varthabharthi


ಬೆಂಗಳೂರು

ಕಾಂಗ್ರೆಸ್ ವಿರುದ್ಧ ಬಿ.ಎಲ್.ಸಂತೋಷ್ ವಾಗ್ದಾಳಿ; ಡಿಕೆಶಿ ತಿರುಗೇಟು

ರಾಜಕೀಯ ಕೆಸರೆರಚಾಟಕ್ಕೆ ಕಾರಣವಾದ ‘ಬೆಂಗಳೂರಿನ ಹಿಂಸಾಚಾರ'

ವಾರ್ತಾ ಭಾರತಿ : 12 Aug, 2020

ಬೆಂಗಳೂರು, ಆ.12: ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಅಖಂಡ ಶ್ರೀನಿವಾಸಮೂರ್ತಿ ಸಂಬಂಧಿ ನವೀನ್ ಎಂಬಾತ ಪ್ರವಾದಿ ಮುಹಮ್ಮದ್(ಸ) ಅವರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಹೇಳಿಕೆಯನ್ನು ಹಾಕಿದ ಆರೋಪಕ್ಕೆ ಸಂಬಂಧಿಸಿದಂತೆ ಡಿ.ಜೆ.ಹಳ್ಳಿ, ಕಾವಲ್‍ಭೈರಸಂದ್ರ ಹಾಗೂ ಕೆ.ಜಿ.ಹಳ್ಳಿ ಪ್ರದೇಶದಲ್ಲಿ ಸಂಭವಿಸಿದ ಹಿಂಸಚಾರ ಪ್ರಕರಣವು, ಇದೀಗ ರಾಜಕೀಯ ಕೆಸರೆರಚಾಟಕ್ಕೆ ಕಾರಣವಾಗಿದೆ.

ಹಿಂದೂ-ಮುಸ್ಲಿಮ್ ಎರಡೂ ಧರ್ಮಗಳ ಹಿರಿಯರು ಒಂದೆಡೆ ಕೂತು ಪರಸ್ಪರ ಮಾತುಕತೆ ಮೂಲಕ ಶಾಂತಿ ಸ್ಥಾಪನೆಗೆ ಪ್ರಯತ್ನ ನಡೆಸಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾಡಿರುವ ಮನವಿಯನ್ನು ಸಂಸದ ಪ್ರತಾಪ್ ಸಿಂಹ ಟೀಕಿಸಿದ್ದಾರೆ.

ಎಸ್‍ಡಿಪಿಐ ಮತ್ತು ಕೆಎಫ್‍ಡಿಯ 1600 ಪುಂಡರ ವಿರುದ್ಧ ಇದ್ದ 175 ಕ್ರಿಮಿನಲ್ ಕೇಸುಗಳನ್ನು ನೀವು 2015ರಲ್ಲಿ ವಾಪಸ್ಸು ತೆಗೆದುಕೊಂಡಿದ್ದು ತಪ್ಪು ಅಂತ ಈಗಲಾದರೂ ಅನ್ನಿಸುತ್ತಿದೆಯೆ ಸಿದ್ದರಾಮಯ್ಯನವರೇ? ಇಷ್ಟಾಗಿಯೂ ಪುಂಡ ಮುಸಲ್ಮಾನರನ್ನು ಖಂಡಿಸಲು ಏಕೆ ನಿಮಗೆ ಮನಸ್ಸು ಬರುತ್ತಿಲ್ಲ ಸಾರ್? ಎಂದು ಪ್ರತಾಪ್ ಸಿಂಹ ಪ್ರಶ್ನಿಸಿದ್ದಾರೆ.

ಡಿ.ಜೆ.ಹಳ್ಳಿ ಗಲಭೆ ಪ್ರಕರಣ, ಕಾನೂನು ಕೈಗೆತ್ತಿಕೊಳ್ಳುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಕೆಲವರಿಗೆ ತಾವು ಕಾನೂನನ್ನು ಮೀರಿದವರು ಎಂಬ ಭಾವನೆಯಿದೆ. ಇದು ಏಳು ದಶಕಗಳ ಓಲೈಕೆ ರಾಜಕಾರಣದ ಪರಿಣಾಮ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಸಿ.ಟಿ.ರವಿ ಟೀಕಿಸಿದ್ದಾರೆ.

ಡಿ.ಜೆ.ಹಳ್ಳಿ ಗಲಭೆ ಪ್ರಕರಣವನ್ನು ಖಂಡಿಸುತ್ತೇನೆ. ಪತ್ರಕರ್ತರು, ಪೊಲೀಸರು, ಅಮಾಯಕ ಸಾರ್ವಜನಿಕರ ಮೇಲೆ ಹಲ್ಲೆ ಮಾಡಿರುವುದು ಪೂರ್ವಯೋಜಿತ ಎಂಬಂತೆ ಕಾಣಿಸುತ್ತದೆ. ಕಲ್ಲು, ದೊಣ್ಣೆ, ಪೆಟ್ರೋಲ್ ಬಾಂಬ್ ಗಲಭೆಕೋರರಿಗೆ ಬಂದಿದ್ದೆಲ್ಲಿಂದ? ಗಲಭೆ ಪೂರ್ವಯೋಜಿತ, ಗಲಭೆ ನಡೆಸುವವರಿಗೆ ಒಂದು ನೆಪ ಬೇಕಿತ್ತು. ಇವರನ್ನು ಬೇರು ಸಹಿತ ಮಟ್ಟ ಹಾಕಲೇಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಬಿಜೆಪಿ ಶಾಸಕ ವಿ.ಸುನೀಲ್ ಕುಮಾರ್, ಈ ಘಟನೆಯಲ್ಲಿ ಪೊಲೀಸ್ ಇಲಾಖೆ ಕೈಗೊಂಡ ಕ್ರಮವನ್ನು ಸ್ವಾಗತಾರ್ಹ. ದೇಶದ ಕಾನೂನನ್ನು ಎಲ್ಲರೂ ಗೌರವಿಸಬೇಕು. ಗಲಭೆಯಿಂದ ಆದ ಸಾರ್ವಜನಿಕ ನಷ್ಟವನ್ನು ಗಲಭೆಕೋರರಿಂದಲೇ ಜಪ್ತಿ ಮಾಡುವಂತೆ ಸರಕಾರವನ್ನು ಒತ್ತಾಯಿಸುತ್ತೇನೆ ಎಂದು ಟ್ವೀಟ್ ಮಾಡಿದ್ದಾರೆ.

ಕಾಂಗ್ರೆಸ್ ವಿರುದ್ಧ ವಾಗ್ದಾಳಿ: ದಲಿತ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮೇಲೆ ಹಲ್ಲೆ, ಅವರ ಮನೆ ಮೇಲೆ ದಾಳಿ ನಡೆದಿದ್ದರೂ ಕಾಂಗ್ರೆಸ್ ಪಕ್ಷ ಮೌನವಾಗಿದೆ. ಗಲಭೆಕೋರರ ಕೃತ್ಯಕ್ಕೆ ಇದು ಬೆಂಬಲವೇ? ತುಷ್ಟೀಕರಣವೊಂದೆ ಈ ಪಕ್ಷದ ನೀತಿಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಾಗ್ದಾಳಿ ನಡೆಸಿದ್ದಾರೆ.

ಬಿಜೆಪಿ ನಾಯಕರಿಗೆ ತಿರುಗೇಟು: ಬಿಜೆಪಿ ಮುಖಂಡ ಬಿ.ಎಲ್.ಸಂತೋಷ್, ಸಚಿವ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಈ ಸಮಯದಲ್ಲಿ ಪ್ರಚೋದನಕಾರಿ ಹೇಳಿಕೆಗೆ ಅವಕಾಶ ನೀಡಬಾರದು. ಅವರು ಅವರ ರಾಜಕಾರಣ ಮಾಡಲಿ. ನಾನು ಯಾರಿಗೂ ಉತ್ತರ ಕೊಡುವುದಿಲ್ಲ. ನಾನು ಕೂಡ ಶಾಸಕರ ಜೊತೆ ಚರ್ಚಿಸುತ್ತೇನೆ. ಸ್ಥಳಕ್ಕೆ ಹೋಗಿ ನೋಡಬೇಕಿದೆ. ಶಾಸಕರ ಮನೆಗೂ ಭೇಟಿ ನೀಡಬೇಕು. ಈಗಾಗಲೆ ವಿರೋಧ ಪಕ್ಷದ ನಾಯಕರ ಜೊತೆ ಮಾತನಾಡಿದ್ದೇನೆ ಎಂದು ತಿರುಗೇಟು ನೀಡಿದರು.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)