಭದಲ್ಲಿ ಜನರಿಗೆ ನೆರವು ನೀಡುವಲ್ಲಿ ಸರಕಾರ ಹಿಂದೆ ಮುಂದೆ ನೋಡಬಾರದು. ಇದು ಸರಕಾರದ ಮತ್ತು ಆಡಳಿತದ ಇಚ್ಛಾಶಕ್ತಿಯನ್ನು ಅವಲಂಬಿಸಿದೆ. ಯಾವುದೇ ತಾಂತ್ರಿಕ ನೆಪವೊಡ್ಡಿ ಜನರಿಗೆ ನೆರವು ನೀಡದೇ ತಪ್ಪಿಸಿಕೊಳ್ಳಬಾರದು. ನಷ್ಟಕ್ಕೊಳಗಾದವರಿಗೆ ತಕ್ಷಣ ಸೂಕ್ತ ಪರಿಹಾರವನ್ನು ನೀಡಬೇಕು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)