varthabharthi


ರಾಷ್ಟ್ರೀಯ

ಗೃಹಸಚಿವರ ಶ್ರೇಷ್ಠತಾ ಪದಕ ಪಡೆದವರಲ್ಲಿ ದಿಲ್ಲಿ ಹಿಂಸಾಚಾರ, ಭೀಮಾ-ಕೋರೆಗಾಂವ್ ಪ್ರಕರಣಗಳ ತನಿಖಾಧಿಕಾರಿಗಳು

ವಾರ್ತಾ ಭಾರತಿ : 12 Aug, 2020

ಹೊಸದಿಲ್ಲಿ,ಆ.12: ಕೇಂದ್ರ ಗೃಹಸಚಿವರ ‘ತನಿಖೆಯಲ್ಲಿ ಶ್ರೇಷ್ಠತೆ ’ಗಾಗಿ ಪದಕಗಳಿಗೆ ಪಾತ್ರರಾದವರಲ್ಲಿ ಕಳೆದ ಫೆಬ್ರವರಿಯಲ್ಲಿ ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಕೋಮು ಹಿಂಸಾಚಾರದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿರುವ ಡಿಸಿಪಿ (ಕ್ರೈಂ ಬ್ರಾಂಚ್) ರಾಜೇಶ್ ದೇವ್ ಮತ್ತು 2018ರ ಭೀಮಾ-ಕೋರೆಗಾಂವ್ ಪ್ರಕರಣದ ತನಿಖೆಯ ನೇತೃತ್ವ ವಹಿಸಿರುವ ಎನ್‌ಐಎ ಎಸ್‌ಪಿ ವಿಕ್ರಮ ಖಲಾಟೆ ಅವರು ಸೇರಿದ್ದಾರೆ.

21 ಮಹಿಳಾ ಅಧಿಕಾರಿಗಳು ಸೇರಿದಂತೆ ಒಟ್ಟು 121 ಪೊಲೀಸ್ ಅಧಿಕಾರಿಗಳು ಪ್ರಶಸ್ತಿಗೆ ಪಾತ್ರರಾಗಿದ್ದಾರೆ ಎಂದು ಗೃಹ ಸಚಿವಾಲಯವು ಬುಧವಾರ ತಿಳಿಸಿದೆ. ಅಪರಾಧಗಳ ತನಿಖೆಯಲ್ಲಿ ಉನ್ನತ ವೃತ್ತಿಪರ ಗುಣಮಟ್ಟವನ್ನು ಉತ್ತೇಜಿಸುವ ಮತ್ತು ತನಿಖಾಧಿಕಾರಿಗಳಿಂದ ತನಿಖೆಯಲ್ಲಿ ಇಂತಹ ಶ್ರೇಷ್ಠತೆಯನ್ನು ಗುರುತಿಸುವ ಉದ್ದೇಶದಿಂದ 2018ರಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಲಾಗಿತ್ತು ಎಂದೂ ಅದು ತಿಳಿಸಿದೆ.

ಈಶಾನ್ಯ ದಿಲ್ಲಿಯಲ್ಲಿ ನಡೆದಿದ್ದ ಹಿಂಸಾಚಾರಗಳಲ್ಲಿ 53 ಜನರು ಮೃತಪಟ್ಟು,ನೂರಾರು ಜನರು ಗಾಯಗೊಂಡಿದ್ದರು. ಆರಂಭದಿಂದಲೇ ಅಧಿಕಾರಿಗಳು ತನಿಖೆಯಲ್ಲಿ ತಾರತಮ್ಯ ತೋರಿಸುತ್ತಿದ್ದಾರೆ ಎಂಬ ಆರೋಪಗಳಿವೆ.

ಕಳೆದ ಫೆಬ್ರವರಿಯಲ್ಲಿ ದೇವ್ ಅವರು ನಗರದ ಶಾಹೀನ್ ಬಾಗ್‌ನಲ್ಲಿ ಗುಂಡು ಹಾರಿಸಿದ್ದ ವ್ಯಕ್ತಿ ಆಪ್ ಸದಸ್ಯನೆಂದು ಸುದ್ದಿಗಾರರಿಗೆ ತಿಳಿಸಿದ ಬಳಿಕ ಚುನಾವಣಾ ಆಯೋಗವು ಅವರನ್ನು ಚುನಾವಣಾ ಕರ್ತವ್ಯದಿಂದ ಹಿಂದೆಗೆದುಕೊಂಡಿತ್ತು. ಮಾಧ್ಯಮಗಳಿಗೆ ದೇವ್ ಹೇಳಿಕೆಯು ಸಂಪೂರ್ಣವಾಗಿ ಅನಗತ್ಯವಾಗಿತ್ತು ಮತ್ತು ಫೆ.8ರಂದು ದಿಲ್ಲಿ ವಿಧಾನಸಭಾ ಚುನಾವಣೆಯನ್ನು ಮುಕ್ತ ಮತ್ತು ನ್ಯಾಯಸಮ್ಮತವಾಗಿ ನಡೆಸುವುದರ ಮೇಲೆ ಪರಿಣಾಮವನ್ನು ಬೀರಿದೆ ಎಂದು ಆಯೋಗವು ಹೇಳಿತ್ತು.

ಭೀಮಾ-ಕೋರೆಗಾಂವ್ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರರಾದ ಸುಧಾ ಭಾರದ್ವಾಜ್, ಅರುಣ ಫೆರೀರಾ, ವರ್ನನ್ ಗೊನ್ಸಾಲ್ವಿಸ್, ವರವರ ರಾವ್ ಹಾಗೂ ಗೌತಮ್ ನವ್ಲಾಖಾ ಮತ್ತಿತರರು ಆರೋಪಿಗಳಾಗಿದ್ದು,ಅವರನ್ನು ಅಕ್ರಮ ಚಟುವಟಿಕೆಗಳ (ತಡೆ) ಕಾಯ್ದೆಯಡಿ ಬಂಧಿಸಲಾಗಿದೆ. ಪುಣೆ ಪೊಲೀಸರು ಜನವರಿಯಲ್ಲಿ ಪ್ರಕರಣವನ್ನು ಎನ್‌ಐಎಗೆ ಹಸ್ತಾಂತರಿಸಿದ್ದರು.

ಯಾವ ಪ್ರಕರಣಗಳ ತನಿಖೆಗಾಗಿ ಪೊಲೀಸ್ ಅಧಿಕಾರಿಗಳು ಪದಕಕ್ಕೆ ಪಾತ್ರರಾಗಿದ್ದಾರೆ ಎನ್ನುವುದನ್ನು ಗೃಹ ಸಚಿವಾಲಯವು ನಿರ್ದಿಷ್ಟವಾಗಿ ತಿಳಿಸಿಲ್ಲ.

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)