varthabharthi


ಕರಾವಳಿ

ಜನಸಾಮಾನ್ಯರಿಗೆ ವಿಷಯುಕ್ತ ನೀರು ಪೂರೈಕೆ ಆರೋಪ!

ನೀರಿನ ದರ, ಘನತ್ಯಾಜ್ಯ ಉಪ ಕರ ಇಳಿಕೆ: ಮನಪಾದಿಂದ ಮಹತ್ವದ ನಿರ್ಧಾರ

ವಾರ್ತಾ ಭಾರತಿ : 13 Aug, 2020

ಮಂಗಳೂರು, ಆ.13: ಕಳೆದ ಸುಮಾರು ಒಂದು ವರ್ಷದ ಹಿಂದೆ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಏಕಾಏಕಿಯಾಗಿ ಏರಿಕೆ ಮಾಡಲಾಗಿದ್ದ ನೀರಿನ ದರದಲ್ಲಿ ಇಳಿಕೆ ಮಾಡಿ ಹಾಗೂ ಆಸ್ತಿ ತೆರಿಗೆಯೊಂದಿಗೆ ವಿಧಿಸಲಾಗುವ ಘನತ್ಯಾಜ್ಯ ಉಪಕರದಲ್ಲಿ ಇಳಿಕೆ ಮಾಡಿ ಮಹಾನಗರ ಪಾಲಿಕೆ ನಿರ್ಣಯ ಕೈಗೊಂಡಿದೆ.

ಇಂದು ಮೇಯರ್ ದಿವಾಕರ ಪಾಂಡೇಶ್ವರ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಪ್ರಥಮ ಹಾಗೂ ಆರು ತಿಂಗಳ ಬಳಿಕದ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಪ್ರಕಟಿಸಲಾಯಿತು.

ಕಳೆದ ವರ್ಷದಿಂಚೀಚೆಗೆ ಮನಪಾದಿಂದ ನೀರಿನ ದರದಲ್ಲಿ ಭಾರೀ ಏರಿಕೆಯನ್ನು ಮಾಡಲಾಗಿತ್ತು. ಈ ಬಗ್ಗೆ ಪಾಲಿಕೆ ಸದಸ್ಯರು ಮಾತ್ರವಲ್ಲದೆ, ಜನಸಾಮಾನ್ಯರಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಕಳೆದ ಮಾರ್ಚ್‌ನಲ್ಲಿ ನೂತನ ಮೇಯರ್ ಆಗಿ ದಿವಾಕರ ಪಾಂಡೇಶ್ವರ ಅಧಿಕಾರ ಸ್ವೀಕಾರ ಸಂದರ್ಭದಲ್ಲೂ ನೀರಿನ ಕರ ಇಳಿಕೆಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದರು. ಬಳಿಕ ಕೊರೋನದಿಂದಾಗಿ ಪಾಲಿಕೆಯ ಸಾಮಾನ್ಯ ಸಭೆ ನಡೆಸಲು ಅಸಾಧ್ಯವಾಗಿತ್ತು. ಇದೀಗ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ನೀರಿನ ದರ ಇಳಿಕೆಯ ಕುರಿತಂತೆ ಪಾಲಿಕೆಯ ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ಮಾಹಿತಿ ನೀಡಿದರು.

ಕಳೆದ ಬಾರಿ 8 ಸಾವಿರ ಲೀಟರ್‌ವರೆಗೆ (ಪ್ರತಿ ಸಾವಿರ ಲೀಟರ್ ಬಳಕೆಗೆ) 7 ರೂ., 8ರಿಂದ 15 ಸಾವಿರ ಲೀಟರ್‌ಗೆ 9 ರೂ., 15ರಿಂದ 25 ಸಾವಿರ ಲೀಟರ್‌ಗೆ 11 ರೂ. ಹಾಗೂ 25 ಲೀಟರ್‌ಗಿಂದ ಅಧಿಕ ಬಳಕೆಗೆ 13 ರೂ.ಗಳನ್ನು ನಿಗದಿಪಡಿಸಲಾಗಿತ್ತು. ಇದೀಗ ಮಾಸಿಕ ದರವನ್ನು 60 ರೂ.ಗಳಿಗೆ ನಿಗದಿಪಡಿಸಿ, 10 ಸಾವಿರ ಲೀಟರ್‌ವರೆಗಿನ ಬಳಕೆಗೆ (ಪ್ರತಿ ಸಾವಿರ ಲೀಟರ್‌ಗೆ) 6 ರೂ., 10ರಿಂದ 15 ಸಾವಿರ ಲೀಟರ್‌ಗೆ 7 ರೂ., 15 ಸಾವಿರದಿಂದ 20 ಸಾವಿರ ಲೀಟರ್‌ವರೆಗೆ 9 ರೂ., 20 ಸಾವಿರದಿಂದ 30 ಸಾವಿರ ಲೀಟರ್‌ವರೆಗೆ 11 ರೂ. ಹಾಗೂ 30,000 ಲೀಟರ್‌ಗಿಂತ ಮೇಲ್ಪಟ್ಟ ಬಳಕೆಗೆ 13 ರೂ.ನಂತೆ ನಿಗದಿಪಡಿಸಲಾಗಿದೆ. ಇದೇ ವೇಳೆ ಆಸ್ತಿ ತೆರಿಗೆಯೊಂದಿಗೆ ವಿಧಿಸಲಾಗಿರುವ ಘನತ್ಯಾಜ್ಯ ಉಪಕರದಲ್ಲಿ 500 ಚದರ ಅಡಿವರೆಗಿನ ಆಸ್ತಿ ತೆರಿಗೆಯೊಂದಿಗೆ ವಿಧಿಸಲಾಗಿದ್ದ ಘನತ್ಯಾಜ್ಯ ಉಪಕರವನ್ನು ಈ ಹಿಂದಿನ 50 ರೂ. ಬದಲಿಗೆ 30 ರೂ.ಗಳಿಗೆ, 501 ಚದರ ಅಡಿಯಿಂದ 1,000 ಚದರ ಅಡಿವರೆಗಿನ ಆಸ್ತಿಗಳ ಮೇಲಿನ ಘನತ್ಯಾಜ್ಯ ತೆರಿಗೆಯನ್ನು 75 ರೂ.ನಿಂದ 60 ರೂ.ಗಳಿಗೆ, 1001 ಚದರ ಅಡಿಯಿಂದ 1500 ಚದರ ಅಡಿವರೆಗಿನ ಆಸ್ತಿ ಮೇಲಿನ ಘನತ್ಯಾಜ್ಯ ಕರವನ್ನು 100 ರೂ.ನಿಂದ 80 ರೂ.ಗಳಿಗೆ ಇಳಿಕೆ ಮಾಡಲಾಗಿದೆ. ಉಳಿದಂತೆ ಹಿಂದಿನ ರೀತಿಯಲ್ಲಿಯೇ ಘನತ್ಯಾಜ್ಯ ಕರ ಮುಂದುವರಿಯಲಿದೆ. ಇದೇ ವೇಳೆ ಹಸಿ ಕಸವನ್ನು ಮನೆಯಲ್ಲೇ ಸಂಸ್ಕರಿಸಿದಲ್ಲಿ ತೆರಿಗೆಯಲ್ಲಿ ಶೇ.50ರಷ್ಟು ರಿಬೇಟ್ ನೀಡುವ ನಿರ್ಧಾರ ಪ್ರಸಕ್ತ ಸಾಲಿನಿಂದ ಅನುಷ್ಠಾನಗೊಳ್ಳಲಿದೆ ಎಂದು ಮುಖ್ಯ ಸಚೇತಕ ಪ್ರೇಮಾನಂದ ಶೆಟ್ಟಿ ವಿವರ ನೀಡಿದರು.

ಒಂದು ವರ್ಷದ ಹಿಂದಿನ ದರವನ್ನೇ ನಿಗದಿಪಡಿಸಿ

ಕಳೆದ ವರ್ಷ ಏರಿಕೆ ಮಾಡಲಾಗಿದ್ದ ನೀರಿನ ದರದ ಹಂತಗಳಲ್ಲಿ ಇಳಿಕೆ ಮಾಡಿರುವುದು ಸಂತಸದ ವಿಚಾರ. ಆದರೆ ಗೃಹ ಬಳಕೆಯ ಕುಡಿಯುವ ನೀರಿನಲ್ಲಿ ಈ ರೀತಿಯ ಹಂತಗಳಲ್ಲಿನ ಏರಿಕೆ ಮಾಡಿ ಇಳಿಕೆ ಮಾಡುವುದು ಸರಿಯಲ್ಲ. ಅದರ ಬದಲಿಗೆ ಒಂದು ವರ್ಷದ ಹಿಂದೆ ಇದ್ದಂತೆ 24,000 ಲೀಟರ್‌ವರೆಗಿನ 65 ರೂ.ಗಳ ದರವನ್ನೇ ಮುಂದುವರಿಸಬೇಕು. ಕೊರೋನದಂತಹ ಈ ಸಂದರ್ಭದಲ್ಲಿ ಇದರಿಂದ ಜನಸಾಮಾನ್ಯರಿಗೆ ಸಾಕಷ್ಟು ಸಹಕಾರಿಯಾಗಲಿದೆ. ಮಾತ್ರವಲ್ಲದೆ, ಲಾಕ್‌ಡೌನ್ ಅವಧಿಯಲ್ಲಿನ ನೀರಿನ ದರವನ್ನು ಮನ್ನಾ ಮಾಡಬೇಕು ಎಂದು ಮನಪಾ ಸದಸ್ಯ ಪ್ರವೀಣ್ ಚಂದ್ರ ಆಳ್ವ ಆಗ್ರಹಿಸಿದರು.

ನೂತನ ಮೇಯರ್, ಉಪ ಮೇಯರ್ ಅಧಿಕಾರ ಸ್ವೀಕರಿಸಿದ ಬಳಿಕದ ಪ್ರಥಮ ಸಭೆ ಇದಾಗಿದ್ದು, ವಿಪಕ್ಷ ನಾಯಕರಿಗೆ ಮಾತ್ರ ಸಭೆಯಲ್ಲಿ ಸಮಸ್ಯೆ ಬಗ್ಗೆ ವಿಷಯ ಪ್ರಸ್ತಾಪಿಸಲು ಅವಕಾಶವನ್ನು ಮೇಯರ್ ಒದಗಿಸಿದ್ದರು. ಆದರೆ, ಇದು ಸಂವಿಧಾನದ ನಿಯಮ ಹಾಗೂ ಕಾನೂನು ಬಾಹಿರ, ಸಾಮಾನ್ಯ ಸಭೆಯಲ್ಲಿ ಸದಸ್ಯರಿಗೆ ಚರ್ಚೆಗೆ ಅವಕಾಶ ನೀಡಬೇಕೆಂದು ವಿಪಕ್ಷ ಸದಸ್ಯರು ಮೇಯರ್ ಪೀಠದೆದುರು ತೆರಳಿ ಪ್ರತಿಭಟಿಸಿದ ಪ್ರಸಂಗವೂ ಇಂದು ನಡೆಯಿತು. ಸದಸ್ಯ ಎ.ಸಿ. ವಿನಯರಾಜ್‌ರವರು ಸಂವಿಧಾನದ ಪುಸ್ತಕವನ್ನು ಹಿಡಿದು ಸದಸ್ಯರ ಹಕ್ಕನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಜನಸಾಮಾನ್ಯರಿಗೆ ವಿಷಯುಕ್ತ ನೀರು ಪೂರೈಕೆ ಆರೋಪ!

ಸಭೆಯ ಆರಂಭದಲ್ಲಿಯೇ ವಿಷಯ ಪ್ರಸ್ತಾಪಿಸಿದ ವಿಪಕ್ಷ ನಾಯಕ ಅಬ್ದುಲ್ ರವೂಫ್, ಕಳೆದ ಸುಮಾರು ಎರಡೂವರೆ ತಿಂಗಳ ಅವಧಿಯಲ್ಲಿ ಪಾಲಿಕೆಯ ಜನರಿಗೆ ಆಡಳಿತ ವಿಷಯುಕ್ತ ನೀರನ್ನು ಸರಬರಾಜು ಮಾಡಿದೆ ಎಂದು ಆರೋಪಿಸಿದರು. ಪಾಲಿಕೆ ವ್ಯಾಪ್ತಿಗೆ ಪೂರೈಕೆಯಾಗುವ ನೀರಿನ ಸಂಸ್ಕರಣಾ ಘಟಕದಲ್ಲಿ ಕಳೆದ ಎರಡೂವರೆ ತಿಂಗಳಿನಿಂದ ಅಗತ್ಯ ರಾಸಾಯನಿಕವನ್ನು ಬಳಸಿ ನೀರನ್ನು ಶುದ್ಧೀಕರಿಸದೆ ವಿಷಯುಕ್ತ ನೀರನ್ನು ಪೂರೈಸಲಾಗಿದೆ. ಇದರಿಂದ ಜನರ ಆರೋಗ್ಯದ ಮೇಲಾಗಿರುವ ಪರಿಣಾಮಕ್ಕೆ ಯಾರು ಜವಾಬ್ದಾರಿ ಎಂದು ಪ್ರಶ್ನಿಸಿದರು. ಈ ಕುರಿತು ಕೆಲ ಹೊತ್ತು ಚರ್ಚೆ ನಡೆದ ಬಳಿಕ ಮೇಯರ್ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.

ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಸಮಿತಿ ರಚನೆಗೆ ಅನುಮೋದನೆ

ಮಂಗಳೂರು ಪಾಲಿಕೆ ವ್ಯಾಪ್ತಿಯಲ್ಲಿ ಕರ್ನಾಟಕ ಪೌರ ನಿಗಮಗಳ (ತಿದ್ದುಪಡಿ) ಅಧಿನಿಯಮ 2011ರ ಪ್ರಕಾರ ವಾರ್ಡ್ ಸಮಿತಿ ರಚನೆಗೆ ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ನೀಡಲಾಯಿತು. ಈ ಮೂಲಕ ಕಳೆದ ಹಲವಾರು ವರ್ಷಗಳಿಂದ ನಾಗರಿಕ ಹೋರಾಟ ಸಮಿತಿಗಳ ಹೋರಾಟಕ್ಕೆ ಜಯ ದೊರಕಿದಂತಾಗಿದೆ.

ಉಪ ಮೇಯರ್ ವೇದಾವತಿ, ಪಾಲಿಕೆ ಆಯುಕ್ತ (ಪ್ರಭಾರ) ದಿನೇಶ್, ಶಾಸಕರಾದ ವೇದವ್ಯಾಸ ಕಾಮತ್ ಹಾಗೂ ಡಾ. ಭರತ್ ಶೆಟ್ಟಿ, ವಿವಿಧ ಸ್ಥಾಯಿ ಸಮಿತಿಗಳ ಅಧ್ಯಕ್ಷರು ಉಪಸ್ಥಿತರಿದ್ದರು 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

Comments (Click here to Expand)